‘ಜಗನ್ಮೋಹಿನಿ' ಚಿತ್ರ ನೋಡಿ ಹುಚ್ಚನಾದ !

‘ಜಗನ್ಮೋಹಿನಿ' ಚಿತ್ರ ನೋಡಿ ಹುಚ್ಚನಾದ !

ಸುಮಾರು ಒಂದೆರಡು ದಶಕಗಳ ಹಿಂದೆ ಚಿತ್ರ ಮಂದಿರಗಳಿಗೆ ಹೋಗಿ ಚಲನಚಿತ್ರವನ್ನು ನೋಡುವವರ ಸಂಖ್ಯೆ ಸಾಕಷ್ಟಿತ್ತು. ಕ್ರಮೇಣ ದೂರದರ್ಶನ, ಅಂತರ್ಜಾಲ ತಾಣ, ಮೊಬೈಲ್ ಗಳಲ್ಲಿ ಚಲನಚಿತ್ರಗಳು ಬರಲು ಆರಂಭಿಸಿದಾಗ ಸಿನೆಮಾ ಮಂದಿರಗಳಿಗೆ ಹೋಗಿ ಚಿತ್ರವನ್ನು ನೋಡುವವರ ಸಂಖ್ಯೆ ಬಹಳಷ್ಟು ಕಡಿಮೆ ಆಯಿತು. ಆದರೆ ಈಗಲೂ ಉತ್ತಮ ಚಿತ್ರಗಳು ಬಿಡುಗಡೆಯಾದಾಗ ಜನರು ಮುಗಿಬಿದ್ದು ಚಿತ್ರಗಳನ್ನು ನೋಡುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಕೆ ಜಿ ಎಫ್ (ಭಾಗ ೧ ಹಾಗೂ ೨), ಕಾಂತಾರ, ಚಾರ್ಲಿ 777, ರಾಜ್ ಸೌಂಡ್ಸ್ ಆಂಡ್ ಲೈಟ್ (ತುಳು). ಹೀಗೆ ಈಗಲೂ ಜನರು ಚಲನಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡಲು ಬಯಸುತ್ತಾರೆ.

ಹಾಗಾದರೆ ನಾಲ್ಕೈದು ದಶಕಗಳ ಹಿಂದಿನ ಕಥೆ ಏನಾಗಿರಬಹುದು? ಆಗ ಚಲನ ಚಿತ್ರ ಎಂಬುವುದು ಒಂದು ರೀತಿಯ ಮಾಯಾ ದರ್ಶನ. ಆಗೆಲ್ಲಾ ನಾಟಕ, ಯಕ್ಷಗಾನ ಮೊದಲಾದುವುಗಳನ್ನು ನೋಡುತ್ತಿದ್ದ ಜನರು ಚಿತ್ರಮಂದಿರದೊಳಗೆ ಹೋಗಿ ಅಲ್ಲಿರುವ ಪರದೆಯ ಮೇಲೆ ಸಿನೆಮಾ ನೋಡುವುದು ಒಂದು ರೀತಿಯಲ್ಲಿ ‘ಮ್ಯಾಜಿಕ್' ಹಾಗೆ ಕಾಣಿಸಿರಬಹುದು. ಹಲವರು ಆ ಬಿಳಿ ಪರದೆಯ ಹಿಂದೆಯೇ ತಾವು ನೋಡುತ್ತಿರುವ ಈ ಚಿತ್ರದ ಘಟನೆಗಳು ನಡೆಯುತ್ತಿವೆ ಎಂದು ಯೋಚಿಸಿರಲೂ ಬಹುದು. ಏನಾದರಾಗಿರಲಿ, ಆಗಿನ ಸಮಯದಲ್ಲಿ ಜನರಿಗಿದ್ದ ಅತೀದೊಡ್ಡ ಮನೋರಂಜನೆ ಎಂದರೆ ಚಲನಚಿತ್ರಗಳೇ. ಆಗ ಬಿಡುಗಡೆಯಾಗುತ್ತಿದ್ದ ಚಲನ ಚಿತ್ರಗಳ ಸಂಖ್ಯೆಯೂ ಕಡಿಮೆ. ವರ್ಷಕ್ಕೆ ಮೂರೋ ನಾಲ್ಕೋ ಚಿತ್ರಗಳು. ಅವೂ ಕಪ್ಪು ಬಿಳುಪು. ನಾನು ಏಕೆ ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವೆ ಅಂತೀರಾ? ನಾನು ಈಗ ಹೇಳ ಹೊರಟಿರುವುದು ೫೦ರ ದಶಕದಲ್ಲಿ ಜನರನ್ನು ಮೋಡಿ ಮಾಡಿದ ‘ಜಗನ್ಮೋಹಿನಿ' ಎಂಬ ಚಿತ್ರದ ಬಗ್ಗೆ.

ಜಗನ್ಮೋಹಿನಿ ಚಲನ ಚಿತ್ರವು ಬಿಡುಗಡೆಯಾಗಿದ್ದು ೧೯೫೧ರಲ್ಲಿ. ಆದರೆ ಆ ಸಮಯದಲ್ಲೇ ಚಿತ್ರವನ್ನು ದಿನಾ ನೋಡಿ ಒಬ್ಬ ಹುಚ್ಚನಾದರೆ, ಹಲವಾರು ಮಂದಿ ತಮ್ಮ ಹಣ, ಆಸ್ತಿ, ಕಡೆಗೆ ಕುರಿ-ಕೋಳಿಗಳನ್ನೂ ಕಳೆದುಕೊಂಡರಂತೆ. ಇದನ್ನು ಗಮನಿಸಿದ ಓರ್ವ ಮಹಾಶಯರು ಈ ಚಿತ್ರದ ಪ್ರದರ್ಶನ ನಿಲ್ಲಿಸಬೇಕೆಂದು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿ ಪ್ರದರ್ಶನಕ್ಕೆ ತಡೆಯಾಜ್ಞೆ ತಂದಿದ್ದನಂತೆ. ನಂತರ ತಡೆಯಾಜ್ಞೆ ತೆರವಾಗಿ ಚಿತ್ರವು ಪ್ರದರ್ಶನಗೊಳ್ಳಲು ಮತ್ತೆ ಪ್ರಾರಂಭವಾಯಿತಂತೆ. ಆದರೆ ಅಂದಿನ ಕಾಲದಲ್ಲಿ ಇಂತಹ ಘಟನೆಗಳು ನಡೆದಿದೆ ಎಂದರೆ ಈಗ ನಂಬಲು ಆಗುತ್ತಿಲ್ಲ ಅಲ್ಲವೇ? ಮೊದಲಿಗೆ ಚಿತ್ರದ ಬಗ್ಗೆ ಸ್ವಲ್ಪ ಗಮನಿಸುವ.

ಈ ಚಿತ್ರವನ್ನು ನಿರ್ಮಿಸಿದ್ದು ಅಂದಿನ ಖ್ಯಾತ ಚಿತ್ರ ನಿರ್ದೇಶಕರಾದ ಡಿ. ಶಂಕರ್ ಸಿಂಗ್ ಹಾಗೂ ಬಿ.ವಿಠಲಾಚಾರ್ಯ ಇವರುಗಳು. ಚಿತ್ರವನ್ನು ಡಿ ಶಂಕರ್ ಸಿಂಗ್ ಅವರೇ ನಿರ್ದೇಸಿದ್ದರು. ಚಿತ್ರದಲ್ಲಿ ದಂತದ ಗೊಂಬೆ, ಕಪ್ಪುಬಿಳುಪು ಚಿತ್ರದ ರಾಣಿ ಎಂದೇ ಖ್ಯಾತಿಯನ್ನು ಪಡೆದಿದ್ದ ಹರಿಣಿ ಇವರು ನಾಯಕಿಯಾಗಿದ್ದರು. ಇವರ ಮನಮೋಹಕ ಅಭಿನಯವು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತ್ತು. ಹರಿಣಿ ಅವರಿಗೆ ಆಗ ಕೇವಲ ೧೫ ವರ್ಷ ವಯಸ್ಸು. ತಮ್ಮದೇ ನಿರ್ದೇಶನದ ‘ನಾಗಕನ್ನಿಕೆ' ಎಂಬ ಚಿತ್ರದ ಯಶಸ್ಸಿನಿಂದ ಪ್ರೇರಣೆಗೊಂಡು ಶಂಕರ್ ಸಿಂಗ್ ಅವರು ಜಗನ್ಮೋಹಿನಿ ಚಿತ್ರದ ನಿರ್ಮಾಣಕ್ಕೆ ಕೈಹಾಕಿದರಂತೆ. ಮಹಾತ್ಮಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಚಿತ್ರದ ತಾರಾಗಣದಲ್ಲಿ ಅಂದಿನ ಖ್ಯಾತ ಹಾಸ್ಯನಟರಾಗಿದ್ದ ಮಹಾಬಲ ರಾವ್, ರಾಧಾಬಾಯಿ, ಶ್ರೀನಿವಾಸ ರಾವ್, ಲಕ್ಷ್ಮಮ್ಮ, ಮರಿರಾವ್, ಎಂ.ಎಸ್.ಸುಬ್ಬಣ್ಣ, ಸರೋಜಾ, ಪಟ್ಟಾಭಿ, ವೀರಭದ್ರಪ್ಪ, ನರಸಯ್ಯ ಮೊದಲಾದವರಿದ್ದರು. ಛಾಯಾಗ್ರಹಣ ಜಿ.ದೊರೈ (ದೊರೈ-ಭಗವಾನ್ ಖ್ಯಾತಿ). ಕೆ.ಎಂ ಹುಣಸೂರ್ ಇವರು ಈ ಚಿತ್ರಕ್ಕೆ ಗೀತೆ ಮತ್ತು ಸಂಭಾಷಣೆಯನ್ನು ಬರೆದಿದ್ದರು. ಮೈಸೂರಿನ ಅರಮನೆಯಲ್ಲಿ ನಡೆಸುತ್ತಿದ್ದ ವಾದ್ಯಗೋಷ್ಟಿಯ ಮೂಲಕ ಜನಜನಿತರಾಗಿದ್ದ ಪಿ. ಶಾಮಣ್ಣ ಇವರು ಈ ಚಿತ್ರದ ಸಂಗೀತ ನಿರ್ದೇಶಕರಾಗಿದ್ದರು. ಆಗೆಲ್ಲಾ ಚಲನ ಚಿತ್ರಗಳಲ್ಲಿ ಹಾಡುಗಳದ್ದೇ ದರ್ಬಾರು. ಈ ಚಿತ್ರದಲ್ಲಿ ಬರೋಬರಿ ೧೨ ಹಾಡುಗಳಿದ್ದವು. ಚಿತ್ರ ಹಿಟ್ ಆಗಬೇಕೆಂದು ಸಂಗೀತ ನಿರ್ದೇಶಕರಾದ ಶಾಮಣ್ಣ ಅವರು ಅಂದಿನ ಖ್ಯಾತ ಹಿಂದಿ ಚಿತ್ರವಾದ ಕಮಲ್ ಅಮ್ರೋಹಿ ಇವರ ‘ಮಹಲ್' ನ ಹಾಡುಗಳ ಟ್ಯೂನ್ ಬಳಸಿಕೊಂಡಿದ್ದರು. ಅದರಲ್ಲಿ ‘ಆಯೇಗಾ ಆಯೇಗಾ’ ಇರುವ ಗೀತೆಯನ್ನು ಕನ್ನಡದಲ್ಲಿ ‘ಎಂದೋ ಎಂದೋ’ ಎಂದು ನಕಲು ಮಾಡಿದ್ದರು. ಆದರೆ ಶಾಮಣ್ಣನವರ ಅದೃಷ್ಟ ಚೆನ್ನಾಗಿದ್ದುದರಿಂದ ಮಹಲ್ ಚಿತ್ರ ತಡವಾಗಿ ಬಿಡುಗಡೆಯಾಯಿತು. ಆ ಕಾರಣದಿಂದ ಈ ಕಳ್ಳ ಕೆಲಸ ಯಾರ ಗಮನಕ್ಕೂ ಬಾರದೇ ಹೋಯಿತು. ಎರಡೂ ಚಿತ್ರಗಳನ್ನು ನೋಡಿದವರು ಹಿಂದಿ ಚಿತ್ರರಂಗದವರೇ ಕನ್ನಡದ ಚಿತ್ರದ ಹಾಡಿನ ಧಾಟಿಯನ್ನು ಕದ್ದರು ಎಂದು ಭಾವಿಸಿಕೊಂಡರು. ಈ ವಿಷಯವನ್ನು ಹಲವಾರು ವರ್ಷಗಳ ನಂತರ ನಿರ್ದೇಶಕರಾದ ಶಂಕರ್ ಸಿಂಗ್ ಅವರ ಮಗಳಾದ ಎಸ್. ವಿಜಯಲಕ್ಷ್ಮಿ ಅವರೇ ಒಂದು ಸಂದರ್ಶನದಲ್ಲಿ ತಿಳಿಸಿದ್ದರು. 

ಐವತ್ತರ ದಶಕದಲ್ಲಿ ಚಿತ್ರಗಳೆಲ್ಲಾ ಸ್ಟುಡಿಯೋದ ಒಳಗಡೆಯೇ ನಡೆಯುತ್ತಿದ್ದವು. ಅಪರೂಪಕ್ಕೆ ಎಂಬಂತೆ ಜಗನ್ಮೋಹಿನಿ ಚಿತ್ರದ ಕೆಲವು ದೃಶ್ಯಗಳನ್ನು ಮೇಕೆದಾಟು ಬಳಿ ಚಿತ್ರೀಕರಿಸಲಾಯಿತು. ನಿರ್ಮಾಪಕರ ನಿರೀಕ್ಷೆ ಹುಸಿ ಮಾಡದ ಜಗನ್ಮೋಹಿಸಿ ಸೂಪರ್ ಹಿಟ್ ಆಯಿತು. ನಿರ್ದೇಶಕರಾದ ಡಿ. ಶಂಕರ್ ಸಿಂಗ್ ಅವರು ಈ ಚಿತ್ರದ ಮೂಲಕ ಹೆಸರುವಾಸಿಯಾದರು. 

ಕರ್ನಾಟಕದ ಹಲವೆಡೆ ಚಿತ್ರವು ರಜತ ಮಹೋತ್ಸವ (೨೫ ವಾರ) ಆಚರಿಸಿಕೊಂಡಿತು. ಸಾಮಾನ್ಯವಾಗಿ ಯಾವುದೇ ಚಿತ್ರವು ಗೆದ್ದರೆ ಅದರ ಶ್ರೇಯಸ್ಸು ನೀಡುವುದು ನಾಯಕ ಅಥವಾ ನಾಯಕಿಗೆ. ಅಪರೂಪದಲ್ಲಿ ಖಳನಾಯಕನಿಗೂ ಈ ಗೌರವ ಸಿಕ್ಕಿದ್ದು ಇದೆ. ಆದರೆ ಜಗನ್ಮೋಹಿನಿ ಚಿತ್ರದ ಅದ್ಭುತ ಯಶಸ್ಸಿಗೆ ಚಿತ್ರತಂಡ ಗೌರವಿಸಿದ್ದು ಹಾಸ್ಯ ನಟನೆ ಮಾಡಿದ ಮಹಾಬಲರಾಯರನ್ನು. ಇವರನ್ನು ಆನೆ ಮೇಲೆ ಕೂಡಿಸಿ ಊರೆಲ್ಲಾ ಮೆರವಣಿಗೆ ಮಾಡಲಾಗಿ, ವಿಶೇಷ ಕಾರ್ಯಕ್ರಮ ಏರ್ಪಡಿಸಿ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು. ಜಗನ್ಮೋಹಿಸಿ ಚಿತ್ರವು ಕನ್ನಡ ಚಿತ್ರರಂಗ ಇತಿಹಾಸದಲ್ಲಿ ನೂರು ದಿನ ಓಡಿದ ಪ್ರಥಮ ಚಿತ್ರ ಎಂದು ದಾಖಲೆ ಬರೆಯಿತು. 

ಚಿತ್ರದ ಕಥೆ ಹೀಗಾದರೆ ಚಿತ್ರ ನೋಡಲು ಬಂದವರ ಕಥೆ ಹೇಳೋದು ಬೇಡವೇ? ದಾವಣಗೆರೆಯಲ್ಲಿ ಒಬ್ಬನಂತೂ ಜಗನ್ಮೋಹಿನಿಯಾಗಿ ನಟಿಸಿದ ಹರಿಣಿಯ ಸೌಂದರ್ಯಕ್ಕೆ ಮಾರುಹೋಗಿ, ಪ್ರತೀ ದಿನ ಚಿತ್ರ ಮಂದಿರಕ್ಕೆ ಹೋಗಿ ಸಿನೆಮಾ ನೋಡಿ ಮರುಳಾಗಿ, ಕಡೆಗೆ ಹುಚ್ಚನಾಗಿಯೇ ಹೋದನಂತೆ. ಕೆಲವು ಪ್ರೇಕ್ಷಕರಂತೂ ಚಿತ್ರ ನೋಡಲು ಕಾಸಿಲ್ಲದೇ ತಮ್ಮ ದನ, ಕುರಿ, ಎಮ್ಮೆ, ಕೋಳಿಗಳನ್ನು ಮಾರಿ ಚಿತ್ರವನ್ನು ನೋಡಿದರಂತೆ. ಹೀಗೆ ಜನರು ಸಾಲ ಮಾಡಿ ತುಪ್ಪ ತಿನ್ನುವ ಕೆಲಸ ಮಾಡುತ್ತಿದ್ದಾರೆ ಎಂದು ಯೋಚಿದ ವ್ಯಕ್ತಿಯೋರ್ವರು ಈ ಚಿತ್ರವು ಜನಜೀವನವನ್ನು ಹಾಳು ಮಾಡುತ್ತಿದೆ, ಸಂಸಾರವನ್ನು ಕೆಡಿಸುತ್ತಿದೆ ಎಂದು ಕೇಸು ಹಾಕಿ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದರು. ಅಚ್ಚರಿ ಎಂಬಂತೆ ನ್ಯಾಯಾಲಯವು ಆತನ ಮನವಿಯನ್ನು ಪ್ರರಸ್ಕರಿಸಿ ತಡೆಯಾಜ್ಞೆ ನೀಡಿತ್ತು. ನಂತರ ನಿರ್ಮಾಪಕರು ತಮ್ಮ ವಕೀಲರ ಮುಖಾಂತರ ಆ ವ್ಯಕ್ತಿಗೆ ಹಾಗೂ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ತಡೆಯಾಜ್ಞೆಯನ್ನು ತೆರವುಗೊಳಿಸಿದರಂತೆ.  

ಹೀಗಿತ್ತು ನೋಡಿ ಅಂದಿನ ‘ಜಗನ್ಮೋಹಿಸಿ' ಚಿತ್ರದ ಕಥೆ. ಈ ಚಿತ್ರ ಬಿಡುಗಡೆ ಆಗಿ ೭ ದಶಕಗಳೇ ಕಳೆದಿವೆ. ಅಂದು ಜಗನ್ಮೋಹಿಸಿ ಚಿತ್ರವನ್ನು ನಿರ್ದೇಶಿಸಿದ ಡಿ. ಶಂಕರ್ ಸಿಂಗ್ ಅವರ ಮಗ ಈಗ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾಗಿದ್ದಾರೆ. ಅವರ ಹೆಸರು ಎಸ್ ವಿ ರಾಜೇಂದ್ರ ಸಿಂಗ್ ಬಾಬು. ಈ ಚಿತ್ರದಲ್ಲಿ ರಾಜೇಂದ್ರ ಸಿಂಗ್ ಅವರ ತಾಯಿ ಪ್ರತಿಮಾದೇವಿಯವರೂ ನಟಿಸಿದ್ದರು. ಒಟ್ಟಿನಲ್ಲಿ ಜಗನ್ಮೋಹಿನಿ ಚಿತ್ರದ ಯಶಸ್ಸು ಕನ್ನಡ ಚಲನ ಚಿತ್ರರಂಗದಲ್ಲಿ ಹಲವಾರು ದಾಖಲೆಗಳಿಗೆ ಕಾರಣವಾಯಿತು.

(ಮಾಹಿತಿ ಕೃಪೆ: ‘ಬೆಳ್ಳಿ ತೆರೆಯ ಬಂಗಾರದ ಗೆರೆ’ ಪುಸ್ತಕ)

ನಟಿ ಹರಿಣಿಯ ಚಿತ್ರ ಕೃಪೆ: ಅಂತರ್ಜಾಲ ತಾಣ