‘ದೀಪದ ಮಹಿಳೆ’ ಫ್ಲಾರೆನ್ಸ್ ನೈಟಿಂಗೇಲ್

Submitted by Ashwin Rao K P on Wed, 06/17/2020 - 09:04

ಕೊರೋನಾ ಮಹಾಮಾರಿ ಈ ಪ್ರಪಂಚಕ್ಕೆ ಅಪ್ಪಳಿಸಿದ ಬಳಿಕ ನಮಗೆ ವೈದ್ಯರ, ಅದರಲ್ಲೂ ನರ್ಸ್ ಅಥವಾ ದಾದಿಯರ ಮತ್ತು ಆಯಾಗಳ ಮಹತ್ವ ಅರಿವಾಗಿದೆ. ಇವರೆಲ್ಲಾ ಮಾಡುವ ಸೇವೆಗಳನ್ನು ಗಮನಿಸಿ ಸಾಮಾಜ ಇವರನ್ನು ‘ಕೊರೋನಾ ವಾರಿಯರ್ಸ್' ಅಥವಾ ಕೊರೋನಾ ಯೋಧರು ಎಂದು ಕರೆಯಲು ಪ್ರಾರಂಭಿಸಿದೆ. ಇದು ಸತ್ಯವಾದ ಮಾತು. ಈಗಿನ ಎಲ್ಲಾ ದಾದಿಯರ ಪ್ರೇರಣಾ ಶಕ್ತಿಯೆಂದರೆ ಇಂದಿಗೆ ಸರಿ ಸುಮಾರಾಗಿ ೨೦೦ ವರ್ಷಗಳ ಹಿಂದೆ ಜನಿಸಿದ ಫ್ಲಾರೆನ್ಸ್ ನೈಟಿಂಗೇಲ್ (ಜನನ:೧೨ ಮೇ ೧೮೨೦) ಎಂದರೆ ತಪ್ಪಾಗದು. ಈಗಿನ ಶತಮಾನದ ದಾದಿಯರ ಇವರು ಹಿರಿಯಜ್ಜಿ ಎಂದೇ ಹೇಳಬಹುದು. ರೋಗಿಗಳ ಸೇವೆಯೇ ಪರಮ ಧರ್ಮ ಎಂದು ಬದುಕಿ ಬಾಳಿದ ಫ್ಲಾರೆನ್ಸ್ ನೈಟಿಂಗೇಲ್ ಇವರಿಗೆ ೨ ಶತಮಾನಗಳ ಸಂಭ್ರಮ. ಇಂದಿನ ಸಂದರ್ಭದಲ್ಲಿ ಇವರನ್ನು ನೆನಪಿಸಿಕೊಳ್ಳುವುದು ಸೂಕ್ತ ಎಂದು ನನ್ನ ಭಾವನೆ.

ಫ್ಲಾರೆನ್ಸ್ ನೈಟಿಂಗೇಲ್ ಇಂಗ್ಲೆಂಡ್ ನ ಶ್ರೀಮಂತ ಮನೆತನದಲ್ಲಿ ಹುಟ್ಟಿದ ಹೆಣ್ಣು ಮಗಳು. ತಮ್ಮ ೧೨ನೇ ವಯಸ್ಸಿನಲ್ಲಿಯೇ ಇವರು ತಮ್ಮ ಜೀವನವೆಲ್ಲಾ ರೋಗಿಗಳ, ದೀನ ದಲಿತರ ಸೇವೆಗೆ ಎಂದು ನಿರ್ಧಾರಮಾಡುತ್ತಾರೆ. ನಾವು ಬದುಕುವ ಜೀವನವು ವ್ಯರ್ಥವಾಗದೇ ಸಫಲವಾಗಬೇಕಾದರೆ ರೋಗಿಗಳ ಸೇವೆ ಮಾಡಬೇಕು ಎನ್ನುವುದು ಇವರ ಅಚಲ ನಿರ್ಧಾರವಾಗಿತ್ತು. ನರ್ಸಿಂಗ್ ಕಲಿಯುವ ಪುಸ್ತಕಗಳನ್ನು ಓದಿ, ಕಾಯಿಲೆ ಬಿದ್ದವರ ಸೇವೆ ಮಾಡುವುದು ಇವರ ಹೆತ್ತವರಿಗೆ ಪಥ್ಯವಾಗಲಿಲ್ಲ. ಅವರು ಎಷ್ಟೇ ಇದರಿಂದ ನೈಟಿಂಗೇಲ್ ಇವರನ್ನು ಹೊರತರಬೇಕೆಂದು ಬಯಸಿದರೂ ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ನ ಲಂಡನ್ ನಲ್ಲಿರುವ ಆಸ್ಪತ್ರೆ ಮತ್ತು ಹತ್ತಿರದ ಆಸ್ಪತ್ರೆಗಳಿಗೆಲ್ಲಾ ಹೋಗಿ ರೋಗಿಗಳ ಸೇವೆ ಮಾಡಿ ಬರುತ್ತಿದ್ದರು ಫ್ಲಾರೆನ್ಸ್ ನೈಟಿಂಗೇಲ್.

ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಇವರು ತಮ್ಮ ಪದವಿಯನ್ನು ಮುಗಿಸಿ ಲಂಡನ್ ನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಪ್ರಾರಂಬಿಸುತ್ತಾರೆ. ಅಪರಾಧೀ (Crimean War) ಯುದ್ಧದ ಸಂದರ್ಭದಲ್ಲಿ ಫ್ಲಾರೆನ್ಸ್ ರನ್ನು ಯುದ್ಧ ನಡೆಯುತ್ತಿರುವ ಸ್ಥಳಕ್ಕೆ ದಾದಿಯರ ಮುಖ್ಯಸ್ಥೆಯಾಗಿ ಕಳುಹಿಸಿಕೊಡಲಾಗುತ್ತದೆ. ಅಲ್ಲಿ ಇವರು ಹೋದಾಗ ಯುದ್ಧದಲ್ಲಿ ಗಾಯಾಳುಗಳಾಗಿದ್ದವರ ಶುಷ್ರೂಷೆ ಮಾಡಲು ಸರಿಯಾದ ವ್ಯವಸ್ಥೆಯೇ ಇರಲಿಲ್ಲ. ಅದಕ್ಕಾಗಿ ಇವರು ಅಲ್ಲಿಯೇ ಇದ್ದ ಹಳೆಯ ಕಟ್ಟಡವೊಂದನ್ನು ಶುಚಿಗೊಳಿಸಿ ಅದನ್ನು ಆಸ್ಪತ್ರೆಯಂತೆ ಸಜ್ಜುಗೊಳಿಸುತ್ತಾರೆ. ಇವರ ಅವಿರತ ಶ್ರಮದಿಂದ ಮತ್ತು ಸೇವೆಯಿಂದ ಬಹಳಷ್ಟು ಗಾಯಾಳುಗಳು ಬೇಗನೇ ಗುಣಮುಖರಾರುತ್ತಾರೆ. ಹಗಲಿನಲ್ಲಿ ಮಾತ್ರವಲ್ಲ ರಾತ್ರಿಯಲ್ಲೂ ಒಂದು ಲಾಟೀನ್ (ದೀಪ) ಹಿಡಿದುಕೊಂಡು ರೋಗಿಗಳ ಸ್ಥಿತಿ ಪರಿಶೀಲಿಸುತ್ತಾರೆ. ಇದರಿಂದಲೇ ಇವರಿಗೆ ‘ದೀಪ ಹಿಡಿದ ಮಹಿಳೆ' (the lady with the lamp) ಎಂಬ ಅನ್ವರ್ಥನಾಮ ಬಂತು.

ಫ್ಲಾರೆನ್ಸ್ ನೈಟಿಂಗೇಲ್ ಯಾವತ್ತೂ ಸ್ಮರಣಾರ್ಹರು ಯಾಕೆಂದರೆ ಇವರು ದಾದಿಯಾಗಿ ರೋಗಿಗಳಿಗೆ, ಅಶಕ್ತರಿಗೆ ಮಾಡಿದ ಸೇವೆಯಿಂದ ಹಲವಾರು ಮಂದಿಯ ಕಣ್ಣುಗಳು ತೆರೆದವು. ಹಲವಾರು ಮಂದಿ ದಾದಿಯರಾಗಲು ಮುಂದೆ ಬಂದರು. ಈಗಲೂ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವವರಿಗೆ ಇವರು ಆದರ್ಶ ಪ್ರಾಯರಾಗಿದ್ದಾರೆ.

ಫ್ಲಾರೆನ್ಸ್ ನೈಟಿಂಗೇಲ್ ಇವರಿಗೆ ಪ್ರಾಣಿ ಪಕ್ಷಿಗಳ ಮೇಲೂ ಅಪಾರ ಪ್ರೀತಿ ಇತ್ತು. ಇವರ ಮನೆಯಲ್ಲಿ ಹಲವಾರು ಸಾಕು ಪ್ರಾಣಿಗಳು ಇದ್ದುವು. ಆಮೆಯಿಂದ ಹಿಡಿದು ಓತಿ ಕ್ಯಾತದವರೆಗೂ ಇವರ ಮನೆಯಲ್ಲಿ ವಾಸ ಇರುತ್ತಿತ್ತು. ಇವರ ಪ್ರೀತಿಯ ಪಕ್ಷಿಯೆಂದರೆ ಇವರು ಸಾಕುತ್ತಿದ್ದ ಅಥೆನ್ಸ್ ಎಂಬ ಗೂಬೆ!. ಇವರು ಈ ಗೂಬೆಯನ್ನು ೧೮೫೦ರಲ್ಲಿ ಈಜಿಪ್ಟ್ ನಿಂದ ಹಿಂದಿರುಗುತ್ತಿದ್ದ ಸಮಯದಲ್ಲಿ ಕಲ್ಲು ಹೊಡೆಯುತ್ತಿದ್ದ ಪುಂಡರಿಂದ ಬಚಾವ್ ಮಾಡಿ ಲಂಡನ್ ಗೆ ತಂದಿದ್ದರು. ಈ ಅಥೆನ್ಸ್ ಎಂಬ ಈ ಗೂಬೆಯು ಸತ್ತ ಬಳಿಕವೂ ಅದನ್ನು ಹೂಳದೇ ಅದನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಿ ಸೆಂಟ್ರಲ್ ಲಂಡನ್ ನಲ್ಲಿರುವ ಫ್ಲಾರೆನ್ಸ್ ನೈಟಿಂಗೇಲ್ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. 

ಫ್ಲಾರೆನ್ಸ್ ನೈಟಿಂಗೇಲ್ ಅವರು ದಾದಿಯಾಗಿ ಸಮಾಜಕ್ಕೆ ನೀಡಿದ ನಿಸ್ವಾರ್ಥ ಸೇವೆಯನ್ನು ಗಮನಿಸಿ ಅವರ ಜನ್ಮ ದಿನವಾದ ಮೇ ೧೨ನ್ನು ಅಂತರಾಷ್ಟ್ರೀಯ ದಾದಿಯರ (ನರ್ಸ್) ದಿನ ಎಂದು ಘೋಷಿಸಲಾಗಿದೆ. ಪ್ರತೀ ವರ್ಷ ಲಂಡನ್ ನಲ್ಲಿರುವ ವೆಸ್ಟ್ ಮಿನಿಸ್ಟರ್ ಅಬೇಯಲ್ಲಿ ದಾದಿಯರು ಲಾಟೀನ್ ಹಿಡಿದು ಅದನ್ನು ಒಬ್ಬರಿಂದ ಒಬ್ಬರಿಗೆ ವರ್ಗಾಯಿಸುತ್ತಾ ಮುಖ್ಯಸ್ಥರಿಗೆ ನೀಡುತ್ತಾರೆ. ಅದರ ಮೂಲಕ ಸಾಂಕೇತಿಕವಾಗಿ ಫ್ಲಾರೆನ್ಸ್ ನೈಟಿಂಗೇಲ್ ಅವರಿಗೆ ಗೌರವ ಸಲ್ಲಿಸುತ್ತಾರೆ. ಲಂಡನ್ ನಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಪ್ರತಿಮೆಯನ್ನು ನಿರ್ಮಿಸುವುದರ ಮೂಲಕ ಸದಾ ಸ್ಮರಿಸುತ್ತಾರೆ.