‘ಡೆವಿಲ್ಸ್ ಕೆಟಲ್' ಎಂಬ ನಿಗೂಢ ಜಲಪಾತದ ಗುಂಡಿಯ ಸುತ್ತ..

‘ಡೆವಿಲ್ಸ್ ಕೆಟಲ್' ಎಂಬ ನಿಗೂಢ ಜಲಪಾತದ ಗುಂಡಿಯ ಸುತ್ತ..

ಪ್ರಪಂಚದಾದ್ಯಂತ ಮನುಷ್ಯನ ಆಲೋಚನೆಗೂ ನಿಲುಕದ ಹಲವಾರು ಸಂಗತಿಗಳಿವೆ. ಕೆಲವು ಸಂಗತಿಗಳು ನೋಡಲು ನಿಗೂಢವೆಂದು ಕಂಡರೂ ಅವುಗಳಿಗೆ ವೈಜ್ಞಾನಿಕ ಕಾರಣಗಳು ಇದ್ದೇ ಇರುತ್ತವೆ. ಅದರೆ ವಿಜ್ಞಾನಕ್ಕೂ ಬಿಡಿಸಲಾಗದ ಒಗಟಾಗಿರುವ ಹಲವಾರು ಸಂಗತಿಗಳು ಈ ಲೋಕದಲ್ಲಿ ಸಾಕಷ್ಟಿದೆ. ನಿಸರ್ಗ ಮಾತೆಯ ಮಡಿಲಲ್ಲಿ ಅಡಗಿರುವ ಹಲವಾರು ಸಂಗತಿಗಳಿಗೆ ವೈಜ್ಞಾನಿಕ ಕಾರಣಗಳೇ ಸಿಗುವುದಿಲ್ಲ. ಅವುಗಳಲ್ಲಿ ಒಂದು ‘ಡೆವಿಲ್ಸ್ ಕೆಟಲ್' ಎಂಬ ನಿಗೂಢ ಜಲಪಾತದ ಗುಂಡಿ. ಇದೊಂದು ಸೈತಾನನ ಗುಂಡಿ ಎಂದೇ ಪ್ರಸಿದ್ಧವಾಗಿದೆ. 

ಡೆವಿಲ್ಸ್ ಕೆಟಲ್ ಎಂಬ ಗುಂಡಿ ಇರುವುದು ಅಮೇರಿಕಾದಲ್ಲಿರುವ ಮಿನ್ನೆಸೋಟಾ ರಾಜ್ಯದಲ್ಲಿ ಇದೆ. ಇಲ್ಲಿ ಬ್ರೂಲ್ ಎಂಬ ನದಿಯು ಸುಮಾರು ಹದಿಮೂರು ಕಿಲೋ ಮೀಟರ್ ಜಡ್ಜ್ ಸಿ.ಆರ್. ಮ್ಯಾಗ್ನೆ ಸ್ಟೇಟ್ ಪಾರ್ಕ್ (Judge C.R.Magney State Park) ಎಂಬ ಉದ್ಯಾನವನದ ಒಳಗೆ ಹರಿಯುತ್ತದೆ. ಇಲ್ಲಿ ಅದು ಹಲವಾರು ಸಣ್ಣಪುಟ್ಟ ಜಲಪಾತಗಳ ರೂಪ ತಾಳುತ್ತದೆ. ಇಲ್ಲಿನ ವಿಶೇಷವಾದ ಕಲ್ಲುಗಳ ರಚನೆ ಮನಸೆಳೆಯುತ್ತದೆ. ನದಿಯು ಈ ಪಾರ್ಕ್ ಒಳಗೆ ಹರಿಯುವಾಗ ಒಂದೆಡೆ ಎರಡು ಕವಲುಗಳಾಗಿ ವಿಂಗಡನೆಯಾಗಿ ಜಲಪಾತದ ರೀತಿ ನೀರು ಕೆಳಗೆ ಧುಮ್ಮಿಕ್ಕುತ್ತದೆ. ಎರಡು ಕವಲುಗಳಲ್ಲಿ ಒಂದು ನೇರವಾಗಿ ಜಲಪಾತವಾಗಿ ಹರಿದರೆ ಮತ್ತೊಂದು ಕವಲಿನ ನೀರು ಒಂದು ನಿಗೂಢ ಗುಂಡಿಯೊಳಗೆ ಧುಮುಕುತ್ತದೆ. (ಬಾಣದ ಗುರುತು ಗಮನಿಸಿ) ಆಶ್ಚರ್ಯಕರವಾದ ಸಂಗತಿಯೆಂದರೆ ಈ ಗುಂಡಿಯೊಳಗೆ ಹೋದ ನೀರು ಯಾವ ದಾರಿಯಿಂದಲೂ ಹೊರಗೆ ಬರುವುದಿಲ್ಲ. ಹಾಗಾದರೆ ಗುಂಡಿಯೊಳಗೆ ಹರಿದ ನೀರು ಹೋಗುವುದೆಲ್ಲಿಗೆ? ಇದೇ ಬಿಡಿಸಲಾಗದ ರಹಸ್ಯ. ಅದಕ್ಕೇ ಈ ಗುಂಡಿಗೆ ಸೈತಾನನ ಗುಂಡಿ ಅರ್ಥಾತ್ ಡೆವಿಲ್ಸ್ ಕೆಟಲ್ ಎನ್ನುತ್ತಾರೆ.

ಭೂಶಾಸ್ತ್ರಜ್ಞರು ಹಾಗೂ ಪವಾಡಗಳ ರಹಸ್ಯ ಬಿಡಿಸುವ ವಿಚಾರವಾದಿಗಳು ಎಲ್ಲರೂ ಈ ಬಗ್ಗೆ ತುಂಬಾನೇ ತಲೆ ಕೆಡಿಸಿಕೊಂಡು ಹಲವಾರು ಪ್ರಯೋಗಗಳನ್ನು ಮಾಡಿದರು. ಕೆಲವರು ಗುಂಡಿಗೆ ಬಿದ್ದ ನೀರು ಮುಂದಕ್ಕೆ ಗುಪ್ತಗಾಮಿನಿಯಾಗಿ ಹರಿದು ಬೇರೊಂದು ನದಿಯನ್ನು ಸೇರುತ್ತದೆ ಎಂದು ವಾದ ಮಂಡಿಸಿದರು. ಅದನ್ನು ಸಾಬೀತು ಪಡಿಸಲು ಅವರು ಗುಂಡಿಯ ಒಳಗೆ ಹರಿಯುತ್ತಿದ್ದ ನದಿ ನೀರಿಗೆ ಬಣ್ಣವನ್ನು ಚೆಲ್ಲಿದರು. ಆದರೆ ಈ ಬಣ್ಣದ ನೀರು ಯಾವ ದಿಕ್ಕಿನಿಂದಲೂ ಹೊರ ಬರಲಿಲ್ಲ. ಸುಮಾರು ನೂರಕ್ಕಿಂತಲೂ ಅಧಿಕ  ಪಿಂಗ್ ಪಾಂಗ್ ಚೆಂಡುಗಳಿಗೆ ಗುರುತು ಮಾಡಿ ಆ ಗುಂಡಿಯೊಳಗೆ ಹಾಕಿದರು. ಯಾವುದೂ ಸಹ ಎಲ್ಲಿಯೂ ಹೊರಬಂದು ಯಾರ ಕಣ್ಣಿಗೂ ಬೀಳಲಿಲ್ಲ. ಹಾಗಾದರೆ ಅವೆಲ್ಲಾ ಹೋಯಿತೆಲ್ಲಿಗೆ? ಉಪಗ್ರಹಗಳ ಆಧಾರದಿಂದ ಉಪಯೋಗಿಸಲಾಗುವ ಜಿಪಿಎಸ್ ಉಪಕರಣವನ್ನು ಆ ಗುಂಡಿಯೊಳಗೆ ಹಾಕಲಾಯಿತು. ಆದರೆ ಅದೂ ನೆಟ್ ವರ್ಕ್ ಸಿಗದ ಸಮಸ್ಯೆಯ ಕಾರಣದಿಂದ ನಿಶ್ಕ್ರಿಯವಾಯಿತು. ಏನೆಲ್ಲಾ ಪ್ರಯೋಗಗಳನ್ನು ಮಾಡಿದರೂ ಡೆವಿಲ್ಸ್ ಕೆಟಲ್ ಜಲಪಾತದ ರಹಸ್ಯ ಬಯಲು ಮಾಡಲು ಸಾಧ್ಯವೇ ಆಗಲಿಲ್ಲ.

ವಿಜ್ಞಾನಿಗಳು ಇನ್ನೊಂದು ವಾದವನ್ನು ಮುಂದೆ ಇಟ್ಟರು. ಅದೇನೆಂದರೆ ಆ ಗುಂಡಿಯ ಕೆಳಗಡೆ ಒಂದು ಜ್ವಾಲಾಮುಖಿಯಿಂದ ನಿರ್ಮಿತವಾದ ಲಾವಾ ಹರಿಯುವಂತಹ ಸುರಂಗ (Lava Tube) ಇರಬಹುದು. ನೀರು ಅಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರಬಹುದು ಎಂಬುದು. ಆದರೆ ವಿಜ್ಞಾನಿಗಳು ನಡೆಸಿದ ಪ್ರಯೋಗಗಳಿಂದ ಇದೂ ಸಾಬೀತಾಗಲಿಲ್ಲ. ಗುಂಡಿಯೊಳಗೆ ಬಿದ್ದ ನೀರು ಇನ್ನೊಂದು ಕವಲಿನಲ್ಲಿ ಹರಿಯುವ ಜಲಪಾತದ ನೀರಿನ ಜೊತೆಯೇ ಬೆರೆತು ಹೋಗುತ್ತದೆ ಎಂದು ಕೆಲವು ಮಂದಿ ಅಭಿಪ್ರಾಯ ಪಟ್ಟರು. ೨೦೧೬ರ ಡಿಎನ್ ಆರ್ ವರದಿಗಳ ಪ್ರಕಾರ, ನೀರಾವರಿ ತಜ್ಞರು ಜಲಪಾತದ ಬಳಿ ನೀರಿನ ಹರಿವಿನಒತ್ತಡ ಹಾಗೂ ಸ್ವಲ್ಪ ದೂರ ಹರಿದ ನಂತರದ ನೀರಿನ ಹರಿವಿನ ಒತ್ತಡವನ್ನು ಪರಿಶೀಲಿಸಲಾಗಿ ಅವುಗಳಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸಗಳಿರಲಿಲ್ಲ. ಒಂದು ವೇಳೆ ಆ ಗುಂಡಿಗೆ ಬಿದ್ದ ನೀರು ಇನ್ನೊಂದು ಕಡೆ ಹರಿಯುವ ನೀರಿನ ಜೊತೆ ಸೇರಿರುತ್ತಿದ್ದರೆ ನೀರಿನ ಒತ್ತಡವು ಅಧಿಕವಾಗಲೇ ಬೇಕಿತ್ತಲ್ಲವೇ?

ಒಂದಲ್ಲಾ ಒಂದು ದಿನ ಯಾರಾದರೂ ಈ ನಿಗೂಢ ಜಲಪಾತದ ರಹಸ್ಯವನ್ನು ಬಯಲು ಮಾಡಿಯೇ ಮಾಡುತ್ತಾರೆ. ಏನಾದರಾಗಲಿ ಪ್ರವಾಸಿಗರಿಗೆ ಇದೊಂದು ಕುತೂಹಲಭರಿತ ರೋಚಕ ತಾಣ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ.

ಮಾಹಿತಿ: ಡೆವಿಲ್ಸ್ ಕೆಟಲ್ ಜಲಪಾತದ ಮಾಹಿತಿ ವಿಡಿಯೋ ರೂಪದಲ್ಲಿ ಅಂತರ್ಜಾಲದಲ್ಲಿ ಲಭ್ಯವಿದೆ. ಆಸಕ್ತರು ವೀಕ್ಷಿಸಬಹುದು. (ಚಿತ್ರ ಕೃಪೆ: ಪನೋರಾಮಿಯೋ, ಎಲೈಟ್ ರೀಡರ್ಸ್ ಜಾಲತಾಣದಿಂದ)