‘ನದಿಯ ತೀರ’ ಬಗ್ಗೆ ಎರಡು ಕವನಗಳು

‘ನದಿಯ ತೀರ’ ಬಗ್ಗೆ ಎರಡು ಕವನಗಳು

ಕವನ

ಸಲಿಲದ ತೀರದಿ ಚಾರುವ ತಾಣವು

ಕಲರವ ಜುಳುಜುಳು ನಾದದಲಿ

ಚೆಲುವಿನ ಸಿರಿಯದು ಹಸಿರಿನ ಬೆಟ್ಟವು

ನೆಲೆದಲಿ ಸುಮಧುರ ಗೀತದಲಿ

 

ವಿಹಗದ ಚಾರಣ ಕಣಿವೆಯ ತುಂಬುತ

ಕಹಳೆಯ ಮೊಳಗಿಸಿ ಗಗನದಲಿ

ಸಹನದಿ ಆಲಿಸಿ ಕೇಳಿದ ಕಲರವ

ದಹನವ ಮಾಡಿದೆ ತುಹಿನದಲಿ

 

ಹಸಿರಿನ ಢಾಳವು ಹೆಚ್ಚಿದೆ ಹೊರಗಡೆ

ಉಸಿರಿಗೆ ಜಸವನು ತರುತಲಿದೆ

ಹೆಸರನು ಭುವಿಯದು ನದಿಯೊಳು ಪಕ್ಕದಿ

ಖುಷಿಯದು ಮನದಲಿ ಕೊಡುತಲಿದೆ

 

ಇಂದ್ರನ ವೈಭವ ಕಂಗಳ ಮುಂದಿದೆ

ಚಂದ್ರನ ಲೋಕವು ಗೃಹದಲ್ಲಿ

ಚಂದ್ರಿಕೆ ಬಳಿಯಲಿ ಇರುತಿರೆ ಚಣದಲಿ

ಚಂದ್ರನು ಚಕೋರಿ ಜೊತೆಯಲ್ಲಿ

 

ಮನದಲಿ ತೋಷವು ತುಂಬುತ ಬರುತಿರೆ

ವನದಲಿ ಸುಂದರ ದೃಶ್ಯವದು

ಕನಸಿನ ಅರಮನೆ ಶೋಭಿಸಿ ಎದುರಲಿ

ತನುವಲಿ ಸದಮಲ ಜ್ಞಾನವದು

 

ಪವನವು ಬೀಸಿದೆ ತಂಪನು ಕೊಡುತಲಿ

ದವನದ ಗಂಧದ ತೆರದಲ್ಲಿ

ಕವನವು ಬರೆದಿಹ ಕಬ್ಬಿಗ ಕಾವ್ಯವ

ನವನವ ಭಾವವ ಲಹರಿಯಲಿ

 

ರಾಜನ ತೆರದಲಿ ಬಾಳುವೆ ಗೃಹದಲಿ

ಮೋಜದು ಮಸ್ತಿಯು ದಿನಪೂರ್ತಿ

ಹಾಜರಿ ಇರುವದು ವಿಹರಿಸಿ ವನದಲಿ

ಸಾಜದಿ ಸಾಗುವೆ ಮನಪೂರ್ತಿ

-ಶಂಕರಾನಂದ ಹೆಬ್ಬಾಳ 

****

ನದಿಯ ತೀರದ ಮನೆ

ಹಸಿರಿನ ಶಿಖರವು ಕಾವಲು ನದಿಗದು

ಸುರಭಿಯ ನಡುವಿದೆ ಮಹಲು

ಸುರಗಿರಿ ಹಾಸಿದೆ ಪಚ್ಚೆಯ ಸಿರಿಯನು

ಸುರಕುಜ ಚಂದದ ಬಯಲು||

 

ಸಲಿಲದ ಶುದ್ದತೆ ಚಾಚಿದೆ ನಿಷ್ಠತೆ

ಸುಲಲಿತ ಪರಿಸರ ಚಂದ

ಮೆಲುದನಿ ಸೊಗಡದು ಕೇಳಲು ಬಂಧುರ

ಬೆಲಗಸೆ ಬಿಂಬವು ನಂದ||

 

ಪ್ರಕೃತಿಯ ಸೊಬಗದು ಮೆರೆದಿದೆ ಹಸಿರಲಿ

ಸುಕೃತಿಯ ಕಾರ್ಯದಿ ಮಿಂದು

ವಿಕೃತಿಯು ಮಾಡದೆ ಸಿದ್ದತೆಗೊಂಡಿದೆ

ಸಕೃತುವು ಕುಸಿಯದೆ ಇಂದು||

 

ಮನಸಿಗೆ ಶಾಂತಿಯು ನೆಮ್ಮದಿ ತಂದಿದೆ

ಸನುಮತ ಬಂಧದ ತೀರ

ಹನನಕೆ ಹೆದರದ ಮಂದಿಯ ಧೈರ್ಯದಿ

ಹನಿಹನಿಗೂಡಿದೆ ಸಾರ||

 

ಬಾಳಿನ ಸುಂದರ ಜಾಗದ ಚಾಗವು

ಸೂಳಗಿ ಮಾಡುವ ರಭಸ

ಮಾಳಿಗೆ ಮನೆಯದು ಚಂದದಿ ಮಿನುಗಿದೆ

ನಾಳೆಯ ಕನಸಿನ ಕೆಲಸ||

 

ವಿಪುಲೆಯ ಮೇಲೆಯೆ ವಿಭವದ ಮಂದಿರ

ಸಫಲತೆ ಕಂಡಿದೆ ನೋಡಿ

ವಿಪುಲವು ತಣ್ಣನೆ ಗಾಳಿಯು ಬೀಸುತ

ಕಪಿಲೆಯ ಸಂಗಮ ಮೋಡಿ||

 

ಸುಂದರ ಸದನವು ದಡದಲಿ ನಿಂತಿದೆ

ಗಂಧದ ಸುಗಂಧ ಸೂಸಿ

ಬಂಧವ ಬೆಸೆಯುತ ನೆಮ್ಮದಿ ಕಂಡಿದೆ

ಬಂಧುರ ಬಳಗವ ಬೀಸಿ||

 

ಹಸಿರಿನ ಚಪ್ಪರ ಮಾಮರ ಕೋಗುತ

ಕರೆದಿವೆ ನಿತ್ಯವು ಸಾಗಿ

ಕರಪುಟ ಮುಗಿಯುತ ಗರಿಮೆಯ ಹೊಗಳುತ

ಧರೆಯಲಿ ತಥ್ಯದಿ ಬಾಗಿ||

 

ವೃಕ್ಷವು ಚಾಚುತ ಮುಗಿಲನು ಮುಟ್ಟಿವೆ

ತಕ್ಷಣ ಸುಂದರ ಹಾಸ್ಯ

ಶಿಕ್ಷಣ ಕಲಿಯಲು ಚಂದಿರನಂಗಳ

ದಕ್ಷದಿ ನಡೆಯುವ ಲಾಸ್ಯ||

 

ಭಾವದ ಸಂಗಮ ಸಂಭ್ರಮ ನೋಟವು

ಜೀವದ ಖುಷಿಯದು ಗಂಧ

ದೇವರ ಸಗ್ಗವೆ ಕಂಡಿದೆ ಕಣ್ಣಿಗೆ

ದಾವತಿಯಿಲ್ಲದ ಬಂಧ.....

 

-ಅಭಿಜ್ಞಾ ಪಿ ಎಮ್ ಗೌಡ

 

ಚಿತ್ರ್