‘ಕನ್ನಡದ ಕಣ್ವ' ಬಿ.ಎಂ.ಶ್ರೀಕಂಠಯ್ಯ (ಬಿ.ಎಂ.ಶ್ರೀ)
ಹಿರಿಯ ಸಾಹಿತ್ಯ ರತ್ನಗಳ ಸಾಲಿನಲಿ ರಾರಾಜಿಸುತ್ತಿರುವ ಕನ್ನಡದ ಕಣ್ವ -ಬಿ.ಎಂ.ಶ್ರೀಯವರ ಜನ್ಮದಿನವಾದ ಜನವರಿ ಮೂರರಂದು ಅವರನ್ನು ಸ್ಮರಿಸುವ ಸಲುವಾಗಿ ಬರೆದ ಬರಹ..
ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು
*ಕನ್ನಡ ನುಡಿ ನಮ್ಮ ಹೆಣ್ಣು*
*ನಮ್ಮ ತೋಟದಿನಿಯ ಹಣ್ಣು*
*ಪಡುವ ಕಡಲ ಹೊನ್ನ ಹೆಣ್ಣು*
*ನನ್ನ ಜೀವದುಸಿರು ಕಣ್ಣು*
*ನಲಿಸಿ ಕಲಿಸಿ ಮನವನೊಲಿಸಿ ಕುಣಿಸುತಿರುವಳು*
ಬಿ.ಎಂ.ಶ್ರೀಯವರು ಜನವರಿ ೩ ೧೮೮೪ ರಂದು ಮೈಲಾರಯ್ಯ, ಭಾಗೀರಥಮ್ಮ ದಂಪತಿಗಳಿಗೆ ಜನಿಸಿದರು. ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ನವ ಭಾಷ್ಯವನ್ನು ಬರೆದ ಮೇರು ಕವಿ. ಆಂಗ್ಲ ಭಾಷೆ ಎಲ್ಲೆಡೆ ಆವರಿಸಿದ್ದ ಕಾಲಘಟ್ಟದಲ್ಲಿ ಕನ್ನಡ ಭಾಷೆಗಾಗಿ ಹೋರಾಟ ಮಾಡಿದವರು.ಕವಿಯಾಗಿ, ಸಾಹಿತಿಯಾಗಿ, ನಾಟಕಕಾರರಾಗಿ ಕನ್ನಡನಾಡಿನ ಭಾಷಾ ಸೊಗಡನ್ನು ತಮ್ಮ ಮಾತು, ಕೃತಿಗಳಲ್ಲಿ ಅಳವಡಿಸಿ ಪ್ರಚುರ ಪಡಿಸಿದರು. ನವೋದಯ ಶೈಲಿಯ ಹರಿಕಾರ. ಶ್ರೀಯುತರ 'ಇಂಗ್ಲೀಷ್ ಗೀತಗಳು', ಹೊಂಗನಸುಗಳು ಕವನ ಸಂಕಲನ. ಗದಾಯುದ್ಧ ನಾಟಕಂ, ಅಶ್ವತ್ಥಾಮನ್, ಪಾರಸಿಕರು ನಾಟಕಗಳು.
'ಕನ್ನಡದ ಬಾವುಟ ' ಸಂಪಾದಿತ ಕೃತಿ ಹಾಗೂ ಕನ್ನಡ ಛಂದಸ್ಸಿನ ಚರಿತ್ರೆ, ಕನ್ನಡ ಸಾಹಿತ್ಯ ಚರಿತ್ರೆ ಮುಂತಾದವುಗಳು.
ಬೆಳ್ಳೂರಿನ ತನ್ನ ಹುಟ್ಟೂರಿನಲ್ಲಿ ಬಾಲ್ಯದ ಶಿಕ್ಷಣ ಪಡೆದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ, ಮದರಾಸು ವಿ.ವಿಯಲ್ಲಿ ಬಿ.ಎಲ್.ಪದವಿ ಮತ್ತು ಎಂ ಎ ಶಿಕ್ಷಣ ಪಡೆದರು. ಕುಲಸಚಿವರಾಗಿ ಮೈಸೂರು ಕಾಲೇಜಿನಲ್ಲಿ ಕರ್ತವ್ಯದಲ್ಲಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಕನ್ನಡ ಭಾಷೆಯ ಬೆಳವಣಿಗೆ, ಸಾಹಿತ್ಯ ರಚನೆಗಾಗಿ ತಮ್ಮ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. 'ಮಾಸ್ತಿ'ಯವರು, 'ಕುವೆಂಪು', 'ಜಿ.ಪಿ.ರಾಜರತ್ನಂ', 'ಎಸ್ .ವಿ.ರಂಗಣ್ಣ', ಅವರ ನೆಚ್ಚಿನ ಶಿಷ್ಯರು. ಕನ್ನಡ ಸಾಹಿತ್ಯ ಲೋಕದ ರುದ್ರ ನಾಟಕವೆಂದೇ ಪ್ರಸಿದ್ಧವಾಗಿದೆ 'ಅಶ್ವತ್ಥಾಮನ್. ಅವರಿಗೆ ‘ಕನ್ನಡದ ಕಣ್ವ’ ಎಂದು ಹೆಸರು ಬರಲು ಕಾರಣ, ಕಣ್ವ ಋಷಿಗಳು ಅನಾಥೆ ಹೆಣ್ಣು ಶಿಶು ಶಕುಂತಲೆಯನ್ನು ಸಾಕಿ ಸಲಹಿದಂತೆ, ಅನಾಥವಾಗಿದ್ದ ಕನ್ನಡ ಭಾಷೆಯ ಬೆಳವಣಿಗೆ, ಉಳಿವಿಗಾಗಿ ಎಲ್ಲಾ ಕಡೆ ಸಂಚರಿಸಿ ಭಾಷಣಗಳನ್ನು ಮಾಡುವ ಮೂಲಕ ಜನರ ಮನಸ್ಸಿನಲ್ಲಿ ತಾಯ್ನಾಡಿನ ನುಡಿಯ ಬಗ್ಗೆ ಪ್ರೀತಿ, ಗೌರವ ಹುಟ್ಟುವಂತೆ ಮಾಡಿದರು. ನುಡಿದಂತೆ ನಡೆದು ತೋರಿಸಿದ ಮಹಾಪುರುಷರು 'ಆಚಾರ್ಯ' ಎನಿಸಿದರು. ಹುಟ್ಟು ಕವಿ, ಕಾವ್ಯಪ್ರೇಮಿಯಾಗಿದ್ದರು. ಆಂಗ್ಲ ಭಾಷಾ ಅಧ್ಯಾಪಕರಾದರೂ ಕನ್ನಡಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟರು. ತಮ್ಮ ಸಾಹಿತ್ಯದ ವಿವಿಧ ಮಜಲುಗಳನ್ನು ಕನ್ನಡಕ್ಕಾಗಿಯೇ ಧಾರೆಯೆರೆದ ಮಹನೀಯರು. ಧಾರವಾಡದಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ೧೯೪೬ರಲ್ಲಿ ಇಹಲೋಕಯಾತ್ರೆ ಮುಗಿಸಿದರು.
ಕನ್ನಡ ನಾಡಿಗೆ ಕನ್ನಡವೇ ಶ್ರೇಷ್ಠ, ಆಂಗ್ಲ, ಸಂಸ್ಕೃತ, ಹಿಂದಿ ಜೊತೆಗಿರಲಿ. ಭಾಷೆ ಜನಾಂಗದ ಸಂಸ್ಕಾರವನ್ನು ಬೆಸೆಯಲು ಬೇಕೆಂದ ಶ್ರೀಯುತರು ಹೆಚ್ಚಿನ ಎಲ್ಲಾ ಭಾಷೆಗಳನ್ನು ಕಲಿತಿದ್ದರು. ಸಾಹಿತ್ಯದಿಂದ ಲಕ್ಷಣ ಸೂತ್ರಗಳೇ ಹೊರತು ಲಕ್ಷಣ ಸೂತ್ರಗಳಿಂದ ಸಾಹಿತ್ಯವಲ್ಲವೆಂದವರು. ಇರುವ ಸತ್ಯವನ್ನು ಒಪ್ಪಿಕೊಳ್ಳುವ ಮನೋಭಾವ ಮನುಜನ ಗುಣಗಳಲ್ಲಿ ಒಂದಾಗಿರಬೇಕು. ಒಲುಮೆಯೇ ಜ್ಞಾನ, ಒಗ್ಗಟ್ಟೇ ಬಲ, ಒಲವಿಂದ ಗೆಲುವು ಸಾಧಿಸಿರೆಂದರು. ಮೊದಲು ಜನವಾಣಿ, ಆಮೇಲೆ ಕವಿವಾಣಿ ನೆನಪಿರಲಿ. ಸತ್ಯ, ಸೌಂಧರ್ಯ, ಶಾಂತಿ, ಸ್ವಾತಂತ್ರ್ಯ, ಸಹಾನುಭೂತಿ, ಮಮತೆ, ಪ್ರೀತಿ, ಗೌರವ ಸದ್ಧರ್ಮದ ಲಕ್ಷಣಗಳು. ಪರಕೀಯತೆಯೊಂದಿಗೆ ಸ್ವತಂತ್ರ ಹಾಸುಹೊಕ್ಕಾಗಿರಲಿ, ರಚನೆಗಳಲ್ಲಿ ಸ್ವಂತಿಕೆಯಿರಲಿ ಕಿವಿಮಾತೂ ಹೇಳಿದರು.
ಹೇಳದಿರು ಹೋರಾಡಿ ಫಲವಿಲ್ಲವೆಂದು, ಧರ್ಮಶಾಂತಿ ಸ್ವತಂತ್ರವಲ್ಲವೆ ನಮ್ಮ ಹಿರಿಯರ ನುಡಿಗಳು?
-ರತ್ನಾ ಕೆ. ಭಟ್, ತಲಂಜೇರಿ
ಆಕರ ಪುಸ್ತಕ: ಕವಿ ಸಾಹಿತಿಗಳ ಸಂಗ್ರಹ
ಚಿತ್ರ ಕೃಪೆ: ಇಂಟರ್ನೆಟ್ ತಾಣ