‘ಝಿರೋ ಫಿಗರ್’ ಎಂಬ ಹುಚ್ಚು ಕುದುರೆಯ ಹಿಂದೆ…
ಈಗಿನ ಯುವ ಜನಾಂಗಕ್ಕೆ ಹೆಚ್ಚಾಗಿ ಹದಿಹರೆಯದ ಹುಡುಗಿಯರಿಗೆ ತಮ್ಮ ಫಿಗರ್ ಬಗ್ಗೆ ವಿಪರೀತ ಕಾಳಜಿ. ಅದಕ್ಕಾಗಿ ಸರಿಯಾದ ಸಮಯಕ್ಕೆ ಪೌಷ್ಟಿಕವಾದ ಆಹಾರವನ್ನೂ ಸೇವಿಸದೇ, ತಮಗೆ ಬೊಜ್ಜು ಬಾರದೇ ಇರಲಿ ಎಂದು ವಿಪರೀತ ಎನಿಸುವಷ್ಟು ಡಯಟ್ ಮತ್ತು ವ್ಯಾಯಾಮ ಮಾಡುತ್ತಾರೆ. ಇದರಿಂದ ನಿಮ್ಮ ದೇಹವು ಚೆನ್ನಾದ ಆಕಾರ ಪಡೆದು ಹೊರಗಿನಿಂದ ಸುಂದರವಾಗಿ ಕಂಡರೂ, ಒಳಗೆ ಕುಸಿಯುತ್ತಾ ಹೋಗುತ್ತದೆ. ಸಣ್ಣ ವಯಸ್ಸಿನಲ್ಲಿ ಇದು ಗೊತ್ತಾಗದೇ ಇದ್ದರೂ ಕ್ರಮೇಣ ವಯಸ್ಸಾದಂತೆ ಒಂದೊಂದೇ ರೋಗಗಳು ನಿಮ್ಮನ್ನು ಮುತ್ತುತ್ತಾ ಹೋಗುತ್ತವೆ. ಹೀಗಾಗಿ ‘ಝೀರೋ ಫಿಗರ್’ ಎಂಬ ಮಾಯಾ ಜಾಲಕ್ಕೆ ಬೀಳದೇ ಬಚಾವಾಗಿ ಎನ್ನುತ್ತಾ ಅದರ ತೊಂದರೆಗಳ ಕೆಲವು ವಿಷಯಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.
ನಮ್ಮ ಇಂದಿನ ಆಹಾರ ಪದ್ಧತಿಯಲ್ಲಿ ಶೋ ಆಫ್ ಕ್ರಮವೇ ಅಧಿಕ. ಅಂದರೆ ದೊಡ್ಡ ದೊಡ್ಡ ಹೋಟೇಲ್ ಗಳಿಗೆ ಹೋಗುವುದು, ಅಲ್ಲಿ ಮೆನುವಿನಲ್ಲಿರುವ ವಿಚಿತ್ರ ಹೆಸರಿನ ಆಹಾರಗಳನ್ನು (ಹಿನ್ನಲೆ ತಿಳಿದುಕೊಳ್ಳದೇ) ಆರ್ಡರ್ ಮಾಡುವುದು, ಬಂದ ಬಳಿಕ ಓಹೋ ಇದಾ, ನನಗೆ ಇದನ್ನು ತಿನ್ನೋದಕ್ಕೆ ಆಗೋದೇ ಇಲ್ಲ ಅಂತ ಹೇಳಿ ಬಿಟ್ಟು ಬಿಡುವುದು. ನೀವು ತಿನ್ನದೇ ಉಳಿಸಿದ ಆಹಾರ ಹೋಗುವುದು ಕಸದ ಬುಟ್ಟಿಗೇ. ಹೀಗೆ ಆಹಾರದ ನಷ್ಟಕ್ಕೆ ಜವಾಬ್ದಾರಿ ಯಾರು? ತಮಗೆ ಸಕ್ಕರೆ ಕಾಯಿಲೆ ಇದೆ, ಗ್ಯಾಸ್ಟ್ರಿಕ್ ಸಮಸ್ಯೆ ಇದೆ ಎಂದು ಗೊತ್ತಿದ್ದರೂ ಅದನ್ನು ಬದಿಗಿಟ್ಟು ಆಹಾರ ಸೇವನೆ ಮಾಡುವುದು. ಕೆಲವರಂತೂ ಝಿರೋ ಫಿಗರ್ ಕ್ರಮಕ್ಕಾಗಿ ಏನೂ ತಿನ್ನದೇ ಅಥವಾ ಕೇವಲ ಒಂದೆರಡು ಚಮಚದಷ್ಟು ಮಾತ್ರ ತಿಂದು, ಹೆಚ್ಚು ತಿಂದರೆ ಬೊಜ್ಜು ಬರುತ್ತೆ ಅಂತ ಪ್ಲೇಟ್ ನಲ್ಲೇ ಬಿಟ್ಟು ಬಿಡುವುದು ಮಾಡುತ್ತಾರೆ. ಈಗಿನ ಫಾಸ್ಟ್ ಫುಡ್ ಆಹಾರಗಳಲ್ಲಿ ಬಹಳಷ್ಟು ರಾಸಾಯನಿಕಗಳು ಇರುತ್ತವೆ. ಈ ಕಾರಣಕ್ಕಾದರೂ ನಿಮ್ಮ ತಿಂಡಿಯ ಡಬ್ಬ ಬದಲಾಗಬೇಕು.
ಮೊದಲು ಟಿಫಿನ್ ಗಳಲ್ಲಿ ಸಜ್ಜಿಗೆ, ಅವಲಕ್ಕಿ, ಇಡ್ಲಿ, ದೋಸೆ ಕಂಡು ಬಂದರೆ ಈಗ ಚಿಪ್ಸ್, ಫ್ರೆಂಚ್ ಫ್ರೈಸ್, ಬಿಸ್ಕಿಟ್, ಚಾಕ್ಲೆಟ್ ಸಿಗುತ್ತವೆ. ಇವೆಲ್ಲಾ ಬಾಯಿಗೆ ಮಾತ್ರ ರುಚಿಕೊಡುವ ವಸ್ತುಗಳು. ಮೊದಲು ಇವುಗಳನ್ನು ಬದಿಗಿಟ್ಟು ಮನೆಯಲ್ಲೇ ಮಾಡಿದ ಆಹಾರ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸಿ. ನಗರೀಕರಣದ ಪ್ರಭಾವದಿಂದ ನಾವು ನೆಲದ ಮೇಲೆ ಕುಳಿತು ಉಣ್ಣುವುದನ್ನು ಬಿಟ್ಟು ಬಿಟ್ಟಿದ್ದೇವೆ. ಡೈನಿಂಗ್ ಟೇಬಲ್ ಮೇಲಾದರೂ ಊಟ ಮಾಡುವಿರಾ ಎಂದು ಕೇಳಿದರೆ ಅದಕ್ಕೂ ಇಲ್ಲ ಎಂದು ಹೇಳುವವರೇ ಅಧಿಕ. ಟಿ ವಿ ಅಥವಾ ಮೊಬೈಲ್ ನೋಡುತ್ತಾ ತಿಂಡಿ ತಿನ್ನುವುದು, ಬೆಡ್ ರೂಂ ನ ಹಾಸಿಗೆಯಲ್ಲಿ, ಸೋಫಾದಲ್ಲಿ, ವರಾಂಡದಲ್ಲಿ ಎಲ್ಲೆಂದರಲ್ಲಿ ನಿಂತುಕೊಂಡೇ ಆಹಾರ ಸೇವಿಸುವುದು ಒಳ್ಳೆಯ ಲಕ್ಷಣವಲ್ಲ. ಅಚ್ಚುಕಟ್ಟಾಗಿ ಕುಳಿತುಕೊಂಡು ತಿಂದರೆ ಮಾತ್ರವೇ ನಮ್ಮ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ನಾವು ತಿನ್ನುವ ಆಹಾರ ಎಷ್ಟು ಮುಖ್ಯಾನೋ ಅಷ್ಟೇ ಮುಖ್ಯ ನಾವು ಆ ಆಹಾರವನ್ನು ತಿನ್ನುವ ವ್ಯವಸ್ಥೆ.
“ಹಸಿವು ಇಲ್ಲದಿರುವಾಗ ಊಟ ಮಾಡಬೇಡ, ಹಸಿವಾಗಿದ್ದರೆ ಊಟ ಮಾಡದೇ ಇರಬೇಡ” ಎನ್ನುವ ನುಡಿಯಂತೆ ನಾವು ಯಾವಾಗ ತಿನ್ನಬೇಕು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಈಗ ಎಲ್ಲರ ಬದುಕು ಬದಲಾಗಿದೆ. ಕೆಲವು ದಶಕಗಳ ಹಿಂದೆ ಇದ್ದಂತಹ ವ್ಯವಸ್ಥೆ ಕಣ್ಮರೆಯಾಗಿದೆ. ಮನೆಯಲ್ಲೇ ಅಡಿಗೆ ಮಾಡಿ ತಿನ್ನುವ ಜನಗಳು ಕಡಿಮೆಯಾಗುತ್ತಿದ್ದಾರೆ. ಸಮಯದ ಅಭಾವ, ದೂರದ ಕೆಲಸ ಹೀಗೆ ನಾನಾ ಕಾರಣಗಳಿಂದ ಹೋಟೇಲ್ ಊಟ ಅನಿವಾರ್ಯವಾಗಿದೆ. ಸಮಯಕ್ಕೆ ಸರಿಯಾಗಿ ಊಟ ಮಾಡದೇ, ಮಾಡಿದ ಊಟವನ್ನು ಕರಗಿಸಲು ಸರಿಯಾದ ವ್ಯಾಯಾಮ ಮಾಡದೇ ಬೊಜ್ಜಿನ ಸಮಸ್ಯೆ ವಿಪರೀತವಾಗುತ್ತಿದೆ. ಇದನ್ನು ಕರಗಿಸಲು ಅಧಿಕಾಂಶ ಮಹಿಳೆಯರು ಅಗತ್ಯಕ್ಕಿಂತ ಜಾಸ್ತಿ ಡಯಟ್ (ಪಥ್ಯ) ನ ಮೊರೆ ಹೋಗುತ್ತಿದ್ದಾರೆ. ಝಿರೋ ಫಿಗರ್ ಎನ್ನುವ ಟ್ರೆಂಡ್ ಮಹಿಳೆಯರನ್ನು ಕಾಯಿಲೆಯ ಗೂಡಾಗುವಂತೆ ಮಾಡುತ್ತಿದೆ. ದೇಹಕ್ಕೆ ಒಗ್ಗದ ವ್ಯಾಯಾಮಗಳು, ಆಹಾರಗಳು ಮಹಿಳೆಯರನ್ನು ಕಾಯಿಲೆಗೆ ದೂಡುತ್ತಿವೆ.
ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಭೌಗೋಳಿಕ ಪ್ರಭಾವ ಇದೆ. ಒಂದು ದೇಶದಲ್ಲಿ ತಿನ್ನುವ ಆಹಾರವು ಮತ್ತೊಂದು ದೇಶದ ಜನರಿಗೆ ಒಗ್ಗದೇ ಹೋಗಬಹುದು. ಭಾರತದಲ್ಲೇ ನೋಡುವುದಾದರೆ ದಕ್ಷಿಣ ಭಾರತದ ಜನರಿಗೆ ಇಷ್ಟವಾಗುವ ಅನ್ನ, ಇಡ್ಲಿ ಸಾಂಬಾರ್ ಉತ್ತರ ಭಾರತದವರಿಗೆ ಒಗ್ಗದಿರಬಹುದು. ಅವರಿಗೆ ಚಪಾತಿ ರೊಟ್ಟಿ ತುಂಬಾ ಹಿಡಿಸೀತು. ಇದೇ ಕಾರಣದಿಂದ ತಲೆ ತಲೆಮಾರುಗಳಿಂದ ನಮ್ಮ ಪೂರ್ವಜರ ದೇಹಕ್ಕೆ ಒಗ್ಗಿದ ಆಹಾರದ ಪ್ರಭಾವ ಅವರ ವಂಶವಾಹಿನಿ (ಜೀನ್ಸ್) ಮೂಲಕ ನಮ್ಮ ಮೇಲೂ ಪ್ರಭಾವ ಬೀರುತ್ತವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿಯ ನೀರು, ಮಣ್ಣಿನ ಗುಣ, ಈ ಮಣ್ಣಿನಲ್ಲಿ ಬೆಳೆದ ತರಕಾರಿ, ಹಣ್ಣು ಹಂಪಲುಗಳು, ಸಮುದ್ರದಲ್ಲಿ ಸಿಗುವ ಮೀನು ಇದೆಲ್ಲವೂ ನಮ್ಮ ದೇಹಕ್ಕೆ ಒಗ್ಗಿ ಹೋಗಿದೆ. ಇದರ ಸೇವನೆಯಿಂದ ನಮ್ಮ ಹೊಟ್ಟೆಯೂ ಕೆಡುವುದಿಲ್ಲ, ಆರೋಗ್ಯವೂ ಹಾಳಾಗುವುದಿಲ್ಲ.
ಝಿರೋ ಫಿಗರ್ ಎಂಬ ಹುಚ್ಚಿಗೆ ಬೀಳದೇ ಸರಿಯಾಗಿ ತಿನ್ನಿ, ಆದರೆ ಪೌಷ್ಟಿಕ ಆಹಾರ ಅದರಲ್ಲೂ ಪ್ರಾದೇಶಿಕವಾಗಿ ಲಭ್ಯವಿರುವ ಆಹಾರವನ್ನೇ ಬಳಸಿ. ದಪ್ಪಗಿದ್ದೀರಿ ಎಂದು ಅತಿ ವ್ಯಾಯಾಮ ಮಾಡಬೇಡಿ. ದಪ್ಪಗಿದ್ದು ಫಿಟ್ ಆಗಿರುವ ಸಾವಿರಾರು ಮಹಿಳೆಯರು ಇದ್ದಾರೆ. ಯಾರನ್ನೋ ಮೆಚ್ಚಿಸಲು ಝಿರೋ ಫಿಗರ್ ಭೂತದ ಹಿಂದೆ ಓಡಬೇಡಿ. ಉತ್ತಮ ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯವನ್ನು ಕಾಪಾಡಿ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ