‘ನನ್ನೂರು ನನ್ನ ಜನ’ (೫೦) ನೀರಿನ ಪುರಾಣ

‘ನನ್ನೂರು ನನ್ನ ಜನ’ (೫೦) ನೀರಿನ ಪುರಾಣ

ಹಿಂದೆಯೇ ಹೇಳಿದಂತೆ ಕಾಟಿಪಳ್ಳದ ಪುನರ್ವಸತಿ ವಲಯಗಳಲ್ಲಿ ವ್ಯವಸ್ಥಿತವಾದ ರಸ್ತೆಗಳು, ಪ್ರತಿಯೊಂದು ಬ್ಲಾಕ್‍ಗೂ ಶಾಲೆಗಳೂ, ಹಾಗೆಯೇ ಸಾರ್ವಜನಿಕ ಬಾವಿಗಳೂ ಇದ್ದು ಇಲ್ಲಿಗೆ ಬಂದ ಜನರಿಗೆ ಅಂದರೆ ಪಣಂಬೂರಿನ ಹಳ್ಳಿಯ ಮಂದಿಗೆ ಈ ವ್ಯವಸ್ಥೆಯಲ್ಲಿ ಅಲ್ಲಿ ಅನುಭವಕ್ಕೆ ಬಾರದ ಒಂದು ಸಮಾನತೆಯ ಬಾಳಿನ ಅನುಭವ ದೊರೆತರೆ ತಪ್ಪಿಲ್ಲ. ಯಾಕೆಂದರೆ ಇಲ್ಲಿ ಈಗ ಯಾರೂ ಯಾರಿಗೂ ಹಂಗಿಗರಲ್ಲ. ಹಂಗಿನ ಅರಮನೆಗಿಂತ ವಿಂಗಡದ ಗುಡಿ ಲೇಸು ಎಂಬಂತೆ ತಮ್ಮದೇ ಆದ ಸ್ವಂತದ್ದೆಂದು ಹೇಳುವ ಸೂರು, ಜಾಗ ನೀಡುವ ಅನುಭವವೂ ಕೂಡಾ ಸಾಮಾನ್ಯವಾದುದಲ್ಲ. ಆದರೆ ಇಷ್ಟು ವರ್ಷ ಧಣಿಗಳ ಒಕ್ಕಲಾಗಿ, ಬದುಕಿದವರಿಗೆ ಈ ಹಂಗು ಬಹುಶಃ ಒಂದು ತಲೆಮಾರಿಗೆ ನೆನಪಿರಬಹುದು. ಮುಂದಿನ ಪೀಳಿಗೆಗೆ ಹಿಂದಿನ ಜೀವನಶೈಲಿಗಿಂತ ಭಿನ್ನವಾದ ವಾತಾವರಣ. ಮನೆಮಕ್ಕಳಿಗೋ ಮಾಡಲು ಕೆಲಸವಿಲ್ಲದಾಗ ಕಡ್ಡಾಯವಾಗಿ ಶಾಲೆಗೆ ಹೋಗಬೇಕಾದ ಅನಿವಾರ್ಯತೆ. ಓದಿಗೆ ಒಗ್ಗಿಕೊಳ್ಳುವ ಮನಸ್ಥಿತಿ ಇಲ್ಲದವರಿಗೂ ವಯಸ್ಸಾದಾಗ ತಪ್ಪಿನ ಅರಿವಾಗಿ ಮುಂದಿನ ಪೀಳಿಗೆಗೆ ವಿದ್ಯೆ ಬೇಕೆಂದು ಅನ್ನಿಸುವುದು ಸಹಜವೇ. ಅಂತಹ ಒಂದು ಪಲ್ಲಟಕ್ಕೆ ಮುನ್ನುಡಿ ಬರೆಯುವಂತಿತ್ತು ಇಲ್ಲಿನ ಎಲ್ಲಾ ವ್ಯವಸ್ಥೆಗಳು. ಇರುವ ವ್ಯವಸ್ಥೆಗಳನ್ನು ಉಪಯೋಗಿಸಿಕೊಳ್ಳಲು ಬೇಕಾದ ಅರಿವು ಮಾತ್ರ ಯಾರಿಂದಲೂ ಕಡ ಪಡಕೊಳ್ಳಲಾಗುವುದಿಲ್ಲ. ಅದು ಬದುಕಿನ ಅನುಭವಗಳನ್ನು ಗ್ರಹಿಸಿದಾಗ ದೊರೆಯುವಂತಹದ್ದು. ಆ ಗ್ರಹಿಕೆಗೂ ಅರಿವು ಇರಬೇಕು. ಅರಿವಿಗೂ ಗ್ರಹಿಸುವಂತಹ ಅನುಭವಗಳು ದೊರೆಯಬೇಕು ಎನ್ನುವುದು ನಿಜ.

ನಮ್ಮ ಮನೆಯ ಮುಖ್ಯ ರಸ್ತೆಯಲ್ಲಿ ಎರಡು ಅಡ್ಡರಸ್ತೆಗಳಲ್ಲಿ ಸೈಟುಗಳನ್ನು ಹಂಚಿ ಉಳಿದ ಜಾಗಗಳು ನೀರು ಹೋಗುವ ತಗ್ಗುಗಳೆಲ್ಲಾ ಹಾಗೆಯೇ ಖಾಲಿಯಾಗಿದ್ದವು. ಅಂತಹುದರಲ್ಲಿ ಎತ್ತರದ ಒಂದು ಜಾಗದಲ್ಲಿ ಸಾರ್ವಜನಿಕ ಬಾವಿ ಇತ್ತು. ಕೆಲವು ಮನೆಗಳವರಿಗೆ ಎರಡು ಮೂರು ಸೈಟು ಸಿಕ್ಕಿದ್ದು, ಅವರು ತಂದೆ ತಾಯಿಗಳೊಂದಿಗೆ ಅವಿವಾಹಿತ ಅಣ್ಣ-ತಮ್ಮಂದಿರೆಲ್ಲ ಒಟ್ಟಿಗಿದ್ದ ಕಡೆ ಅವರ ಸ್ಥಳಗಳಲ್ಲಿ ಖಾಸಗಿ ತೆರೆದ ಬಾವಿಗಳಿದ್ದುವು. ಇನ್ನು ಕೆಲವು ಅನುಕೂಲಸ್ಥರು ಕೂಡಾ ತಮ್ಮ ಜಾಗದಲ್ಲಿ ಬಾವಿ ತೋಡಿ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದರು. ಎತ್ತರದ ಪದವಿನಂತಹ, ಜೊತೆಗೆ ಮುರಕಲ್ಲಿನ ಈ ಪ್ರದೇಶದಲ್ಲಿ ಬಾವಿಯಲ್ಲಿ ನೀರು ಸಿಗುವುದು ಕೂಡಾ ಒಂದು ಅದೃಷ್ಟ ವಾದುದರಿಂದ ಅದಕ್ಕೆ ಹಣದ ಕೊರತೆಯಿರುವವರು ಬಾವಿ ತೋಡಿಸುವ ಕೆಲಸಕ್ಕೆ ಕೈ ಹಾಕುವುದು ಸಾಧ್ಯವಿರಲಿಲ್ಲ. ಅವರಿಗೆ ಅಲ್ಲಿ ಇದ್ದ ನಳ್ಳಿ ನೀರು ಸಾಕಾಗದೆ ಇದ್ದಲ್ಲಿ ಸಾರ್ವಜನಿಕ ಬಾವಿಯ ನೀರೇ ಆಶ್ರಯವಾಗಿತ್ತು. ಮಳೆಗಾಲ ಮುಗಿದ ಮೇಲೆ ಬೇಸಿಗೆ ಪ್ರಾರಂಭವಾದಂತೆ, ನಳ್ಳಿ ನೀರು ಸಾಕಾಗದೆ ಎಲ್ಲರಿಗೂ ಬಾವಿ ನೀರು ಬೇಕಾಗುತ್ತಿತ್ತು. ಆದರೆ ನೀರು ಸೇದಲು ಹಗ್ಗ ತರುವುದು ಕೂಡಾ ಎಲ್ಲರಿಗೆ ಸಾಧ್ಯವಿರಲಿಲ್ಲ ಎನ್ನುವುದು ಕೂಡಾ ವಾಸ್ತವ. ನಮ್ಮಲ್ಲಿ ಬಾವಿ ಹಗ್ಗ, ರಾಟೆ ಮನೆಯ ಆಸ್ತಿ ಎಂಬಂತೆ ಹಿಂದಿನ ಮನೆಗಳಿಗೆ ಅಗತ್ಯವಾದುದು ಈ ಮನೆಗೂ ನಮ್ಮ ಜೊತೆಗೆ ಬಂದಿತ್ತು. ಜೊತೆಗೆ ಹಳ್ಳಿಯ ಜನ ತಮ್ಮಲ್ಲಿ ಇಲ್ಲದಿರುವ ವಸ್ತುಗಳನ್ನು ಕೇಳಿ ಪಡೆಯುವುದಕ್ಕೆ ಹಿಂಜರಿಯುವುದಿಲ್ಲ. ಮಾತ್ರವಲ್ಲ ಒಮ್ಮೊಮ್ಮೆ ಇನ್ನೊಬ್ಬರ ವಸ್ತುವನ್ನು ಕೇಳದೆಯೂ ಉಪಯೋಗಿಸುವ ಸಲುಗೆ ಉಳ್ಳವರು ಎನ್ನಬಹುದೇನೋ. ಆದರೆ ನನ್ನಂತಹ ಪೇಟೆಯವಳಿಗೆ ನಮ್ಮ ಮನೆಗೆ ಬೇಕಾದ ವಸ್ತುಗಳು ನಮ್ಮಲ್ಲಿ ಇರಬೇಕು. ಇನ್ನೊಬ್ಬರಿಂದ ಬೇಡಿ ಪಡೆಯುವುದು ಎಂದರೆ ಅದು ಅವಮಾನ. ಇನ್ನು ಕೇಳದೆ ಉಪಯೋಗಿಸುವುದು ಸಾಧ್ಯವೇ ಇಲ್ಲದ ವಿಚಾರ ಹೌದಾದರೂ, ಮನುಷ್ಯ ಎಂದೂ ಸಂಪೂರ್ಣ ಸ್ವಾವಲಂಬಿಯಾಗಲು ಸಾಧ್ಯವಿಲ್ಲ ಎನ್ನುವ ಸತ್ಯವೂ ತಿಳಿದದ್ದೇ. ನಾವು ಬಾವಿಯಿಂದ ನೀರು ತರಲು ರಾಟೆ ಹಗ್ಗ ಹಾಕಿದ ತಕ್ಷಣ ಬಾವಿಯ ಅಕ್ಕಪಕ್ಕದ ಮನೆಯವರು ತಾವೂ ಕೊಡಗಳೊಂದಿಗೆ ಬರುತ್ತಿದ್ದರು. ನನ್ನ ಸೊಸೆಯೊಂದಿಗೆ ನೀರು ಸೇದಲು ಸಹಾಯ ಮಾಡುವುದರೊಂದಿಗೆ ತಮ್ಮ ಮನೆಗೂ ನೀರು ಸೇದಿ ಕೊಂಡೊಯ್ಯುತ್ತಿದ್ದರು. ಹೀಗೆ ಬರುವವರು ತಮ್ಮ ತಮ್ಮೊಳಗೆ ಸಿಟ್ಟು, ಸೆಡವು ಇರುವವರು ಇರುತ್ತಿದ್ದು, ನಮಗೆ ಅವರೊಳಗೆ ಪಕ್ಷಪಾತ ಮಾಡಲು ಸಾಧ್ಯವಾಗದ್ದು ನಮ್ಮ ಸಮಸ್ಯೆಯಲ್ಲ. ಅವರವರ ಸಮಸ್ಯೆ. ಸೊಸೆ ಈ ಬಗ್ಗೆ ನನ್ನಲ್ಲಿ ಹೇಳಿಕೊಂಡರೆ ನಮಗೆ ಬೇಕಾದಷ್ಟು ನೀರು ಸೇದಿಯಾದ ಬಳಿಕ ನೀನು ರಾಟೆ ಹಗ್ಗ ಬಿಟ್ಟು ಬಾ, ಉಳಿದವರು ಅವರವರೇ ಕೊಂಡು ಹೋಗಲಿ, ಬಳಿಕ ರಾಟೆ, ಹಗ್ಗ ಮನೆಗೆ ತಂದು ಕೊಡುವಂತೆ ಹೇಳು ಎಂದು ತಿಳಿಸಿದೆ. ಇದು ಕೂಡಾ ಸಮಸ್ಯೆಯ ಪರಿಹಾರವಾಗಲಿಲ್ಲ. ತಂದು ಕೊಡದೆ ಹೋದಾಗ ಮಾವ ಬಹಳ ನೆನಪಿನಿಂದ ಹೋಗಿ ತರುತ್ತಿದ್ದುದರ ಜೊತೆಗೆ ಮುಂದೆ ಹಗ್ಗ ರಾಟೆ ಬಾವಿಯಲ್ಲಿ ಬಿಟ್ಟು ಬರಬಾರದೆನ್ನುವ ತೀರ್ಮಾನವನ್ನೇ ಮಾಡಿದರು. ಅವರಿಗೆ ಹಗ್ಗ ಸವೆಯುತ್ತದೆ ತುಂಡಾಗುತ್ತದೆ ಎಂಬ ಚಿಂತೆ. ಅವರು ಹಾಗೆಯೇ ಜಾಗ್ರತೆ ಮಾಡುತ್ತಿದ್ದುದರಿಂದಲೇ ಕೋಟೆಕಾರಿನ ಹಗ್ಗ ಕಾಟಿಪಳ್ಳದವರೆಗೂ ಹಾಗೆಯೇ ಉಳಿದಿತ್ತು. ಒದ್ದೆಯಾದ ಹಗ್ಗವನ್ನು ಬಿಸಿಲಲ್ಲಿ ಉದ್ದಕ್ಕೆ ನೇರವಾಗಿಟ್ಟು ಒಣಗಿಸಿ ಬಳಿಕ ಸುತ್ತಿ ಇಡುತ್ತಿದ್ದರು. ಅವರು ಕಷ್ಟದಿಂದ ಬದುಕು ಕಟ್ಟಿಕೊಂಡವರಲ್ಲವೇ? ಆದ್ದರಿಂದ ಬಾವಿಯ ರಾಟೆ, ಹಗ್ಗಗಳೂ ಅವರ ಸಂಪತ್ತಿನ ಭಾಗವೇ. ರಾಟೆಗೆ ಎಣ್ಣೆ ಹಚ್ಚಿ ಮಳೆಗಾಲದಲ್ಲಿ ಜತನ ಮಾಡಿ ಇಡುವವರೂ ಅವರೇ. ಆದ್ದರಿಂದ ಆ ಬಗ್ಗೆ ನಾನು ಊರಿಗೆ ಉಪಕಾರವಾಗಲಿ ಎಂದು ಹೇಳುವಷ್ಟು ಶಕ್ತಳಾಗಿರಲಿಲ್ಲ. ಸೊಸೆಗೆ ಯಾರು ಹಿತವರಾಗಿದ್ದರೋ ಅವರು ಪರಸ್ಪರ ಸಹಕರಿಸುತ್ತಿದ್ದರು.

ಕೇರಿಗೆ ಬಂದವಳು ನೀರಿಗೆ ಬಾರದಿರುತ್ತಾಳೆಯೇ? ಎನ್ನುವಂತೆ ನಾವು ಈ ಊರಿಗೆ ಬಂದವರು ಬಾವಿಗೆ ಹೋದುದೂ ಆಯ್ತು. ಬಾವಿಕಟ್ಟೆ ಎನ್ನುವುದು ಊರಿನ ಸುದ್ದಿ ಬಿತ್ತರದ ಕಟ್ಟೆಯಾಗಿದ್ದರೂ, ಅಲ್ಲಿನ ಸುದ್ದಿಗಳನ್ನು ಸೊಸೆಯಾಗಲಿ, ಮಾವನಾಗಲಿ ನನ್ನಲ್ಲಿ ಹೇಳುವ ಸಾಧ್ಯತೆ ಕಡಿಮೆ. ಒಂದು ನನಗೆ ಕೇಳುವುದಕ್ಕೆ ಸಮಯವಿಲ್ಲ ಎನ್ನುವುದಾದರೆ, ಇನ್ನೊಂದು ನಾನು ಕೂಡಲೇ ನಮಗೆ ಯಾಕೆ ಅವರ ವಿಚಾರ ಎಂದು ಕೇಳಿಸಿಕೊಳ್ಳದಿರುವುದು. ಇನ್ನು ಸಾರ್ವಜನಿಕ ನಳ್ಳಿಯ ಬಗ್ಗೆ ಬರೆದರೆ ಅದು ನಳ್ಳಿ ಪುರಾಣವೋ, ನೀರಿನ ಪುರಾಣವೋ ಆದೀತು. ಸುಮಾರು ಹನ್ನೆರಡೂ ವರ್ಷಗಳಿಗೂ ಮೀರಿದ ಅಲ್ಲಿನ ವಾಸ್ತವ್ಯದಲ್ಲಿ ಹತ್ತು ವರ್ಷ ನಳ್ಳಿ ನೀರಿನ ಆಶ್ರಯದಲ್ಲೇ ಇದ್ದವರು ನೀರು ಹಿಡಿದು ಒಯ್ಯುವ ಶ್ರಮದ ಜತೆಗೆ ಪಟ್ಟ ಮಾನಸಿಕ ಹಿಂಸೆಯಿಂದ ಕೊನೆಗೂ ಯಾರ ಮಾತನ್ನೂ ಕೇಳದೆ ನಮ್ಮ ಹಿತ್ತಲಲ್ಲಿ ಬಾವಿ ತೋಡುವ ನಿರ್ಧಾರ ಮಾಡಿದೆವು. ನೀರು ಸಿಕ್ಕಿತು. ಅಕ್ಕಪಕ್ಕದ ಮನೆಯವರಿಗೂ ನಮ್ಮ ಮನೆಯ ಬಾವಿಯ ನೀರು ಸಿಕ್ಕಿತು. ಆಗ ಅವರು ಜಗಳಾಡಿದವರು ಎಂದು ಭಾವಿಸಿ ನೀರು ಇಲ್ಲ ಎಂದು ಹೇಳುವ ಅಮಾನುಷರಾಗಲಿಲ್ಲ ಎನ್ನುವುದು ನಮ್ಮ ತೃಪ್ತಿ. ಯಾಕೆಂದರೆ ನೀರನ್ನು ಮನುಷ್ಯ ಸೃಷ್ಟಿ ಮಾಡಲಾರ ತಾನೇ? ಅದು ಪ್ರಕೃತಿದತ್ತವಾದುದು, ಎಲ್ಲರಿಗೂ ಸೇರಿದ್ದು. ಆದರೆ ನಾವು ಇನ್ನೊಬ್ಬರ ಖಾಸಗಿ ಬಾವಿಯಿಂದ ತರುವಾಗಲೂ ಮಾನವೀಯತೆಯನ್ನು ನಿರೀಕ್ಷಿಸುತ್ತೇವೆ ಎನ್ನುವುದು ಕೂಡಾ ಸಹಜವೇ.

ನಳ್ಳಿ ನೀರು ಹಿಡಿಯುವ ಶ್ರಮಕ್ಕಿಂತ ಉಂಟಾದ ಮಾನಸಿಕ ಹಿಂಸೆಯನ್ನು ನೆನಪಿಸಿಕೊಂಡರೆ ಈಗಲೂ ನೆನಪಾಗುವುದು ಅಂದಿನ ಜನರ ಮನಸ್ಥಿತಿ. ಬಹುಶಃ ಅಂದಿನ ಜನ ಪರಸ್ಪರ ವೈರಿಗಳಂತೆ ಕಾಣುವುದಕ್ಕೆ ಕಾರಣ ಈ ನಳ್ಳಿಯೇ ಎಂದರೂ ಸರಿಯಾದೀತು. ನಳ್ಳಿಯೆಂದರೆ ನಳ್ಳಿಯಲ್ಲ, ನಳ್ಳಿಯಲ್ಲಿ ಬರುವ ನೀರು ಅದು ಸಾರ್ವಜನಿಕರ ಸೇವೆಗಾಗಿಯೇ ಇದ್ದುದಲ್ಲವೇ? ಇಂದಿನ ವರ್ತಮಾನದ ದಿನಗಳಲ್ಲಿ ವಿಜ್ಞಾನಿಗಳು, ತಜ್ಞರು ಹೇಳುತ್ತಿದ್ದಾರೆ ಜಗತ್ತಿನಲ್ಲಿ ಇನ್ನು ಮೂರನೇ ಯುದ್ಧ ನಡೆಯುವುದಾದರೆ ಅದು ನೀರಿಗಾಗಿ ಎಂದು. ಬಹುಶಃ ಈ ನೀರಿನ ಜಗಳ 80ರ ದಶಕದಲ್ಲಿ ಮಹಿಳೆಯರಿಂದಲೇ ಪ್ರಾರಂಭವಾಗಿದೆ ಅನ್ನಿಸುತ್ತದೆ. ಕೊಟ್ಟಾರ ಕ್ರಾಸಿನ ಮನೆಯಲ್ಲಿದ್ದಾಗಲೇ ನೀರಿಗಾಗಿ ಸಣ್ಣಮಟ್ಟದ ಜಗಳದಲ್ಲಿ ನಾನೂ ಪಾಲ್ಗೊಳ್ಳಬೇಕಾಗಿತ್ತಲ್ಲಾ! ಆ ನೆನಪಿನೊಂದಿಗೆ ಈಗ ಕೃಷ್ಣಾಪುರದಲ್ಲೂ ನಿತ್ಯವೂ ಜಗಳವಾಡಬೇಕಾದ, ಕೆಲವರ ಗಂಟುಮುಖಗಳನ್ನು ನೋಡಬೇಕಾದ ಸನ್ನಿವೇಶ ನನ್ನಂತಹ ವಿದ್ಯಾವಂತಳಿಗೂ ಬಂತಲ್ಲಾ ಎಂದು ನಾನೇ ನನ್ನ ಬಗ್ಗೆ ನಾಚಿಕೆ ಪಟ್ಟುಕೊಳ್ಳುವಂತಾದುದು ಸುಳ್ಳಲ್ಲ. ನಮ್ಮ ಮನೆಯ ಮುಖ್ಯರಸ್ತೆಗೆ ಸಿಗುವ ನಾಲ್ಕನೆ ಅಡ್ಡರಸ್ತೆ ಎತ್ತರಕ್ಕೆ ಸಾಗಿತ್ತು. ಆ ರಸ್ತೆಯಲ್ಲಿ ನಮ್ಮ ಸುತ್ತಲ ನಾಲ್ಕೂ ದಿಕ್ಕುಗಳಲ್ಲಿ ಇದ್ದ ಸುಮಾರು ಆರೇಳು ಮನೆಗಳಿಗೆ ಈ ನಳ್ಳಿಯಿಂದಲೇ ನೀರು ಹಿಡಿಯಬೇಕಾಗಿತ್ತು. ಅಲ್ಲದೆ ಈಗಾಗಲೇ ಹೇಳಿದಂತೆ ಖಾಲಿ ಸ್ಥಳಗಳಲ್ಲಿ ಅಕ್ರಮವಾಗಿ ಕುಳಿತು ಸಕ್ರಮವಾದ ನಾಲ್ಕೈದು ಮನೆಗಳವರೂ ಇಲ್ಲಿಯೇ ನೀರು ಹಿಡಿಯುತ್ತಿದ್ದರು. ಈ ನಳ್ಳಿ ನೀರು ಯಾವಾಗ ಬರುತ್ತದೆ ಎನ್ನುವ ಬಗ್ಗೆ ಸರಿಯಾದ ನಿಗದಿತ ಸಮಯ ಎಂಬುದು ಇರಲಿಲ್ಲ. ಬೆಳಗ್ಗೆ ಎಂಟು ಗಂಟೆಗೆ ಬಂದರೆ ನಮ್ಮ ಮನೆಯಲ್ಲಂತೂ, ಕಾಲೇಜಿಗೆ ಹೊರಡುವ ಗಡಿಬಿಡಿ. ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಅಡುಗೆ ಕೆಲಸಗಳ ನಡುವೆ ನೀರು ತರುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಸರತಿ ಸಾಲಲ್ಲಿ ಕೊಡ ಇಟ್ಟು ಉಳಿದ ಮನೆಯ ಹೆಂಗಸರು, ಮಕ್ಕಳು ನಿಂತರೆ, ಒಂದು ಗಂಟೆಯೊಳಗೆ ನೀರಿನ ಪೂರೈಕೆ ನಿಂತೇ ಹೋಗುವಷ್ಟರಲ್ಲಿ ನಮಗೆ ನೀರು ಸಿಗದಂತೆ ಆಗುತ್ತಿತ್ತು. ಆದರೂ ಈ ಸಂದರ್ಭದಲ್ಲಿ ನೀರು ತುಂಬುವ ಜವಾಬ್ದಾರಿಯನ್ನು ನನ್ನ ಅತ್ತೆ ಹೊತ್ತುಕೊಂಡಂತೆ ಎರಡು ಚಿಕ್ಕ ಕೊಡಗಳನ್ನು ಕೊಂಡುಹೋಗಿ ತರುತ್ತಿದ್ದರು. ಈ ವಯಸ್ಸಿಗೆ ಅವರಿಗೆ ಶುಚಿತ್ವದ ಗೀಳು ಕೂಡಾ ಅಂಟಿಕೊಂಡಂತೆ ಇತ್ತು. ತಾನೇ ಆ ಕೊಡಗಳನ್ನು ತಿಕ್ಕಿ ತೊಳೆದು ಸರತಿ ಸಾಲಿನಲ್ಲಿ ಕೊಡ ಇಟ್ಟು ನೀರು ತುಂಬಿ ನಮ್ಮ ಮನೆಯ ಏಳೆಂಟು ಮೆಟ್ಟಿಲು ಹತ್ತಿ ನೀರು ತರುತ್ತಿದ್ದರು. ಜೊತೆಗೆ ತಾನು ತರುವ ಕೊಡಕ್ಕೆ ತನ್ನ ಸೆರಗು ಮುಚ್ಚಿಕೊಂಡು ತರುವುದನ್ನು ಕಂಡು ಎಲ್ಲರೂ ನಗುವವರೇ. ನಾವೂ ಅದನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಅವರು ತಂದ ನೀರು ಅಡುಗೆಗೆ, ಅವರ ಸ್ನಾನಕ್ಕೆ ಮತ್ತು ಅವರ ಬಟ್ಟೆ ಒಗೆಯುವುದಕ್ಕೆ ಎಂಬಂತೆ ತರುವಲ್ಲಿ ಸರತಿ ಸಾಲಿನ ನಿಯಮ ಮೀರಿ ಉಳಿದವರಿಂದ ‘ಮುದುಕಿ’ ಎಂದೆನ್ನಿಸಿಕೊಂಡು ಬೈಗುಳವನ್ನೂ ಕೇಳಿಸಿಕೊಳ್ಳುತ್ತಿದ್ದರು. ಅವರು ಅದಕ್ಕೆ ‘ಕ್ಯಾರೇ’ ಅನ್ನುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪರವಾಗಿ ವಾದಿಸುವವರೂ ಇದ್ದರು. ಅವರಿಗೆ ನೀರು ಹಿಡಿದು ಕೊಡುವ ಮೂಲಕ ಜಗಳಕ್ಕೆ ಕಾರಣವಾಗುವವರೂ ಇದ್ದಂತೆ ಇಂತಹ ಜಗಳಗಳಲ್ಲಿ ಮನರಂಜನೆ ಪಡೆಯುವವರೂ ಇದ್ದರು. ಇವು ನನಗೆ ಮುಜುಗರ ಉಂಟುಮಾಡುತ್ತಿದ್ದರೂ ನಾನು ಇದರೊಳಗೆ ಪ್ರವೇಶಿಸಲಿಲ್ಲ. ಯಾಕೆಂದರೆ ಎರಡೂ ಕಡೆ ನ್ಯಾಯ ಸೋತಿರುತ್ತಿತ್ತು. ಅಲ್ಲದೆ ಅವರವರ ಪರಸ್ಪರ ಅಸಮಾಧಾನಗಳನ್ನು ಹೊರಹಾಕಲು ನೆಪಗಳಿಗೆ ಕಾಯುತ್ತಿದ್ದವರಿಗೆ ನನ್ನ ಅತ್ತೆ ಸುಲಭವಾಗಿ ದೊರೆಯುತ್ತಿದ್ದುದೂ ನಿಜವೇ. ಅತ್ತೆಗೆ ಈ ಎಲ್ಲಾ ಉಸಾಬರಿಗಳು ಅಗತ್ಯವಿಲ್ಲದಿದ್ದರೂ ನೀರು ತರುವಲ್ಲಿ ಅವರು ಗೆದ್ದ ಸಂತೋಷ ಮಾತ್ರ ಮುಖ್ಯವಾಗಿತ್ತು. ಏನಿದ್ದರೂ ಈ ನೀರಿನಿಂದ ಉಂಟಾಗುತ್ತಿದ್ದ ಮಾನಸಿಕ ಹಿಂಸೆಯ ಜೊತೆಗಿನ ಅವ್ಯವಸ್ಥೆಗೆ ಪರಿಹಾರ ಹುಡುಕಲು ಪ್ರಯತ್ನಿಸಿದೆ. ನೀರು ಬಿಡುವ ಯುವಕ ನಮ್ಮ ರಸ್ತೆಯಲ್ಲೇ ಓಡಾಡುವವನಾಗಿದ್ದುದರಿಂದ ನಮಗೂ ಅನುಕೂಲವಾಗುವಂತೆ ನೀರು ಬಿಡಲು ಹೇಳಿದೆ. ಅವನು ನನ್ನ ಮಾತಿನಂತೆ ನನ್ನ ಸಮಯಕ್ಕೆ ನೀರು ಬಿಡುವ ಕೆಲಸ ಮಾಡಿದ. ಇದರಿಂದ ಬೇರೆ ಯಾರಿಗೂ ತೊಂದರೆಯಾಗುವುದಕ್ಕೆ ಅವಕಾಶವಿರಲಿಲ್ಲ. ಆದರೆ ಸಮಯದ ಬದಲಾವಣೆ ನನ್ನಿಂದಾಗಿ ಆದುದು ಎಂದು ತಿಳಿದ ಕೆಲವರಿಗೆ ಅದೇನೋ ಹೊಟ್ಟೆಯುರಿ ಶುರುವಾಯಿತು. ಅವನನ್ನು ಆಡಿಕೊಳ್ಳಲು ಶುರುಮಾಡಿದರು. “ನಿನ್ನೆ-ಮೊನ್ನೆ ಬಂದವರು ಹೇಳಿದಂತೆ ಕೇಳ್ತಾನೆ, ನಾವೆಲ್ಲಾ ಇಲ್ಲಿ ಸತ್ತಿದ್ದೇವಾ?” ಎನ್ನುವ ಅನಗತ್ಯ ಮಾತುಗಳು. ಜೊತೆಗೆ ಈ ಪೇಟೆಯವರೆಲ್ಲಾ ಯಾಕೆ ಹೀಗೆ ಇಲ್ಲಿ ಬರುತ್ತಾರೆ ಎಂಬ ಪ್ರಶ್ನೆ ಬೇರೆ. ಇಂತಹ ಮಾತುಗಳನ್ನೆಲ್ಲಾ ಕೇಳಿದಾಗ ಅನಕ್ಷರಸ್ಥರಾದ ಈ ಹಿಂದುಳಿದ ಮಹಿಳೆಯರಿಗೆ ಲೋಕಜ್ಞಾನ ಇಲ್ಲದಿರುವ ಬಗ್ಗೆ, ಹಾಗೆಯೇ ತಮ್ಮಂತೆಯೇ ಒಂದು ಹಿಂದುಳಿದ ಜಾತಿಯ ಮಂದಿ ಹೀಗೆ ಮೇಲ್ಜಾತಿಯವರಂತೆ ವಿದ್ಯಾವಂತರಾಗಿರುವುದನ್ನು ಸಹಿಸಲು ಸಾಧ್ಯವಾಗದ ಅಸಹನೆ ಇದೆ ಎಂದು ನನಗೆ ಅರ್ಥವಾಗುತ್ತಿತ್ತು. ಇದು ಕೇವಲ ಇಲ್ಲಿನ ಮಹಿಳೆಯರದಲ್ಲ ಎನ್ನುವ ಪರಿಜ್ಞಾನವೂ ನನಗಿತ್ತು. ಅದು ಗಂಡಸರು ವಿದ್ಯಾವಂತರಾಗಿರುವ ಬಗೆಗೆ ಇರುವ ಅಸಹನೆಯಾಗಿರದೆ ನಮ್ಮಂತೆ ಇರಬೇಕಾದ ಹೆಂಗಸೊಬ್ಬಳು ಹೀಗೆ ಮೆರೆಯುತ್ತಿರುವುದು ಕಂಡಾಗ ಅವರಿಗೆ ಅಸಹನೆಯ ಮೂಲ ಕಾರಣ ವೈಯುಕ್ತಿಕವಾದುದಲ್ಲ, ಅದು ಒಂದು ಸಾಮಾಜಿಕ ಸ್ಥಿತ್ಯಂತರದ ಹಂತದಲ್ಲಿ ಆಗಬಹುದಾದ ಸಹಜವಾದ ಮಾನಸಿಕ ಕ್ರಿಯೆ. ಇದು ಅನಕ್ಷರಸ್ಥ ಕುಟುಂಬದೊಳಗೆ ಒಬ್ಬ ಹೆಣ್ಣು ವಿದ್ಯಾವಂತಳಾಗಿ ಪ್ರವೇಶಿಸಿದಾಗಲೂ ಅದು ಯಾವುದೇ ಜಾತಿ, ಯಾವುದೇ ಧರ್ಮವಾಗಿರಲಿ ಅಲ್ಲಿಯೂ ಇಂತಹುದೇ ಅಸಹನೆಯನ್ನು ಅವಳು ಎದುರಿಸಬೇಕಾಗುತ್ತದೆ ಎನ್ನುವುದು ನನ್ನ ಅನುಭವವೂ ಆಗಿದ್ದರಿಂದ ಇಂತಹ ಕಾರಣಗಳಿಂದ ನಾನು ಯಾರನ್ನೂ ದ್ವೇಷಿಸುವ ಅಗತ್ಯವಿಲ್ಲ ಎಂಬುದು ನನಗೆ ತಿಳಿದಿತ್ತು.

(‘ನನ್ನೂರು ನನ್ನ ಜನ' ಕೃತಿಯಿಂದ ಆಯ್ದ ಅಧ್ಯಾಯ)

ಚಿತ್ರ ಕೃಪೆ: ಇಂಟರ್ನೆಟ್ ತಾಣ