‘ಕೆಂಗಂದು ಬೆಳವ’ ಹಕ್ಕಿಯ ಬಗ್ಗೆ ಗೊತ್ತೇ?

‘ಕೆಂಗಂದು ಬೆಳವ’ ಹಕ್ಕಿಯ ಬಗ್ಗೆ ಗೊತ್ತೇ?

ಉತ್ತರಾಖಂಡ ರಾಜ್ಯದ, ಚಮೋಲಿ ಜಿಲ್ಲೆಯ, ಸಗರ್ ಎಂಬಲ್ಲಿಂದ ಹೊರಟು ರುದ್ರನಾಥ ಎಂಬಲ್ಲಿ ತಲುಪುವ ಚಾರಣದ ಕಥೆಯ ಮಧ್ಯೆ ನಾವಿದ್ದೇವೆ. ಮೊದಲನೇ ದಿನ ಸುಮಾರು ಹತ್ತು ಕಿಲೋಮೀಟರ್ ನಿರಂತರ ಏರುದಾರಿ ಕ್ರಮಿಸಿ ಪನಾರ್ ಬುಗಿಯಾಲ್ ಎಂಬ ಸುಂದರ ಹುಲ್ಲುಗಾವಲು ಪ್ರದೇಶಕ್ಕೆ ತಲುಪಿ ಅಲ್ಲಿನ ಟೆಂಟ್ ಒಂದರಲ್ಲಿ ನಮ್ಮ ಚಾರಣ ತಂಡ ಉಳಿದುಕೊಂಡಿತ್ತು. ಮರುದಿನ ಬೆಳಗ್ಗೆ ನಾಲ್ಕು ಗಂಟೆಗೇ ಎದ್ದು ತಯಾರಾಗಿ ನಮ್ಮ ಢಾಬಾ ಮಾಲೀಕ ಮಾಡಿಕೊಟ್ಟ ಚಹಾ ಮತ್ತು ಬಿಸ್ಕೆಟ್ ಸೇವಿಸಿ ಸುಮಾರು ಐದು ಗಂಟೆಗೆ ಹೊರಡಲು ತಯಾರಾದೆವು. ಅದಾಗಲೇ ನಾವು ನಡೆಯಬೇಕಾಗಿದ್ದ ದಾರಿ ಕಾಣುವಷ್ಟು ಬೆಳಕಾಗಿತ್ತು. ನಾವು ಹೊರಡುವಾಗ ತುಂತುರು ಮಳೆಯೂ ಆರಂಭವಾಗಿತ್ತು. ನಮ್ಮ ರೈನ್ಕೋಟ್ ಗಳನ್ನು ಹಾಕಿಕೊಂಡೇ ನಡೆಯಲು ಪ್ರಾರಂಭ ಮಾಡಿದೆವು. ಗುಡ್ಡದ ಅತ್ಯಂತ ಎತ್ತರದ ಪ್ರದೇಶದಲ್ಲಿ ಹುಲ್ಲುಗಾವಲಿನ ನಡುವೆ ನಮ್ಮ ನಡಿಗೆ ಸಾಗಿತ್ತು. ಬೀಳುತ್ತಿದ್ದ ತುಂತುರು ಮಳೆ ಮತ್ತು ಮಂಜಿನ ನಡುವೆಯೂ ಹಲವಾರು ಪುಟಾಣಿ ಹಕ್ಕಿಗಳು ಹುಲ್ಲುಗಾವಲಿನಲ್ಲಿ ಹಾರಾಡುತ್ತಾ, ಕೂಗುತ್ತಿದ್ದುದು ನಮ್ಮ ಅರಿವಿಗೆ ಬರುತ್ತಿತ್ತು. ಸುಮಾರು ನಾಲ್ಕು ಕಿಲೋಮೀಟರ್ ದೂರ ನಡೆದ ನಂತರ ಪಿತೃಧಾರಾ ಎಂಬ ಜಾಗಕ್ಕೆ ನಾವು ತಲುಪಿದೆವು. ಬೆಟ್ಟವೊಂದರ ತುತ್ತ ತುದಿ ಅಲ್ಲಿಂದ ನಾವು ಕಣಿವೆಯ ಆಕಡೆ ಬದಿಗೆ ದಾಟಿ ನಡಿಗೆ ಮುಂದುವರೆಸಬೇಕು.

ಅಲ್ಲಿಂದ ಮುಂದೆ ನಿಧಾನವಾಗಿ ಮಳೆ ಕಡಿಮೆ ಆಗತೊಡಗಿತು. ಜೊತೆಗೆ ಸೂರ್ಯನ ಬಿಸಿಲಿಗೆ ಮಂಜೂ ಸಹ ಕಡಿಮೆ ಆಗಲಾರಂಭಿಸಿತ್ತು. ಇಲ್ಲಿಂದ ಮುಂದಿನ ದಾರಿ ಬಹಳ ವಿಭಿನ್ನ. ಹುಲ್ಲುಗಾವಲಿನ ನಡುವೆ ದಾರಿಯ ಎರಡೂ ಬದಿಯಲ್ಲಿ ಹಿಮಾಲಯದಲ್ಲಿ ಮಾತ್ರ ಕಾಣಸಿಗುವ ಬುರಾಸ್ ಎಂಬ ಮರಗಳು ಬೆಳೆದಿದ್ದವು. ಆದರೆ ಬೆಟ್ಟದ ಎತ್ತರದಲ್ಲಿ ಗಾಳಿಯಿಂದ ರಕ್ಷಣೆ ಪಡೆಯಲು ಅವುಗಳು ತುಸು ಗಿಡ್ಡವಾಗಿ ಬೆಳೆದಿದ್ದವು. ಕೆಳಗೆ ಸಗರ್ ನಲ್ಲೂ ಆ ಮರಗಳು ಕಂಡಿದ್ದವು, ಆದರೆ ಅಲ್ಲಿ ಅವು ಎತ್ತರವಾಗಿ ಬೆಳೆದಿದ್ದವು. ಹುಲ್ಲುಗಾವಲಿನ ಮಧ್ಯೆ ಬೆಳೆದ ಬುರಾಸ್ ಮರಗಳು ಹೂ ಬಿಡಲಾರಂಭಿಸಿದ್ದವು. ಬಿಳಿ, ಗುಲಾಬಿ, ತಿಳಿನೀಲಿ ಬಣ್ಣದ ಹೂಗಳು ಅಲ್ಲಲ್ಲಿ ಕಾಣುತ್ತಿದ್ದವು. ಜುಲೈ ತಿಂಗಳ ಅಂತ್ಯ ಮತ್ತು ಆಗಸ್ಟ್ ನಲ್ಲಿ ಇವು ಪೂರ್ಣ ಹೂವು ತುಂಬಿಕೊಂಡು ನಳನಳಿಸುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಹೂಗಳ ನಡುವೆ ಹಕ್ಕಿಗಳ ಚಿಲಿಪಿಲಿ ಕೇಳುತ್ತಲೇ ಇತ್ತು. ಆದರೆ ಎಲ್ಲಿದೆ ಹಕ್ಕಿ ಎಂದು ನೋಡುವುದರೊಳಗೆ ಹಕ್ಕಿ ಇನ್ನೊಂದೆಡೆಗೆ ಹಾರಿ ಹೋಗುತ್ತಿತ್ತು. ಬಹಳ ಚುರುಕಾದ ಅವುಗಳ ಓಡಾಟವನ್ನು ನೋಡುವುದೇ ಚಂದ.

ಅಲ್ಲಿಂದ ಮುಂದೆ ಐದು ಸಣ್ಣ ಸಣ್ಣ ನೀರಿನ ಒರತೆಗಳು ಸಿಗುವ ಪಂಚಗಂಗಾ ಎಂಬ ಜಾಗಕ್ಕೆ ತಲುಪಿದೆವು. ಬೆಳಗ್ಗೆ ಹೊರಟ ನಮಗೆ ಇಲ್ಲಿಯವರೆಗೂ ಸಹಜ ನೀರಿನ ಹರಿವು ಸಿಕ್ಕಿರಲಿಲ್ಲ. ನಮ್ಮ ಗೈಡ್ ಅಮಿತ್ ಇದನ್ನು ಮೊದಲೇ ನಮಗೆ ತಿಳಿಸಿದ್ದ. ಹಾಗಾಗಿ ತಯಾರಾಗಿ ಬಂದಿದ್ದೆವು. ಪಂಚಗಂಗಾ ತಲುಪುವ ವೇಳೆಗೆ ಖಾಲಿಯಾಗಿದ್ದ ನಮ್ಮ ನೀರಿನ ಬಾಟಲಿಗಳನ್ನು ಮತ್ತೆ ತುಂಬಿಸಿಕೊಂಡೆವು. ಇಲ್ಲಿಂದ ಮುಂದೆ ಸ್ವಲ್ಪ ದೂರ ನಡೆದಾಗ ದೂರದಿಂದಲೇ ರುದ್ರನಾಥ ಹಳ್ಳಿ ಕಾಣುತ್ತಿತ್ತು. ಅದರ ಹಿಂದಿನ ಎತ್ತರದ ಗುಡ್ಡದ ತುದಿಯಲ್ಲಿ ಕರಗದೇ ಉಳಿದ ಮಂಜು ಇವಿಷ್ಟು ಕಾಣಿಸಿಕ್ಕಾಗ ಸುಸ್ತೆಲ್ಲ ಕಳೆದು ಮತ್ತೆ ಚೈತನ್ಯ ಮೂಡಿತು. ಬಂತು ಬಂತು ಎಂದು ಮುಂದೆಯೇ ಕಾಣುತ್ತಿದ್ದ ಹಳ್ಳಿಯನ್ನು ನೋಡುತ್ತಾ ಹೆಜ್ಜೆ ಹಾಕುತ್ತಾ ಅಂತೂ ರುದ್ರನಾಥ ತಲುಪಿದಾಗ ಸುಮಾರು ಮಧ್ಯಾಹ್ನ ಹನ್ನೊಂದು ಗಂಟೆ ಮೂವತ್ತು ನಿಮಿಷ ಆಗಿತ್ತು. 

ಅಮಿತ್ ಮುಂದೆ ಹೋಗಿ ನಮಗಾಗಿ ಢಾಭಾ ಒಂದರಲ್ಲಿ ಊಟದ ವ್ಯವಸ್ಥೆಗೆ ತಯಾರು ಮಾಡಿಸಿದ್ದ. ಅಲ್ಲೇ ಸಿಗುವ ಕಲ್ಲುಗಳನ್ನೇ ಸುಂದರವಾಗಿ ಜೋಡಿಸಿ ಅದಕ್ಕೆ ಮಣ್ಣು ಮತ್ತು ಹುಲ್ಲನ್ನು ಕಲಸಿ ಹಚ್ಚಿದ ಚಂದದ ಗೋಡೆಯ ಎರಡು ಕೋಣೆಗಳಲ್ಲಿ ನಾವು ನಮ್ಮ ವಸ್ತುಗಳನ್ನು ಇಳಿಸಿ, ವಿಶ್ರಾಂತಿ ಪಡೆದು, ಊಟ ಮಾಡಿದೆವು. ಊಟ ಮಾಡಿ ಬಿಸಿಲಿಗೆ ಮೈ ಕಾಯಿಸಿಕೊಳ್ಳುತ್ತಾ ಕುಳಿತಿದ್ದಾಗ ನಮ್ಮ ಆಸುಪಾಸಿನಲ್ಲೇ ಎರಡು ಹಕ್ಕಿಗಳು ನೆಲದಮೇಲೆ ನಡೆದಾಡುವುದು ಕಾಣಿಸಿತು.

ಪಾರಿವಾಳದ ಆಕಾರ ಆದರೆ ಪಾರಿವಾಳಕ್ಕಿಂತ ಚಿಕ್ಕದು. ಬೂದು ಮಿಶ್ರಿತ ಕಂದು ಬಣ್ಣ. ತುಸು ಉದ್ದನೆಯ ಬಾಲ ಆದರೆ ಸ್ವಲ್ಪ ಗಿಡ್ಡವಾದ ಗುಲಾಬಿ ಬಣ್ಣದ ಕಾಲುಗಳು. ಕುತ್ತಿಗೆಯ ಬದಿಯಲ್ಲಿ ಕಪ್ಪು ಬಣ್ಣದ ಬಾಗಿದ ಗೆರೆಗಳ ನಡುವೆ ಬಿಳೀ ಬಣ್ಣದ ಚುಕ್ಕೆಗಳು. ಪಕ್ಕನೆ ರೆಕ್ಕೆಯನ್ನು ನೋಡಿದಾಗ ಆಮೆಯ ಚಿಪ್ಪನ್ನು ಹೋಲುವ ವಿನ್ಯಾಸ. ಈ ಗಾತ್ರದ ಹಕ್ಕಿಗಳನ್ನು ಡವ್ ಎನ್ನುತ್ತಾರೆ. ನಮ್ಮೂರಿನಲ್ಲಿ ಕಾಣಸಿಗುವ ಪುದ ಅಥವಾ ಬೆಳವಾನ ಹಕ್ಕಿಗಳ ಹತ್ತಿರದ ಸಂಬಂಧಿಗಳು ಇವು. ಹಿಮಾಲಯದ ತಪ್ಪಲು ಮತ್ತು ಪೂರ್ವ ಭಾರತದ ನಿವಾಸಿಗಳಾದ ಈ ಹಕ್ಕಿಗಳು ಬೇಸಗೆಯಲ್ಲಿ ಇನ್ನೂ ಎತ್ತರ ಪ್ರದೇಶ ಅಂದರೆ ಹಿಮಾಲಯದ ಕಡೆಗೆ ವಲಸೆ ಹೋಗುತ್ತವೆ. ಚಳಿಗಾಲ ಬಂದಾಗ ಮಧ್ಯಭಾರತದ ಬೆಚ್ಚಗಿನ ಪ್ರದೇಶಗಳಿಗೆ ವಲಸೆ ಬರುತ್ತವೆ. ಕರ್ನಾಟಕದ ಹಲವಾರುಕಡೆ, ಕರಾವಳಿಯ ಮಣಿಪಾಲದಲ್ಲೂ ಇದು ಚಳಿಗಾಲದಲ್ಲಿ ವಲಸೆ ಬಂದಿರುವ ದಾಖಲೆಗಳಿವೆ. ನೆಲದಮೇಲೆ ಬಿದ್ದರುವ ಕಾಳುಗಳನ್ನು ಹೆಕ್ಕಿ ತಿನ್ನುತ್ತಾ ಓಡಾಡುತ್ತಿರುವ ಈ ಹಕ್ಕಿ, ಪಾರಿವಾಳಗಳಂತೆ ಕಡ್ಡಿಗಳನ್ನು ಜೋಡಿಸಿ ಮರದ ಮೇಲೆ ಗೂಡು ಕಟ್ಟಿ ಮೇ-ಜೂನ್ ತಿಂಗಳಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆಯಂತೆ. ನಮ್ಮೂರಿಗೆ ಬರುವ ಅತಿಥಿಯನ್ನು ಅದರೂರಿನಲ್ಲಿ ನೋಡಿ ಬಹಳ ಸಂತೋಷವಾಯಿತು.  ಈ ಬಾರಿ ಚಳಿಗಾಲದಲ್ಲಿ ಈ ಹಕ್ಕಿ ನಿಮ್ಮ ಊರಿಗೂ ಬರಬಹುದು.

ಕನ್ನಡದ ಹೆಸರು: ಕೆಂಗಂದು ಬೆಳವ

ಇಂಗ್ಲೀಷ್ ಹೆಸರು: Oriental Turtle Dove

ವೈಜ್ಞಾನಿಕ ಹೆಸರು: Streptopelia orientalis

ಚಿತ್ರ-ಬರಹ : ಅರವಿಂದ ಕುಡ್ಲ, ಬಂಟ್ವಾಳ