‘ಚಂದಮಾಮ' ಪುಸ್ತಕದ ಚಿತ್ರ ಕಲಾವಿದ ಶಂಕರ್ ನೆನಪಿದೆಯೇ?

‘ಚಂದಮಾಮ' ಪುಸ್ತಕದ ಚಿತ್ರ ಕಲಾವಿದ ಶಂಕರ್ ನೆನಪಿದೆಯೇ?

ಚಂದಮಾಮ, ಬಾಲಮಿತ್ರ, ಬೊಂಬೆಮನೆ ಎಂಬ ಹೆಸರುಗಳನ್ನು ಕೇಳಿದ ಕೂಡಲೇ ನನ್ನಂತಹ ಹಲವರ ಮನಸ್ಸು ತಮ್ಮ ಬಾಲ್ಯದತ್ತ ಚಲಿಸಲು ಶುರು ಮಾಡುತ್ತದೆ ಎಂಬುವುದು ಶೇಕಡಾ ನೂರಕ್ಕೆ ನೂರು ನಿಜ. ಕಳೆದ ಶತಮಾನದಲ್ಲಿ ಮಕ್ಕಳಾಗಿದ್ದ ಎಲ್ಲರ ಮೇಲೂ ಪ್ರಭಾವ ಬೀರಿದ ಮಕ್ಕಳ ಪುಸ್ತಕಗಳಲ್ಲಿ ಚಂದಮಾಮ ಒಂದು. ಆಗಿನ ಮದ್ರಾಸ್ (ಚೆನ್ನೈ) ನಿಂದ ಮುದ್ರಣಗೊಂಡು ಬರುತ್ತಿದ್ದ ಈ ಪುಸ್ತಕಕ್ಕೆ ಸಹಸ್ರಾರು ಓದುಗರಿದ್ದರು. ಸುಮಾರು ಹನ್ನೆರಡು ಭಾಷೆಯಲ್ಲಿ ಹೊರ ಬರುತ್ತಿದ್ದ ಚಂದಮಾಮ ಕನ್ನಡದಲ್ಲೂ ಪ್ರಕಟವಾಗುತ್ತಿತ್ತು. ನಾವೆಲ್ಲಾ ಸಣ್ಣವರಿರುವಾಗ ಮೊಬೈಲ್, ಇಂಟರ್ನೆಟ್ ಎಂಬ ಜಂಜಾಟವಿಲ್ಲದೇ ಚಂದಮಾಮದಂತಹ ಪುಸ್ತಕ ಓದುವುದರಲ್ಲೇ ಸಮಯ ಕಳೆಯುತ್ತಿದ್ದೆವು. 

ಚಂದಮಾಮದಲ್ಲಿ ಬರುವ ಪುಟ್ಟ ಪುಟ್ಟ ರಸವತ್ತಾದ ಕಥೆಗಳು, ಅದರಲ್ಲೂ ವಿಕ್ರಮ್ ಮತ್ತು ಬೇತಾಳನ ರೋಚಕ ಕಥೆಗಳು ಓದುತ್ತಾ ಓದುತ್ತಾ ಮೋಡಿ ಮಾಡಿ ನಮ್ಮನ್ನು ಬೇರೆಯೇ ಲೋಕಕ್ಕೆ ಬರೆದುಕೊಂಡು ಹೋಗಿ ಬಿಡುತ್ತಿದ್ದವು. ವಿಕ್ರಮ್ ಮತ್ತು ಬೇತಾಳನ ಕಥೆಗೆ ಸುಂದರವಾಗಿ, ನೈಜವಾಗಿ ತೋರುವಂತೆ ಚಿತ್ರ ಬಿಡಿಸುತ್ತಿದ್ದವರೇ ಕೆ.ಸಿ.ಶಿವಶಂಕರನ್ ಅರ್ಥಾತ್ 'ಆರ್ಟಿಸ್ಟ್ ಶಂಕರ್'. ತಂತ್ರಜ್ಞಾನದ ಗಾಳಿ ಬೀಸದೇ ಇದ್ದ ಆ ಸಮಯದಲ್ಲಿ ಶಂಕರ್ ತಮ್ಮ ಕೈಚಳಕ ತೋರಿಸುತ್ತಿದ್ದುದೇ ಒಂದು ರೀತಿಯಲ್ಲಿ ಪವಾಡವೇ ಸರಿ. ಅವರ ಕೈಯಲ್ಲಿ ಚಿತ್ರಗಳು ಜೀವ ಪಡೆಯುತ್ತಿದ್ದುವು.   

ಶಿವಶಂಕರ್ ೧೯೨೪, ಜುಲೈ ೧೯ರಂದು ತಮಿಳುನಾಡಿನ ಈರೋಡಿನಲ್ಲಿ ಜನಿಸಿದ್ದರು. ಬಾಲ್ಯದಿಂದಲೂ ಐತಿಹಾಸಿಕ ವ್ಯಕ್ತಿಗಳ ಚಿತ್ರಗಳನ್ನು ಬಿಡಿಸುವ ಹವ್ಯಾಸ ಹೊಂದಿದ್ದ ಶಂಕರ್ ತಮ್ಮ ಹತ್ತನೇ ವಯಸ್ಸಿನಲ್ಲಿ ತಮ್ಮ ಸಹೋದರನ ಜೊತೆ ಕಾರ್ಪೋರೇಶನ್ ಶಾಲೆಯಲ್ಲಿ ವ್ಯಾಸಂಗಕ್ಕೆ ಸೇರುತ್ತಾರೆ. ಚಿತ್ರ ಕಲೆಯಲ್ಲಿ ಇವರ ಆಸಕ್ತಿಯನ್ನು ಗುರುತಿಸಿದ ಶಾಲಾ ಶಿಕ್ಷಕರು ಇವರನ್ನು ಚಿತ್ರಕಲೆಯನ್ನು ವೃತ್ತಿಯಾಗಿ ತೆಗೆದುಕೊಳ್ಳುವಂತೆ ಹುರಿದುಂಬಿಸುತ್ತಾರೆ. ಶಂಕರ್ ಚಿತ್ರಕಲೆಯಲ್ಲಿ ಇನ್ನಷ್ಟು ಪಳಗುವ ದೃಷ್ಟಿಯಿಂದ ಸರಕಾರಿ ಕಲಾ ಕಾಲೇಜಿನಲ್ಲಿ ವ್ಯಾಸಂಗ ಮುಂದುವರೆಸುತ್ತಾರೆ. ೧೯೪೬ರಲ್ಲಿ ಇವರು ತಮ್ಮ ಪದವಿಯನ್ನು ಪೂರೈಸುತ್ತಾರೆ. 

ಶಂಕರ್ ಕಾಲೇಜು ಜೀವನದಲ್ಲಿ ಹಲವಾರು ಚಿತ್ರಗಳನ್ನು ಬಿಡಿಸಿ ತಮ್ಮ ಪ್ರತಿಭೆಯ ಪರಿಚಯ ಸಹಪಾಠಿಗಳಿಗೆ ತೋರಿಸಿರುತ್ತಾರೆ. ಅದನ್ನು ಗಮನಿಸಿ ಅವರ ಹಿರಿಯ ಸಹಪಾಠಿಯೊಬ್ಬ ಅವರನ್ನು 'ಕಲೈಮಗಳ್’ ಪತ್ರಿಕೆಗೆ ಚಿತ್ರಕಾರರಾಗಿ ಸೇರಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಅದರಂತೆ ಶಂಕರ್ ತಮ್ಮ ವೃತ್ತಿಜೀವನವನ್ನು ಕಲೈಮಗಳ್ ನಿಯತಕಾಲಿಕೆಯ ಮೂಲಕ ಪ್ರಾರಂಭಿಸುತ್ತಾರೆ. ಸುಮಾರು ಐದು ವರ್ಷ ಆ ಪತ್ರಿಕೆಯಲ್ಲಿ ದುಡಿದ ಬಳಿಕ, ೧೯೫೧ರಲ್ಲಿ ನಾಗಿ ರೆಡ್ಡಿಯವರ 'ಅಂಬುಲಿಮಾಮಾ’ ನಿಯತಕಾಲಿಕವನ್ನು ಸೇರುತ್ತಾರೆ. ನಾಗಿರೆಡ್ಡಿಯವರು ಚಂದಮಾಮ ಎನ್ನುವ ಮಕ್ಕಳ ಪತ್ರಿಕೆಯನ್ನೂ ಪ್ರಕಟಿಸುತ್ತಿದ್ದರು. ಚಂದಮಾಮ ಹೇಳಿ, ಕೇಳಿ ಮಕ್ಕಳ ಕಥಾ ಮಾಸಿಕವಾದುದರಿಂದ ಅದಕ್ಕೆ ಸುಂದರವಾದ ಹಾಗೂ ಮಕ್ಕಳ ಮನಸ್ಸು ಗೆಲ್ಲುವ ಚಿತ್ರಗಳ ಅಗತ್ಯ ತುಂಬಾನೇ ಇತ್ತು.

ನಾಗಿರೆಡ್ಡಿಯವರು ಶಂಕರ್ ಅವರ ಚಿತ್ರಕಲಾ ಪ್ರತಿಭೆಯನ್ನು ತುಂಬಾ ಬೇಗನೇ ಗಮನಿಸುತ್ತಾರೆ. ಶಂಕರ್ ಅವರನ್ನು ಚಂದಮಾಮ ವಿನ್ಯಾಸಕಾರರ ಬಳಗದಲ್ಲಿ ಸೇರಿಸಿಕೊಳ್ಳುತ್ತಾರೆ. ನಾಗಿರೆಡ್ಡಿಯವರ ನಂಬಿಕೆಯನ್ನು ಶಂಕರ್ ಅವರು ಹುಸಿಗೊಳಿಸುವುದಿಲ್ಲ. ಮಕ್ಕಳ ಮನಸ್ಸಿಗೆ ಮುದನೀಡುವಂತಹ ಚಿತ್ರಗಳನ್ನು ಅವರು ತಮ್ಮ ಕುಂಚದಲ್ಲಿ ಚಿತ್ರಿಸುತ್ತಾರೆ. ಅವರು ಬಿಡಿಸಿದ ‘ವಿಕ್ರಮ್ ಮತ್ತು ಬೇತಾಳ' ಚಿತ್ರವು ಈಗಲೂ ಕ್ಲಾಸಿಕ್ ಸಂಗ್ರಹದ ಚಿತ್ರವೆಂದೇ ಖ್ಯಾತಿ ಪಡೆದಿದೆ. ರಾಜಾ ವಿಕ್ರಮಾದಿತ್ಯನು ಸ್ಮಶಾನಕ್ಕೆ ತೆರಳಿ ಅಲ್ಲಿ ಮರದಲ್ಲಿ ನೇತಾಡುತ್ತಿದ್ದ ಬೇತಾಳ (ಭೂತ) ವನ್ನು ಕೆಳಗಿಳಿಸಿ ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುವಾಗ ಅದು ಕಥೆ ಹೇಳಲು ಪ್ರಾರಂಭಿಸುತ್ತದೆ ಮತ್ತು ಕಥೆಯ ಕೊನೆಗೆ ರಾಜನಿಗೆ ಪ್ರಶ್ನೆಯನ್ನು ಕೇಳಿ ಉತ್ತರ ಹೇಳದಿದ್ದರೆ ಅವನ ತಲೆಯು ಸಾವಿರ ಹೋಳಾಗುತ್ತದೆ ಎಂದು ಹೆದರಿಸುತ್ತದೆ. ಉತ್ತರ ಹೇಳಿದರೆ ಬೇತಾಳವು ಹಾರಿ ಹೋಗಿ ಮತ್ತೆ ಆ ಸ್ಮಶಾನದ ಮರದಲ್ಲಿ ನೇತಾಡಲು ಪ್ರಾರಂಭಿಸುತ್ತದೆ. ಇದು ಹಲವಾರು ಸಮಯದವರೆಗೆ ನಡೆಯುತ್ತಾ ಇರುತ್ತದೆ. ಈ ಸರಣಿ ಕಥೆಗೆ ಚಿತ್ರಗಳನ್ನು ಬರೆದವರು ಶಿವಶಂಕರ್. ಅವರ ಕಲಾ ಪ್ರತಿಭೆಗೆ ಈ ಚಿತ್ರವೊಂದೇ ಸಾಕು. ಈಗಲೂ ವಿಕ್ರಮ್ ಬೇತಾಳ ಎಂದರೆ ಈ ಚಿತ್ರವು ಅಂದಿನ ನೆನಪುಗಳನ್ನು ಬಿಚ್ಚಿ ಇಡುತ್ತದೆ. 

ಚಂದಮಾಮದ ಬಹುತೇಕ ಚಿತ್ರಗಳನ್ನು ಶಂಕರ್ ಅವರು ಬಿಡಿಸುತ್ತಿದ್ದರು. ಇವರು ಭಾರತೀಯ ಶೈಲಿಗಳಲ್ಲದೇ ಯುರೋಪಿಯನ್, ಮಧ್ಯಪ್ರಾಚ್ಯ ರಾಷ್ಟ್ರಗಳ ವಿಭಿನ್ನ ಶೈಲಿಗಳಲ್ಲಿ ತಮ್ಮ ಚಿತ್ರ ಪ್ರತಿಭೆಯನ್ನು ಹೊರಹಾಕುತ್ತಿದ್ದರು. ಸುಮಾರು ೬೦ ವರ್ಷಗಳ ಕಾಲ ಇವರು ಚಂದಮಾಮ ಪತ್ರಿಕೆಗೆ ಕೆಲಸ ಮಾಡಿದರು. ಒಂದೊಂದು ತಿಂಗಳಿಗೆ ಒಂದೊಂದು ಸಂಸ್ಥೆಯಲ್ಲಿ ಕೆಲಸ ಮಾಡುವ ಜನರಿರುವ ಈ ಕಾಲದಲ್ಲಿ ಓರ್ವ ವ್ಯಕ್ತಿ ಆರು ದಶಕಗಳ ಕಾಲ ಒಂದೇ ಪತ್ರಿಕೆಯಲ್ಲಿ ಕೆಲಸ ಮಾಡಿರುವುದು ಅದ್ಭುತ ಸಮಾಚಾರವೇ ಸರಿ. ಇದು ಇವರಿಗೆ ಕೆಲಸದ ಮೇಲೆ ಇದ್ದ ನಿಷ್ಟೆ ಮತ್ತು ಪ್ರೀತಿಯನ್ನು ತೋರಿಸುತ್ತದೆ. ೯೭ ವರ್ಷಗಳ ತುಂಬು ಜೀವನವನ್ನು ಬದುಕಿದ ಶಿವಶಂಕರ್ ೨೯, ಸೆಪ್ಟೆಂಬರ್ ೨೦೨೦ರಂದು ನಿಧನ ಹೊಂದಿದರು. ಬಹುಷಃ ಚಂದಮಾಮದ ಅಂದಿನ ವಿನ್ಯಾಸಗಾರರ ಪೈಕಿ ಇವರೇ ಕೊನೆಯ ಕೊಂಡಿಯಾಗಿ ಬದುಕಿದ್ದರು ಎಂದು ಅನಿಸುತ್ತದೆ. ಅಂದಿನ ಕಾಲಕ್ಕೇ ಚಂದಮಾಮ ಕನ್ನಡವೂ ಸೇರಿದಂತೆ ೧೨ ಭಾಷೆಯಲ್ಲಿ ಹೊರಬರುತ್ತಿತ್ತು. ಶತಮಾನ ತುಂಬಿದ ಪತ್ರಿಕೆ ಇತ್ತೀಚಿನ ದಿನಗಳವರೆಗೆ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಬದಲಾದ ವ್ಯವಸ್ಥೆ ಮತ್ತು ಮಕ್ಕಳ ಮನಸ್ಸು ಶಿಶು ಸಾಹಿತ್ಯದ ಪತ್ರಿಕೆಗಳಿಗೆ ಮರಣ ಶಾಸನವನ್ನೇ ಬರೆದು ಬಿಟ್ಟಿದೆ. 

ಪ್ರಸ್ತುತ ಕನ್ನಡದಲ್ಲಿ ಒಂದೇ ಒಂದು ಮಕ್ಕಳ ನಿಯತಕಾಲಿಕೆಗಳು ಮಾರುಕಟ್ಟೆಗೆ ಬರುತ್ತಿಲ್ಲ ಎಂದು ನನ್ನ ಅನಿಸಿಕೆ. ಆದರೆ ಕಳೆದ ಶತಮಾನದಲ್ಲಿ ಎಷ್ಟೊಂದು ಮಕ್ಕಳ ಪತ್ರಿಕೆಗಳಿದ್ದವು. ಮದ್ರಾಸ್ ನಿಂದ ಕನ್ನಡ ಪತ್ರಿಕೆಗಳು, ಅದೂ ಮಕ್ಕಳ ಪತ್ರಿಕೆ ಪ್ರಕಟವಾಗಿ ಬರುತ್ತಿದ್ದುದು ಅಚ್ಚರಿಯ ಸಂಗತಿ. ಶಂಕರ್ ಅವರು ಚಂದಮಾಮ ಓದುಗರ ನೆನಪಿನ ಪಟಗಳಲ್ಲಿ ಸದಾ ಜೀವಂತ. ಬಾಲ್ಯದಲ್ಲಿ ಚಂದಮಾಮ ಓದಿ ಬೆಳೆದ ನಮಗೆ ವಿಕ್ರಮ್ ಬೇತಾಳ್ ಚಿತ್ರಗಳ ಜೊತೆಗೆ ಅದರ ಸೃಷ್ಟಿಕರ್ತ ಶಿವಶಂಕರ್ ಕೂಡಾ ಖಂಡಿತವಾಗಿಯೂ ನೆನಪಾಗುತ್ತಾರೆ. ಅದೇ ಶಿವಶಂಕರ್ ಅವರ ಚಿತ್ರಕಲೆಯ ಮಹಿಮೆ.   

ಚಿತ್ರ ಕೃಪೆ: ಅಂತರ್ಜಾಲ ತಾಣಗಳಿಂದ