‘ಡಿಂಡಿಮ ಕವಿ' ಶನಿ ಮಹಾದೇವಪ್ಪನವರಿಗೆ ನುಡಿನಮನ

‘ಡಿಂಡಿಮ ಕವಿ' ಶನಿ ಮಹಾದೇವಪ್ಪನವರಿಗೆ ನುಡಿನಮನ

‘ಕಮಲೇ ಕಮಲೋತ್ಪತ್ತಿ' ಎಂದು ಹೇಳುತ್ತಾ ತನ್ನ ಡಮರುಗವನ್ನು ಆಡಿಸಿ ಶಬ್ದ ಮಾಡುತ್ತಾ ಭೋಜರಾಜನ ಆಸ್ಥಾನಕ್ಕೆ ಬಂದು ಅಲ್ಲಿಯ ವಿದ್ವಾಂಸರಿಗೆ ಪಂಥ ಒಡ್ಡುವ ಡಿಂಡಿಮ ಕವಿಯ ಅಭಿನಯವನ್ನು ನೋಡಿ ಮೆಚ್ಚದವರು ಯಾರಿದ್ದಾರೆ? ಈ ದೃಶ್ಯವಿರುವುದು ‘ಕವಿರತ್ನ ಕಾಳಿದಾಸ' ಚಲನಚಿತ್ರದಲ್ಲಿ. ಅದರಲ್ಲಿ ಡಿಂಡಿಮ ಕವಿಯಾಗಿ ಅಭಿನಯಿಸಿದ ವ್ಯಕ್ತಿಯೇ ಶನಿ ಮಹಾದೇವಪ್ಪನವರು. ಅವರ ಕಂಚಿನ ಕಂಠ, ತೀಕ್ಷ್ಣ ಕಣ್ಣಿನ ನೋಟ, ಸ್ಪಷ್ಟವಾದ ಮಾತು ಎಲ್ಲವೂ ಆ ಚಿತ್ರದ ನೋಡುಗರ ಮನಸೂರೆಗೊಂಡಿತ್ತು. ಅವರ ಕಂಠವೇ ಅವರ ಪ್ಲಸ್ ಪಾಯಿಂಟ್ ಎಂದರೆ ತಪ್ಪಾಗಲಾರದು. ಅಂತಹ ಕಂಠ ಇತ್ತೀಚೆಗೆ ಸ್ಥಬ್ಧವಾಗಿದೆ. ಜನವರಿ ೩, ೨೦೨೧ರಂದು ಶನಿ ಮಹಾದೇವಪ್ಪನವರು ನಮ್ಮನ್ನೆಲ್ಲಾ ಅಗಲಿ ಮರಳಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅವರ ನೆನಪಿಗಾಗಿ ಒಂದು ಸಣ್ಣ ಬರಹ.

ಮಂಡ್ಯ ಜಿಲ್ಲೆಯ ಮಲವಳ್ಳಿ ತಾಲೂಕಿನ ಒಂದು ಸಣ್ಣ ಗ್ರಾಮವಾದ ಬೆಳಕವಾಡಿಯಲ್ಲಿ ೧೯೩೦ರಲ್ಲಿ ಜನಿಸಿದ ಇವರು ಬಾಲ್ಯದಿಂದಲೂ ರಂಗಭೂಮಿಯ ಆಕರ್ಷಣೆಗೆ ಒಳಗಾಗಿದ್ದರು. ಅವರು ‘ರಾಜಾ ವಿಕ್ರಮ’ , ಶ್ರೀ ಶನೀಶ್ವರ ಮಹಾತ್ಮೆ ಮುಂತಾದ ನಾಟಕಗಳಲ್ಲಿ ಶನಿದೇವರ ಪಾತ್ರವನ್ನು ನಿರಂತರವಾಗಿ ಮಾಡಿಕೊಂಡು ಬಂದುದರಿಂದ ಅವರ ಹೆಸರಿನ ಮುಂದೆ 'ಶನಿ' ಎಂಬ ಪದ ಅಂಟಿಕೊಂಡು ಬಿಟ್ಟಿತ್ತು. ಈ ಕಾರಣದಿಂದ ನಂತರದ ದಿನಗಳಲ್ಲಿ ಅವರು ಶನಿ ಮಹಾದೇವಪ್ಪ ಎಂದೇ ಖ್ಯಾತರಾದರು. ಒಂದೊಮ್ಮೆ ಚಿತ್ರರಂಗದಲ್ಲಿ ಸರಿಯಾಗಿ ಅವಕಾಶ ಸಿಗದಕ್ಕೆ ಅವರು ತಮ್ಮ ಹೆಸರನ್ನು ಬದಲಾಯಿಸಲು ಯೋಚಿಸಿ ಶಿವಪ್ರಕಾಶ್ ಎಂದು ಬದಲಿಸಿದ್ದೂ ಇದೆ. ಇದು ಯಾವುದೂ ಅವರ ಅದೃಷ್ಟವನ್ನು ಬದಲಿಸಲಿಲ್ಲ. ಆ ಕಾರಣದಿಂದ ತಮ್ಮ ಹಳೆಯ ಹೆಸರಿಗೇ ಬದಲಾಗಿದ್ದರು ಶನಿ ಮಹದೇವಪ್ಪ. 

ಶನಿ ಮಹಾದೇವಪ್ಪನವರು ಕನ್ನಡ, ಮಲಯಾಳಂ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮ ಅಭಿನಯ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ಪೋಷಕ ಪಾತ್ರದಲ್ಲಿ ಸದಾ ಮಿಂಚುತ್ತಿದ್ದ ಇವರು ಸುಮಾರು ೫೫೦ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸುಮಾರು ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಮಿಂಚಿದ ಇವರು ಒಂದು ಸಮಯದಲ್ಲಿ ಬಹುಬೇಡಿಕೆಯ ನಟರೂ ಆಗಿದ್ದರು. ಆ ಸಮಯದಲ್ಲಿ ತಮಿಳುನಾಡಿನಲ್ಲಿ ಜಯಲಲಿತಾ ಚಿತ್ರರಂಗದಲ್ಲಿ ಖ್ಯಾತನಾಮರಾಗಿದ್ದರು. ಮಹಾದೇವಪ್ಪನವರ ಅಭಿನಯ ಪ್ರತಿಭೆಯನ್ನು ಕಂಡು ಬೆರಗಾಗಿ ಅವರು ತಮಿಳು ಚಿತ್ರರಂಗಕ್ಕೆ ಬಂದು ನಟಿಸಿ ಅಲ್ಲೇ ಶಾಶ್ವತವಾಗಿ ನೆಲೆನಿಲ್ಲುವಂತೆ ಹೇಳಿದ್ದರಂತೆ. ಆದರೆ ಅಪ್ಪಟ ಕನ್ನಡ ಪ್ರೇಮಿ ಶನಿ ಮಹಾದೇವಪ್ಪನವರು ‘ಕನ್ನಡನಾಡಿನಲ್ಲಿ ತಿಳಿಗಂಜಿಯನ್ನಾದರೂ ಕುಡಿದುಬದುಕಿಯೇನು, ಆದರೆ ತಮಿಳುನಾಡಿನ ಭೂರಿ ಭೋಜನ ಬೇಕಿಲ್ಲ' ಎಂದವರು. ಆದರೆ ಕನ್ನಡವನ್ನೇ ನಂಬಿದ ಇವರಿಗೆ ಕೊನೆಗಾಲದಲ್ಲಿ ತಿಳಿಗಂಜಿಯೂ ಸಿಗುವುದು ಕಷ್ಟವಾಯಿತು. ಮಧುಮೇಹದ ಕಾರಣ ತಮ್ಮ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡ ಇವರು ಕೊನೆಕಾಲದಲ್ಲಿ ನಡೆದಾಡಲಾರದೇ, ಕಿವಿಯೂ ಮಂದವಾಗಿ ಹಾಸಿಗೆಯಲ್ಲೇ ಬಹುಕಾಲವನ್ನು ಕಳೆದರು. ಆರ್ಥಿಕ ಪರಿಸ್ಥಿತಿಯೂ ತುಂಬಾನೇ ಹದಗೆಟ್ಟಿತ್ತು. ಹಿರಿಯ ನಟ ಜಗ್ಗೇಶ್ ಅವರು ತಮ್ಮಿಂದ ಆದಷ್ಟು ಸಹಕಾರವನ್ನು ಮಾಡಿಕೊಟ್ಟಿದ್ದರು.

ಶ್ರೀ ಧರ್ಮಸ್ಥಳ ಮಹಾತ್ಮೆ ಎಂಬ ಚಿತ್ರದಲ್ಲಿ ಬ್ರಹ್ಮನಾಗಿ ತಮ್ಮ ಅಭಿನಯ ಪ್ರಯಾಣವನ್ನು ಪ್ರಾರಂಭಿಸಿದ ಶನಿ ಮಹಾದೇವಪ್ಪನವರು ನಂತರ ನಿರಂತರ ಸುಮಾರು ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಅಭಿನಯಿಸಿದ್ದರು. ಖಳನಟನ ಪಾತ್ರವಾಗಲೀ, ಪೋಷಕ ಪಾತ್ರವಾಗಲಿ, ಪೌರಾಣಿಕ ಪಾತ್ರವಾಗಲಿ ಇವರು ಜೀವ ತುಂಬಿ ನಟಿಸುತ್ತಿದ್ದರು. ಶನಿ ಮಹಾದೇವಪ್ಪನವರು ತಮ್ಮ ಚಿತ್ರ ಬದುಕಿನ ಬಹಳಷ್ಟು ಚಿತ್ರಗಳಲ್ಲಿ ಕನ್ನಡದ ವರನಟ ಡಾ. ರಾಜಕುಮಾರ್ ಜೊತೆ ನಟಿಸಿದ್ದರು. ರಾಜಕುಮಾರ್ ಚಿತ್ರದಲ್ಲಿ ಶನಿ ಮಹಾದೇವಪ್ಪನವರಿಗೊಂದು ಪಾತ್ರ ಇದ್ದೇ ಇರುತ್ತಿತ್ತು. ಪೌರಾಣಿಕ, ಐತಿಹಾಸಿಕ ಚಿತ್ರಗಳ ನಟನೆಯಲ್ಲಿ ಶನಿಮಹದೇವಪ್ಪನವರದ್ದು ಎತ್ತಿದ ಕೈ, ರಾಜ್ ಜೊತೆ ಸುಮಾರು ಎಪ್ಪತ್ತಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದ್ದು. ಮಯೂರ, ಕವಿರತ್ನ ಕಾಳಿದಾಸ, ಬಭ್ರುವಾಹನ, ಭಕ್ತ ಕುಂಬಾರ, ಮೂರುವರೆ ವಜ್ರಗಳು ಮುಂತಾದ ಅನೇಕ ಚಿತ್ರಗಳಲ್ಲಿ ಮರೆಯಲಾಗದ ಅಭಿನಯ ಪ್ರತಿಭೆಯನ್ನು ಮೆರೆದಿದ್ದಾರೆ. 

ತಮ್ಮ ೯೦ನೇ ವಯಸ್ಸಿನಲ್ಲಿ ಶನಿ ಮಹಾದೇವಪ್ಪನವರು ನಮ್ಮನ್ನು ಅಗಲಿದ್ದಾರೆ. ಆದರೆ ನಾವು ಯಾವುದೇ ಹಳೆಯ ಚಲನ ಚಿತ್ರಗಳನ್ನು ನೋಡಿದರೂ ಅದರಲ್ಲಿ ಒಂದೆಡೆ ಶನಿ ಮಹಾದೇವಪ್ಪನವರು ಪಾತ್ರ ಮಾಡಿಯೇ ಇರುತ್ತಾರೆ. ಅವರ ಅಭಿನಯ ಸದಾ ಅಮರ ಮತ್ತು ಅದ್ಭುತ.