‘ಗುಡ್ಡದ ಭೂತ' ಖ್ಯಾತಿಯ ಸದಾನಂದ ಸುವರ್ಣ ನೆನಪಿನಲ್ಲಿ…

‘ಗುಡ್ಡದ ಭೂತ' ಖ್ಯಾತಿಯ ಸದಾನಂದ ಸುವರ್ಣ ನೆನಪಿನಲ್ಲಿ…

ಖ್ಯಾತ ನಿರ್ದೇಶಕ, ನಿರ್ಮಾಪಕ ಸದಾನಂದ ಸುವರ್ಣ ಇನ್ನಿಲ್ಲ (ನಿಧನ: ಜುಲೈ ೧೬) ಎಂಬ ಸುದ್ದಿ ಕೇಳಿ ನನ್ನ ಮನಸ್ಸು ೯೦ರ ದಶಕದತ್ತ ವಾಲಿತು. ಆ ಸಮಯದಲ್ಲಿ ಸದಾನಂದ ಸುವರ್ಣರು ಮಂಗಳೂರಿನಲ್ಲಿ ಹಲವು ನಾಟಕಗಳ ನಿರ್ದೇಶನ ಮಾಡುತ್ತಿದ್ದರು. ನಾನು ಪದವಿಯ ಕೊನೇ ವರ್ಷದಲ್ಲಿದ್ದೆ ಎಂದು ನೆನಪು. ರಂಗಕರ್ಮಿ ಜಗನ್ ಪವಾರ್ ಬೇಕಲ್ ಅವರ ಜೊತೆ ನನ್ನ ಒಡನಾಟವಿತ್ತು. ಇವರು ಸಂಕೇತ್ ಕಲಾವಿದರು ಎಂಬ ಉದಯೋನ್ಮುಖ ಕಲಾವಿದರನ್ನು ಒಳಗೊಂಡ ಸಂಸ್ಥೆಯನ್ನು ಕಟ್ಟಿಕೊಂಡು ನಾಟಕಗಳ ಪ್ರದರ್ಶನ ಮಾಡುತ್ತಿದ್ದರು. 

ಒಂದು ದಿನ ಜಗನ್ ಪವಾರ್ ನನಗೆ ಕರೆ ಮಾಡಿ “ನಮ್ಮ ತಂಡದ ನಾಟಕದ ಅಭ್ಯಾಸವು ನಡೆಯುತ್ತಿದೆ. ಬರುತ್ತೀರಾ?” ಎಂದು ಕೇಳಿದರು. ನಾನು ಸಾಯಂಕಾಲ ಬರುತ್ತೇನೆ ಎಂದು ಹೇಳಿದೆ. ನನ್ನ ಗೆಳೆಯ ರಮೇಶ್ ಕೆ ಜಿ ಜೊತೆ ಮಾತನಾಡಿದಾಗ ‘ನನ್ನ ಗೆಳೆಯ ಸುಧಾಕರ್ ಸಾಲಿಯಾನ್ ಆ ನಾಟಕದಲ್ಲಿ ಪುಟ್ಟ ಪಾತ್ರ ಮಾಡುತ್ತಿದ್ದಾನೆ, ನಾನೂ ಬರುವೆ’ ಎಂದು ಹೇಳಿದ. ಹಾಗೆ ಆ ದಿನ ಸಂಜೆ ನಾನು, ರಮೇಶ್ ಜೊತೆ ಜಗನ್ ಪವಾರ್ ಅವರನ್ನು ಭೇಟಿಯಾದೆ. ಜಗನ್ ಪವಾರ್ ಅವರು ನಮ್ಮನ್ನು ನೇರವಾಗಿ ಮಂಗಳೂರಿನ ಡೊಂಗರಕೇರಿಯಲ್ಲಿರುವ ಕೆನರಾ ಶಾಲೆಗೆ ಕರೆದುಕೊಂಡು ಹೋದರು. ಅಲ್ಲಿ ಅವರ ತಂಡದ ನಾಟಕದ ಅಭ್ಯಾಸ ನಡೆಯುತ್ತಿತ್ತು. ನಾವು ಅಲ್ಲಿ ಹೋದಾಗ ‘ಉರುಳು' ಎಂಬ ನಾಟಕದ ತರಬೇತಿ ನಡೆಯುತ್ತಿತ್ತು. ಅದನ್ನು ನಿರ್ದೇಶನ ಮಾಡುತ್ತಿದ್ದವರು ಸದಾನಂದ ಸುವರ್ಣ ಇವರು. ಅವರನ್ನು ಕಂಡು ನನಗೆ ಅಚ್ಚರಿಯಾಯಿತು. ಏಕೆಂದರೆ ಖ್ಯಾತ ನಿರ್ದೇಶಕರೊಬ್ಬರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದದ್ದು. ‘ಉರುಳು’ ನಾಟಕ ಕೇವಲ ಮೂರು ಪಾತ್ರಗಳನ್ನು ಹೊಂದಿರುವ ನಾಟಕ. ಅದರಲ್ಲೂ ಪ್ರಮುಖ ಪಾತ್ರವಿರುವುದು ಇಬ್ಬರಿಗೆ ಮಾತ್ರ. ವಕೀಲ ಮತ್ತು ತನ್ನ ತಂದೆಯನ್ನೇ ಕೊಲೆ ಮಾಡಿದ ಆರೋಪ ಹೊತ್ತಿರುವ ಕಕ್ಷಿದಾರ. ಮತ್ತೊಂದು ಪಾತ್ರ ಜೈಲಿನ ವಾರ್ಡರ್. ಚಂದ್ರಹಾಸ್ ಉಳ್ಳಾಲ್ ಆರೋಪಿಯಾಗಿಯೂ, ಲಕ್ಷ್ಮಣ್ ಕುಮಾರ್ ಮಲ್ಲೂರು ವಕೀಲರಾಗಿಯೂ, ಸುಧಾಕರ್ ಸಾಲಿಯಾನ್ ಜೈಲಿನ ವಾರ್ಡರ್ ಆಗಿಯೂ ನಟಿಸುತ್ತಿದ್ದರು. ‘ಉರುಳು’ ನಾಟಕದ ಮೂಲ ಡಾ. ಶಂಕರ್ ಶೇಷ ಅವರು ಬರೆದ ಹಿಂದಿ ನಾಟಕ. ಈ ವ್ಯಕ್ತಿಗಳ ಜೊತೆಗೆ ನಟೇಶ್ ಉಳ್ಳಾಲ್, ಗೋಪಿನಾಥ್ ಭಟ್ ಅವರಂತಹ ಕಲಾವಿದರು ಸದಾನಂದ ಸುವರ್ಣರ ಗರಡಿಯಲ್ಲಿ ಬೆಳೆದವರು.

ಅಂದು ತಾವೇ ಅಭಿನಯ ಮಾಡುತ್ತಾ, ಡೈಲಾಗ್ ಗಳನ್ನು ಹೇಳುತ್ತಾ ಕಲಾವಿದರಿಗೆ ಅಭ್ಯಾಸ ಮಾಡಿಸುತ್ತಿದ್ದ ಸದಾನಂದ ಸುವರ್ಣರ ವ್ಯಕ್ತಿತ್ವ ನನ್ನನ್ನು ಬಹುವಾಗಿ ಆಕರ್ಷಿಸಿತ್ತು. ಅಂದು ಅವರ ಜೊತೆ ಹೆಚ್ಚಿಗೆ ಏನೂ ಮಾತನಾಡದೇ ಹೋದರೂ, ಮಂಗಳೂರಿನ ಪುರಭವನದಲ್ಲಿ ನಾಟಕ ಪ್ರದರ್ಶನವಾದಾಗ ಮಾತ್ರ ತಪ್ಪದೇ ಹೋಗಿ ನೋಡಿ ಬಂದೆ. ಅವರದ್ದು ಅದ್ಭುತ ನಿರ್ದೇಶನ. ಕಲಾವಿದರಿಂದ ಉತ್ತಮ ಪ್ರದರ್ಶನವನ್ನು ಹೇಗೆ ಹೊರತೆಗೆಯ ಬೇಕು ಎನ್ನುವುದು ಅವರಿಗೆ ಕರತಲಾಮಲಕವಾಗಿತ್ತು ಎಂದು ‘ಉರುಳು' ನಾಟಕದಿಂದಲೇ ತಿಳಿಯಿತು. ನಂತರ ‘ಕೋರ್ಟ್ ಮಾರ್ಶಲ್' ನಾಟಕ. ಇದೂ ಒಂದು ಅದ್ಭುತ ನಾಟಕ. ಬೇರೆ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿದ್ದರೂ ಕಥಾ ಹಂದರ ಬಹಳ ಸೊಗಸಾಗಿತ್ತು. ಅದರಲ್ಲೂ ಸದಾನಂದ ಸುವರ್ಣರ ನಿರ್ದೇಶನವಂತೂ ಅತ್ಯದ್ಭುತ. ‘ಗುಡ್ಡದ ಭೂತ' ಎನ್ನುವ ದೂರದರ್ಶನದ ಧಾರಾವಾಹಿಯ ನಿರ್ದೇಶಕರು ಎನ್ನುವ ಬಗ್ಗೆ ಮಾತ್ರ ತಿಳಿದಿದ್ದ ನನಗೆ ಸದಾನಂದ ಸುವರ್ಣರ ನೈಜ ಶಕ್ತಿ ಏನು ಎಂದು ಅವರು ನಿರ್ದೇಶನ ಮಾಡಿದ ನಾಟಕಗಳನ್ನು ನೋಡುವಾಗ ಗೊತ್ತಾಯಿತು. ನಂತರದ ದಿನಗಳಲ್ಲಿ ಹಲವಾರು ಬಾರಿ ಸದಾನಂದ ಸುವರ್ಣರ ನಿರ್ದೇಶನದ ನಾಟಕಗಳನ್ನು ನೋಡಿದೆ.   

ಸುವರ್ಣರ ಬಗ್ಗೆ ಒಂದಿಷ್ಟು: ಉಡುಪಿ ಜಿಲ್ಲೆಯ ನಂದಿಕೂರಿನ ರುಕ್ಕ ಡಿ. ಕೋಟ್ಯಾನ್ ಹಾಗೂ ಪೂವಮ್ಮ ದಂಪತಿಗಳ ಹಿರಿಯ ಮಗನಾಗಿ ಡಿಸೆಂಬರ್ ೨೪, ೧೯೩೧ರಲ್ಲಿ ಜನಿಸಿದ ಸದಾನಂದ ಸುವರ್ಣರು ತಮ್ಮ ಐದನೇ ತರಗತಿಯವರೆಗಿನ ವಿದ್ಯಾಭ್ಯಾಸವನ್ನು ಮೂಲ್ಕಿಯಲ್ಲಿ ಪೂರೈಸಿದರು. ನಂತರ ತಂದೆಯವರ ಜೊತೆಗೆ ಮುಂಬಯಿಗೆ ತೆರಳಿದ ಅವರು ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಮುಂಬಯಿಯಲ್ಲಿ ಪೂರ್ಣಗೊಳಿಸಿದರು. ಸ್ವಲ್ಪ ಸಮಯ ರಾತ್ರಿ ಶಾಲೆಯ ಅಧ್ಯಾಪಕರಾಗಿ ಕೆಲಸ ಮಾಡಿದರು. ನಂತರ ಮೂರು ದಶಕಗಳ ಕಾಲ ಪ್ರೀಮಿಯರ್ ಪೈಂಟ್ ಎನ್ನುವ ಉದ್ದಿಮೆಯನ್ನು ನಡೆಸಿದರು. ಉದ್ದಿಮೆಯೊಂದಿಗೆ ತಮ್ಮ ಆಸಕ್ತಿಗೆ ಪೂರಕವಾದ ನಾಟ್ಯ ಅಕಾಡೆಮಿಯಲ್ಲಿ ನಾಟಕ ಕುರಿತು ಶಿಕ್ಷಣ, ಭಾರತೀಯ ವಿದ್ಯಾಭವನದಲ್ಲಿ ಸಮೂಹ ಸಂವಹನದಲ್ಲಿ ರೇಡಿಯೋ, ಚಲನಚಿತ್ರ, ಟಿವಿ ಬಗ್ಗೆ ಡಿಪ್ಲೋಮಾ, ಸ್ಥಿರ ಛಾಯಾಗ್ರಹಣ ಸಹಿತ ಹಲವು ಕ್ಷೇತ್ರದಲ್ಲಿ ತರಬೇತಿ ಪಡೆದು ಡಿಪ್ಲೋಮಾ ಪದವಿಯನ್ನು ಪಡೆದುಕೊಂಡರು.

ತಮ್ಮ ಒಲವು ನಾಟಕ, ಸಿನೆಮಾದತ್ತ ಎಂಬುವುದನ್ನು ಅರಿತುಕೊಂಡ ಸದಾನಂದ ಸುವರ್ಣರು ತಮ್ಮ ಪೈಂಟ್ ಕಂಪೆನಿಯನ್ನು ೧೯೯೦ರಲ್ಲಿ ಮಾರಾಟ ಮಾಡಿದರು. ದೂರದರ್ಶನಕ್ಕಾಗಿ ‘ಗುಡ್ಡದ ಭೂತ' ಎನ್ನುವ ಧಾರವಾಹಿಯನ್ನು ೧೩ ಕಂತುಗಳಲ್ಲಿ ನಿರ್ಮಿಸಿ, ನಿರ್ದೇಶನ ಮಾಡಿದರು. ಈ ಧಾರವಾಹಿಯು ಬಹಳ ಕುತೂಹಲಕಾರಿಯಾಗಿತ್ತು ಎನ್ನುವುದಕ್ಕೆ ಪ್ರತೀ ವಾರ ವೀಕ್ಷಕರು ಕಾದು ಕುಳಿತು ನೋಡುತ್ತಿದ್ದುದೇ ಸಾಕ್ಷಿ. ಈಗಲೂ ಅದರ ಹಾಡು “ಡೆನ್ನಾನಾ ಡೆನ್ನಾನಾ..." ಕೇಳಿದಾಗ ಮನಸ್ಸು ಅಂದಿನ ದಿನಗಳತ್ತ ವಾಲುತ್ತದೆ. 

ಚಲನ ಚಿತ್ರರಂಗದಲ್ಲಿ ಆಸಕ್ತಿ ಹುಟ್ಟಿ ಅವರು ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಘಟಶ್ರಾದ್ಧ' ಎನ್ನುವ ಚಿತ್ರವನ್ನು ನಿರ್ಮಾಣ ಮಾಡಿದರು. ಇದಕ್ಕೆ ಕೇಂದ್ರ ಸರಕಾರದ ಸ್ವರ್ಣ ಕಮಲ ಪುರಸ್ಕಾರ ಲಭಿಸಿತು. ನಂತರ ಪೂರ್ಣ ಚಂದ್ರ ತೇಜಸ್ವಿ ಅವರ ‘ಕುಬಿ ಮತ್ತು ಇಯಾಲ' ಎನ್ನುವ ಚಿತ್ರವನ್ನು ನಿರ್ದೇಶಿಸಿದರು. ಕಾಸರವಳ್ಳಿ ಜೊತೆಗೂಡಿ ತಬರನ ಕಥೆ, ಮನೆ, ಕ್ರೌರ್ಯ ಮುಂತಾದ ಚಿತ್ರಗಳನ್ನು ನಿರ್ಮಾಣ ಮಾಡಿದರು. ಕಾರಂತ ದರ್ಶನ, ತುಳುನಾಡು ಒಂದು ಇಣುಕು ನೋಟ, ಶ್ರೀ ನಾರಾಯಣ ಗುರು ಎನ್ನುವ ಸಾಕ್ಷ್ಯ ಚಿತ್ರಗಳನ್ನೂ ನಿರ್ದೇಶನ ಮಾಡಿದ್ದಾರೆ. 

ಸದಾನಂದ ಸುವರ್ಣ ಅವರಿಗೆ ಸಾಹಿತ್ಯದಲ್ಲೂ ಬಹಳ ಆಸಕ್ತಿ ಇತ್ತು. ಅವರು ಹಲವಾರು ಸಣ್ಣ ಕತೆಗಳು, ಕಾದಂಬರಿಗಳನ್ನೂ ಬರೆದಿದ್ದಾರೆ. ಸುಮಾರು ೫೦ಕ್ಕೂ ಅಧಿಕ ನಾಟಕಗಳನ್ನು ರೂಪಾಂತರ ಮಾಡಿ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಕೋರ್ಟ್ ಮಾರ್ಷಲ್, ಸಂಚು, ಉರುಳು, ಚಕ್ರವ್ಯೂಹ, ಕುಲಗೌರವ ಪ್ರಮುಖವಾದದ್ದು. ಇದರ ಜೊತೆಗೆ ಅಭಾಗಿನಿ, ಕಣ್ಣು ತೆರೆಯಿತು, ಹಳ್ಳದಿಂದ ಹಾದಿಗೆ, ರೂಪದರ್ಶನ, ಪವಾಡ, ಆಕಸ್ಮಿಕ ಮೊದಲಾದ ನಾಟಕಗಳನ್ನು ಖುದ್ದಾಗಿ ರಚಿಸಿ ನಿರ್ದೇಶನ ಮಾಡಿದ್ದಾರೆ. ‘ಗುಡ್ಡದ ಭೂತ' ಧಾರಾವಾಹಿ ಮೂಲಕ ಇವರು ಪ್ರಕಾಶ್ ರೈ ಎಂಬ ನಟನನ್ನು ಪರಿಚಯಿಸಿದ್ದರು. ನಂತರದ ದಿನಗಳಲ್ಲಿ ಪ್ರಕಾಶ್ ರೈ (ರಾಜ್) ಸಿನೆಮಾ ರಂಗದಲ್ಲಿ ಬೆಳೆದ ಪರಿಯನ್ನು ಎಲ್ಲರೂ ಗಮನಿಸಿದ್ದಾರೆ.  

ಸದಾನಂದ ಸುವರ್ಣ ಇವರಿಗೆ ೧೯೯೬ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೦೦ರಲ್ಲಿ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೨೦೦೧ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ನಿಂದ ಕರ್ನಾಟಕ ಶ್ರೀ ಪ್ರಶಸ್ತಿ, ಆಳ್ವಾಸ್ ಪ್ರತಿಷ್ಟಾನದ ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳು ಲಭಿಸಿವೆ. ಅವಿವಾಹಿತರಾಗಿದ್ದ ಸದಾನಂದ ಸುವರ್ಣರು ತಮ್ಮ ಇಡೀ ಬದುಕನ್ನು ರಂಗಭೂಮಿ ಮತ್ತು ಸಿನೆಮಾರಂಗಕ್ಕೆ ಮೀಸಲಾಗಿಟ್ಟಿದ್ದರು. ೯೩ ವರ್ಷಗಳ ತುಂಬು ಬದುಕನ್ನು ಸಾಗಿಸಿದ ಅವರು ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ಎಂದರೆ ತಪ್ಪಲ್ಲ. 

ಚಿತ್ರ ಕೃಪೆ: ಅಂತರ್ಜಾಲ ತಾಣ