‘ನನ್ನೂರು ನನ್ನ ಜನ’ (೪೯) ಅತಂತ್ರವಾದ ಬದುಕಿನಲ್ಲಿಯೂ ಅದಮ್ಯ ಚೈತನ್ಯಗಳು

‘ನನ್ನೂರು ನನ್ನ ಜನ’ (೪೯) ಅತಂತ್ರವಾದ ಬದುಕಿನಲ್ಲಿಯೂ ಅದಮ್ಯ ಚೈತನ್ಯಗಳು

ನಮ್ಮ ಹಿತ್ತಲಿನ ಮಣ್ಣಿನ ಗೋಡೆಯ ಕೆಲಸದಿಂದಾಗಿ ಹಿಂದಿನ ಎರಡು ಮನೆಗಳವರು ಆತ್ಮೀಯರಾದರು. ಒಬ್ಬರು ಶೀನಣ್ಣ. ಅವರ ಮನೆಯಲ್ಲಿ ಮಡದಿ ಬೀಡಿ ಕಟ್ಟುತ್ತಿದ್ದರು. ದೊಡ್ಡವರಾದ ಇಬ್ಬರು ಹೆಣ್ಣುಮಕ್ಕಳು 5ನೇ ಬ್ಲಾಕ್‍ನಲ್ಲಿದ್ದ ಸರಕಾರಿ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದರು. ಉಳಿದ ಇಬ್ಬರು ಚಿಕ್ಕವರು ಗಂಡು ಮಕ್ಕಳು ಇನ್ನೂ ಶಾಲೆಗೆ ಸೇರಿರಲಿಲ್ಲ. ಶೀನಣ್ಣನ ಜೊತೆಗೆ ‘ದರೆ’ ಕಟ್ಟುವ ಕೆಲಸ ಮಾಡಿದ ಅಜ್ಜನ ಹೆಸರು ಮರೆತಿದ್ದರೂ ಅವರ ಹೆಂಡತಿ ವಿಟ್ಟಮ್ಮಕ್ಕನ ಹೆಸರು ನೆನಪಿದೆ. ಇದಕ್ಕೆ ಕಾರಣ ಅವರ ಜೀವನೋತ್ಸಾಹ. ಗಂಡನಿಗೆ ದೂರ ಹೋಗಿ ದುಡಿಯಲು ಸಾಧ್ಯವಿಲ್ಲವಾದರೂ ಆಕೆ ದೂರ ದೂರಕ್ಕೆ ಕೃಷಿ ಕೆಲಸಕ್ಕೆ ಹೋಗಿ ಬರುವಾಗ ಒಂದಿಷ್ಟು ಪಡಿ ಅಕ್ಕಿ, ತರಕಾರಿ ತರುತ್ತಿದ್ದುದರಿಂದ ಜೀವನ ಸಾಗುತ್ತಿತ್ತು. ಹಾಗೆಯೇ ಮದುವೆಯಾದ ಮಗಳು ಆಗಾಗ ಬಂದು ನೋಡಿ ಹೋಗುತ್ತಿದ್ದಳು. ದೂರದ ಮುಂಬೈಯಲ್ಲಿದ್ದ ಮಗ ಅಪರೂಪದಲ್ಲಿ ಹಣ ಕಳುಹಿಸಿ ಕೊಡುತ್ತಿದ್ದಿರಬೇಕು. ಈ ಊರಿನ ಮಂದಿ ಮನೆ ಕಟ್ಟಿಕೊಂಡಂತೆಯೇ ಅಂಗಳದಲ್ಲಿ ಕನಿಷ್ಟ ಎರಡು ತೆಂಗಿನ ಮರ, ಎರಡು ಹಲಸಿನ ಮರ ನೆಟ್ಟಿದ್ದರು. ಮಳೆಗಾಲದಲ್ಲಿ ಅವರ ಹೊಟ್ಟೆ ತುಂಬುವುದಕ್ಕೆ ಹಲಸಿನ ಹಣ್ಣೇ ಅವರ ಬಳಿಯಿದ್ದುದು. ಈ ಎರಡೂ ಮನೆಗಳವರು ಈಗ ನಮಗೂ ಹಲಸಿನ ಹಣ್ಣು ಕೊಡುವ ಉದಾರಿಗಳಾದರು. ವಿಟ್ಟಮ್ಮಕ್ಕ ಒಳ್ಳೆಯ ಹಾಡುಗಾರ್ತಿ. ಪಾಡ್ದನ, ಸಂಧಿ, ಕಬಿತೆಗಳಲ್ಲದೆ ತುಳುವಿನ ಅನೇಕ ಹಾಡುಗಳು ಬಹುಶಃ ನಾಟಕದ ಹಾಡುಗಳನ್ನು ಹಾಡುತ್ತಿದ್ದರು. ಅವರು ಒಮ್ಮೊಮ್ಮೆ ಸಂಜೆ ಹಾಡುತ್ತಿದ್ದುದನ್ನು ಕೇಳಿದ ನಮ್ಮವರು ಅವರಿಂದ ಹಾಡುಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಅವರಿಗೆ ಮುಂದೆ ಅನೇಕ ವೇದಿಕೆಗಳನ್ನು ಕಲ್ಪಿಸಿಕೊಟ್ಟರು. ಆಕೆ ಒಬ್ಬ ಜನಪದ ಹಾಡುಗಾರ್ತಿಯಾಗಿ ಜನಪದ ಸಂಶೋಧಕರ ಪಟ್ಟಿಯಲ್ಲಿ ಸೇರುವಂತಾಯಿತು. ಶೀನಣ್ಣನು ಕೂಡಾ ನಮ್ಮವರ ಜನಪದ ಸಂಶೋಧನೆಯ ಹಲವು ಕ್ಷೇತ್ರ ಕಾರ್ಯಗಳಿಗೆ ಜೊತೆಯಾಗಿ ಹೋಗಿ ನೆರವಾಗಿದ್ದಾರೆ. ನನ್ನ ನೆರೆಯ ಈ ಯಾವ ಮನೆಗಳವರಿಗೂ ‘ಸ್ಥಳೀಯರಿಗೆ ಕೆಲಸ’ ಎನ್ನುವ ಯೋಜನೆಯಲ್ಲಿ ಕೆಲಸ ದೊರಕಿರಲಿಲ್ಲ. ಅವರೆಲ್ಲ ಕೃಷಿ ಕಾರ್ಮಿಕರಾದುದರಿಂದ ಅವರಿಗೆ ದಕ್ಕಬಹುದಾದ ಕೆಲಸದ ಮೀಸಲಾತಿ ಪ್ರಯೋಜನಕ್ಕೆ ಬರಲಿಲ್ಲ ಎಂದರೆ ಹೆಚ್ಚು ಸರಿ. ಇದು ಈ ನಾಲ್ಕೈದು ಮನೆಗಳ ವಿಚಾರ ಮಾತ್ರವಲ್ಲ, ಹೆಚ್ಚಿನ ಮನೆಗಳ ಪರಿಸ್ಥಿತಿ ಹೀಗೆಯೇ ಇತ್ತು. ಮುಖ್ಯ ರಸ್ತೆಯಿಂದ ಬಸ್ಸು ಇಳಿದು ನಮ್ಮ ರಸ್ತೆ ಅಂದರೆ ಬಾರಗ ರಸ್ತೆ ಎಂದು ನಮ್ಮ ವಿಳಾಸದಲ್ಲಿ ನಂದಾವರರು ದಾಖಲಿಸಿಕೊಂಡಿದ್ದರು. ಈ ರಸ್ತೆಯ ತುದಿಯಲ್ಲಿ ಕೋರ್ದಬ್ಬು  ದೈವದ ಗುಡಿ ಇದ್ದು, ಅದನ್ನು ಆರಾಧಿಸುವವರ ಮನೆಗಳೂ ಇದ್ದವು. ಇದು ಕೂಡಾ ಪಣಂಬೂರಿನ ಪ್ರದೇಶದಿಂದ ಜನರೊಂದಿಗೆ ವಲಸೆ ಬಂದ ದೈವವೇ. ಈ ಬಾರಗ ರಸ್ತೆಯಲ್ಲಿ ಮುಖ್ಯ ರಸ್ತೆಗೆ ಕಾಣುವಂತೆ ಇದ್ದ ಒಂದು ಮಹಡಿ ಕಟ್ಟಡ ಇತ್ತು. ಅದರ ಕೆಳಭಾಗ ರೇಷನ್ ಅಂಗಡಿಯಾಗಿತ್ತು. ಅದನ್ನು ‘ಗುಮಾಸ್ತರು’ ಎಂದು ಜನರಿಂದ ಗೌರವದಿಂದ ಕರೆಯಿಸಿ ಕೊಳ್ಳುವವರು ನೋಡಿ ಕೊಳ್ಳುತ್ತಿದ್ದರು. ಅದರ ಮಹಡಿಯಲ್ಲಿ ಇಡೀ ಕಾಟಿಪಳ್ಳಕ್ಕೆ ಇದ್ದ ಒಂದೇ ಆಗಿದ್ದ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರುಗಳು ಬಾಡಿಗೆಗೆ ಇದ್ದರು. ಈ ಕಟ್ಟಡದ ಬಲಬದಿಗೆ ಇದ್ದ ಮನೆ ‘ಕಾಮಾಕ್ಷಿ ನಿಲಯ’ ರಘುವೀರ ಭಟ್ಟರೆನ್ನುವವರದ್ದು. ಇವರು ಕೆ.ಆರ್.ಇ.ಸಿ.ಯಲ್ಲಿ ಟೆಕ್ನಿಷಿಯನ್ ಆಗಿದ್ದರು. ಯಾವುದೇ ಕೆಲಸಗಳನ್ನು ಮಾಡುವಲ್ಲಿ ನೆರವಿಗೆ ದೊರೆಯುತ್ತಿದ್ದರು. ಇವರನ್ನು ನನ್ನ ಸಹೋದ್ಯೋಗಿ ಮಿತ್ರರು ಪರಿಚಯಿಸಿ ಕೊಟ್ಟಿದ್ದರು. ಇದೀಗ ನನ್ನ ಮಗಳು ಬಾಲವಾಡಿಗೆ ಹೋಗುವಾಗ ಅವರ ಮಗನೂ ಅಲ್ಲಿ ಬರುತ್ತಿದ್ದುದರಿಂದ ಸಹಪಾಠಿಗಳಾದರು. ನಮ್ಮ ಮನೆಯ ಇಲೆಕ್ಟ್ರಿಕ್ ವ್ಯವಸ್ಥೆಯ ದುರಸ್ತಿಗೆ ಕರೆದಾಗ ಬಂದು ಸಹಾಯ ಮಾಡುವ ಭಟ್ಟರ ಸ್ನೇಹ, ಅವರ ಮಡದಿ ಸವಿತಾರ ಪ್ರೀತಿ, ಮಕ್ಕಳ ಸ್ನೇಹ ಇವೆಲ್ಲವೂ ಸೇರಿ ನಾವು ಪರಸ್ಪರರು ಮಕ್ಕಳೊಂದಿಗೆ ಅವರಲ್ಲಿಗೆ, ಅವರು ನಮ್ಮಲ್ಲಿಗೆ ಬಂದು ಹೋಗುವ ರೂಢಿ ಬೆಳೆಯಿತು. ಅವರ ಮನೆಯಲ್ಲಿದ್ದ ಮಾವಿನ ಹಣ್ಣು, ದೀವಿ ಹಲಸು ಪ್ರೀತಿಯ ಕಾಣಿಕೆಯಾಗಿ ದೊರೆಯುತ್ತಿದ್ದವು. ಸ್ವಲ್ಪ ಸಮಯ ಅವರ ಮನೆಯಿಂದ ಹಾಲನ್ನೂ ಪಡೆಯುತ್ತಿದ್ದೆವು. ಇಂದಿಗೂ ಅವರ ಮನೆಯ ಪ್ರೀತಿ ವಿಶ್ವಾಸಗಳು ಹಾಗೆಯೇ ಉಳಿದು ಆ ಕಡೆ ಹೋದಾಗ ಮಾತನಾಡಿಸಿ ಬರದೆ ಇದ್ದರೆ ಏನೋ ತಪ್ಪು ಮಾಡಿದ ಭಾವನೆ ನನ್ನದು. ಈ ಎರಡೂ ಹಿತ್ತಲುಗಳನ್ನು ದಾಟಿದರೆ ಎಡಬದಿಯಲ್ಲಿ ಖಾಲಿ ಜಾಗಗಳಿದ್ದುವು. ಬಲಬದಿಯಲ್ಲಿ ಕಾರಂತರ ಮನೆ, ಮೂರು ಮಂದಿ ಅಣ್ಣ-ತಮ್ಮಂದಿರು. ತಂಗಿ ಅನ್ನಪೂರ್ಣ ಗೋವಿಂದದಾಸ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿ. ಅಣ್ಣ-ತಮ್ಮಂದಿರು ಪೌರೋಹಿತ್ಯಕ್ಕೆ, ಅಡುಗೆಗೆ ಹೋಗುತ್ತಿದ್ದರು. ಅನ್ನಪೂರ್ಣಳ ಇಬ್ಬರು ಅಕ್ಕಂದಿರು ಮದುವೆಯಾಗಿ ಅಕ್ಕ-ಪಕ್ಕದಲ್ಲೇ ಇದ್ದು ಬಂದು ಹೋಗುತ್ತಿದ್ದರು, ಅನ್ನಪೂರ್ಣಳ ಸ್ನೇಹದ ಕಾರಣದಿಂದ ಫೋನಿನ ಅಗತ್ಯವಿದ್ದಾಗ ಅವರ ಮನೆಯ ನೆರವು ಪಡೆಯುತ್ತಿದ್ದೆವು. ಇವರೆಲ್ಲರ ಅಮ್ಮ ನಾವು ಓಡಾಡುವಾಗೆಲ್ಲಾ ಆತ್ಮೀಯವಾಗಿ ಮಾತನಾಡುತ್ತಿದ್ದ ಹಿರಿಯ ಮಹಿಳೆ. ಇಷ್ಟು ಮನೆಗಳಾದ ಮೇಲೆ ಮುಖ್ಯರಸ್ತೆಗೆ ಎರಡೂ ದಿಕ್ಕುಗಳಲ್ಲಿ ಅಡ್ಡರಸ್ತೆ. ಈ ಅಡ್ಡ ರಸ್ತೆಯನ್ನು ಹಾಗೆ ಬಿಟ್ಟು ಮುಖ್ಯ ರಸ್ತೆಯಲ್ಲೇ ನಮ್ಮ ಮನೆ ಕಡೆಗೆ ಹೊರಟಾಗ ಎಡಗಡೆಗೆ ಭವಾನಿಶಂಕರ, ಯೋಗೇಶ್ ಹಾಗೂ ಅವರ ತಮ್ಮ ಹೀಗೆ ಯುವಕರೇ ಇದ್ದ ಮನೆ. ಇವರ ಹಿರಿಯ ಅಕ್ಕ ಮದುವೆಯಾಗಿ ಹೋದವರು ಆಗಾಗ ಬಂದು ಹೋಗುತ್ತಿದ್ದವರು ಮಾತಿಗೆ ಸಿಗುತ್ತಿದ್ದರು. ಭವಾನಿ ಶಂಕರ್ ವೆನ್ಲಾಕ್ ಆಸ್ಪತ್ರೆಯಲ್ಲಿ ಕೆಲಸದಲ್ಲಿದ್ದರು. ಅವರ ತಮ್ಮಂದಿರು ಇಬ್ಬರಿಗೂ ಚಿನ್ನದ ಕೆಲಸ. ಮನೆಯಲ್ಲೂ ಹೊರಗೆ ಜ್ಯುವೆಲ್ಲರ್ ಶಾಪ್‍ಗಳಲ್ಲಿಯೂ ಕೆಲಸ ಮಾಡುತ್ತಿದ್ದರು. ಇವರ ಮನೆ ದಾಟಿದರೆ ಒಂದು ಕ್ರಿಶ್ಚಿಯನ್ ಮನೆ, ಆ ಮನೆಯಲ್ಲಿ ಈಗಾಗಲೇ ಅಣ್ಣ-ತಮ್ಮಂದಿರಿಗೆ ಪಾಲಾಗಿ ಅಣ್ಣನ ಮಡದಿ ಹಾಗೂ ಮಗ, ಮತ್ತೊಂದು ಸಂಸಾರ ಬೇರೆ ಬೇರೆಯಾಗಿ ಒಂದೇ ಹಿತ್ತಲಲ್ಲಿ ಇದ್ದರು. ಬಲಗಡೆಗೆ ಒಂದು ದೊಡ್ಡ ಓವರ್‍ಹೆಡ್ ಟ್ಯಾಂಕ್ ಇದ್ದು, 5ನೇ ಬ್ಲಾಕ್‍ಗೆ ಇಲ್ಲಿಂದಲೇ ನೀರು ಸರಬರಾಜು ಆಗುತ್ತಿತ್ತು. ಈ ಸ್ಥಳಕ್ಕೆ ತಾಗಿದಂತೆ ಇದ್ದ ಹಿತ್ತಲಲ್ಲಿ 5ನೇ ಬ್ಲಾಕ್‍ನ ಪ್ರಾಥಮಿಕ ಶಾಲೆಯ ಅಧ್ಯಾಪಕಿ, ಅವರ ತಂದೆ ಹಾಗೂ ತನ್ನ ಮೂವರು ಹೆಣ್ಮಕ್ಕೊಂದಿಗೆ ಇದ್ದರು. ಬಹುಶಃ ನಮ್ಮ 12 ವರ್ಷದ ವಾಸ್ತವ್ಯದಲ್ಲಿ ನಾನು ಮಾತನಾಡದ ವ್ಯಕ್ತಿಗಳಿದ್ದರೆ ಈ ಮನೆಯ ಹಿರಿಯರು. ಮಕ್ಕಳು ಅವರ ಅಗತ್ಯಕ್ಕೆ ತಕ್ಕಂತೆ ಮಾತನಾಡುವ ಅವಕಾಶ ಮಾಡಿಕೊಂಡಿದ್ದರು. ಇವರ ಮನೆಯ ಹಿತ್ತಲಿಗೆ ತಾಗಿದಂತೆ ಇದ್ದ ಮನೆಯಲ್ಲಿ ಅಜ್ಜಿಯೊಬ್ಬಾಕೆ ಇದ್ದರು. ದುಡಿದು ತಿನ್ನುವ ಛಲದ ಆಕೆ ಬೆಳಗ್ಗೆ ಮೊದಲ ಬಸ್ಸಿಗೆ ಮಂಗಳೂರಿನ ಮಾರ್ಕೆಟ್‍ಗೆ ಬಂದು ತನ್ನ ಸಣ್ಣ ಬಂಡವಾಳದೊಂದಿಗೆ ತನಗೆ ಹೊರುವುದಕ್ಕೆ ಸಾಧ್ಯವಾದಷ್ಟು ತರಕಾರಿ ಕೊಂಡು ಕೊಂಡು ಪಣಂಬೂರಿಗೆ ಹಿಂದಿರುಗುತ್ತಿದ್ದರು. ಪಣಂಬೂರಿನಲ್ಲಿ ನಿತ್ಯ ತರಕಾರಿ ಮಾರಾಟ ಮಾಡಿ ಸಂಜೆ 6 ಅಥವಾ 7 ಗಂಟೆಗೆ ಮನೆ ಸೇರುತ್ತಿದ್ದರು. ತಾನಾಯ್ತು ತನ್ನ ದುಡಿಮೆ ಆಯ್ತು ಎನ್ನುವ ಅಜ್ಜಿ ನನಗೆ ಉರ್ವಾಸ್ಟೋರ್ ಮನೆಯ ಬಳಿಯ, ಬಿಜೈ ಮನೆಯ ಬಳಿಯ ಸ್ವಾವಲಂಬಿ ಮಹಿಳೆಯರನ್ನು ನೆನಪಿಸುತ್ತಿದ್ದರು. ಈ ಅಜ್ಜಿಯನ್ನು ನಾನು ಎಂದೂ ನನ್ನ ನಿತ್ಯದ ದಿನಚರಿಯಲ್ಲಿ ಕಾಣಲಿಲ್ಲ. ನನಗೆ ಕಾಲೇಜಿನಲ್ಲಿ ಪರೀಕ್ಷಾ ಕಾರ್ಯಗಳಿದ್ದಾಗ ನಾನು ಕೂಡಾ 8 ಗಂಟೆಯೊಳಗೆ ಕಾಲೇಜಿಗೆ ತಲುಪಬೇಕಾಗಿತ್ತು. ಅಂತಹ ದಿನಗಳಲ್ಲಿ ಈ ಅಜ್ಜಿಯ ಪರಿಚಯವಾಯ್ತು. ಅವರ ವಿಚಾರ ತಿಳಿಯಿತು. ಸಂಜೆಯೂ ನಾನು ಒಮ್ಮೊಮ್ಮೆ ನನ್ನ ಅಮ್ಮನಲ್ಲಿಗೆ ಹೋಗಿ ಮತ್ತೆ ಕತ್ತಲೆಯ ಬಸ್ಸಿಗೆ ಹೊರಟಾಗ ಪಣಂಬೂರು ಬಸ್ ನಿಲ್ದಾಣದಲ್ಲಿ ಈ ಅಜ್ಜಿ ಬಸ್ಸು ಹತ್ತುತ್ತಿದ್ದರು. ಬಸ್ಸಿನಲ್ಲಿ ಸೀಟು ಇರುತ್ತಿರಲಿಲ್ಲ. ಆದರೆ ಮೆಟ್ಟಿಲಿನ ಬದಿಯಲ್ಲಿ ಕುಳಿತವರು ಎದ್ದು ಅಜ್ಜಿಗೆ ಸೀಟು ಕೊಡುತ್ತಿದ್ದರು. ಇಬ್ಬರೂ ಒಂದೇ ಬಸ್ ನಿಲ್ದಾಣದಲ್ಲಿ ಇಳಿದು ಅವರ ಮನೆಯವರೆಗೆ ನಡೆಯುವಾಗ ತನ್ನ ಕಷ್ಟ ಸುಖ ಹಂಚಿಕೊಳ್ಳುತ್ತಿದ್ದರು.

ಆಗಿನ್ನೂ ನನ್ನ ಸ್ತ್ರೀವಾದಿ ನಿಲುವಿನ ಅಧ್ಯಯನ ಹಾಗೂ ಭಾಷಣಗಳ ಪ್ರಾರಂಭ ಕಾಲ. ಈ ಅಜ್ಜಿ ನನಗೆ ಆ ಇಳಿವಯಸ್ಸಿನಲ್ಲಿಯೂ ಮಗನಿಗೆ, ಮಗಳಿಗೆ ಹಂಗಾಗದೇ ಬದುಕುವ ಚೈತನ್ಯ ಉಳಿಸಿಕೊಂಡಿರುವುದರ ಮೂಲಕ  ಸ್ತ್ರೀವಾದಕ್ಕೆ ಸಾಕ್ಷಿಯಾಗಿದ್ದರು. ನನ್ನ ಬಳಿಕ ಮಕ್ಕಳು ಏನೂ ಬೇಕಾದರೂ ಮಾಡಿಕೊಳ್ಳಲಿ ಎನ್ನುತ್ತಿದ್ದರು. ಈ ಅಜ್ಜಿಯ ಮನೆಯು ಕಟ್ಟಿದಂದಿನಿಂದ ಸುಣ್ಣ ಬಣ್ಣ ಕಾಣದ ಹಳೆಯ ಮನೆಯಂತೆ ಇತ್ತು. ಈ ಮನೆ ಹಿತ್ತಲು ಈಗ ಪಾಲು ಮಾಡಿದರೆ ನನ್ನನ್ನು ಯಾರ ಪಾಲಿಗೆ ಸೇರಿಸಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಈ ಅಜ್ಜಿಯದು ಮಾತ್ರವಲ್ಲ; ಇಲ್ಲಿದ್ದ ಅನೇಕ ಮನೆಗಳಲ್ಲಿ ಇದ್ದ ವಿಧವೆಯರಾಗಿದ್ದ ಒಂಟಿ ಮಹಿಳೆಯರ ಸ್ಥಿತಿಯೂ ಆಗಿತ್ತು. ಪಾಲು ಮಾಡಿ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಬಾರದಿರುವ ಮಗಳಂದಿರು ಕೆಲವರಾದರೆ, ತಾಯಿಯೊಂದಿಗೆ ವಿಧವೆ ಮಗಳು, ಮಕ್ಕಳು ಇದ್ದರೆ ದೂರವಿರುವ ಮಗ ಸೊಸೆ, ಇದು ಸಾಮಾನ್ಯ ಚಿತ್ರಣವಾಗಿತ್ತು. ಇವರ ಹಿತ್ತಲಿನ ಮುಂದಿನ ಮನೆಯಲ್ಲಿ ನಿವೃತ್ತ ಸರಕಾರಿ ಉದ್ಯೋಗಿ ಇದ್ದರು. ಅವರಲ್ಲಿ ಅವರ ಹಿರಿಯ ಮಗಳಿಗೆ ಎನ್.ಎಂ.ಪಿ.ಟಿ.ಯಲ್ಲಿ ನೌಕರಿ ಸಿಕ್ಕಿತ್ತು. ಮಗ ಇಂಜಿನಿಯರಿಂಗ್ ಓದುತ್ತಿದ್ದ. ಇನ್ನಿಬ್ಬರು ಹುಡುಗಿಯರು ಕಾಲೇಜಿಗೆ ಹೋಗುತ್ತಿದ್ದವರಲ್ಲಿ ಒಬ್ಬಳು ಶಿಕ್ಷಕ ತರಬೇತಿ ಪಡೆಯುತ್ತಿದ್ದಳು. ಇವರ ಮನೆಯ ಮುಂದೆ ಮತ್ತೆ ಅಡ್ಡ ರಸ್ತೆಗಳು ಎರಡೂ ದಿಕ್ಕಿಗೆ ಸಾಗುತ್ತಿದ್ದು, ರಸ್ತೆಯ ಎದುರಿನ ಜಾಗದಲ್ಲಿ ಸಾರ್ವಜನಿಕ ಬಾವಿ ಇತ್ತು.

ಎಡಗಡೆಯಲ್ಲಿ ಕ್ರಿಶ್ಚಿಯನ್ನರ ಮನೆಯ ಮುಂದೆ ಅಡ್ಡವಾದ ರಸ್ತೆಯ ಪಕ್ಕದಲ್ಲಿ ಒಂಟಿ ಮಹಿಳೆ ವಿಧವೆ ತನ್ನ ಮಗಳೊಂದಿಗೆ ವಾಸಿಸುತ್ತಿದ್ದರು. ಈ ಮಹಿಳೆ ತನ್ನ ಗಂಡ ನಿಧನರಾದ ಕಾರಣದಿಂದ ಮುಂಬೈಯಿಂದ ಊರಿಗೆ ಮರಳಿದವರು. ಗಂಡನ ಕಾರಣದಿಂದಲೇ ಬ್ಯಾಂಕೊಂದರಲ್ಲಿ ಅಟೆಂಡರ್ ಕೆಲಸ ಸಿಕ್ಕಿತ್ತು. ಇವರು ನನ್ನ ದಿನಾ ಬಸ್ಸಿನ ಜೊತೆಗಾತಿಯಾಗಿದ್ದರು. ಇವರ ಪಕ್ಕದ ಮನೆ ನೇಕಾರರ ಮನೆ. ಮನೆಯಲ್ಲೇ ಮಗ್ಗವನ್ನಿಟ್ಟುಕೊಂಡು ಗಂಡ ಹೆಂಡತಿ ನೇಯ್ಗೆ ಕೆಲಸ ಮಾಡುತ್ತಿದ್ದರು. ನನ್ನ ಬಾಲ್ಯದ ದಿನಗಳಲ್ಲಿ ಕಾಪಿಕಾಡಿನಲ್ಲಿದ್ದ ಮಗ್ಗಗಳಲ್ಲಿ ನೇಯುತ್ತಿದ್ದ ಸೀರೆಗಳನ್ನು ನೋಡಿದ್ದೇನೆ, ಉಟ್ಟಿದ್ದೇನೆ. ಇಲ್ಲಿಯೂ ಮಗ್ಗದ ಲಾಳಿಯ ಶಬ್ದ ನನ್ನ ಕಿವಿಗೆ ಹಳೆಯ ಪ್ರೀತಿಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತಿತ್ತು. ಈ ಮನೆಯ ಮಕ್ಕಳು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದರು. ಒಟ್ಟಿನಲ್ಲಿ ಅತಂತ್ರವಾದ ಬದುಕಿನಲ್ಲಿಯೂ ಛಲದಿಂದ ಬದುಕನ್ನು ಕಟ್ಟಿಕೊಳ್ಳುವ ಇವರನ್ನು ಕಂಡಾಗ ದೇಶ ಕಟ್ಟುವುದು ಎಂದರೆ ಇದೇ ಎಂದು ಭಾಸವಾಗುತ್ತಿತ್ತು.

(‘ನನ್ನೂರು ನನ್ನ ಜನ' ಕೃತಿಯಿಂದ ಆಯ್ದ ಅಧ್ಯಾಯ)

ಚಿತ್ರ ಕೃಪೆ: ಇಂಟರ್ನೆಟ್ ತಾಣ