‘ಕ’ವರ್ಗದ ಮುಕ್ತಕಗಳು

‘ಕ’ವರ್ಗದ ಮುಕ್ತಕಗಳು

ಕವನ

*ಕ* ನ್ನಡದ ವರ್ಣವದು ಸುಂದರವು ಬರೆಯಲ್ಕೆ

ತನ್ನನದು ಹೋಲುತಿರೆ ಸುಲಭದಲ್ಲಿ|

ಕನ್ನಡಕ ಧರಿಸದೆಯೆ ನೋಡುತ್ತ ಲಿಪಿಯನ್ನು

ರನ್ನವೆನ್ನುವರಲ್ಲಿ - ರುಕ್ಮಿಣಿಸುತ||

 

*ಕಾ* ದಿಹರು ಮೋಕ್ಷಕ್ಕೆ ಪೋಗುವಾ ದಾರಿಯಂ

ಮೋದದಲಿ ಹಾಡುವರು ಗೀತೆಯನ್ನು|

ನಾದವಂ ನುಡಿಸುವರು ಹಲವು ರಾಗಗಳಲ್ಲಿ

ಪೋದವರು ಗೊತ್ತಿಲ್ಲ- ರುಕ್ಮಿಣಿಸುತ||

 

*ಕಿ* ರಣವದು ಹರಿಸುತಿದೆ ಚೇತನವ ತುಂಬುತ್ತ

ಹರಣವನು ತಡೆಯದೆಯೆ ನಿಂತಿಹುದಲಿ|

ಕರುಣವನು ತೋರುತಿರೆ ಭಾನುವಿನ ತೆರದಲ್ಲಿ

ಶರಣಾಗು ದೇವಂಗೆ -ರುಕ್ಮಿಣಿಸುತ||

 

*ಕೀ* ರುತಿಯ ಗಳಿಸುತ್ತ ಸಾಗುತಿರೆ ಜೀವನದಿ

ಏರುತಿದೆ ಕೀರ್ತಿಯದು ಗಗನದಲ್ಲಿ|

ಮೂರುತಿಯ ನಿಲ್ಲಿಸುತ ಗುಣಗಾನ ಮಾಡಿರಲು

ಹಾರುತಿದೆ ಹರಣವದು- ರುಕ್ಮಿಣಿಸುತ||

 

*ಕು* ಹಕಿಗಳ ನುಡಿಯಿಂದು ಶೃತಿಕಷ್ಟವಾಗಿರಲು

ಗಹನದಿಂ ಚರ್ಚಿಸುತಹರ್ನಿಶಿಯಲಿ|

ಪಹರೆಯಂ ಕಾದಿಹನು ರಕ್ಷಕನು ಜೊತೆಯಲ್ಲಿ

ದಹನವಂ ಮಾಡುವನು -ರುಕ್ಮಿಣಿಸುತ||

 

*ಕೂ* ಗುತಿದೆ ಕಾಡಿನೊಳ್ ಕೋಗಿಲೆಯು ನಾದದಲಿ

ಮಾಗುತಿದೆ ಹಣ್ಣಿಂದು ಮೌನದಲ್ಲಿ|

ಸೋಗಿನಲಿ ಬದುಕುತ್ತ ಸಾಗಿರುವ ಮನುಜನೇ

ಪೋಗುತಲಿ ಸುಮ್ಮನೆಯೆ- ರುಕ್ಮಿಣಿಸುತ||

 

*ಕೃ* ಷಿಯಿಂದು ಬೆಸೆದಿದೆ ಮಣ್ಣಿನಲಿ ಬಂಧವನು

ಹಸನಾದ ಬಾಳಿನಲಿ ತೋಷವಿಲ್ಲ|

ದೆಸೆದೆಸೆಗೆ ದುಃಖವದು ಬಾಧಿಸುತ ಸಾಗುತಿದೆ

ಮಸಣವೈ ಕೊನೆಯಲ್ಲಿ- ರುಕ್ಮಿಣಿಸುತ||

 

*ಕೆ* ಣಕುತ್ತ ಸಾಗುತಿರೆ ತೋಷವದು ಮನಕಿಲ್ಲ

ಗೊಣಗುತ್ತ ಒಳಗೊಳಗೆ ತಳಮಳಿಸುತ|

ಕಣಕಣವು ರೋಷವದು ನೆತ್ತರಲಿ ತುಂಬಿರಲು

ಚಣದಲ್ಲಿ ನರಕವೈ - ರುಕ್ಮಿಣಿಸುತ||

 

*ಕೇ* ವಲದಿ ನೋಡದಿರು ದಿರಿಸಿನಲ್ಲೆಳೆಯುತ್ತ

ಭಾವವದು ಪರಿಕಿಸಲು ಶುದ್ದವಲ್ಲಿ|

ಕೋವಿದನ ತೆರದಲ್ಲಿ ವರ್ತಿಸುವ ಮೂಢರದು

ಬೇವಿನಾ ಕಾಯಂತೆ- ರುಕ್ಮಿಣಿಸುತ||

 

*ಕೈ* ಯಾಸೆ ಮಾಡದಿರು ದೇಹವನು ಬಾಗಿಸುತ

ಸೈಯೆನ್ನುತಲಿ ಕೋಲೆಬಸವನಂತೆ|

ತೈಯೆಂದು ಕುಣಿವವರು ಚಪ್ಪಾಳೆ ನಾದಕ್ಕೆ

ಜೈಯೆನ್ನುವರು ಜನರು- ರುಕ್ಮಿಣಿಸುತ||

 

*ಕೊ* ನೆಯಲ್ಲಿ ಚಟ್ಟವದು ಕಾದಿಹುದು ನಿನಗಾಗಿ

ಮನೆಯಲ್ಲಿ ಶಾಶ್ವತದ ತಾಣವಿಲ್ಲ|

ಜನರಿಂದು ಹೊತ್ತೊಯ್ದು ಮುಚ್ಚುವರು ಮಣ್ಣಿನಲಿ

ಹೆಣವಾದ ದೇಹವಿದು - ರುಕ್ಮಿಣಿಸುತ||

 

*ಕೋ* ಪದಲಿ ಮೂಗನ್ನು ಮೂರ್ಖನಂತೆಯೆ ಕೊಯ್ದು

ತಾಪವನು ಪಡುತಿರಲು ಬರುತ್ತದೆಯೆ|

ತೋಪಿನಲಿ ಹಾರಿರುವ ಗುಂಡಂತೆ ಜೀವನವು

ಪೋಪುದದು ಬಾರದದು- ರುಕ್ಮಿಣಿಸುತ||

 

*ಕೌ* ರವನ ಕೋಪವದು ಕೊನೆತನಕ ಕೆಡುಕಾಗಿ

ಭಾರತದ ಯುದ್ದದಲಿ ಜಯಸಿಕ್ಕಿತೆ|

ಶೂರತನ ತೋರಿದರು ಯಶವನ್ನು ಕೊನೆವರೆಗೆ

ಧೀರಪಾಂಡವರಲ್ಲಿ- ರುಕ್ಮಿಣಿಸುತ||

 

*ಕಂ* ಗಳದು ಸಾರ್ಥಕವು ಎದುರಿನಲಿ ನೋಟದೊಳು

ತುಂಗೆಯಾ ದಡದಲ್ಲಿ ತಂಗಿರಲಲಿ|

ಶೃಂಗವದು ಕಾಣುತಿದೆ ನಯನಕ್ಕೆ ಸುಂದರವು

ಡಂಗುರವ ಸಾರುವೆನು-ರುಕ್ಮಿಣಿಸುತ||

 

-ಶಂಕರಾನಂದ ಹೆಬ್ಬಾಳ

 

ಚಿತ್ರ್