‘ತಾಯಿ’ ಎಂಬ ಅತಿ ಸಣ್ಣ ಕತೆ

‘ತಾಯಿ’ ಎಂಬ ಅತಿ ಸಣ್ಣ ಕತೆ

ಎಸ್. ದಿವಾಕರ್ ನಡೆದಾಡುವ ವಿಶ್ವ ಕಥಾಕೋಶ ಎಂದೇ ಕರೆಯಲ್ಪಡುತ್ತಾರೆ. ಇವರು ಹುಟ್ಟಿದ್ದು ನವೆಂಬರ್ ೨೮, ೧೯೪೪ರಲ್ಲಿ ಬೆಂಗಳೂರಿನ ಸೋಮತ್ತನಹಳ್ಳಿಯಲ್ಲಿ. ಸಣ್ಣ ಕಥೆ ಇವರ ಪ್ರಥಮ ಆದ್ಯತೆ. ಅದರ ಜೊತೆಗೆ ಭಾಷಾಂತರ, ಕವನ, ಕಾದಂಬರಿ, ವಿಮರ್ಶೆ ಇತ್ಯಾದಿಗಳನ್ನು ಬರೆದಿದ್ದಾರೆ. ಇವರು ಸುಧಾ, ಪ್ರಜಾವಾಣಿ ಮೊದಲಾದ ಪತ್ರಿಕೆಗಳಲ್ಲಿ ದುಡಿದಿದ್ದಾರೆ. ಇವರ ಕಥಾ ಜಗತ್ತು, ಜಗತ್ತಿನ ಅತೀ ಸಣ್ಣ ಕಥೆಗಳು, ಶತಮಾನದ ಸಣ್ಣ ಕಥೆಗಳು, ಕನ್ನಡದ ಅತೀ ಸಣ್ಣ ಕಥೆಗಳು ಓದುಗರ ಮೆಚ್ಚುಗೆ ಪಡೆದಿವೆ. 

ಹೀಗೇ ಇತ್ತೀಚೆಗೆ ಸಿಕ್ಕ ಹಳೆಯ 'ಮಯೂರ' ಪತ್ರಿಕೆಯತ್ತ ಕಣ್ಣಾಡಿಸುತ್ತಿರುವಾಗ ಅದರಲ್ಲಿ ಎಸ್.ದಿವಾಕರ್ ಅವರ ಅತಿ ಸಣ್ಣ ಕತೆ ‘ತಾಯಿ' ಓದಲು ಸಿಕ್ಕಿತು. ಅತೀ ಕಡಿಮೆ ಪದಗಳಲ್ಲಿ ಮಾತೃ ವಾತ್ಸಲ್ಯದ ಬಗ್ಗೆ ಸೊಗಸಾದ ಕತೆಯನ್ನು ಕಟ್ಟಿಕೊಟ್ಟಿದ್ದಾರೆ ಕಥೆಗಾರರು. ನೀವೂ ಒಮ್ಮೆ ಓದಿ ಬಿಡಿ. 

ತಾಯಿ

ಒಂದಾನೊಂದು ಕಾಲದಲ್ಲಿ ಮಾ ಲಿಯಾಂಗ್ ಎಂಬ ಚೀನೀ ಚಿತ್ರಕಾರನೊಬ್ಬನಿದ್ದ. ಅವನು ಕಣ್ಣಿಗೆ ಕಂಡದ್ದೆಲ್ಲವನ್ನೂ ಅದೆಷ್ಟು ನಿಖರವಾಗಿ ಅನುಕರಿಸುತ್ತಿದ್ದನೆಂದರೆ ಅವನ ಕುಂಚದ ಒಂದೆರಡು ಗೆರೆಗಳಿಂದಲೇ ಪ್ರತಿಯೊಂದೂ ವಾಸ್ತವದ ರೂಪಾಂತರಗೊಂಡುಬಿಡುತ್ತಿತ್ತು. ಒಮ್ಮೆ ಚಕ್ರಾಧಿಪತಿಯೊಬ್ಬ ಸಮುದ್ರವನ್ನು ಚಿತ್ರಿಸು ಎಂದು ಆಜ್ಞೆಯಿತ್ತದ್ದೇ ತಡ, ಮಾ ಲಿಯಾಂಗ್ ಚಿತ್ರಿಸಿದ ಸಮುದ್ರದಲ್ಲಿ ಆ ಚಕ್ರಾಧಿಪತಿ ತನ್ನ ಅರಮನೆಯ ಸಮೇತ ಮುಳುಗಿಹೋದ. ಮಾ ಲಿಯಾಂಗ್ ನ ಇಂಥ ದಿವ್ಯಕಲೆಯನ್ನು ಮೀರಿಸಬೇಕೆಂದುಕೊಂಡ ಪಾಶ್ಚಾತ್ಯ ಜಗತ್ತು ಫೋಟೋಗ್ರಫಿಯನ್ನು ಕಂಡುಹಿಡಿಯಿತು.

ಆ ಫೋಟೋಗ್ರಫಿಯಲ್ಲಿ ಯುವಕರು ಸದಾ ಯುವಕರಾಗಿಯೇ ಇರುತ್ತಿದ್ದರು. ಸಾಯುತ್ತಿದ್ದವರು ಕೂಡ ಮತ್ತೆ ಮತ್ತೆ ತಮ್ಮ ಸಾವಿನ ಕ್ಷಣವನ್ನು ಪುನರಭಿನಯಿಸುತ್ತ ಬದುಕಿರುತ್ತಿದ್ದರು.

ಮೊನ್ನೆ ಏನಾಯಿತಪ್ಪಾ ಎಂದರೆ ಫೋಟೋಗ್ರಾಫರೊಬ್ಬರು ಒಂದು ಸಭೆಯಲ್ಲಿ ಕ್ಯಾಮರಾ ಕೋನವನ್ನು, ಫಿಲ್ಮಿನ ಸ್ಪೀಡನ್ನು, ನೆರಳು ಬೆಳಕಿನ ವಿನ್ಯಾಸವನ್ನು ವಿವರಿಸುತ್ತಾ ಒಂದು ನಿರ್ದಿಷ್ಟ ವಿಚಾರದ ಪ್ರತಿಪಾದನೆಗಾಗಿ ತಾವು ತೆಗೆದ ಫೋಟೋಗಳ ಕಟ್ಟಿನಿಂದ ಒಂದು ಫೋಟೋವನ್ನು ಹೊರತೆಗೆದರು. ಅದು ಅವರು ತೆಗೆದ ಅವರದೇ ಮಗುವಿನ ಫೋಟೋ. ಅದೊಂದು ಹಸುಗೂಸು.

ತೊಟ್ಟಿಲಲ್ಲಿ ಮಲಗಿ ಹಾಯಾಗಿ ನಿದ್ರಿಸುತ್ತಿದ್ದ ಮಗು ದುಂಡುದುಂಡಾಗಿತ್ತು. ಅದರ ಹಣೆಯ ಮೇಲೆ ನಾಲ್ಕಾರು ಕೂದಲು. ತುಟಿಯಲ್ಲಿ ಭಯ ಆತಂಕಗಳಿಲ್ಲದ, ನೆಮ್ಮದಿಯ ಸುಳಿನಗು. ಅದರ ಪುಟ್ಟ ಬಲಗೈ ಮಾತ್ರ ಮುಷ್ಟಿ ಬಿಗಿದುಕೊಂಡಿತ್ತು.

ಫೋಟೋ ತೆಗೆದಾಗ ಆ ಮಗುವಿಗೆ ನಾಲ್ಕೈದು ತಿಂಗಳಾಗಿತ್ತಷ್ಟೆ ಎಂದು ಹೇಳಿದ ಫೋಟೋಗ್ರಾಫರರು ಕಟ್ಟಿನಿಂದ ಹೊರಗೆಳೆದ ತಕ್ಷಣ ಸುರುಳಿ ಸುರುಳಿಯಾಗಿದ್ದ ಆ ಫೋಟೋವನ್ನು ಟೇಬಲ್ಲಿನ ಮೇಲಿಟ್ಟು ತಡವಿದರು; ಅದರ ಅಂಚುಗಳನ್ನು ಹಿಡಿದುಕೊಂಡು ಹಿಮ್ಮುಖವಾಗಿ ಸುರುಳಿ ಸುತ್ತಿದರು. ಮತ್ತೆ ಮೊದಲಿನಂತೆಯೇ ಸುರುಳಿಯಾದದ್ದನ್ನು ಬಿಡಿಸಿ ತಮ್ಮ ಅಂಗೈಯಿಂದ ಮೃದುವಾಗಿ ಉಜ್ಜಿದರು. ಕಡೆಗೆ ಏನು ಮಾಡಿದರೂ ಸಪಾಟಾಗದಿದ್ದ ಆ ಫೋಟೋ ಗಾಳಿಗೆ ಹಾರಿ ಹೋದೀತೆಂಬ ಆತಂಕದಿಂದಲೋ ಏನೋ, ತಾವು ಅರ್ಧ ಕುಡಿದಿದ್ದ ನೀರಿನ ಗ್ಲಾಸನ್ನು ಅದರ ಮೇಲಿಟ್ಟರು.

ಅದನ್ನೆಲ್ಲ ನೋಡುತ್ತಿದ್ದ ಅವರ ಹೆಂಡತಿ ತಮ್ಮ ಮುಖದಲ್ಲಿ ಅತೀವ ವೇದನೆಯನ್ನು ತುಳುಕಿಸುತ್ತಾ, “ಅಯ್ಯೋ, ಹಾಗ್ಯಾಕೆ ಸುತ್ತಿ, ತಡವಿ, ಉಜ್ಜಿ ಮಾಡತೀರಿ..ಅವನು ನನ್ನ ಮಗ" ಎಂದರು. 

ಅವರ ಆ ಮಗನೂ ಸಭೆಯಲ್ಲಿದ್ದ. ಅವನಿಗೆ ಮದುವೆಯಾಗುವ ವಯಸ್ಸು. ಮಕ್ಕಳಾಗುವ ವಯಸ್ಸು.

-ಎಸ್.ದಿವಾಕರ್  

ಚಿತ್ರ: ಸೃಜನ್ 

(‘ಮಯೂರ’ ಮಾಚ್ ೨೦೧೮ರ ಸಂಚಿಕೆಯಿಂದ ಆಯ್ದ ಕಥೆ) 
ಪ್