‘ಕ್ಯಾಟ್ ಐಲ್ಯಾಂಡ್' ಎಂಬ ಅಪರೂಪದ ದ್ವೀಪ

‘ಕ್ಯಾಟ್ ಐಲ್ಯಾಂಡ್' ಎಂಬ ಅಪರೂಪದ ದ್ವೀಪ

ಯಾಕೋ ಕಳೆದ ಎರಡು ದಿನಗಳಿಂದ ನಮ್ಮ ಮನೆಯ ಬೆಕ್ಕು ‘ಸಿಂಬಾ’ ಬಹಳ ಕೋಪದಲ್ಲಿತ್ತು. ಬಹುಷಃ ನನ್ನವಳು ಅದಕ್ಕೆ ಎರಡು ದಿನಗಳಿಂದ ಊಟಕ್ಕೆ ಮೀನು ಕೊಡದಿದ್ದುದೇ ಕಾರಣವಿರಬಹುದು. ಅದರ ಹಾರಾಟ, ಎಗರಾಟ, ಸೋಫಾದ ಕವರ್ ಹರಿಯುವುದು, ಗಿಡಗಳನ್ನು ಹಾಳು ಮಾಡುವುದು ಎಲ್ಲವೂ ನಿರಂತರವಾಗಿ ನಡೆಯುತ್ತಲೇ ಇತ್ತು. ನಾನೂ ನೋಡುವಷ್ಟು ನೋಡಿದೆ, ಸಹಿಸುವಷ್ಟು ಸಹಿಸಿದೆ. ಕಡೆಗೆ ನನ್ನ ಸಹನೆಯ ಕಟ್ಟೆ ಒಡೆದದ್ದು ಯಾವಾಗ ಅಂದ್ರೆ... ನನ್ನ ಪ್ರೀತಿಯ ಮೀನು ‘ಸ್ವೀಟಿ' ಈಜಾಡುತ್ತಿದ್ದ ಗಾಜಿನ ಜಾಡಿಯನ್ನು 'ಸಿಂಬಾ’ ಒಡೆದು ಹಾಕಿದಾಗ. ನನ್ನ ಸಿಟ್ಟು ತಾರಕಕ್ಕೆ ಏರಿ ‘ಸಿಂಬಾ’ಗೆ ಒಂದು ಏಟು ಕೊಟ್ಟೆ. ಮನೆಯಿಂದ ಹೊರಗೆ ಓಡಿ ಹೋದ ಆತ ಮತ್ತೆ ಯಾವಾಗ ಮನೆಯೊಳಗೆ ಸೇರಿಕೊಂಡ ಎಂದು ಗೊತ್ತೇ ಆಗಲಿಲ್ಲ. 

ಮರುದಿನ ಬೆಳಿಗ್ಗೆ ‘ಸಿಂಬಾ’ ತನ್ನ ಬ್ಯಾಗ್ ಪ್ಯಾಕ್ ಮಾಡಿಕೊಂಡು ಎಲ್ಲಿಗೋ ಹೊರಟಂತೆ ಕಾಣಿಸಿತು. ಎಲ್ಲಿಗೆ? ಎಂದು ಕೇಳಿದಾಗ ‘ನನಗೆ ಮರ್ಯಾದೆ ಸಿಗುವಲ್ಲಿಗೆ ಹೋಗುತ್ತೇನೆ' ಎಂದು ಹೇಳುವಂತೆ ಮುಖ ಮಾಡಿ ಹೊರಗೆ ಹೋಗೇ ಬಿಟ್ಟ. ಹೋದರೆ ಎಲ್ಲಿಗೆ ಹೋದೀತು? ಎಂದು ನಾನೂ ಅಸಡ್ಡೆ ಮಾಡಿದೆ. ಆದರೆ ಮೂರು -ನಾಲ್ಕು ದಿನ ಆದರೂ 'ಸಿಂಬಾ’ ನ ಪತ್ತೆ ಇಲ್ಲ. ಇನ್ನು ಪೋಲೀಸರಿಗೆ ದೂರು ಕೊಡುವುದು, ಪತ್ರಿಕೆಯಲ್ಲಿ ಫೊಟೋ ಹಾಕುವುದು ಎಂದೆಲ್ಲಾ ಯೋಚನೆ ಮಾಡುವಾಗ ನನ್ನ ಮೊಬೈಲ್ ಗೆ ಒಂದು ವಾಟ್ಸಾಪ್ ಮೆಸೇಜ್ ಬಂತು. ಅದನ್ನು ಮಾಡಿದ್ದು ಬೇರೆ ಯಾರೂ ಅಲ್ಲ, ನಮ್ಮ ಬೆಕ್ಕು ಸಿಂಬಾ. ಅದರಲ್ಲಿದ್ದ ಆತನ ಫೋಟೋ ನೋಡಿ ನಾನು ದಂಗಾದೆ. ಸಾವಿರಾರು ಬೆಕ್ಕುಗಳ ನಡುವೆ ದ್ವೀಪವೊಂದರ ರೆಸಾರ್ಟ್ ನಲ್ಲಿ ಬಹಳ ಮಜಾ ಮಾಡುತ್ತಿದ್ದ ಸಿಂಬಾ. ಯಾವುದಪ್ಪಾ ಆ ದ್ವೀಪ ಎಂದು ತಿಳಿಯಲು ನಾನು ‘ಗೂಗಲ್ ಬಾಬಾ’ ನ ಮೊರೆ ಹೋದೆ. ಆಗ ತಿಳಿದು ಬಂದದ್ದು…

ಅವೊಶಿಮಾ (Aoshima) ಎನ್ನುವ ಈ ದ್ವೀಪ ಬೆಕ್ಕುಗಳ ದ್ವೀಪ (Cat Island) ಎಂದೇ ಪ್ರಸಿದ್ಧಿ. ದಕ್ಷಿಣ ಜಪಾನ್ ನಲ್ಲಿರುವ ಈ ದ್ವೀಪದಲ್ಲಿ ಮನುಷ್ಯರ ಸಂಖ್ಯೆಗಿಂತ ಬೆಕ್ಕುಗಳ ಸಂಖ್ಯೆಯೇ ಅಧಿಕ. ಸದ್ದುಗದ್ದಲವಿಲ್ಲದ ಈ ಪುಟ್ಟ, ನಿಶ್ಯಬ್ಧ ದ್ವೀಪದ ಇತಿಹಾಸದತ್ತ ಗಮನ ಹರಿಸಿದರೆ ೧೯೪೫ರಲ್ಲಿ ಸುಮಾರು ೯೦೦ ರಷ್ಟಿದ್ದ ಅಲ್ಲಿನ ಜನ ಸಂಖ್ಯೆ ೧೯೫೫ರ ಹೊತ್ತಿಗೆ ಸುಮಾರು ೮೦೦ ಕ್ಕೆ ಇಳಿದಿತ್ತು. ಹೀಗೆ ಕಾಲ ಕ್ರಮೇಣ ಜನಸಂಖ್ಯೆ ಇಳಿಯುತ್ತಾ ಇಳಿಯುತ್ತಾ ೨೦೧೩ರ ಹೊತ್ತಿಗೆ ಕೇವಲ ೫೦ ಕ್ಕೆ ಇಳಿಯಿತು. ಇತ್ತೀಚಿನ ವರದಿಗಳ ಪ್ರಕಾರ ಅಲ್ಲಿನ ಮೂಲ (ಖಾಯಂ) ನಿವಾಸಿಗಳ ಸಂಖ್ಯೆ ಕೇವಲ ಐದಕ್ಕೆ ಇಳಿದಿದೆಯಂತೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಬೆಕ್ಕುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಾ ಇದೆ. ಇಲ್ಲಿನ ಮೂಲ ನಿವಾಸಿಗಳು ಬಹುತೇಕರು ಹಿರಿಯ ನಾಗರಿಕರು. ಅವರೆಲ್ಲಾ ತಮ್ಮ ಕೆಲಸದಿಂದ ನಿವೃತ್ತಿ ಹೊಂದಿ ಜೀವನ ಸಾಗಿಸುತ್ತಿರುವವರು. ಅವರ ಸರಾಸರಿ ವಯಸ್ಸು ೭೫. 

ಬಹಳ ವರ್ಷಗಳ ಹಿಂದೆ ಈ ದ್ವೀಪ ಈಗಿರುವಷ್ಟು ನಿರ್ಜನವಾಗಿರಲಿಲ್ಲ. ಆಗ ಬೆಕ್ಕುಗಳ ಸಂಖ್ಯೆಯೂ ಈಗಿನಷ್ಟು ವಿಪರೀತವಾಗಿರಲಿಲ್ಲ. ಸುಮಾರು ೪೦೦ ವರ್ಷಗಳ ಹಿಂದೆ ಹ್ಯಾಯೋಗೋ ಎಂಬ ಆದಿವಾಸಿಗಳು ಆವೊಶಿಮಾ ದ್ವೀಪಕ್ಕೆ ವಲಸೆ ಬಂದರು. ಅದಕ್ಕೆ ಪ್ರಮುಖ ಕಾರಣ ಆ ದ್ವೀಪದಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದ ಸಾರ್ಡಿನ್ ಎನ್ನುವ ಜಾತಿಯ ಮೀನು. ಅಲ್ಲಿನ ಕಡಲ ಕಿನಾರೆಯಲ್ಲಿ ಈ ಮೀನುಗಳು ಬೇಕಾದಷ್ಟು ಸಿಗುತ್ತಿದ್ದವು. ಸಾರ್ಡಿನ್ ಮೀನು ಬಹಳ ರುಚಿಕರ ಮತ್ತು ಪೌಷ್ಟಿಕಾಂಶಗಳ ಆಗರ. ಈ ವಲಸೆ ಬಂದಿದ್ದ ಆದಿವಾಸಿಗಳ ಮೂಲ ಕಸುಬು ಮೀನು ಹಿಡಿಯುವುದೇ ಆಗಿತ್ತು. ಕ್ರಮೇಣ ಅವರ ಸಂಖ್ಯೆ ವೃದ್ಧಿಸಿದಾಗ ಅಲ್ಲಿ ಇಲಿಗಳ ಉಪಟಳ ಪ್ರಾರಂಭವಾಯಿತು. ಈ ಇಲಿಗಳನ್ನು ನಿಗ್ರಹಿಸಲು ಬೆಕ್ಕುಗಳನ್ನು ತರಲಾಯಿತು. ಈ ಬೆಕ್ಕುಗಳು ಇಲಿಗಳನ್ನು ಹಿಡಿದು ತಿನ್ನುತ್ತಾ ಬದುಕಲು ಪ್ರಾರಂಭ ಮಾಡಿದವು. ಎರಡನೇ ಮಹಾಯುದ್ಧದ ಸಮಯದಲ್ಲಿ ಇಲ್ಲಿನ ಮೂಲ ನಿವಾಸಿಗಳಲ್ಲಿ ಹೆಚ್ಚಿನವರು ಜಪಾನ್ ನ ನಗರ ಪ್ರದೇಶಗಳಿಗೆ ಕೆಲಸವನ್ನು ಹುಡುಕಿಕೊಂಡು ಹೋದರು. ಆಗ ದ್ವೀಪದಲ್ಲಿ ಬಾಕಿಯಾದದ್ದು ಬೆಕ್ಕುಗಳು ಮಾತ್ರ. ಅಲ್ಲಿ ಉಳಿದ ಬೆಕ್ಕುಗಳಿಗೆ ಆಹಾರದ ಕೊರತೆ ಇಲ್ಲದೇ ಇದ್ದುದರಿಂದ ಅವುಗಳ ಸಂಖ್ಯೆಯು ಬೆಳೆಯುತ್ತಾ ಹೋಯಿತು. 

ಈಗ ಇಲ್ಲಿ ಮೂಲ ನಿವಾಸಿಗಳ ಸಂಖ್ಯೆ ಬೆರಳೆಣಿಕೆಯಷ್ಟಿದ್ದರೂ ಪ್ರವಾಸಿಗರು ಹೇರಳವಾಗಿ ಬರುತ್ತಾರೆ. ಬೆಕ್ಕುಗಳ ಸ್ವರ್ಗವೆಂದೇ ಹೆಸರಾಗಿರುವ ಈ ಅವೊಶಿಮಾ ದ್ವೀಪದಲ್ಲಿರುವ ಹೋಟೇಲ್, ಬಂದರುಗಳಲ್ಲಿ ಮನುಷ್ಯರಿಗಿಂತ ಅಧಿಕ ಸಂಖ್ಯೆಯಲ್ಲಿ ಬೆಕ್ಕುಗಳು ಓಡಾಡುತ್ತಿವೆ. ಪ್ರವಾಸಿಗರು ತರುವ ತಿಂಡಿ ತಿನಸುಗಳಿಗೆ ಮುಗಿಬೀಳುವ ಈ ಬೆಕ್ಕುಗಳು ಅವರ ಕಾಲುಗಳ ಬಳಿಯೇ ಸುತ್ತಾಡುತ್ತವೆ. ಬೆಕ್ಕುಗಳ ಸ್ವರ್ಗವನ್ನು ನೋಡಲು ಬಹಳಷ್ಟು ಪ್ರವಾಸಿಗರು ಬರುವುದರಿಂದ ಅವುಗಳಿಗೆ ಆಹಾರದ ಕೊರತೆ ಎದುರಾಗಿಲ್ಲ. ಈ ಕಾರಣದಿಂದ ವರ್ಷದಿಂದ ವರ್ಷಕ್ಕೆ ಬೆಕ್ಕುಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಏನೇ ಆದರೂ ಈ ‘ಕ್ಯಾಟ್ ಐಲ್ಯಾಂಡ್’ ಒಂದು ಅಪರೂಪದ ದ್ವೀಪ ಎನ್ನಲು ಅಡ್ಡಿಯಿಲ್ಲ.

‘ಗೂಗಲ್ ಬಾಬಾ’ ಇಷ್ಟು ವಿಚಾರ ತಿಳಿಸಿದ ಬಳಿಕ ನನಗೆ ಒಂದಂತೂ ಸ್ಪಷ್ಟವಾಯಿತು, ಅದೇನೆಂದರೆ ಇನ್ನು ನಮ್ಮ ಬೆಕ್ಕು ‘ಸಿಂಬಾ’ ಮರಳಿ ಬರುವುದು ಸಂಶಯ ಎಂದು. ಈಗ ನಾನು ಅದು ಆಗಾಗ ವಾಟ್ಸಾಪ್ ನಲ್ಲಿ ಕಳಿಸುವ ಫೋಟೋ, ಅಪ್ ಡೇಟ್ ಗಳನ್ನು ನೋಡುತ್ತಾ ಅದೆಷ್ಟು ಸುಖವಾಗಿದೆಯಲ್ಲಾ ಎಂದು ಹೊಟ್ಟೆಕಿಚ್ಚು ಪಡುತ್ತಾ ಕಾಲ ಕಳೆಯುತ್ತಿರುವೆ.

ಕೊನೇ ಸುದ್ದಿ: ಬಹಮಾಸ್ (Bahamas) ಎನ್ನುವ ದೇಶದಲ್ಲೂ ಒಂದು ಬೆಕ್ಕುಗಳ ದ್ವೀಪ ಇದೆ. ಬಹಮಾಸ್ ದೇಶದ ಮಧ್ಯ ಭಾಗದಲ್ಲಿರುವ ಈ ದ್ವೀಪವೂ 'ಕ್ಯಾಟ್ ಐಲ್ಯಾಂಡ್’ ಎಂದು ಪ್ರಸಿದ್ಧಿ ಪಡೆದಿದೆ. ಈ ದ್ವೀಪದ ಹೆಸರು ‘ಗ್ಯುನಿಮಾ’ ಅಥವಾ ಗುನಿಮಾ (Guanima) ಅರ್ಥಾತ್ ನೀರಿನ ಮಧ್ಯದ ಭೂಭಾಗ. ಇಲ್ಲೂ ಮನುಷ್ಯರಿಗಿಂತ ಬೆಕ್ಕುಗಳ ಸಂಖ್ಯೆಯೇ ಅಧಿಕವಂತೆ. ಈ ದ್ವೀಪವನ್ನು ೧೭೯೯ರಲ್ಲಿ ಗುರುತಿಸಲಾಗಿದೆ.  

ಚಿತ್ರ ಕೃಪೆ: ಅಂತರ್ಜಾಲ ತಾಣ