‘ನಿಂದನೆ’ ಬದಲಾಗಿ ‘ಸ್ಪಂದನೆ’ ಇರಲಿ
ಒಮ್ಮೆ ಒಬ್ಬಾತ ಮೂರು ದಿನಗಳ ಕಾಲ ಕಷ್ಟಪಟ್ಟು ಒಂದು ಅದ್ಭುತವಾದ ಚಿತ್ರಕಲೆಯನ್ನು ರಚಿಸಿದ. ಆ ಚಿತ್ರಕಲೆ ಹೇಗಿದೆ ಎಂದು ಜನಗಳ ಅಭಿಪ್ರಾಯ ತಿಳಿಯಬೇಕೆಂದು ಆಸೆಪಟ್ಟ. ನಾಲ್ಕು ರಸ್ತೆ ಸೇರುವ ವೃತ್ತದಲ್ಲಿ ಅದನ್ನು ಪ್ರದರ್ಶನ ಮಾಡಿದ. ಅದರ ಕೆಳಗೆ ಹೀಗೊಂದು ಸಾಲನ್ನು ಬರೆದಿದ್ದ "ನಾನು ಮೊದಲ ಬಾರಿ ಬರೆದ ಚಿತ್ರಕಲೆ ಇದು. ಇದರಲ್ಲಿ ಲೋಪಗಳು ನಿಮಗೆ ಕಾಣಿಸಬಹುದು. ಎಲ್ಲಿ ಲೋಪ ಕಾಣುತ್ತದೆಯೋ ಅಲ್ಲಿ ಒಂದು '×' ಚಿನ್ಹೆ ಬರೆಯಿರಿ " ಎಂದು ಅದರಲ್ಲಿತ್ತು.
ಸಂಜೆಯ ಹೊತ್ತಿಗೆ ಆ ಚಿತ್ರಕಾರ ಪುನಃ ಬಂದು ಚಿತ್ರವನ್ನು ನೋಡಿದ. ಆತನಿಗೆ ಒಮ್ಮೆಲೇ ಅಳು ಬಂದಿತು. ಕಾರಣ ಏನಂದರೆ ಆ ಚಿತ್ರದ ತುಂಬಾ '×' ಚಿನ್ಹೆಗಳೇ ತುಂಬಿ ಹೋಗಿತ್ತು. .
ಚಿತ್ರಕಾರ ಅಳುತ್ತಾ ತನಗೆ ಚಿತ್ರಕಲೆ ಹೇಳಿಕೊಟ್ಟ ಗುರುವಿನ ಬಳಿಗೆ ಬಂದು ಈ ರೀತಿ ಹೇಳಿದ "ನಾನು ಚಿತ್ರಕಲೆ ಮಾಡಲು ಸಾಧ್ಯವಿಲ್ಲ ಎಂದು ಇವತ್ತು ನನಗೆ ತಿಳಿಯಿತು" ಎಂದು ವಿಷಾದಿಸಿದ. ಗುರುಗಳು ಆತನಿಗೆ ಸಮಾಧಾನ ಮಾಡಿ ಮತ್ತೆ ಆದೇ ಚಿತ್ರಕಲೆ ಅನ್ನು ಪುನಃ ರಚನೆ ಮಾಡು ಎಂದು ಹೇಳಿದರು.
ಮತ್ತೊಮ್ಮೆ ಆ ಚಿತ್ರಕಲೆ ಬರೆದು ತಂದನು. ಈ ಬಾರಿ ಕೂಡ ಅದೇ ಸ್ಥಳದಲ್ಲಿ ಇಟ್ಟು ಕೆಳಗೆ ಹೀಗೆ ಬರೆಯಲು ಗುರುಗಳು ಸೂಚಿಸಿದರು..."ನಾನು ಬರೆದ ಮೊದಲ ಪೇಂಟಿಂಗ್ ಇದು. ಇದರಲ್ಲಿ ನಿಮಗೆ ಲೋಪಗಳು ಕಾಣಿಸಬಹುದು. ಎಲ್ಲಿ ಲೋಪ ಕಾಣುತ್ತದೆಯೋ ಅಲ್ಲಿ ಕೆಳಗೆ ಇಟ್ಟಿರುವ ಕುಂಚ ಹಾಗೂ ವರ್ಣಗಳನ್ನು ಉಪಯೋಗಿಸಿ ಸರಿ ಮಾಡಿ" ಎಂದು. ಗುರುಗಳು ಹೇಳಿದಂತೆ ಬರೆದು ಅಲ್ಲಿಟ್ಟನು. ಒಂದು ವಾರ ಕಾಲ ಕಳೆದರೂ... ಒಬ್ಬರಾದರೂ ಅದರಲ್ಲಿರುವ ಲೋಪಗಳನ್ನು ಸರಿಪಡಿಸಲಿಲ್ಲ..
ಆತನಿಗೆ ಆಶ್ಚರ್ಯವಾಯಿತು. ತಪ್ಪುಗಳನ್ನು ಕಂಡುಹಿಡಿದವರು ಅದನ್ನು ಸರಿಪಡಿಸಿ ಎಂದು ಹೇಳಿದಾಗ ಒಬ್ಬರಿಂದಲೂ ಆಗಲಿಲ್ಲವೇಕೆ..? ಯೋಚಿಸಿದನು. ನಂತರ ಅವನಿಗೆ ಅರ್ಥವಾಯಿತು...ಇದು ನಿಮಗೂ ಅರ್ಥವಾಗಿದೆಯೆಂದೂ ನಂಬುತ್ತೇನೆ. *ನಮ್ಮಲ್ಲಿ ತಪ್ಪುಗಳನ್ನು ತೋರಿಸಲು ಅನೇಕರು ಇದ್ದಾರೆ. ಆದರೆ ನಮ್ಮನ್ನು ಸರಿಪಡಿಸಲು ಯಾರೂ ಮನಸ್ಸು ಮಾಡುವುದಿಲ್ಲ. ಅದು ಅವರಿಂದಾಗಿ ಆಗದು...!!*
ಜನರ ನಿಂದನೆಗಳಿಗೆ ಅವಮಾನಗಳಿಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಸ್ವಾಭಿಮಾನ, ಆತ್ಮವಿಶ್ವಾಸದೊಂದಿಗೆ ಈ ಜಗತ್ತನ್ನು ನೋಡುತ್ತಾ ಮುಂದೆ ಸಾಗಿರಿ.
(ಸಾಮಾಜಿಕ ಜಾಲತಾಣದಿಂದ ಸಂಗ್ರಹಿತ)
ಚಿತ್ರ : ಶ್ರೇಯಸ್ ಕಾಮತ್, ಬೆಂಗಳೂರು