‘ನಮ್ಮ ಬೆಳ್ಳೆ - ಕಟ್ಟಿಂಗೇರಿ’ ಪರಂಪರೆ, ಇತಿಹಾಸ

‘ನಮ್ಮ ಬೆಳ್ಳೆ - ಕಟ್ಟಿಂಗೇರಿ’ ಪರಂಪರೆ, ಇತಿಹಾಸ

ಪುಸ್ತಕದ ಲೇಖಕ/ಕವಿಯ ಹೆಸರು
ಮುದ್ದು ಮೂಡುಬೆಳ್ಳೆ ಹಾಗೂ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ
ಪ್ರಕಾಶಕರು
ಸಾಹಿತ್ಯ ಸಂಸ್ಕೃತಿ ವೇದಿಕೆ, ಮಾತಾ ಕುಟೀರ, ಮೂಡುಬೆಳ್ಳೆ - 576120, ಕಾಪು ತಾಲೂಕು, ಉಡುಪಿ ಜಿಲ್ಲೆ
ಪುಸ್ತಕದ ಬೆಲೆ
ರೂ. 70.00, ಮುದ್ರಣ: 2019

*ಮುದ್ದು ಮೂಡುಬೆಳ್ಳೆ ಹಾಗೂ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಇವರ "ನಮ್ಮ ಬೆಳ್ಳೆ - ಕಟ್ಟಿಂಗೇರಿ: ಪರಂಪರೆ, ಇತಿಹಾಸ"*

ಬೆಳ್ಳೆಯ ಸಾಹಿತ್ಯ ಸಂಸ್ಕೃತಿ ವೇದಿಕೆಯು (ಮಾತಾ ಕುಟೀರ, ಮೂಡುಬೆಳ್ಳೆ - 576120, ಕಾಪು ತಾಲೂಕು, ಉಡುಪಿ ಜಿಲ್ಲೆ) 2019 ರಲ್ಲಿ ಪ್ರಕಾಶಿಸಿದ ಕೃತಿ " ನಮ್ಮ ಬೆಳ್ಳೆ - ಕಟ್ಟಿಂಗೇರಿ: ಪರಂಪರೆ, ಇತಿಹಾಸ". 52 + 4 ಪುಟಗಳ, 70 ರೂಪಾಯಿ ಬೆಲೆಯ ಈ ಕೃತಿಯಲ್ಲಿ, ಲೇಖಕರ 'ಮೊದಲ ಮಾತು' ಮತ್ತು ಪರಿಚಯಗಳಿವೆ. ಲೇಖನಕ್ಕೆ ಸಂಬಂಧಿಸಿದಂತೆ ಕೆಲವು ಸ್ಥಳಗಳ ಮತ್ತು ವ್ಯಕ್ತಿಗಳ ಚಿತ್ರಗಳೂ ಇವೆ.

"ನಮ್ಮ ಹಿರಿಯರ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಒಂದು ಊರಿನ ಇತಿಹಾಸ, ಪರಂಪರೆ ಅರಿಯುವುದು - ನಮ್ಮ ಕರ್ತವ್ಯ ಮತ್ತು ಜ್ಞಾನದ ಅಂಗ. ಈ ಹಿನ್ನೆಲೆಯಲ್ಲಿ ನಮ್ಮ ಊರಿನ ಬಗ್ಗೆ ಕೇಳಿ, ಓದಿ ತಿಳಿದು ಬರೆಯುವ ಪ್ರಯತ್ನ ಇಂದಿಗೆ 35 ವರ್ಷಗಳ ಹಿಂದೆ ನಡೆದುದು - ಅದು ಮೂಡುಬೆಳ್ಳೆ ಸಂತ ಲಾರೆನ್ಸ್ ಪ್ರೌಢಶಾಲಾ ಬೆಳ್ಳಿಹಬ್ಬ ಸಂದರ್ಭದ ಸ್ಮರಣ ಸಂಚಿಕೆಗಾಗಿ. ಅದು ಮುಂದೆಯೂ ಮುಂದುವರಿಯಿತು. ಊರಿನ ಅನೇಕರು ಅದನ್ನು ಓದಿದವರಿದ್ದಾರೆ. ಇದೀಗ ಮೂಡುಬೆಳ್ಳೆ ಸಾಹಿತ್ಯಾಭಿಮಾನಿಗಳ ಊರು ಎಂಬ ದ್ಯೋತಜವಾಗಿ ನಮ್ಮೂರಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ ಜರಗುತ್ತಿರುವ ಈ ಸಂದರ್ಭದಲ್ಲಿ ಊರಿನ ಪರಂಪರೆ, ಚರಿತ್ರೆ ಮತ್ತು ಸಂಸ್ಕೃತಿಯ ಅಂಶಗಳನ್ನು ಮತ್ತೆ ಕಟ್ಟಿಕೊಡುವ ಪ್ರಯತ್ನ ಇದು" ಎಂದು ಲೇಖಕರು ಮೊದಲ ಮಾತುವಿನಲ್ಲಿ ಬರೆದುಕೊಂಡಿದ್ದಾರೆ.

ಉಡುಪಿ ಜಿಲ್ಲೆ ಕಾಪು ತಾಲೂಕು ಮೂಡುಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಬೆಳ್ಳೆ ಮತ್ತು ಕಟ್ಟಿಂಗೇರಿ ಎಂಬೆರಡು ಗ್ರಾಮಗಳನ್ನು ವಿವಿಧ ನೆಲೆಗಟ್ಟುಗಳಲ್ಲಿ ಪರಿಚಯಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ. ಸ್ಥಳನಾಮಗಳು, ಇಲ್ಲಿ ಹಿಂದೆ ಹೇಗಿತ್ತು, ಏನಿತ್ತು, ಈಗ ಏನಿದೆ ಎಂಬ ಮಾಹಿತಿಗಳು, ಹಿರಿಯರನೇಕರ ಸಾಧನೆಗಳ ಮಾಹಿತಿಗಳು, ಹತ್ತು ಹಲವು ಮಹತ್ವದ ವಿವರಗಳನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡಲಾಗಿದೆ. ಆಸಕ್ತರಿಗೆ  ಸಹಜವಾಗಿಯೇ ಕುತೂಹಲ ಮತ್ತು ವಿಷಯದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆಂಬ ತುಡಿತಕ್ಕೆ ಅವಕಾಶಮಾಡಿಕೊಡುವಲ್ಲಿ ಕೃತಿ ಸಫಲವಾಗುತ್ತದೆ.

"ನಿಮಗೆ ಆಶ್ಚರ್ಯವಾದೀತು. ಸ್ವಾತಂತ್ರ್ಯ ಪೂರ್ವದಲ್ಲಿ ಮಂಗಳೂರಿನಿಂದ ಕುಂದಾಪುರದವರೆಗೆ 7 ನದಿಗಳನ್ನು ದೋಣಿಯ ಮೂಲಕ ಹಾದು ಮುಂದುವರಿಯಬೇಕಾಗಿತ್ತು. ಸೇತುವೆಗಳಿರಲಿಲ್ಲ. ಆ ಕಾಲದಲ್ಲಿ ಕೂಳೂರಿನಲ್ಲಿ ಒಂದು ಜಟಕಾ ಬಂಡಿ ಸಿದ್ಧವಿರುತ್ತಿತ್ತು. ದೋಣಿಯ ಮೂಲಕ ಪ್ರಯಾಣಿಸಿದ ಜನರು ಇನ್ನೊಂದು ದಡಕ್ಕೆ ಬಂದು ಜಟಕಾದಲ್ಲಿ ಕುಳಿತು ಮುಂದಿನ ಪ್ರಯಾಣ. ಹಳೆಯಂಗಡಿ, ಮೂಲ್ಕಿ, ಉದ್ಯಾವರಗಳಲ್ಲೂ ಇದೇ ವ್ಯವಸ್ಥೆ ಇತ್ತು. ಎಲ್ಲಾ ನದಿ ದಡಗಳಲ್ಲೂ ಒಂದೊಂದು ಜಟಕಾಗಳು. ಈ ಜಟಕಾ ವ್ಯವಸ್ಥೆ ಮಾಡಿದವರು ಬೆಳ್ಳೆ ಸುಬ್ಬಯ್ಯ ಶೆಟ್ಟಿ. ಅವರೇ ಮುಂದೆ ಉಡುಪಿಯಿಂದ ಸೋಮೇಶ್ವರಕ್ಕೆ ಮೊದಲ ಸರ್ವಿಸ್ ಬಸ್ಸನ್ನು ಆರಂಭಿಸಿದವರು. ಕಟ್ಟಿಂಗೇರಿ ಗ್ರಾಮದ ಮರಗಳನ್ನು ಬಸ್ಸ್ ನಿಲ್ದಾಣಕ್ಕೆ ಬಳಸಲಾಯಿತು. ಉಡುಪಿಯ ಈಗಿನ ಸರ್ವಿಸ್ ಬಸ್ ನಿಲ್ದಾಣವೇ ಅಂದಿನ ಜಟಕಾ ಸ್ಟ್ಯಾಂಡ್. ಅದನ್ನು ನಡೆಸುತ್ತಿದ್ದವರು ಬೆಳ್ಳೆ ಸುಬ್ಬಯ್ಯ ಶೆಟ್ಟರು. ಇವರ ಮನೆ ಇದ್ದದ್ದು ಕಟ್ಟಿಂಗೇರಿಯಲ್ಲಿ. ಇವರು ಡಾ. ಬಿ. ಎಂ. ಹೆಗ್ಡೆಯವರ ಹಿರಿಯರು. ಸುಬ್ಬಯ್ಯ ಶೆಟ್ಟರ ಹೆಂಡತಿಯ ಮನೆ ತೋನ್ಸೆ. ಇವರು ಉಡುಪಿಯಿಂದ ಹರಿಹರ ರೈಲ್ವೆ ನಿಲ್ದಾಣಕ್ಕೆ ಮುಂಬಯಿ ಪ್ರಯಾಣಿಗರನ್ನು ಸಾಗಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದ ಕಾರುಬಾರಿ. ಇವರ ಕುರಿತು ಸುಬ್ಬಯ್ಯ ಶೆಟ್ಟರ ವಿಲೇವಾರಿ ಎನ್ನುವ ದಂತಕಥೆ ಸ್ವಾತಂತ್ರ್ಯ ಪೂರ್ವದಲ್ಲೇ ಹುಟ್ಟಿಕೊಂಡಿತ್ತು". (ಪುಟ 27,  ಕರಾವಳಿ ಸಾರಿಗೆಯ ಶಕಪುರುಷ ಜಟಕಾ ಸುಬ್ಬಯ್ಯ ಶೆಟ್ಟಿ)

ಇಂಥ ಆಸಕ್ತಿದಾಯಕ ಮಾಹಿತಿಗಳು ಕೃತಿಯುದ್ದಕ್ಕೂ ಓದಲು ಸಿಗುತ್ತವೆ. ಕೃತಿಯನ್ನೋದುವಾಗ ಸ್ವಾತಂತ್ರ್ಯ ಪೂರ್ವದ ಜನರ ಕಷ್ಟಗಳು ಕಣ್ಮುಂದೆ ಬರುತ್ತವೆ. ಜೊತೆಗೆ, ಸ್ವತಂತ್ರ ಭಾರತದ ಸರಕಾರಗಳು ನಡೆಸಿದ ವ್ಯಾಪಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ಒಂದಷ್ಟಾದರೂ ಅರಿವು ಮೂಡುತ್ತದೆ.

ಆದರೆ, ಕೃತಿಯ ಅಲ್ಲಲ್ಲಿ ಸಣ್ಣ ಪುಟ್ಟ ತಪ್ಪು ಮಾಹಿತಿಗಳು, ಗೊಂದಲಗಳು ಕಂಡುಬರುತ್ತದೆ. ಉದಾಹರಣೆಗೆ, ಉಡುಪಿಯ ಸರ್ವಿಸ್ ಬಸ್ ನಿಲ್ದಾಣವನ್ನು ಕೃತಿಯಲ್ಲಿ ಜಟಕಾ ಸ್ಟ್ಯಾಂಡ್ ಎಂದು ಗುರುತಿಸಲಾಗಿದೆ. ಇದು ತಪ್ಪು ಮಾಹಿತಿಯಾಗಿದೆ. ಉಡುಪಿಯಲ್ಲಿ ಜಟಕಾ ಸ್ಟ್ಯಾಂಡ್ ಎಂದರೆ, ಉಡುಪಿ ನಗರದ ನೆಲ್ಲಿಕಟ್ಟೆ ಶ್ರೀ ಕಂಬಿಗಾರ, ಬಬ್ಬುಸ್ವಾಮಿ, ಕೊರಗಜ್ಜ ದೈವಸ್ಥಾನದ ಉತ್ತರ ಭಾಗದಲ್ಲಿ ಈಗ ವಾಹನ ಪಾರ್ಕ್ ಮಾಡುವ ಸ್ಥಳವಾಗಿದೆ. ಮೂಡುಬೆಳ್ಳೆಯ ತಿರ್ಲಪಲ್ಕೆಯಲ್ಲಿ ಜ್ಞಾನಗಂಗಾ ಕಾಲೇಜಿದೆ ಎಂದು ಕೃತಿಯಲ್ಲಿ ಬರೆಯಲಾಗಿದೆ. ವಾಸ್ತವವಾಗಿ ಜ್ಞಾನಗಂಗಾ ಕಾಲೇಜು ಮೂಡುಬೆಳ್ಳೆಯ ನೆಲ್ಲಿಕಟ್ಟೆಯಲ್ಲಿದೆ.

ಸಣ್ಣ ಪುಟ್ಟ ತಪ್ಪು ಮಾಹಿತಿಗಳು, ಗೊಂದಲಕಾರಿ ವಿವರಗಳನ್ನು ಸರಿಪಡಿಸಿದರೆ, ಕೆಲವೊಂದು ಮಹತ್ವದ, ಐತಿಹಾಸಿಕ ವಿಷಯಗಳನ್ನು ಒಂದಷ್ಟು ವಿವರಗಳ ಸಹಿತವಾಗಿ ಬರೆದದ್ದೇ ಆದರೆ "ನಮ್ಮ ಬೆಳ್ಳೆ - ಕಟ್ಟಿಂಗೇರಿ : ಪರಂಪರೆ, ಇತಿಹಾಸ" ಕೃತಿಯು ಅಮೂಲ್ಯ, ಸಂಗ್ರಹಯೋಗ್ಯ ಕೃತಿಯಾಗಿ ದಾಖಲಾಗುವುದು ನಿಸ್ಸಂಶಯ. ಈ ಕೃತಿ, ಇಂಥ ಕೃತಿಗಳು ಇತರ ಊರುಗಳ ಕುರಿತೂ ಹೀಗೊಂದು ಕೃತಿ ಬರಲು ಸ್ಪೂರ್ತಿಯಾದರೆ ಒಂದು ಸಕಾರಾತ್ಮಕ ಬೆಳವಣಿಗೆಯಾಗಬಹುದು. ಪರಂಪರೆ, ಸಂಸ್ಕೃತಿ, ಇತಿಹಾಸ, ಸಾಧಕರ ಪರಿಚಯಗಳೊಂದಿಗೆ ಗ್ರಾಮಗಳನ್ನು ಓದುಗರ ಮುಂದಿಡುವ ಲೇಖಕರ ಪ್ರಯತ್ನ ಅಭನಂದನಾರ್ಹ.

-*ಶ್ರೀರಾಮ ದಿವಾಣ*