‘ಗಾರ್ಡಿಯನ್ ರಿಂಗ್' : ಯೋಗ ದಿನದ ವಿಶೇಷ !
ಪ್ರತೀ ವರ್ಷ ಜೂನ್ ೨೧ ಬಂತು ಎಂದಾಕ್ಷಣ ವಿಶ್ವದೆಲ್ಲೆಡೆ ಯೋಗದ ಸಂಭ್ರಮ ಮನೆಮಾಡುತ್ತದೆ. ಭಾರತ ಯೋಗ ಶಿಕ್ಷಣದ ತವರೂರಾದರೂ, ವಿದೇಶೀಯರು ಅದರ ಮಹತ್ವವನ್ನು ನಮಗಿಂತ ಬಹುಬೇಗನೇ ಅರ್ಥ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಅವರ ಒತ್ತಾಸೆಯಂತೆ ವಿಶ್ವ ಸಂಸ್ಥೆಯು ಪ್ರತೀ ವರ್ಷ ಜೂನ್ ೨೧ರಂದು 'ವಿಶ್ವ ಯೋಗ ದಿನ' ವನ್ನಾಗಿ ಆಚರಣೆಗೆ ಅನುವು ಮಾಡಿಕೊಟ್ಟಿದೆ. ಈ ವರ್ಷ ನಾವು ೮ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡುತ್ತಿದ್ದೇವೆ.
ಪ್ರಧಾನ ಮಂತ್ರಿಯವರು ಈ ವರ್ಷ ನಮ್ಮದೇ ರಾಜ್ಯದ ಅರಮನೆಗಳ ನಗರ ಮೈಸೂರಿನಲ್ಲಿ ಯೋಗ ದಿನಾಚರಣೆಯನ್ನು ಆಚರಣೆಯನ್ನು ಮಾಡಿದ್ದಾರೆ. ಈ ರೀತಿಯಾಗಿ ಮೈಸೂರು ನಗರವು ಹೊಸ ಗರಿಮೆಯೊಂದಕ್ಕೆ ಸಾಕ್ಷಿಯಾಗಿದೆ. ಈ ವರ್ಷದ ಯೋಗ ದಿನದ ವಿಶೇಷವೆಂದರೆ 'ಗಾರ್ಡಿಯನ್ ರಿಂಗ್' ಕಾರ್ಯಕ್ರಮ.
'ಗಾರ್ಡಿಯನ್ ರಿಂಗ್' ಅಂದರೆ ಸೂರ್ಯನ ಚಲನೆಯ ಪ್ರಕಾರ ಯೋಗಾಚರಣೆಯ ನೇರ ಪ್ರಸಾರದ ಕಾರ್ಯಕ್ರಮ. ಅಂದರೆ ಸೂರ್ಯ ಮೊದಲು ಉದಯಿಸುವ ಪೂರ್ವ ಭಾಗದ ದೇಶದಿಂದ ಪ್ರಾರಂಭವಾಗಿ ನಂತರ ಪಶ್ಚಿಮದ ಕಡೆಗೆ ಇರುವ ದೇಶಗಳೆಡೆಗೆ ಸಾಗುವ ವಿನೂತನ ಕಾರ್ಯಕ್ರಮ. ಈ ಕಾರ್ಯಕ್ರಮವು ವಿಶ್ವದಾದ್ಯಂತ ವಿವಿಧ ಭಾರತೀಯ ರಾಯಭಾರಿಗಳ ಕಚೇರಿಗಳ ಮೂಲಕ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಜೊತೆಗೂಡಿಸುವ ವಿದ್ಯಮಾನ. ಇದು ವಿಶ್ವದ ೧೬ ವಲಯಗಳಲ್ಲಿರುವ ಸುಮಾರು ೭೫ ರಾಷ್ಟ್ರಗಳಲ್ಲಿ ಆಚರಣೆಯಾಗುವ ಯೋಗ ದಿನಾಚರಣೆಯನ್ನು ನೇರವಾಗಿ ವೀಕ್ಷಿಸುವ ಕಾರ್ಯಕ್ರಮವಾಗಿದೆ. ಇದು ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಪ್ರಮುಖ ಆಕರ್ಷಣೆಯಾಗಿದೆ ಎಂದರೆ ತಪ್ಪಲ್ಲ.
'ಗಾರ್ಡಿಯನ್ ರಿಂಗ್' ಕಾರ್ಯಕ್ರಮಕ್ಕೆ ಭೂಮಿಯ ವಿವಿದೆಡೆ ಬೇರೆ ಬೇರೆ ಸಮಯಕ್ಕೆ ತೋರುವ ಸೂರ್ಯನೇ ಪ್ರಮುಖ ಆಕರ್ಷಣೆಯಾದ ಕಾರಣ ಇದಕ್ಕೆ 'ಒಂದು ಸೂರ್ಯ-ಒಂದು ಭೂಮಿ' (One Sun-One Earth) ಎಂದೇ ಹೆಸರಿಸಲಾಗಿದೆ. ಭಾರತೀಯ ಕಾಲಮಾನ ಬೆಳಿಗ್ಗೆ ಸುಮಾರು ಮೂರು ಗಂಟೆಗೆ ಫಿಜಿ (ಪೂರ್ವ ಭಾಗ) ದೇಶದಲ್ಲಿ ಪ್ರಾರಂಭವಾದ ಯೋಗ ದಿನದ ಕಾರ್ಯಕ್ರಮವು ರಾತ್ರಿ ಸುಮಾರು ೧೨ ಗಂಟೆಗೆ ಕೆನಡಾ ದೇಶ (ಪಶ್ಚಿಮ ಭಾಗದ ದೇಶ) ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಸಮಾಪನಗೊಳ್ಳಲಿದೆ. ಪೂರ್ವದಿಂದ ಪ್ರಾರಂಭವಾಗಿ ಪಶ್ಚಿಮದಲ್ಲಿ ಅಂತ್ಯಕೊಳ್ಳಲಿರುವ ಈ ಒಂದು ವೃತ್ತಾಕೃತಿಯ ರೂಪದ ಕಾರ್ಯಕ್ರಮಕ್ಕೆ 'ಗಾರ್ಡಿಯನ್ ರಿಂಗ್' ಎಂದೇ ಹೆಸರಿಸಲಾಗಿದೆ.
'ಮಾನವೀಯತೆಗಾಗಿ ಯೋಗ' (Yoga for Humanity) ಎಂಬುದು ಈ ವರ್ಷದ ಯೋಗ ದಿನದ ಘೋಷ ವಾಕ್ಯವಾಗಿದೆ. ಯೋಗ ದಿನವನ್ನು ಪ್ರಾರಂಭಿಸಿದ ಪ್ರಮುಖ ಉದ್ದೇಶಗಳೆಂದರೆ:
* ಜನರಿಗೆ ಪ್ರಾಚೀನ ಆರೋಗ್ಯ ವಿಧಾನವಾದ ಯೋಗದ ಬಗೆಗಿನ ಮಾಹಿತಿ ಮತ್ತು ಅದರ ನೈಸರ್ಗಿಕ ಉಪಯೋಗಗಳನ್ನು ತಿಳಿಸುವುದು.
* ಯೋಗದ ಸರಿಯಾದ ಉಪಯೋಗಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು.
* ಯೋಗದ ಧ್ಯಾನ ಸಂಬಂಧಿ ವಿಚಾರಗಳನ್ನು ತಿಳಿಸುವುದು.
* ಯೋಗದ ಮೂಲಕ ಕಾಯಿಲೆಗಳನ್ನು ನಿಯಂತ್ರಿಸುವ ಬಗ್ಗೆ ಮಾಹಿತಿ ತಿಳಿಸುವುದು.
* ಯೋಗದ ಸಮಗ್ರ ಪ್ರಯೋಜನವನ್ನು ಜನಸಾಮಾನ್ಯರಿಗೂ ತಲುಪುವಂತೆ ನೋಡುವುದು.
* ಮಾನಸಿಕ ಶಾಂತಿ ಮತ್ತು ನೆಮ್ಮದಿಯನ್ನು ಯೋಗದ ಮೂಲಕ ಪಡೆಯುವ ವಿಧಾನವನ್ನು ತಿಳಿಸುವುದು.
* ಮಾನಸಿಕ ಒತ್ತಡ ನಿವಾರಣೆಗಾಗಿ ಯೋಗ ಸಹಕಾರಿ ಎಂಬ ವಿಷಯವನ್ನು ತಿಳಿಸುವುದು.
* ದೈಹಿಕ ಕಾಯಿಲೆಗಳಿಗೆ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಯೋಗದ ಅಭ್ಯಾಸದ ಮೂಲಕ ನಿಯಂತ್ರಣ, ಉಪಶಮನ ಸಾಧ್ಯ ಎಂಬ ಮಾಹಿತಿ ಹಂಚುವುದು.
* ಆರೋಗ್ಯಕರ ಜೀವನ ಶೈಲಿಯ ಅಳವಡಿಕೆಯನ್ನು ಯೋಗದ ಮೂಲಕ ಪ್ರೋತ್ಸಾಹಿಸುವುದು.
* ದೀರ್ಘಾಯುಷ್ಯ ಹಾಗೂ ನೆಮ್ಮದಿಯ ಜೀವನ ಶೈಲಿಗಾಗಿ ಯೋಗವನ್ನು ಬೆಂಬಲಿಸುವುದು ಹಾಗೂ ಇತರರಿಗೂ ಈ ವಿಚಾರವನ್ನು ಹಂಚುವುದು.
ಯೋಗ ಎಂಬುವುದು ಒಂದು ದಿನದ ಕಾರ್ಯಕ್ರಮವಲ್ಲ. ಇದು ನಿರಂತರ ಪ್ರಕ್ರಿಯೆ. ಪ್ರತೀ ದಿನ ಯೋಗ ಮಾಡಿ ನಿರೋಗಿಗಳಾಗಿ ಎಂಬ ಒಂದು ಮಾತೇ ಇದೆ. ಯೋಗ ದಿನ ಎಂಬುವುದು ಈ ಆರೋಗ್ಯದಾಯಕ ಪ್ರಕ್ರಿಯೆಯನ್ನು ಜನರಲ್ಲಿ ಪ್ರಚಾರ ಪಡಿಸುವ ದಿನ ಅಷ್ಟೇ. ಆ ದಿನ ಯೋಗ ಮಾಡಿ ಉಳಿದ ದಿನಗಳು ಸುಮ್ಮನೇ ಮಲಗಿಕೊಂಡಿರಲು ಅಲ್ಲ. ದಿನಂಪ್ರತಿ ಯೋಗ ಮಾಡುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಪ್ರಾರಂಭದಲ್ಲಿ ಸರಳವಾದ ಯೋಗಾಸನಗಳನ್ನು ಮಾಡಿ, ನಂತರದ ದಿನಗಳಲ್ಲಿ ಸ್ವಲ್ಪ ಕಠಿಣ ಯೋಗಾಸನಗಳನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಿಮ್ಮ ದೇಹದ ಪ್ರಕೃತಿಗೆ ಯಾವ ಯೋಗಾಸನ ಒಳಿತು ಎಂಬುವುದನ್ನು ನುರಿತ ಯೋಗ ಗುರುಗಳಿಂದ ಅರಿತುಕೊಳ್ಳಬೇಕು. ಅಂದರೆ ನಿಮಗೆ ಶ್ವಾಸ ಸಂಬಂಧಿ ಸಮಸ್ಯೆ ಇದ್ದರೆ ಯಾವ ಆಸನ ಒಳ್ಳೆಯದು, ಬೊಜ್ಜಿನ ಸಮಸ್ಯೆಯಿದ್ದರೆ ಯಾವ ಆಸನ, ನಿಮಗೆ ಗಂಟು ನೋವಿದ್ದರೆ ಯಾವ ಆಸನ ಎಂಬುದನ್ನು ಅರಿತು ಯೋಗ ಮಾಡಬೇಕು. ಯಾವ ದೈಹಿಕ ಸಮಸ್ಯೆಯವರು ಯಾವ ಆಸನವನ್ನು ಮಾಡಬಾರದು ಎಂಬ ವಿಚಾರವನ್ನು ಅರಿತುಕೊಂಡಿರಬೇಕು.
ಯೋಗಾಸನದ ಮೂಲ ಭಾರತ ದೇಶ ಎಂಬುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ನಾವು ಈ ಅಮೂಲ್ಯ ಕಲೆಯನ್ನು ಕಡೆಗಣಿಸುತ್ತಿದ್ದೇವೆ. ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಂಡು ಮಾತ್ರೆಗಳ ಸಹಾಯದಿಂದ ಬದುಕು ಸಾಗಿಸುತ್ತಿದ್ದೇವೆ. ಆದುದರಿಂದ ಉತ್ತಮ ಯೋಗ ಗುರುವಿನ ಮಾರ್ಗದರ್ಶನದಲ್ಲಿ ಯೋಗದ ಆಸನಗಳನ್ನು ಕಲಿಯಿರಿ. ನಂತರ ಮನೆಯಲ್ಲೇ ನಿರಂತರ ಯೋಗ ಮಾಡುತ್ತಿರಿ. ಉತ್ತಮ ಆರೋಗ್ಯ ನಿಮ್ಮದಾಗಲಿ. ಆರೋಗ್ಯವಂತ ಸಮಾಜದಿಂದ ಆರೋಗ್ಯವಂತ ಮಾನವೀಯತೆಯ ರಾಷ್ಟದ ನಿರ್ಮಾಣವಾಗಲಿ ಎಂಬುದೇ ಯೋಗ ದಿನದ ಆಶಯ.
ಚಿತ್ರ ಕೃಪೆ: ಅಂತರ್ಜಾಲ ತಾಣ