‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!

‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!

ಬರಹ

ಮಾತು, ಸದ್ದು, ಗೌಜು, ಗದ್ದಲ, ದಾಂಧಲೆ, ಗೊಂದಲ...ಒಟ್ಟಾರೆ ತಲೆ ಚಿಟ್ ಹಿಡಿಸುವ ವಾತಾವರಣ. ಈ ಜೀವನಕ್ಕೆ ‘ಹೋರಾಟದ ಬದುಕು’ ಎನ್ನಲಡ್ಡಿಯಿಲ್ಲ! ಪ್ರತಿ ಕ್ಷಣ ಒತ್ತಡ, ಅಶಾಂತ ಸ್ಥಿತಿ. ಅಂತಿಮವಾಗಿ ಪ್ರತಿಯೊಂದರಲ್ಲೂ ನಿರಾಸಕ್ತಿ. ಏಕಾಗ್ರತೆಗೆ ತೀವ್ರ ಭಂಗ. ಸಿಟ್ಟಿನ ಪರಮಾವಧಿ; ಹೀಗೆಯೇ ಪಟ್ಟಿ ಬೆಳೆಯುತ್ತದೆ. ಇಷ್ಟಕ್ಕೆಲ್ಲ ಕಾರಣ ನಮ್ಮ ಕಿವಿ!

ವಾಹನಗಳಿಂದ ವಾತಾವರಣ ಕಲುಷಿತಗೊಂಡರೆ ಹೊಗೆ ಕಣ್ಣಿಗೆ ಕಾಣುತ್ತದೆ. ಹೊಲಸು ತುಂಬಿ ಗಟಾರು, ಚರಂಡಿ ಗಬ್ಬೆದ್ದು ‘ನಾತಾವರಣ’ ಸೃಷ್ಠಿಸಿದರೆ ವಾಸನೆ ಮೂಗಿಗೆ ಹೊಡೆಯುತ್ತದೆ. ಕೊಳಚೆ ತುಂಬಿ ನೀರು ಕೆಟ್ಟರೆ ಕಣ್ಣು-ಮೂಗು ಕೂಡೇ ನಿರ್ಧರಿಸುತ್ತವೆ. ಆದರೆ ಶಬ್ದ ಮಾಲಿನ್ಯ ಕಣ್ಣಿಗೆ ಕಾಣುವುದಿಲ್ಲ. ಸದ್ದಿಲ್ಲದೇ ನಮ್ಮ ಕಿವಿಗಳಿಗೆ ಹಾನಿ ಮಾಡುತ್ತದೆ. ಕ್ರಮೇಣ ಆರೋಗ್ಯ ಕೆಡಿಸುತ್ತದೆ.

ವಯಸ್ಸಾದಂತೆ ಶ್ರವಣೇಂದ್ರಿಯದ ಚುರುಕುತನ ಕ್ರಮೇಣ ಕಡಿಮೆಯಾಗುತ್ತ ಬರುತ್ತದೆ. ಇದು ನೈಸರ್ಗಿಕ. ಆದರೆ ನಿತ್ಯ ಶಬ್ದಗಳಿಗೆ ನಾವು ನಮ್ಮ ಕಿವಿಗಳನ್ನು ಒಡ್ಡುತ್ತಿರುವುದರಿಂದ ಕ್ರಮೇಣವಾಗಿ ಕಿವುಡುತನ ನಮ್ಮನ್ನು ಆವರಿಸುತ್ತದೆ. ವಯಸ್ಸು ಹೆಚ್ಚುವ ಮೊದಲೇ ಕಿವಿಗಳು ತಮ್ಮ ಸಂವೇದನೆ ಕಳೆದುಕೊಳ್ಳುತ್ತಿವೆ!

ನಮ್ಮ ನಗರ ಬದುಕಿನ ಎಲ್ಲ ಚಟುವಟಿಕೆಯ ಮೂಲಗಳು ಸದ್ದನ್ನು ಆಕರಿಸಿಯೇ ನಡೆಯುತ್ತವೆ. ನಿತ್ಯ ನಿರಂತರವಾಗಿ ಕಿವಿಗಳು ಈ ಸದ್ದಿಗೆ ಒಡ್ಡಿಕೊಂಡರೆ, ಒಗ್ಗಿಕೊಂಡಿವೆ ಎನಿಸುತ್ತದೆ! ಆದರೆ ತೀವ್ರ ದೂರಗಾಮಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅಧಿಕ ತೀವ್ರತೆಯ ಸಪ್ಪಳ
(೮೫ ಡೆಸಿಬಲ್ ಗಿಂತ ಹೆಚ್ಚು) ಕಿವಿಗೆ ಶಾಶ್ವತವಾದ ಹಾನಿ ಉಂಟುಮಾಡಬಲ್ಲದು. ಅರಿವಿಗೆ ಬಾರದಂತೆ ಶ್ರವಣೇಂದ್ರಿಯದ ಹಾನಿ ನಿಧಾನವಾಗಿ ಏರುತ್ತ ಸಾಗುತ್ತದೆ.

ನಿರಂತರ ಸದ್ದಿಗೆ (ಸುದ್ದಿಗಲ್ಲ!) ನಮ್ಮನ್ನು ಒಡ್ಡಿಕೊಳ್ಳುವುದರಿಂದ- ಹೃದಯದ ಬಡಿತ ಹೆಚ್ಚುತ್ತದೆ. ರಕ್ತ ತೀವ್ರಗತಿಯಲ್ಲಿ ನರಗಳಲ್ಲಿ ಸಂಚರಿಸಲು ಆರಂಭಿಸುತ್ತದೆ. ಹೊರಗಿನ ಸದ್ದಿಗೆ ಪ್ರತಿರೋಧಕ ಶಕ್ತಿ ತಂದುಕೊಳ್ಳಲು ದೇಹ ತನ್ನೊಳಗೆ ಕಂಡುಕೊಳ್ಳುವ ಮಾರ್ಗವಿದು. ಅಡ್ರಿನಾಲಿನ್ ಸ್ರಾವ ಮಿದುಳಿನಲ್ಲಿ ಹೆಚ್ಚಾಗುತ್ತದೆ. ಸಾದಾ-ಸೀದಾ ರೋಗಗಳು ಪ್ರಾಣಹಾನಿಕಾರಕವಾಗಿ ಮಾರ್ಪಡುತ್ತವೆ.

ನಾವು ಯಾವುದೇ ಕೆಲಸ ಮಾಡುವಾಗ ಸದ್ದಿನಿಂದ ಕಿರಿಕಿರಿ ಆಗುತ್ತಿದ್ದರೆ ದಕ್ಷತೆ ಕಡಿಮೆಯಾಗುತ್ತದೆ. ನಿದ್ದೆಯ ಅವಧಿ ಮತ್ತು ಗಾಢತೆಯನ್ನು ಸದ್ದು ಹಾಳು ಮಾಡಬಲ್ಲುದು. ವಯಸಾದವರು, ರೋಗದಿಂದ ಬಳಲುತ್ತಿರುವವರು, ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳು ಸಪ್ಪಳದಿಂದ ಹೆಚ್ಚು ಬಾಧಿತರು. ಸಂಕಟಪಡುವವರು. ನಿದ್ದೆಗೆ ತೊಂದರೆಯಾದರೆ ವ್ಯಕ್ತಿಯ ಆರೋಗ್ಯ ಹದಗೆಡುತ್ತದೆ. ಖಿನ್ನತೆ, ಸಿಟ್ಟು, ಅಸಹಾಯಕತೆ ಇಂತಹ ತೀವ್ರ ಭಾವನಾತ್ಮಕ ಹಾಗು ಮಾನಸಿಕ ಸಮಸ್ಯೆಗಳಿಗೆ, ವರ್ತನೆಗಳಿಗೆ ಸದ್ದು ಕಾರಣವಾಗುತ್ತದೆ. ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ, ಏಕಾಗ್ರತೆಗೆ, ಮನಸ್ಸಿನ ಜಾಗೃತಭಾವವನ್ನ್ಬುಸದ್ದು ಹೊಡೆದು ಹಾಕುತ್ತದೆ. ಭಾಷಾ ಕೌಶಲ್ಯ, ಸಂವಹನ ಕೌಶಲ್ಯ ಬೆಳೆಸಿಕೊಳ್ಳುವಲ್ಲಿ ಸಹ ಅಡ್ಡಿಯಾಗಿ ಹೆದರಿಕೆಯನ್ನೇ ಮನಸ್ಸಿನಲ್ಲಿ ಇಟ್ಟುಕೊಳ್ಳುವಂತೆ ಮಾಡುತ್ತದೆ.

ಸದ್ದಿನಿಂದ ಇಷ್ಟೆಲ್ಲ ದುಷ್ಪರಿಣಾಮಗಳಿದ್ದರೂ ಮದುವೆ, ಗೃಹ ಪ್ರವೇಶ, ಕಾಲೇಜಿನ ಗ್ಯಾದರಿಂಗ್, ಶಾಲಾ ವಾರ್ಷಿಕೋತ್ಸವದಲ್ಲಿ, ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಕಿವಿಗಡಗಿಚ್ಚುವ ಸಿನೇಮಾ ಹಾಡು, ಪಾಪ್ ಸಂಗೀತ ಧ್ವನಿವರ್ಧಕಗಳ ಮೂಲಕ ಮತ್ತಷ್ಟು ಧ್ವನಿವರ್ಧಿಸಿ ಬಿತ್ತರಿಸುತ್ತಾರೆ. ಜಾತ್ರೆ, ಉತ್ಸವಗಳ ಹೆಸರಿನಲ್ಲಿ ಸದ್ದುಗಳ ‘ತ್ಸುನಾಮಿ’ ಎಬ್ಬಿಸುತ್ತಾರೆ. ನಿತ್ಯ ಸಂಚರಿಸುವ ಬಸ್, ರಿಕ್ಷಾ ಹಾಗು ಖಾಸಗಿ ವಾಹನಗಳಲ್ಲಿ ಉಚ್ಚ ಸ್ವರದಲ್ಲಿ ಸಂಗೀತ ನುಡಿಸಿ, ಹಾರ್ನ್ ಬಾರಿಸಿ ವಿಕೃತ ಆನಂದ ಪಡೆಯುತ್ತ ಇತರರನ್ನು ಅನಾಹುತಗಳಿಗೆ ಎಡೆ ಮಾಡಿಕೊಡುವವರಿದಾರೆ. ನಾವು ಸಹ ಇದರಲ್ಲಿ ಭಾಗೀದಾರರು. ನಾವು ಪ್ರತಿಭಟಿಸುತ್ತಿಲ್ಲ. ಕಾರಣ ತಲೆ ಕಡಿಸಿಕೊಳ್ಳುತ್ತಿಲ್ಲ. ಕಿವಿ ಕೆಡಿಸಿಕೊಳ್ಳುತ್ತಿದ್ದೇವೆ!
ನಾವೇನು ಮಾಡಬಹುದು?

ಅನಗತ್ಯವಾಗಿ ನಮ್ಮ ಪರಿಸರದಲ್ಲಿ ಧ್ವನಿ ವರ್ಧಕಗಳ (ಸ್ಪೀಕರ್, ಮೈಕ್) ಮೂಲಕ, ವಾಹನಗಳ ಹಾರ್ನ್ ಬಾರಿಸಿ ಶಬ್ದ ಮಾಲಿನ್ಯ ಉಂಟು ಮಾಡುವವರ ವಿರುದ್ಧ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ದೂರು ನೀಡುತ್ತಿರುವವರು ದೂರು ಪತ್ರದಲ್ಲಿ ಸಹಿ ಹಾಕದಿದ್ದರೂ, ಪೊಲೀಸರು ಕ್ರಮ ಜರುಗಿಸಲು ಕಡ್ಡಯವಾಗಿ ದಾಖಲಿಸಿಕೊಳ್ಳತಕ್ಕದ್ದು ಎಂದು ರಾಜ್ಯ ಹೈಕೋರ್ಟಿನ ನ್ಯಾಯಾಧೀಶರಾಗಿದ್ದಾಗ ಎಂ.ಎಫ್.ಸಾಲ್ಡಾನಾ (ಜುಲೈ ೩೦, ೨೦೦೩) ಎಚ್ಚರಿಕೆ ನೀಡಿದ್ದರು.‘ಮೌನವಲಯ’ ಎಂದು ಪರಿಗಣಿಸಲ್ಪಡುವ ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯ ಪ್ರದೇಶ, ಆಸ್ಪತ್ರೆ, ವಾಸದ ಬಡಾವಣೆಗಳು, ಪೂಜಾ ಸ್ಥಳಗಳು ಮೊದಲಾದ ಕಡೆ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು ಅನ್ವಯವಾಗುತ್ತವೆ.

ಸಪ್ಪಳ ಪರಿಸರದ ಮೇಲೂ ದುಷ್ಪರಿಣಾಮ ಬೀರುತ್ತಿದೆ:

ಇತ್ತೀಚೆಗೆ ನಮಗೆ ಬೆಳಗಿನ ಸಮಯದಲ್ಲೂ ಹಕ್ಕಿಗಳ ಕಲರವ ಕೇಳಿ ಬರುತ್ತಿಲ್ಲ. ಬೆಳಗಿನ ಸಮಯದಲ್ಲಿ ವಾಹನಗಳ ಭರಾಟೆ ತೀರ ಕಡಿಮೆ. ಎಲ್ಲರೂ ‘ಸೂರ್ಯವಂಶಿ’ಗಳಾಗಿರುವುದರಿಂದ ಸಪ್ಪಳ ಎಬ್ಬಿಸುವವರೂ ಎದ್ದಿರಲಾರರು! ಆದರೂ ಹಕ್ಕಿಗಳ ಕಲರವದ ಸುಪ್ರಭಾತ ನಮಗೆ ಕೇಳಿಸುತ್ತಿಲ್ಲ.

ಪರಿಸರ ಸಂಬಂಧಿ ವಿಷಯಗಳ ಕುರಿತು ಸಾಕಷ್ಟು ನಿಯತಕಾಲಿಕೆಗಳು ಇಂದು ಮಾಹಿತಿ, ಸಮಸ್ಯೆ ಹಾಗು ಪರಿಹಾರಗಳನ್ನು ಒಳಗೊಂಡ ಅರ್ಥಪೂರ್ಣ ಲೇಖನಗಳನ್ನು ಪ್ರಕಟಿಸುತ್ತಿವೆ. ‘ದಿ ನೇಚರ್’ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿರುವಂತೆ- ನಗರ ಪ್ರದೇಶದ ಮರಿ ಹಕ್ಕಿಗಳಿಗೆ ತಮ್ಮ ಸಂವಹನ ಕಲೆ ವೃಧ್ಧಿಸಿಕೊಳ್ಳಲು ‘ಟ್ಯೂಷನ್’ ಅವಶ್ಯಕತೆ ಇದೆ ಅಂತೆ! ಹಕ್ಕಿ ಮರಿಗಳಿಗೆ ಹಸಿವಾದಾಗ, ವೈರಿ ಗೂಡಿಗೆ ದಾಳಿ ಇಟ್ಟಾಗ ತಾಯಿ/ತಂದೆ ಹಕ್ಕಿಯನ್ನು ಕೂಗಿ ಕರೆಯುತ್ತವೆ. ಆದರೆ ಮಾನವ ನಿರ್ಮಿತ ಸಪ್ಪಳದ ಗೌಜು, ಗದ್ದಲದಿಂದಾಗಿ ದೊಡ್ಡ ಹಕ್ಕಿಗೆ ಮರಿ ಹಕ್ಕಿಯ ಕೂಗು ಕೇಳಿಸುತ್ತಿಲ್ಲ.

ಹಾಗೆಯೇ ಹೆಣ್ಣು ಹಕ್ಕಿಗಳು ಸಂತಾನ ಅಭಿವೃದ್ಧಿಗೆ ಅಣಿಗೊಳ್ಳಲು ಗಂಡು ಹಕ್ಕಿ ಹಲವಾರು ವಿಧಧ ಸಂಗೀತಮಯ ಧ್ವನಿ ಹೊರಡಿಸುತ್ತವೆ. ಸದ್ದಿನ ಅಬ್ಬರದಲ್ಲಿ ಗಂಡು ಹಕ್ಕಿಯ ವಿಶಿಷ್ಟ ಕೂಗು ಹೆಣ್ಣು ಹಕ್ಕಿಯನ್ನು ಆಕರ್ಷಿಸಲು ವಿಫಲವಾಗಿ ನೂರಾರು ಅಪರೂಪದ ಪಕ್ಷಿಗಳ ಸಂತತಿ ನಶಿಸಿ ಹೋಗಿವೆ. ಜೊತೆಗೆ ಇನ್ನೂ ಕೆಲ ಸಂತತಿಗಳು ಕಣ್ಮರೆಯಾಗುವ ಅಪಾಯದ ಅಂಚಿನಲ್ಲಿವೆ.

ಈಗ ಮನೆಗಳಲ್ಲಿಯೂ ಧ್ವನಿ ವರ್ಧಕಗಳನ್ನು ಬಳಸದೆಯೇ ಇಡೀ ವಠಾರಕ್ಕೆ ಕೇಳಿಸಬಲ್ಲ ವಿದ್ಯುನ್ಮಾನ ಉಪಕರಣಗಳು ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯ. ಪ್ರತಿಯೊಂದು ಮನೆಯಲ್ಲಿ ಟಿ.ವಿ., ಟೇಪ್ ರೆಕಾರ್ಡರ್, ಸಿ.ಡಿ. ಪ್ಲೇಯರ್, ಡಿ.ವಿ.ಡಿ. ಜೊತೆಗೆ ‘ಸ್ಪೇಷಲ್ ಇಫೆಕ್ಟ್ಶ್’ ನೀಡಬಲ್ಲ ಪರಿಕರಗಳು ಹೇರಳವಾಗಿವೆ. ಉಚ್ಛ ಸ್ವರದಲ್ಲಿ ಚಲನಚಿತ್ರ ಗೀತೆಗಳನ್ನು ನುಡಿಸುವುದು ಪ್ರತಿಷ್ಠೆಯ ಸಂಕೇತವಾಗುತ್ತಿದೆ. ಹಾಗಾಗಿ ಮನೆಗಳ ಅಕ್ಕ ಪಕ್ಕದ ಹೂವಿನ ಗಿಡಗಳಲ್ಲಿ ಚಿಟಗುಬ್ಬಿ ತನ್ನ ಗೂಡು ಕಟ್ಟುತ್ತಿಲ್ಲ. ಮಾನವರ ಸಹಕಾರದಿಂದ ಬದುಕಿ-ಬಾಳ ಬೇಕಿರುವ ಅನೇಕ ಪಕ್ಷಿಗಳ ಆರ್ತನಾದ ಮಾನವರಿಗೆ ಕೇಳಿಸುತ್ತಿಲ್ಲ. ಗೂಡು ಕಟ್ಟಿ ವೈರಿ (ಬೆಕ್ಕು, ಹಾವು, ಇಲಿ, ಮುಂಗುಸಿ) ಗೂಡಿಗೆ ದಾಳಿ ಇಟ್ಟಾಗ ತಾಯಿ ಅಥವಾ ತಂದೆ ಹಕ್ಕಿ ಮನೆಯವರನ್ನು ಕೂಗಿ ಕರೆದು ತಮ್ಮ ಮರಿ/ ಮೊಟ್ಟೆಗಳನ್ನು ಬದುಕಿಸುವಂತೆ ಜೋರಾಗಿ ಕೂಗಿ ಗದ್ದಲ ಎಬ್ಬಿಸುತ್ತವೆ. ಆದರೆ ನಮ್ಮ ಸಪ್ಪಳದ ಮಧ್ಯೆ ಹಕ್ಕಿಯ ಕೂಗಿಗೆ ಕಿವಿಗೊಡುವುದಾದರೂ ಹೇಗೆ?

ಅಪರೂಪದ ಆಸ್ತಿ ಕಿವಿ:

ಗ್ರಾಹಕ ಹಕ್ಕುಗಳ ತಜ್ನ ಶ್ರೀ ಅಡ್ಡೂರು ಕೃಷ್ಣರಾವ್ ಅವರು ದಾಖಲಿಸುವಂತೆ- ಸದ್ದುಗಳ ಗದ್ದಲವಿಲ್ಲದ ಪರಿಸರದಲ್ಲಿ ಜೀವಿಸುವ ಅಫ್ರೀಕಾದ ‘ದುಬಾನ್’ ಬುಡಕಟ್ಟಿನ ವೃದ್ಢರ ಶ್ರವಣ ಶಕ್ತಿ ನಮ್ಮ ಕಿರಿಯರ ಶ್ರವಣ ಶಕ್ತಿಗೆ ಸಮನಾಗಿದೆಯಂತೆ!
ಒಟ್ಟಾರೆ, ನೋಡದೆಯೇ ಇದು ಯಾವ ವಾಹನದ ಸದ್ದು? (ಬಸ್, ಲಾರಿ, ಟ್ರಕ್, ಕಾರು, ರಿಕ್ಷಾ, ಸ್ಕೂಟರ್ ಇತ್ಯಾದಿ), ಹಾಗೆಯೇ ಯಾವ ಬೈಕಿನ ಸದ್ದು? (ಹೀರೋ ಹೊಂಡಾ, ಕಾವಾಸಾಕಿ, ಯಮಹಾ, ಪಲ್ಸ್ರರ್, ಕೈನೆಟಿಕ್ ಇತ್ಯಾದಿ) ಧ್ವನಿ ಕೇಳಿಯೇ ಇದು ಯಾವ ಗಾಯಕರು ಹಾಡಿದ್ದು? (ಎಸ್.ಪಿ.ಬಿ., ಪ್.ಬಿ.ಎಸ್, ಡಾ. ರಾಜ್ ಕುಮಾರ್, ಸೋನು ನಿಗಮ್, ಕುಮಾರ್ ಸಾನು, ಲತಾ ಮಂಗೇಷ್ಕರ್, ಕವಿತಾ ಕೃಷ್ಣ ಮೂರ್ತಿ, ಆಲೀಷಾ ಚಿನಾಯ್) ಅಥವಾ ಒಮ್ಮೆ ಕೇಳಿದ ಯಾರದೋ ಧ್ವನಿಯನ್ನು ಮತ್ತೊಮ್ಮೆ ದೂರವಾಣಿಯಲ್ಲಿ ಕೇಳಿದಾಗ ಅವರು ತಮ್ಮ ಹೆಸರು ಹೇಳುವ ಮೊದಲು ಸಂಬೋಧಿಸಿಬಿಡಬಲ್ಲ ಪ್ರಬಲ ಶಕ್ತಿ ಕಿವಿಗಳಿಗಿದೆ. ಇದೊಂದು ನಿಸರ್ಗದತ್ತ ಅದ್ಭುತ ಇಂದ್ರಿಯ.

ಕಿವಿ ಕಾಯ್ದುಕೊಳ್ಳಲು ಮೀನ-ಮೇಷ ಎಣಿಸಿದರೆ ಇತರರಿಗೆ ‘ಕಿವಿ’ ಕೊಡುವುದು ನಮಗೆ ಕಷ್ಟವಾಗಿ ಕೇವಲ ‘ಕೈ’ ಕೊಡಬೇಕಾಗಬಹುದು!