‘ನಂಬಿಕೆ’ ಎಂಬ ಮುತ್ತನ್ನು ಒಡೆಯಲು ಬಿಡಬೇಡಿ !
ಒಮ್ಮೆ ನಾವು ಯಾರ ಮೇಲಾದರೂ ಇರಿಸಿದ ನಂಬಿಕೆಯನ್ನು ಕಳೆದುಕೊಂಡೆವೋ ನಂತರ ಭವಿಷ್ಯದಲ್ಲಿ ನಾವು ಆ ವ್ಯಕ್ತಿಯನ್ನು ಯಾವತ್ತೂ ನಂಬುವುದಿಲ್ಲ. ಆ ವ್ಯಕ್ತಿ ನಮ್ಮಲ್ಲಿ ಕ್ಷಮಾಪಣೆ ಕೇಳಿ, ನಂತರದ ದಿನಗಳಲ್ಲಿ ನಂಬಿಕೆಗೆ ಅರ್ಹವಾದ ರೀತಿಯಲ್ಲಿ ನಡೆದುಕೊಂಡರೂ ನಾವು ಅವರನ್ನು ಪೂರ್ಣ ನಂಬುವುದೇ ಇಲ್ಲ. ಈ ವಿಷಯ ಎಲ್ಲರ ಅನುಭವಕ್ಕೂ ಬಂದಿರುವಂತದ್ದೇ. ಅದಕ್ಕೆ ಹಿರಿಯರು ಹೇಳುವುದು ‘ನಂಬಿಕೆ' ಎನ್ನುವುದು ಒಂದು ರೀತಿಯ ಮುತ್ತು ಇದ್ದಂತೆ. ಒಮ್ಮೆ ಒಡೆದು ಹೋದರೆ ಮತ್ತೆಂದೂ ಅದನ್ನು ಜೋಡಿಸಲು ಆಗದು. ಈ ಬಗ್ಗೆ ಖ್ಯಾತ ಸಾಹಿತಿ ಸಾ ಶಿ ಮರುಳಯ್ಯ ಇವರು ಒಂದು ಪತ್ರಿಕೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಬನ್ನಿ ಒಮ್ಮೆ ಓದೋಣ…
ಉತ್ತರ ಅಮೆರಿಕೆಯ ಒಂದು ಹಳ್ಳಿ. ಅಲ್ಲೊಬ್ಬ ಅನುಭಾವಿ. ಹೆಸರು ಮರೆತಿದ್ದೇನೆ. ಆತನಿಗೆ ವಿಶ್ವ ಮಹಾ ಚೇತನದ ಅಸ್ತಿತ್ವ, ಅನುಗ್ರಹಗಳ ಬಗ್ಗೆ ಅಚಲ ವಿಶ್ವಾಸ. ಆ ನಂಬಿಕೆಯ ಪ್ರತಿಪಾದನೆಗಾಗಿ ಆತ ತನ್ನ ಮನೆಯ ಅಂಗಳದಲ್ಲಿ ಒಂದು ದೊಡ್ಡ ಫಲಕ ತಗುಲಿ ಹಾಕಿದ್ದ. ಅದರಲ್ಲಿ ಬರೆದಿದ್ದ ಒಕ್ಕಣೆ ಹೀಗಿತ್ತು:
ಓರ್ವ ಭಕ್ತ ಭಗವಂತನನ್ನು ಕುರಿತು ತಪಸ್ಸು ಮಾಡಿದ. ತಪಸ್ಸು ಸಿದ್ಢಿಸಿತು. ಪ್ರತ್ಯಕ್ಷನಾದ ಭಗವಂತ ಏನು ಬೇಕೆಂದು ಕೇಳಿದ. ಭಕ್ತ 'ಪರಮಾತ್ಮ ನನಗೆ ಬೇರೆ ಏನೂ ಬೇಡ, ಸದಾ ನೀನು ನನ್ನೊಡನೆ ಇರು. ನನ್ನ ಹೆಜ್ಜೆ ಪಕ್ಕದಲ್ಲಿ ನಿನ್ನ ಹೆಜ್ಜೆ ಗುರುತುಗಳಿರಲಿ. ಅಷ್ಟೇ ಸಾಕು' ಎಂದ. ಭಗವಂತ ಒಪ್ಪಿದ. ಸುಖದ ಐವತ್ತು ವರ್ಷಗಳು ಕಳೆದವು. ಭಕ್ತನು ನಡೆದ ಹಾದಿಯುದ್ದಕ್ಕೂ ಅವನ ಹೆಜ್ಜೆ ಗುರುತುಗಳ ಬಳಿ ಪರಮಾತ್ಮನ ಹೆಜ್ಜೆ ಗುರುತುಗಳಿದ್ದವು. ಮುಂದೆ ಕಷ್ಟದ 50 ವರ್ಷಗಳು ಬಂದವು. ಭಕ್ತ ತುಸು ದೂರ ನಡೆದ ಮೇಲೆ ಪಕ್ಕಕ್ಕೆ ತಿರುಗಿ ನೋಡಿದ. ಆಶ್ಚರ್ಯ! ಅಲ್ಲಿ ಭಗವಂತನ ಹೆಜ್ಜೆ ಗುರುತುಗಳಷ್ಟೇ ಇದ್ದವು. ಭಕ್ತನವಿಲ್ಲ! ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಭಕ್ತ ಥಟ್ಟನೆ ನಿಂತು,' ಪರಮಾತ್ಮ, ನಿನ್ನನ್ನೇ ನಂಬಿದಕ್ಕೆ ಹೀಗೆ ಮಾಡಬಹುದೇ? ನನ್ನ ಸುಖದಲ್ಲಿ ಭಾಗಿಯಾಗಿದ್ದ ನೀನು, ನನ್ನ ಕಷ್ಟದಲ್ಲಿ ಕೈಬಿಡಬಹುದೇ?' ಎಂದು ಪ್ರಶ್ನಿಸಿದ. ಭಗವಂತ 'ಮಿತ್ರ, ನಾನು ನಿನ್ನ ಕೈ ಬಿಟ್ಟಿಲ್ಲ. ನೀನು ನನ್ನ ತೋಳ ತೆಕ್ಕೆಯಲ್ಲಿ, ಎದೆಯ ಅಪ್ಪುಗೆಯಲ್ಲಿ ಇದ್ದೀಯ. ಕಷ್ಟದ ಕಲ್ಲು ಮುಳ್ಳುಗಳ ಹಾದಿಯಲ್ಲಿ ನಿನ್ನ ಕಾಲು ನೋಯದಿರಲಿ ಎಂದು ನಿನ್ನನ್ನು ಎತ್ತಿಕೊಂಡಿದ್ದೇನೆ' ಎಂದು ನುಡಿದ.
ಪರಮಾತ್ಮನ ಶಕ್ತಿಯಲ್ಲಿ ಅಚಲ ನಂಬಿಕೆ ಇಟ್ಟರೆ, ಆ ಶಕ್ತಿ ನಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ ಎಂಬ ಆತ್ಮವಿಶ್ವಾಸ ಈ ಫಲಕ ಪ್ರತಿಮೆಯ ಅಂತರಾರ್ಥ.
ನಂಬಿಕೆ ಮಾನವನಲ್ಲಿ ಇರಬೇಕಾದ ಒಂದು ಗುಣ ವಿಶೇಷ; ಅದು ಜೀವನದ ಮೌಲ್ಯವು ಹೌದು. ಆದರೆ ಅದು ಎಲ್ಲರಲ್ಲೂ ಇರುತ್ತದೆ ಎಂಬ ನಂಬಿಕೆ ಇಲ್ಲ. ಇದ್ದರೆ ಒಳ್ಳೆಯದು, ಅದು ಮನುಷ್ಯ ಮನುಷ್ಯನಲ್ಲಿ ಇಡುವ ನಂಬಿಕೆ ಅಥವಾ ಭರವಸೆ ಆಗಬಹುದು. ಪ್ರಾಣಿಗಳ ಬಗೆಗೆ, ನಿಸರ್ಗದ ಬಗೆಗೆ, ದೈವದ ಬಗೆಗೆ ಮಾನವ ತಳೆದ ಅಪರಿಮಿತ ಪ್ರೇಮವಾಗಬಹುದು. ಎಲ್ಲಿ ವಿಶ್ವಾಸವಿರುತ್ತದೋ, ಎಲ್ಲಿ ಪ್ರಾಮಾಣಿಕತೆ ಇರುತ್ತದೋ ಅಲ್ಲಿ ನಂಬಿಕೆ ಮೂಡುವುದು ಸಹಜ. ಭಕ್ತಿಯ ವ್ಯಾಜದಲ್ಲಿ ಒಂದು ಅವ್ಯಾಜ ಪ್ರೇಮವನ್ನು ಭಗವಂತನಲ್ಲಿ ಇಟ್ಟರೆ, ಅದು ಅಸ್ತಿತ್ವದ ಬಗೆಗಿನ ನಂಬಿಕೆ ಎನಿಸುತ್ತದೆ. ದಾಸವರೇಣ್ಯರು ಹೇಳುವಂತೆ.' ನಂಬಿ ಕೆಟ್ಟವರಿಲ್ಲವೋ' ಎಂಬ ನುಡಿ ಸತ್ಯ. ಅವರು ಭಗವಂತನನ್ನು ಕುರಿತು. 'ಯಾರು ಬದುಕಿದರಯ್ಯ ಹರಿ ನಿನ್ನ ನಂಬಿ' ಎಂಬ ವ್ಯಾಜನಿಂದೆಯೂ ಅಷ್ಟೇ ಸತ್ಯ. ಅದು ಭಕ್ತಿಯ ಕಕ್ಷೆಯಲ್ಲಿ ಬರುವ ನಂಬಿಕೆ.. ಬೈಬಲ್ ಪ್ರಕಾರ ಭಕ್ತರ ಇಟ್ಟಿರುವ 'Faith' ಸಂಪೂರ್ಣ ಸಂವಾದಿಸದ ನಂಬಿಕೆಗೆ. ಹರಿಹರನ ನಂಬಿಯಣ್ಣ ಪರಶಿವನನ್ನು ನಂಬಿ ಬಂದಿದ್ದರಿಂದಲೇ ಅವನ ಪ್ರೀತಿಗೆ ಪಾತ್ರನಾದದ್ದು. ಆ ಕಾರಣ, ಭಕ್ತ ಭಗವಂತನಲ್ಲಿ ಅವಿರತವಾದ ನಂಬಿಕೆಯನ್ನಿಟ್ಟುಕೊಂಡಿರಬೇಕು, ಅವನ ಅಸ್ತಿತ್ವವನ್ನೇ ನಂಬದವನಲ್ಲಿ ಆತ್ಮ ಸಾಕ್ಷಾತ್ಕಾರವಿಲ್ಲ, ಅಪರೋಕ್ಷ ಸಿದ್ಧಿಯೂ ಇಲ್ಲ. ಅಷ್ಟೇ ಅಲ್ಲ ಅವನಿರುವುದು ಬಹುದೂರದಲ್ಲಲ್ಲ. ಹರಿದಾಸರು ಹೇಳುವಂತೆ' ಒಂದೇ ಕೂಗಳತೆ!'.
ಬಸವಣ್ಣ ತನ್ನ ಆರಾಧ್ಯ ದೈವ ಸಂಗಮನಾಥನಲ್ಲಿ ಅಚಲ ವಿಶ್ವಾಸವಿಟ್ಟುಕೊಂಡಿದ್ದರಿಂದಲೇ ಅವನಿಗೆ ಐಕ್ಯತೆಯ ಪರಮ ಸಿದ್ಧಿ ಸಾಧಿತವಾದದ್ದು. ಆತ ತನ್ನ ಅನುಭವವನ್ನು ಒಂದು ವಚನದಲ್ಲಿ ಹೇಳಿದ್ದಾನೆ
ನಂಬರು ನೆಚ್ಚರು ಬರಿದೆ ಕರೆವರು
ನಂಬಲರಿಯರೀ ಲೋಕದ ಮನುಜರು
ನಂಬಿ ಕರೆದೆಡೆ ಓ ಎನ್ನನೇ ಶಿವನು !
ನಂಬದೆ ನೆಚ್ಚದೆ ಬರಿದೆ ಕರೆವರ
ಕೊಂಬ ಮೆಟ್ಟಿ ಕೂಗೆಂದ
ಕೂಡಲಸಂಗಮದೇವ.
ಆದ್ದರಿಂದ ನಾವು ಒಪ್ಪಿ ಸ್ವೀಕರಿಸಿದ ದೈವದ ಬಗೆಗೆ ನಂಬಿಕೆ ಇಡಬೇಕು. ಅಂತಾದರೆ ನಮ್ಮ ಕೂಗಿಗೆ ಆತ ನಿಜಕ್ಕೂ ಓಗೊಡುತ್ತಾನೆ ಎಂಬ ಆತ್ಮವಿಶ್ವಾಸ ಅಣ್ಣನದು. 'ಆರಿಗಾರೂ ಇಲ್ಲ, ಕೆಟ್ಟವಂಗೆ ಕಳೆಯಿಲ್ಲ, ಜಗದ ನಂಟ ನೀನೆ' ಎಂಬ ನಂಬುಗೆ ಅವನದು.
ಸಂದೇಹಕ್ಕೆ ಮಿಗಿಲಾದ ಶತ್ರುವಿಲ್ಲ.
ನಂಬಿಕೆಗೆ ಮಿಗಿಲಾದ ಮಿತ್ರನಿಲ್ಲ.
(ಮಾಹಿತಿ ಕೃಪೆ: ‘ನೂತನ' ಪತ್ರಿಕೆ)
ಚಿತ್ರ ಕೃಪೆ: ಅಂತರ್ಜಾಲ ತಾಣ