‘ಜೇಮ್ಸ್ ಬಾಂಡ್' ಹೆಸರು ಕದ್ದ ಕಥೆ !

‘ಜೇಮ್ಸ್ ಬಾಂಡ್' ಹೆಸರು ಕದ್ದ ಕಥೆ !

ಹಾಲಿವುಡ್ ಚಲನಚಿತ್ರಗಳಲ್ಲಿ ‘ಜೇಮ್ಸ್ ಬಾಂಡ್ 007’ ಸಾಹಸಗಳು ಬಹಳ ಪ್ರಖ್ಯಾತ. ಈ ಸರಣಿಯಲ್ಲಿ ಹಲವಾರು ಚಿತ್ರಗಳು ಬಂದು ಹೋಗಿವೆ. ಹಲವಾರು ಖ್ಯಾತ ಹಾಲಿವುಡ್ ನಟರು ಜೇಮ್ಸ್ ಬಾಂಡ್ ಎಂಬ ಸೀಕ್ರೆಟ್ ಏಜೆಂಟ್ ನ ಪಾತ್ರ ಮಾಡಿದ್ದಾರೆ. ಈ ಹೆಸರಿನ ಹುಟ್ಟಿನ ಸ್ವಾರಸ್ಯಕರ ಸಂಗತಿ ನಿಮಗೆ ಗೊತ್ತೇ? ಜೇಮ್ಸ್ ಬಾಂಡ್ ಸರಣಿಯ ಪುಸ್ತಕಗಳ ಲೇಖಕ ಈ ಪಾತ್ರದ ಹೆಸರನ್ನು ನಕಲು ಮಾಡಿದ ವಿಷಯ ನಿಮಗೆ ಗೊತ್ತಿರಲಾರದು. ಈ ಕಾರಣದಿಂದ ಜೇಮ್ಸ್ ಬಾಂಡ್ ಎಂಬ ನಿಜ ನಾಮಾಂಕಿತ ವ್ಯಕ್ತಿ ಅನುಭವಿಸಿದ ಫಜೀತಿಗಳೇನು ತಿಳಿಯಲು ಈ ಲೇಖನ ಓದಿ.

೧೯೫೧ನೇ ಇಸವಿಯಲ್ಲಿ ಅಮೇರಿಕಾದಲ್ಲಿ ಒಂದು ದೊಡ್ಡ ಕಳ್ಳತನ ನಡೆಯಿತು. ಇದು ಕೇವಲ ಕಳ್ಳತನವಲ್ಲ, ಅತೀ ದೊಡ್ಡ ದರೋಡೆ. ಕಳ್ಳ ಕದ್ದ ವಸ್ತು ಯಾವುದು? ಎಂದರೆ ನೀವು ಹೌಹಾರಿಬಿಡುತ್ತೀರಿ. ಅವನು ಕದ್ದದ್ದು ‘ಜೇಮ್ಸ್ ಬಾಂಡ್’ ಎಂಬ ಅಮೂಲ್ಯ ಹೆಸರು. ಹೌದು, ಈ ಕಳ್ಳ ಕದ್ದದ್ದು ಜೇಮ್ಸ್ ಬಾಂಡ್ ಎಂಬ ಹೆಸರು. ಆ ಕಳ್ಳ ಯಾರೆಂದರೆ ಖ್ಯಾತ ಸಾಹಿತಿ ಇಯಾನ್ ಫ್ಲೆಮಿಂಗ್. ಇವರು ಜೇಮ್ಸ್ ಬಾಂಡ್ ಸರಣಿಯ ಮೊದಲ ಸರಣಿಯ ಕತೆಗಳನ್ನು ಬರೆದ ಲೇಖಕ. ಇವರು ಜೇಮ್ಸ್ ಬಾಂಡ್ ಸರಣಿಯ ಹಲವಾರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. 

ಇವನು ಕದ್ದ ಜೇಮ್ಸ್ ಬಾಂಡ್ ಹೆಸರು ಯಾರದ್ದು ಗೊತ್ತೇ? ಅದು ಅಮೇರಿಕಾದ ಖ್ಯಾತ ಪಕ್ಷಿ ವಿಜ್ಞಾನಿ ಜೇಮ್ಸ್ ಬಾಂಡ್ ಅವರದ್ದು. ಈ ಕಾರಣದಿಂದಾಗಿ ಹಲವಾರು ಸಮಯದ ತನಕ ನಿಜವಾದ ಜೇಮ್ಸ್ ಬಾಂಡ್ ಮುಜುಗರವನ್ನು ಅನುಭವಿಸಬೇಕಾಗಿ ಬಂತು. ಇಯಾನ್ ಫ್ಲೆಮಿಂಗ್ ಒಬ್ಬ ವಿಚಿತ್ರ ಬರಹಗಾರ. ಆತ ಕಟ್ಟಾ ಬ್ರಹ್ಮಚಾರಿ. ರೋಚಕ, ಪತ್ತೇದಾರಿ ಸಾಹಿತ್ಯವನ್ನು ರಚನೆಯಲ್ಲಿ ಇವರದ್ದು ಎತ್ತಿದ ಕೈ.

ಒಂದು ದಿನ ಪಕ್ಷಿ ವಿಜ್ಞಾನಿ ಜೇಮ್ಸ್ ಬಾಂಡ್ ಅವರ ಪುಸ್ತಕವಾದ ‘ಬರ್ಡ್ಸ್ ಆಫ್ ದಿ ವೆಸ್ಟ್ ಇಂಡೀಸ್’ ಪುಸ್ತಕವನ್ನು ಓದುತ್ತಿದ್ದಾಗ ಅವರಿಗೆ ಆಕಸ್ಮಿಕವಾಗಿ ಆ ಪುಸ್ತಕದ ಲೇಖಕರಾದ ‘ಜೇಮ್ಸ್ ಬಾಂಡ್’ ಅವರ ಹೆಸರು ಬಹುವಾಗಿ ಆಕರ್ಷಿಸಿತು. ಆ ಹೆಸರಿನಲ್ಲಿ ಏನೋ ಪಂಚ್ ಇದೆ ಎಂದು ಅನಿಸಿತು. ತಾನು ಬರೆಯಬೇಕಾದ ಕಾದಂಬರಿಯ ಸೀಕ್ರೆಟ್ ಏಜೆಂಟ್ ಗೆ ಈ ಹೆಸರಿಗಿಂತ ಸೊಗಸಾದ ಹೆಸರು ಬೇರೆ ಸಿಗಲಾರದು ಎಂದು ಅಂದುಕೊಂಡು, ಜೇಮ್ಸ್ ಬಾಂಡ್ ಅವರನ್ನು ಸಂಪರ್ಕಿಸುವ ಗೋಜಿಗೇ ಹೋಗದೇ ಅವರ ಹೆಸರನ್ನು ತನ್ನ ಕಾದಂಬರಿಯಲ್ಲಿ ಬಳಸಿಕೊಂಡ. 

ಹಲವಾರು ದಿನಗಳ ತನಕ ಈ ವಿಚಾರ ಮೂಲ ಜೇಮ್ಸ್ ಬಾಂಡ್ ಗೆ ತಿಳಿಯಲೇ ಇಲ್ಲ. ಒಮ್ಮೆ ಯಾವುದೋ ವಾರ್ತಾ ಪತ್ರಿಕೆಯ ಪುಸ್ತಕ ಪರಿಚಯ ಕಾಲಂ ನಲ್ಲಿ ತನ್ನ ಹೆಸರು ದುರುಪಯೋಗವಾಗುತ್ತಿರುವ ವಿಚಾರ ತಿಳಿಯಿತು. ಮನಸ್ಸಿಗೆ ನೋವಾದರೂ ಯಾರೋ ಕುಚೇಷ್ಟೆ ಮಾಡುತ್ತಿದ್ದಾರೆ ಅನ್ನಿಸಿ ಮರೆತು ಬಿಟ್ಟರು. ಸ್ವಭಾವತಃ ಜೇಮ್ಸ್ ಬಾಂಡ್ ಎಂಬ ಪಕ್ಷಿ ವಿಜ್ಞಾನಿ ಸಾಧು, ಸಂಭಾವಿತ ವ್ಯಕ್ತಿ. ಅವರಿಗೆ ಸುಮ್ಮನೇ ಕಾಲು ಕೆರೆದು ಜಗಳ ಮಾಡುವ ಆಸೆ ಇರಲಿಲ್ಲ. ಆದರೆ ಒಂದು ದಿನ ವಯಸ್ಕರ ಪತ್ರಿಕೆಯಾದ ‘ಪ್ಲೇ ಬಾಯ್' ನಲ್ಲಿ ಜೇಮ್ಸ್ ಬಾಂಡ್ ಹೆಸರಿನಲ್ಲಿ ಒಂದು ಸಂದರ್ಶನ ಪ್ರಕಟವಾದ ವಿಷಯ ತಿಳಿಯಿತು. ಸದಾ ಪಕ್ಷಿಲೋಕದಲ್ಲಿ ವಿಹರಿಸುತ್ತಿದ್ದ ವಿಜ್ಞಾನಿಯೋರ್ವ ‘ಪ್ಲೇ ಬಾಯ್'ನಂತಹ ಪತ್ರಿಕೆಯಲ್ಲಿ ಸಂದರ್ಶನ ನೀಡಿದ ಎಂದಾಗ ಹಲವಾರು ಮಂದಿ ಅಚ್ಚರಿಗೊಳಗಾದರು. ಅವರನ್ನು ಸಂಪರ್ಕಿಸಿ, ಈ ವಿಷಯ ಕೇಳಲಾರಂಭಿಸಿದಾಗ ಅವರಿಗೆ ಬಹಳ ಮುಜುಗರವಾಗಲಾರಂಭಿಸಿತು. ಇನ್ನು ತಾವು ಈ ಬಗ್ಗೆ ಏನಾದರೂ ನಿರ್ಧಾರ ತೆಗೆದುಕೊಳ್ಳಲೇ ಬೇಕು ಎಂದು ನಿರ್ಧಾರ ಮಾಡಿದರು.

ಜೇಮ್ಸ್ ಬಾಂಡ್ ತಮ್ಮ ಹೆಸರನ್ನು ಕದ್ದ ಕಳ್ಳನ ಬಗ್ಗೆ ಹುಡುಕಾಡಲು ಶುರು ಮಾಡಿದರು. ತಮ್ಮ ಹಕ್ಕಿಗಳ ಅಧ್ಯಯನ, ಪ್ರವಾಸ, ಸಂಶೋಧನೆಗಳನ್ನು ಬದಿಗಿಟ್ಟು ಈ ಹೆಸರು ಕಳ್ಳನ ಬಗ್ಗೆ ಶೋಧನೆ ಮಾಡಲು ಶುರು ಮಾಡಿದರು. ಹೀಗೆ ಹುಡುಕಾಡುತ್ತಿದ್ದಾಗ ಅವರಿಗೆ ತಿಳಿದು ಬಂದ ವಿಷಯವೆಂದರೆ ತಮ್ಮ ಹೆಸರಿನ ನಕಲು ಮಾಡಿದ ಲೇಖಕ ಈಗಾಗಲೇ ಜೇಮ್ಸ್ ಬಾಂಡ್ ಸರಣಿಯ ಹಲವಾರು ಪುಸ್ತಕಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾನೆ ಮತ್ತು ಆ ಪುಸ್ತಕಗಳು ‘ಹಾಟ್ ಕೇಕ್' ನಂತೆ ಮಾರಾಟವಾಗುತ್ತಿದೆ. ಕಳ್ಳ ತಮ್ಮ ಹೆಸರನ್ನು ನಕಲು ಮಾಡಿದರೂ ಅವನ ಮಾರಾಟ ತಂತ್ರದ ಚಾಣಾಕ್ಷತನಕ್ಕೆ ಜೇಮ್ಸ್ ಬಾಂಡ್ ಮರುಳಾಗಿಬಿಟ್ಟರು. ಮೊದಲೇ ಅವರದ್ದು ಸೌಮ್ಯ ಸ್ವಭಾವ. ಈ ವಿಷಯವನ್ನು ಅಲ್ಲಿಗೇ ಮರೆತು ಬಿಡಲು ತೀರ್ಮಾನಿಸಿದರು. ಆದರೆ ಜೇಮ್ಸ್ ಬಾಂಡ್ ಅವರ ಪತ್ನಿಗೆ ಈ ವಿಚಾರ ತುಂಬಾನೇ ಬೇಸರ ತರಿಸಿತ್ತು. ಆ ಕಾರಣದಿಂದ ತನ್ನ ಗಂಡನ ಹೆಸರನ್ನು ಕದ್ದ ಕಳ್ಳನ ಮೇಲೆ ಮೊಕದ್ದಮೆ ಹೂಡುವುದಾಗಿ ಪತ್ರಿಕಾ ಪ್ರಕಟನೆ ನೀಡಿದಳು.

ಈ ಪ್ತಕಟನೆಯನ್ನು ಗಮನಿಸಿದ ಫ್ಲೆಮಿಂಗ್ ಗೆ ತನ್ನ ತಪ್ಪಿನ ಅರಿವಾಗತೊಡಗಿತು. ತಾನು ಮಾಡಿದ ಕೃತ್ಯಕ್ಕೆ ತನಗೆ ಬಹಳ ನಾಚಿಕೆಯಾಗಿದೆಯೆಂದೂ, ಜೇಮ್ಸ್ ಬಾಂಡ್ ಹೆಸರನ್ನು ದುರುಪಯೋಗ ಪಡಿಸಿಕೊಂಡದ್ದಕ್ಕೆ ಪಶ್ಚಾತ್ತಾಪ ಪಡುತ್ತಿರುವುದಾಗಿಯೂ ಬರೆದು ತನ್ನ ಕ್ಷಮಾಪಣಾ ಪತ್ರವನ್ನು ಕಳುಹಿಸಿಕೊಟ್ಟ. ಕೊನೆಯಲ್ಲಿ ಅವನು ಬರೆದ ಒಂದು ವಿಚಾರ ತುಂಬಾ ಹಾಸ್ಯಾಸ್ಪದವೂ, ಅಚ್ಚರಿದಾಯಕವೂ ಆಗಿತ್ತು. ಅವನು ಪತ್ರದಲ್ಲಿ ‘ನೀವು ಇಚ್ಚಿಸಿದಲ್ಲಿ ನೀವು ಶೋಧಿಸಿದ ಹೊಸ ಪಕ್ಷಿ ಸಂಕುಲಕ್ಕೆ ನನ್ನ ಹೆಸರಿಟ್ಟು ನಿಮ್ಮ ಕೋಪವನ್ನು ತೀರಿಸಿಕೊಳ್ಳಬಹುದು' ಎಂದು ಬರೆದಿದ್ದ. 

ಫ್ಲೆಮಿಂಗ್ ನ ಕ್ಷಮಾಪಣೆ ಜೇಮ್ನ್ ಬಾಂಡ್ ಗೆ ತೃಪ್ತಿ ತಂದಿತು. ಈ ವಿಚಾರವು ಭವಿಷ್ಯದಲ್ಲಿ ತಮಗೆ ಅನನುಕೂಲವಾಗಬಹುದೆಂದು ಅರಿವಿದ್ದರೂ ತಮ್ಮ ಹೆಸರಿನ ಬಳಕೆಯನ್ನು ಮುಂದುವರೆಸಲು ಅನುಮತಿ ನೀಡಿದರು. ಆದರೆ ಮುಂದಿನ ದಿನಗಳಲ್ಲಿ ಜೇಮ್ಸ್ ಬಾಂಡ್ ಎಲ್ಲಿಗೆ ಹೋದರೂ ಅವರನ್ನು ಈ ನಕಲಿ ಜೇಮ್ಸ್ ಬಾಂಡ್ ಹೆಸರು ಸತಾಯಿಸತೊಡಗಿತು. ಅವರು ಪಕ್ಷಿ ವಿಜ್ಞಾನಿಯಾಗಿ ಗಳಿಸಿದ್ದ ಉತ್ತಮ ಹೆಸರನ್ನು ನಕಲಿ ಹೆಸರು ಹಾಳುಮಾಡತೊಡಗಿತು. ಎಲ್ಲಿಗೆ ಹೋದರೂ ಅವರಿಗೆ ಉತ್ತಮ ಸತ್ಕಾರ, ಆದರಾತಿಥ್ಯಗಳು ದೊರೆಯುತ್ತಿರಲಿಲ್ಲ. ಸಾರ್ವಜನಿಕರು ಗೇಲಿ ಮಾಡುವಂತಾಯಿತು. 

ಶ್ರೀಮತಿ ಜೇಮ್ಸ್ ಬಾಂಡ್ ಅವರಿಗೆ ಇನ್ನಷ್ಟು ಸಮಸ್ಯೆಯಾಗಿತ್ತು. ‘ಮಿಸೆಸ್ ಜೇಮ್ಸ್ ಬಾಂಡ್' ಎಂದಾಗ ಜನರು ಆ ಕಥಾ ನಾಯಕನ ಹೆಂಡತಿ ಎಂದೇ ಕಲ್ಪಿಸಲಾರಂಭಿಸಿದರು. ಹಲವರು ಇವರಿಗೆ ತಮ್ಮ ಹೆಸರನ್ನೇ ಬದಲಾಯಿಸುವಂತೆ ಸೂಚಿಸಿದರು. ಈ ವಿಷಯದಲ್ಲಿ ನಿರಂತರ ದೂರವಾಣಿ ಕರೆಗಳು ಬರತೊಡಗಿದವು. ತಾವು ಆ ಜೇಮ್ಸ್ ಬಾಂಡ್ ಅಲ್ಲ ಎಂದು ಹೇಳಿದರೂ ಜನರು ನಂಬುವ ಸ್ಥಿತಿಯಲ್ಲಿರಲಿಲ್ಲ. ಕಡೆಗೊಮ್ಮೆ ಜೇಮ್ಸ್ ಬಾಂಡ್ ತನ್ನ ಹೆಸರು ಕದ್ದ ಫ್ಲೆಮಿಂಗ್ ನನ್ನು ಭೇಟಿಯಾಗಲು ತೀರ್ಮಾನಿಸಿದರು. 

ಒಂದು ದಿನ ನೇರವಾಗಿ ಫ್ಲೆಮಿಂಗ್ ಮನೆಗೆ ತೆರಳಿದಾಗ ಅವನು ಇವರನ್ನು ನೋಡಿ ದಂಗಾಗಿ ಹೋದ. ‘ನೀವು ನನ್ನ ಮೇಲೆ ಮೊಕದ್ದಮೆ ಹೂಡುವ ವಿಷಯ ಹೇಳಲು ಬಂದಿಲ್ಲ ತಾನೇ? ‘ ಎಂದು ಗಾಭರಿಯಿಂದ ನುಡಿದ. ಆದರೆ ಜೇಮ್ಸ್ ಬಾಂಡ್ ಅಂತಹ ಯಾವುದೇ ಉದ್ದೇಶದಿಂದ ನಾನು ಬಂದಿಲ್ಲ. ಎಂದು ಅವನಿಗೆ ಮನವರಿಕೆ ಮಾಡಿಕೊಟ್ಟ. ಅವರು ತುಂಬಾ ಸಮಯ ಮಾತುಕತೆ ನಡೆಸಿದರು. ಆ ಮಾತುಕತೆ ಸೌಹಾರ್ದಯುತವಾಗಿತ್ತು. ಫ್ಲೆಮಿಂಗ್ ಕೆಲವೊಂದು ಹಕ್ಕಿಗಳ ಬಗ್ಗೆ ತಿಳಿದುಕೊಳ್ಳಲು ಬಯಸಿ ಜೇಮ್ಸ್ ಬಾಂಡ್ ಅವರಿಗೆ ಪ್ರಶ್ನೆಯನ್ನು ಕೇಳಿದ. ಅವರು ಅದಕ್ಕೆ ಸೂಕ್ತ ಉತ್ತರವನ್ನು ನೀಡಿದರು. ತಾನು ಮಾಡಿದ ಕೃತ್ಯದಿಂದ ನಿಜವಾಗಿಯೂ ನೊಂದಿದ್ದ ಫ್ಲೆಮಿಂಗ್, ಇವರ ಸನ್ನಡತೆಯಿಂದ ಇನ್ನಷ್ಟು ನಾಚಿಕೆ ಪಟ್ಟುಕೊಂಡ. ತನ್ನದೊಂದು ಪುಸ್ತಕವನ್ನು ಅವರಿಗೆ ಉಡುಗೊರೆಯಾಗಿ ನೀಡಿದ. ಅದರಲ್ಲಿ ಅವನು ಬರೆದಿದ್ದ ‘ನಿಜವಾದ ಜೇಮ್ಸ್ ಬಾಂಡ್ ನಿಗೆ ಅವನ ಗುರುತನ್ನು ಕದ್ದ ಕಳ್ಳನಿಂದ'.

ಮುಂದಿನ ದಿನಗಳಲ್ಲೂ ಫ್ಲೆಮಿಂಗ್ ನಿಂದಾಗಿ ಜೇಮ್ಸ್ ಬಾಂಡ್ ಗೆ ಮುಜುಗರ ಪಡುವುದು ತಪ್ಪಲಿಲ್ಲ. ಜೇಮ್ಸ್ ಬಾಂಡ್ ಪಕ್ಷಿ ವಿಜ್ಞಾನಿ ಎಂಬ ಗುರುತೇ ಅವರಿಂದ ದೂರ ಸರಿದಿತ್ತು, ಅವರೊಬ್ಬ ಸೀಕ್ರೆಟ್ ಏಜೆಂಟ್ ಆಗಿ ಬಿಂಬಿತರಾಗಿದ್ದರು. ಪತ್ರಿಕೆ, ರೇಡಿಯೋಗಳಲ್ಲಿ ಅವರ ಪರಿಚಯ ಮಾಡುವಾಗ ‘ಶೀಘ್ರವಾಗಿ, ಶಾಂತವಾಗಿ, ನೋವಾಗದಂತೆ ತನ್ನ ಬೇಟೆಯನ್ನು ಕೊಲ್ಲುವ ವ್ಯಕ್ತಿ' ಎಂದು ವಿವರಣೆ ನೀಡಲಾರಂಭಿಸಿದರು. ಇವುಗಳನ್ನು ಇನ್ನು ನಿಲ್ಲಿಸಲಾಗದು ಎಂದು ಆ ವಿಚಾರವನ್ನು ಅಲ್ಲಿಗೇ ಬಿಟ್ಟು ಬದುಕುವ ಅಭ್ಯಾಸ ಮಾಡಿಕೊಂಡರು ಜೇಮ್ಸ್ ಬಾಂಡ್. ಹೆಸರನ್ನು ಬಿಟ್ಟುಕೊಟ್ಟು ಕೊನೆಗೆ ತನ್ನ ಗುರುತನ್ನೂ ಬಿಟ್ಟುಕೊಟ್ಟ ಇವರು ಬಹಳ ಮಂದಿಗೆ ಖ್ಯಾತ ಪಕ್ಷಿ ವಿಜ್ಞಾನಿ ಎಂದು ತಿಳಿಯದೇ ಹೊಯಿತು. ಕೊನೆಗೆ ಅವರಿಗೆ ಉಳಿದದ್ದು, ಅವರು ಮಾಡದ ಸಾಹಸ ಕಥೆಗಳು ಹಾಗೂ ‘ಜೇಮ್ಸ್ ಬಾಂಡ್ 007’ ಎಂಬ ಹೆಸರು ಮಾತ್ರ.

 (ಆಧಾರ)

ಚಿತ್ರ: ಅಂತರ್ಜಾಲ ತಾಣ