‘ನವಿಲೂರು’ ಧಾರವಾಡದ ‘ಕೊಕ್ಕರೆ ಬೆಳ್ಳೂರು’!

‘ನವಿಲೂರು’ ಧಾರವಾಡದ ‘ಕೊಕ್ಕರೆ ಬೆಳ್ಳೂರು’!

ಬರಹ

ಆ ಪುಟ್ಟ ಹಕ್ಕಿ ಪಕ್ಕ ಬಿಚ್ಚಿ ಪಕ್ಕೆಂದು ನಕ್ಕಿತು!

ಮೊಣಕಾಲುಗಳವರೆಗೆ ಕೆಸರು. ಜೋಲಿ ಹಿಡಿಯಲು ಹೋಗಿ ಮೈಗೂ-ಕೈಗೂ ಕೆಸರು ಮೆತ್ತಿತ್ತು. ಆದರೆ ಬಾಯಿ ಮೊಸರಾಗಲಿಲ್ಲ. ಕಪ್ಪೆ ಚಿಪ್ಪಿನಗಲದ ದೋಣಿ ಕಣ್ಣುಗಳಿಗೆ ಸಮುದ್ರದಂಥಾ ನೋಟ ಬೆರಗುಗೊಳಿಸಿತ್ತು. ಅಂಗಿ-ಚೊಣ್ಣ ಯಾವುದೂ ಲೆಕ್ಕಿಸದೇ ಏದುಸಿರು ಬಿಡುತ್ತ ಕ್ಯಾಮೆರಾ ಝಳಪಿಸಿದ್ದಾಯಿತು. ನಮ್ಮ ಈ ಸ್ಥಿತಿ ನೋಡಿ ಆ ಪುಟ್ಟ ಹಕ್ಕಿ ನಕ್ಕಿರಬೇಕು!

ಛಳಿ ಬೇರೆ. ಚುಮುಚುಮು ಬೆಳಗು ಪಸರಿಸುವ ಹೊತ್ತು. ಆಗಲೇ ಮೀನುಗಳ ಹೆಜ್ಜೆ ಗುರುತಿಸಲು ನವಿಲೂರಿನ ಮೀನುಗಾರ ನಾಗಣ್ಣ ಬಲೆ ಬೀಸಿಟ್ಟಿದ್ದ. ನಾವು ಸ್ವೆಟರ್ ಹಾಗು ಮಫ್ಲರ್ ಸುತ್ತಿಕೊಂಡು ಗಡ-ಗಡ ನಡುಗುತ್ತಿದ್ದೆವು. ಕ್ಲಿಕ್ಕಿಸಿದ ಫೋಟೋಗಳೆಲ್ಲ ಕೈ ನಡುಗಿ ‘ಥ್ರೀ-ಡಿ’ ಚಿತ್ರದಂತಾಗಿದ್ದವು.

ನಾಗಣ್ಣ ನಮ್ಮ ಸರ್ಕಸ್ ನೋಡಿ ಕೇಳಿದರು. ‘ಬರ್ತೀರಾ ನನ್ನ ತೆಪ್ಪದೊಳಗೆ? ದೊಡ್ಡ ಕೊಕ್ಕರಿ ಆ ದಂಡಿ ಮ್ಯಾಲೆ ಅದಾವು!’ ಅಂದ್ರು. ನಮಗೆ ಈಜು ಬಾರದು. ಡೋಲಾಯಮಾನ ತೆಪ್ಪದಲ್ಲಿ ಹೆದರಿ ಆಯತಪ್ಪಿದರೆ? ಶಿವ..ಶಿವಾ. ‘ಥಂಡಿ ಹತ್ತುವುದಿಲ್ಲ ಮಾರಾಯ’ ಗೆಳೆಯ ಕೇದಾರನಾಥ ನನ್ನ ಸ್ಥಿತಿ ನೋಡಿ ನಕ್ಕರು. ಆದರೂ ಧೈರ್ಯಮಾಡಿ ನಾಗಣ್ಣನಿಗೆ ಮೀನಿನ ಬಲೆ ಕೆರೆಯ ದಂಡೆಯ ಮೇಲಿಟ್ಟು ನಮ್ಮಿಬ್ಬರನ್ನೂ ಕರೆದೊಯ್ಯಲು ಮನವಿ ಮಾಡಿದೆವು. ಖುಷಿಯಿಂದ ನಾಗಣ್ಣ ‘ಹೂಂ’ ಅಂದ್ರು.

ನವಿಲೂರಿನ ಅರ್ಧ ಕೆರೆ ತೆಪ್ಪದಲ್ಲಿ ಕ್ರಮಿಸುತ್ತಿದ್ದಂತೆ..ವಾಹ್! ಕಾಶ್ಮೀರದಲ್ಲಿ ಮರ-ಗಿಡಗಳ ಮೇಲೆ ಮಂಜು ಬಿದ್ದು ಸುಂದರ ಚಿತ್ರ ಮೂಡಿದಂತೆ! ಕೊಕ್ಕರೆಗಳು ಬೋರಲು ಬಿದ್ದ ಮರದ ಮೇಲೆ ಕುಳಿತು, ಮೈ ಹರಡಿಕೊಂಡು ಹಿಮ ಹಾಸಿದಂತೆ ಚಿತ್ತಾರ ಮೂಡಿಸಿದ್ದವು. ಬೇಕಾದ ಆಂಗಲ್ ನಲ್ಲಿ ಭರ್ರನೇ ತಿರುಗುವ ಹಾಗಿಲ್ಲ! ನಾಗಣ್ಣನೇ ತೆಪ್ಪ ತಿರುಗಿಸಬೇಕು. ತಿರುಗಿಸಲು ಹುಟ್ಟು ಎತ್ತಿದ್ದೇ ತಡ, ಬೆಳ್ಳಕ್ಕಿಯ ಕುಟುಂಬ ಭರ್ರನೇ ರೆಕ್ಕೆಗೆ ಬುದ್ಧಿ ಹೇಳಿದವು. ಅಷ್ಟರಲ್ಲಿಯೇ ನಾಲ್ಕಾರು ಫೋಟೋ ಕೇದಾರನಾಥ ಗೊಣಗುತ್ತಲೇ ಕ್ಲಿಕ್ಕಿಸಿದ್ದರು!

ತನ್ನ ತಪ್ಪಿನ ಅರಿವಾಗಿ ನಾಗಣ್ಣ- ‘ಸಾಹೇಬ್ರ ಬೇಜಾರು ಮಾಡಕೋಬ್ಯಾಡ್ರಿ. ಕರಾ ಕಟ್ಟಿ ಮ್ಯಾಲೆ, ಆಕಳು ಬೆಟ್ಟದ ಮ್ಯಾಲೆ ಅಂಧಾಂಗ ಆಗಲಿಲ್ಲ. ಮಿಚಿಗಿನ್ ಸಾಹೇಬ್ರ ಕಂಪೌಂಡಿಗೆ ಬಣ್ಣ ಬಣ್ಣದ ದೊಡ್ಡ ಕೊಕ್ಕರಿ ಅದಾವು. ಚುಂಚು ಚಮಚಾಧಾಂಗ ಐತಿ. ಕೋಲಾಟ ಆಡಿಧಾಂಗ ಸಪ್ಪಳ ಮಾಡತಾವು. ಕೂಗಿದ್ದು ಕೇಳಿಲ್ಲ. ಅಲ್ಲಿ ಗೂಡು ಇರಬೇಕ್ರಿ’ ಅಂತ ಒಂದೇ ಉಸುರಿನಲ್ಲಿ ಮಾತಿನ ಬಾಣ ಬಿಟ್ರು.

‘ಅಯ್ಯೋ..ಮಾರಾಯಾ..ಮೊದ್ಲ ಹೇಳಬಾರ್ದ? ಹಾಕು ಹುಟ್ಟು ಆ ದಿಕ್ಕಿಗೆ’ ಅಂದ್ರು ಕ್ಯಾಪ್ಟನ್ ಕೇದಾರನಾಥ. ಇನ್ನೇನು ಬಿಸಿಲಿನ ಚುರುಕು ಮೈಗೆ ಬಡೀಲಿಕ್ಕೆ ಶುರುವಾಗಿತ್ತು. ಎಳೆಯ ಬಿಸಿಲಿನ ಹಿತಕ್ಕೆ ಕೊಕ್ಕರೆಗಳು ಮೈ ಕಾಯಿಸಿ ಕೊಳ್ಳುತ್ತ ಉದರಂಭರಣ ಕಾಯಕದಲ್ಲಿ ತೊಡಗಿದ್ದವು. ಕೇದಾರನಾಥನ ಆನಂದನಕ್ಕೆ ಪಾರವೇ ಇರಲಿಲ್ಲ. ‘ಆಂಗಲ್’ ಬದಲಿಸಿ ಫೋಟೋ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು ನಮ್ಮ ಕೇದಾರಣ್ಣ.

ಕ್ಲಿಕ್ಕಿಸಿದ ಫೋಟೋಗಳನ್ನು ನೋಡಿ ತುಂಬ ಖುಷಿಯಾಯಿತು. ಆದರೆ ಈ ವಿಶೇಷ ಕೊಕ್ಕರೆಗಳ ಬಗ್ಗೆ ಮಾಹಿತಿ ಬೇಕಲ್ಲ. ನಮ್ಮ ನೆರವಿಗೆ ಬಂದವರು ಪಕ್ಷಿ ವೀಕ್ಷಕ, ಪರಿಸರವಾದಿ ಪ್ರೊ.ಗಂಗಾಧರ ಕಲ್ಲೂರು ಹಾಗು ಪರಿಸರವಾದಿ ಮುಕುಂದ ಮೈಗೂರು. ಹತ್ತಾರು ಪೇಂಟೆಡ್ ಸ್ಟಾರ್ಕ್ ಕೊಕ್ಕರೆಗಳು, ಎರಡು ಉದ್ದನೇಯ ಕಪ್ಪು ಕೊಕ್ಕಿನ ಸ್ಪೂನ್ ಬಿಲ್ ಗಳು, ತಿಳಿ ನೀಲಿ, ಬೂದು ಬಣ್ಣದ ಹಾಗು ಕೆಂಪು ಕಣ್ಣಿನ ಸುಂದರ ಕೊಕ್ಕರೆಗಳು ನಮ್ಮ ಕ್ಯಾಮೆರಾದಲ್ಲಿ ದಾಖಲಾಗಿದ್ದವು.

ಪೇಂಟೆಡ್ ಸ್ಟಾರ್ಕ್ ನಿಜವಾಗಿಯೂ ಸುಂದರ ಕೊಕ್ಕರೆ. ಬಣ್ಣ ಬಣ್ಣದ ಕಪ್ಪು, ಕಂದು, ಬಿಳಿ ಹಾಗು ನಸುಗೆಂಪು ಬಣ್ಣದ ಛಾಯೆಯ ಗರಿಗಳು ಆ ಹಕ್ಕಿಯ ಪ್ರಮುಖ ಆಕರ್ಷಣೆ. ಗಾತ್ರದಲ್ಲಿ ದೊಡ್ಡ ಪಕ್ಷಿ. ಉದ್ದನೇಯ ನೀಳ ಕಾಲು, ಉದ್ದ ಕತ್ತು ಹಾಗು ತಿಳಿ ಕೇಸರಿ ಮತ್ತು ಗುಲಾಬಿ ಬಣ್ಣದ ಕೊಕ್ಕುಗಳು ಸ್ಟಾರ್ಕ್ ನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ‘ಸಿಕೋನಿಡೇ’ ಕುಟುಂಬ ವರ್ಗಕ್ಕೆ ಈ ಪಕ್ಷಿ ಸೇರಿದೆ.

ಜಗತ್ತಿನ ಬಹುಪಾಲು ಬೆಚ್ಚಗಿನ ಪ್ರದೇಶದಲ್ಲಿ ಸ್ಟಾರ್ಕ್ ಪಕ್ಷಿಗಳ ಅಸ್ತಿತ್ವ ಕಾಣಬಹುದು. ಒಣ ವಾತಾವರಣದಲ್ಲಿ ಇರಲು ಹೆಚ್ಚು ಇಷ್ಟಪಡುವ- ಹೆರಾನ್ಸ್, ಸ್ಪೂನ್ ಬಿಲ್ ಹಾಗು ಐಬಿಸ್ ಹಕ್ಕಿಗಳೊಂದಿಗೆ ಕಾಲೋನಿ ಜೀವನ ಈ ಸ್ಟಾರ್ಕ್ ಗೆ ರಕ್ತಗತ. ಹಕ್ಕಿ ಇಷ್ಟು ದೊಡ್ಡ ಗಾತ್ರದಿದ್ದರೂ ‘ಧ್ವನಿ’ ಹೊರಡಿಸಲಾರದು. ಕೂಗಲಾರದು. ಕೇವಲ ತನ್ನ ಉದ್ದನೇಯ ಕೊಕ್ಕುಗಳನ್ನು ‘ಕಟ-ಕಟ’ ಬಡಿಯುವ ಮೂಲಕ ಸ್ಟಾರ್ಕ್ ಸಂವಹನ ನಡೆಸುತ್ತವೆ. ಸಂತಾನಾಭಿವೃದ್ಧಿಯ ಸಂದರ್ಭದಲ್ಲಿ ಹಾಗು ಗೂಡು ಕಟ್ಟುವಾಗ ಈ ವಿಶೇಷ ಸಂವಹನ ಚಾಲನೆಯಲ್ಲಿ ಇರುತ್ತದೆ ಎನ್ನುತ್ತಾರೆ ಪಕ್ಷಿ ಶಾಸ್ತ್ರಜ್ನರು.

ಪೇಂಟೆಡ್ ಸ್ಟಾರ್ಕ್ ಕುಟುಂಬಕ್ಕೆ ಸೇರಿದ ಬಹುತೇಕ ಕೊಕ್ಕರೆಗಳು ಸಾವಿರಾರು ಕಿಲೋ ಮೀಟರ್ ದೂರ ಕ್ರಮಿಸಬಲ್ಲ ವಲಸೆ ಹಕ್ಕಿಗಳು. ಕಪ್ಪೆ, ಮೀನು, ಹುಳು-ಹುಪ್ಪಡಿ, ಎರೆಹುಳು, ಮಣ್ಣಿನ ಕೀಟಗಳು, ಸಣ್ಣ್ಣಪಕ್ಷಿಗಳು ಹಾಗು ಸ್ತನಿಗಳನ್ನು ಇವು ಆಹಾರವಾಗಿ ಸ್ವೀಕರಿಸುತ್ತವೆ. ಈ ಆಹಾರ ಅಭ್ಯಾಸವುಳ್ಳ ೧೯ ಪ್ರಜಾತಿಯ ಸ್ಟಾರ್ಕ್ ಗಳನ್ನು ಪಕ್ಷಿ ಶಾಸ್ತ್ರಜ್ನರು ಗುರುತಿಸಿದ್ದಾರೆ.

ಲೋಹದ ಹಕ್ಕಿ ಒಮ್ಮೆ ಆಗಸಕ್ಕೆ ಚಿಮ್ಮುವ ತೆರದಿ ಸ್ಟಾರ್ಕ್ ಪಕ್ಷಿಗಳು ನೆಲದ ಮೇಲೆ ತುಸು ದೂರ ಓಡಿ ‘ಥರ್ಮಲ್ ಏರ್ ಕರೆಂಟ್’ ಶಕ್ತಿಯಾಗಿ ವರ್ಧಿಸಿಕೊಂಡು ಬಾನಿಗೆ ನೆಗೆಯುತ್ತವೆ. ‘ಸೋರಿಂಗ್’, ‘ಗ್ಲೈಡಿಂಗ್’ ಹಾಗು ‘ಡೈವಿಂಗ್’ ಪಟ್ಟುಗಳು ಈ ಹಕ್ಕಿಗೆ ಕರಗತವಾಗಿದ್ದು, ಶಕ್ತಿಯನ್ನು ಉಳಿತಾಯ ಮಾಡಿ ಬಳಸಿಕೊಳ್ಳುವ ಪ್ರಾವಿಣ್ಯತೆ ಸಾಧಿಸಿವೆ.

ಸ್ಟಾರ್ಕ್ ಗಳ ಈ ಆಕರ್ಷಕ ಹಾರಾಟ ೧೮೮೪ರಲ್ಲಿ ಓಟ್ಟೋಮರ್ ಅನ್ಟೋಸೂಜ್ ಎಂಬ ಹವ್ಯಾಸಿ ಛಾಯಾಗ್ರಾಹಕನಿಂದ ಮೊದಲ ಬಾರಿಗೆ ಸೆರೆ ಹಿಡಿಯಲ್ಪಟ್ಟಿತು. ನಂತರ ಆ ಛಾಯಾಚಿತ್ರಗಳೇ ಒಟ್ಟೋ ಲಿಲಿಯಂಥಾಲ್ ಎಂಬುವವರಿಗೆ ಗ್ಲೈಡರ್ ಗಳನ್ನು ಪ್ರಾಯೋಗಿಕವಾಗಿ ಬಳಸಲು ಪ್ರೇರಣೆ ನೀಡಿತು. ಮಾರ್ಬೋವಾ ಸ್ಟಾರ್ಕ್ ಎಂಬ ಪ್ರಜಾತಿಗೆ ಸೇರಿದ ಪೆಂಟೇಡ್ ಸ್ಟಾರ್ಕ್ ಹಕ್ಕಿ ರೆಕ್ಕೆ ಬಿಚ್ಚಿದರೆ ೩.೨ ಮೀಟರ್! ಅಂದರೆ ೧೦.೫ ಅಡಿಯಷ್ಟು ಅಗಲಕ್ಕೆ ಸಮನಾಗುತ್ತದೆ! ಭೂಮಿಯ ಮೇಲೆ ಅತ್ಯಂತ ಉದ್ದದ ರೆಕ್ಕೆಗಳನ್ನುಳ್ಳ ಪಕ್ಷಿ ಎಂಬ ದಾಖಲೆ ಸ್ಟಾರ್ಕ್ ಹೆಸರಿನಲ್ಲಿದೆ.

ಪ್ಪೇಂಟೆಡ್ ಸ್ಟಾರ್ಕ್ ಗೂಡು ಅತ್ಯಂತ ದೊಡ್ಡದಾಗಿದ್ದು, ಸಂತಾನ ಅಭಿವೃದ್ಧಿಗೆ ಅದೇ ಗೂಡನ್ನು ಆ ದಂಪತಿಗಳು ಹಲವಾರು ವರ್ಷಗಳ ಕಾಲ ಬಳಸಿದ ಉದಾಹರಣೆಗಳಿವೆ. ಉಳಿದ ಹಕ್ಕಿಗಳು ಒಂದು ಬಾರಿ ಮಾತ್ರ ಗೂಡನ್ನು ಬಳಸಿ, ಮತ್ತೊಮ್ಮೆ ಹೊಸ ಗೂಡನ್ನೇ ರಚಿಸುತ್ತವೆ. ವಲಸೆ ಹೋದ ನಂತರ ಗಂಡು ಅಥವಾ ಹೆಣ್ಣು ಸ್ಟಾರ್ಕ್ ಪಕ್ಷಿಗಳು ತಮ್ಮ ಸಂಗಾತಿಯನ್ನು ಬದಲಿಸಿಕೊಳ್ಳುತ್ತವೆ. ಏಕ ಪತಿ/ ಪತ್ನಿ ವೃತಸ್ಥ ಪಕ್ಷಿ ಸ್ಟಾರ್ಕ್ ಗಳಲ್ಲ! ಹೆಣ್ಣು ಸ್ಟಾರ್ಕ್ ಕೆಲವೊಮ್ಮೆ ತನ್ನ ಗಂಡು ಸಂಗಾತಿ ಇಲ್ಲದೆಯೂ ವಲಸೆ ಹೊರಡಲು ಅಣಿಯಾಗುತ್ತದೆ. ಮರಿಗಳ ಲಾಲನೆ, ಪಾಲನೆ ಹಾಗು ಪೋಷಣೆಯಲ್ಲಿ ತೀವ್ರ ಶೃದ್ಧೆ ವಹಿಸುವ ಈ ಪಕ್ಷಿ ಮಾದರಿ ಹಕ್ಕಿ ಎಂದು ಗ್ರೀಸ್ ದೇಶದ ಪುರಾಣದಲ್ಲಿ ಉಲ್ಲೇಖಿಸಲ್ಪಟ್ಟಿದೆ.

ಅಬ್ಬಾ! ಈ ಸುಂದರ ಹಕ್ಕಿಗಳನ್ನು ಇತರ ಪಕ್ಷಿಗಳ ಕಲರವದ ಮಧ್ಯೆ ನೋಡಬೇಕೆ? ಬನ್ನಿ ನಮ್ಮ ‘ನವಿಲೂರು’ ಕೆರೆಗೆ ಸಂಜೆ ೬ಕ್ಕೆ. ಹಕ್ಕಿಗಳ ಕಲರವ, ಸೂರ್ಯಾಸ್ತದ ಮನಮೋಹಕ ದೃಶ್ಯ, ಉತ್ತಿ-ಬಿತ್ತಿ ಮನೆಗೆ ಮರಳುತ್ತಿರುವ ರೈತಾಪಿ ವರ್ಗದ ಚಿತ್ರಣ ನಿಮ್ಮನ್ನು ಮೋಡಿ ಮಾಡುತ್ತದೆ. ಕ್ಯಾಮೆರಾ ಕೈಲಿದ್ದರೆ ಇನ್ನೂ ಚೆನ್ನ. ಅಂದಹಾಗೆ ಪ್ರತಿ ವರ್ಷ ಕೆಲಗೇರಿ ಕೆರೆಗೆ ಡಿಸೆಂಬರ್ ಹಾಗು ಜನೇವರಿ ತಿಂಗಳಲ್ಲಿ ವಲಸೆ ಬರುತ್ತಿದ್ದ ಈ ಹಕ್ಕಿಗಳು ಈ ಬಾರಿ ವಾತಾವರಣದ ವೈಪರಿತ್ಯಗಳಿಂದಾಗಿ ಈ ಬಾರಿ ನವಿಲೂರು ಕೆರೆಗೆ ಸೆಪ್ಟೆಂಬರ್ ತಿಂಗಳಲ್ಲಿಯೇ ಬಂದಿಳಿದಿರುವುದು ಪಕ್ಷಿ ಪ್ರಿಯರಿಗೆ ಚಿಂತೆ ಮೂಡಿಸಿದೆ.