‘ನೀರ ನಿಶ್ಚಿಂತೆ’- ಅನ್ನದ ನೆಲ; ಅರಿವಿನ ಮುಗಿಲು, ಹುಬ್ಬಳ್ಳಿ ಕಾರ್ಯಾಗಾರ ಯಶಸ್ವಿ.

‘ನೀರ ನಿಶ್ಚಿಂತೆ’- ಅನ್ನದ ನೆಲ; ಅರಿವಿನ ಮುಗಿಲು, ಹುಬ್ಬಳ್ಳಿ ಕಾರ್ಯಾಗಾರ ಯಶಸ್ವಿ.

ಬರಹ

ಮುದ್ರಣ, ವಿದ್ಯುನ್ಮಾನ ಹಾಗು ಬಾನುಲಿ ಈ ಎಲ್ಲ ಮಾಧ್ಯಮಗಳನ್ನು ಮೈಗೂಡಿಸಿಕೊಂಡಿರುವ ಅಂತರ್ಜಾಲದ ‘ಆನ್ ಲೈನ್’ ಮಾಧ್ಯಮ ಇಂದು ಪ್ರಬಲ ಮತ್ತು ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮುತ್ತಿದೆ ಎಂಬುದು ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ಸಂಯೋಜಕ ಹರಿಪ್ರಸಾದ್ ನಾಡಿಗ ಅವರ ಅಭಿಪ್ರಾಯ.

ಬೆಂಗಳೂರಿನ ‘ಅರ್ಘ್ಯಂ’ ಚಾರಿಟೇಬಲ್ ಟ್ರಸ್ಟ್, ಸಂಪದ ಫೌಂಡೇಶನ್ ಹಾಗು ಹುಬ್ಬಳ್ಳಿಯ ವಿದ್ಯಾಭಾರತಿ ಪ್ರತಿಷ್ಟಾನದ ಇನ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಷನ್ ಆಂಡ್ ರಿಸರ್ಚ್ ಕಳೆದ ಭಾನುವಾರ (ಅಕ್ಟೋಬರ್ ೨೬, ೨೦೦೮) ಜಂಟಿಯಾಗಿ ಆಯೋಜಿಸಿದ್ದ ‘ನೀರ ನಿಷ್ಚಿಂತೆ’ -ಅನ್ನದ ನೆಲ; ಅರಿವಿನ ಮುಗಿಲು ಎಂಬ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಜೊತೆಗೆ ತಮ್ಮ ಅನುಭವ ಹಂಚಿಕೊಂಡರು.

ಮಾಹಿತಿ ತಂತ್ರಜ್ನಾನದ ಈ ‘ಇ-ಯುಗ’ದಲ್ಲಿ ವಯುಕ್ತಿಕ ಅಭಿವ್ಯಕ್ತಿಗೆ ಬಲಾಢ್ಯತೆ ಬರಬೇಕಾದರೆ ಸಮುದಾಯದ ಪಾಲ್ಗೊಳ್ಳುವಿಕೆ ಅತ್ಯವಶ್ಯ. ಯಾವುದೇ ವಿಷಯದ ಮೇಲೆ ಜಗತ್ತಿನಾದ್ಯಂತ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಿ, ರೂಢಿಸಬಲ್ಲ ಶಕ್ತಿ ‘ಆನ್ ಲೈನ್’ ಮಾಧ್ಯಮಕ್ಕಿದೆ. ಜೊತೆಗೆ ವಿನೂತನವಾದ ನಾಗರಿಕ ಪತ್ರಿಕೋದ್ಯಮ, ಸಿಂಡಿಕೇಟ್ ವರದಿಗಾರಿಕೆ ಹಾಗು ಸಮುದಾಯಕ್ಕೆ ಸಾಮಾಜಿಕ ಪ್ರಜ್ನೆ ಈ ಬ್ಲಾಗ್ ಬರವಣಿಗೆ ಮೂಡಿಸಬಲ್ಲುದು ಎಂದರು.

ಕಾರ್ಯಾಗಾರವನ್ನು ಉದ್ಘಾಟಿಸಿದ ಪರಿಸರವಾದಿ ಮುಕುಂದ ಮೈಗೂರ್ ಅವರು ಮಾತನಾಡಿ, ಮಾನವ ಪರಿಸರ ವಿರೋಧಿಯಾದರೆ, ಪರಿಸರ ಮಾನವ ವಿರೋಧಿಯಾಗುತ್ತದೆ. ನಗರಿಕತೆಗಳು ಬೆಳೆದಂತೆ ಅರಣ್ಯಗಳು ಹಿಮ್ಮೆಟ್ಟುತ್ತವೆ; ಮರಭೂಮಿಗಳು ಹಿಂಬಾಲಿಸುತ್ತವೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಬದುಕಲು ಯೋಗ್ಯವಾದ ಪರಿಸರವನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಲು ಪರಿಸರ ಸ್ನೇಹಿ ಬದುಕನ್ನು ನಾವು ರೂಢಿಸಿಕೊಳ್ಳುವುದು ಅನಿವಾರ್ಯ ಎಂದು ವಿಶ್ಲೇಷಿಸಿದರು.

ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ‘ಆನ್ ಲೈನ್’ ಪತ್ರಿಕೋದ್ಯಮ ಹಾಗು ಸಮುದಾಯ ತಜ್ನರುಗಳಾದ ವಸಂತ ಕಜೆ, ಶೀಲ್ ಕುಮಾರ್ ರಾಜ್ ಶೆಟ್ಟಿ, ಮುರಳಿ ಎಚ್. ಆರ್. ಬ್ಲಾಗ್ ಬರವಣಿಗೆಯ ಮೂಲಕ ಸಮಸ್ಯೆ, ಸೂಕ್ತ ಪರಿಹಾರ ಹಾಗು ಸಕಾಲಿಕ ತಿಳಿವಳಿಕೆ, ಜೊತೆಗೆ ಮುಕ್ತವಾದ, ಎಲ್ಲೆಗಳಿಲ್ಲದ ಪ್ರತಿಕ್ರಿಯೆ, ತನ್ಮೂಲಕ ಚರ್ಚೆ, ಸಂವಾದ, ಸಮೀಕ್ಷೆ ಹಾಗು ಸಂಶೋಧನೆಗಳನ್ನು ಕೈಗೊಂಡ ಬಗ್ಗೆ ವಿವರಿಸಿದರು.

ನೆಲ-ಜಲ ಹಾಗು ಪರಿಸರದ ಸಂರಕ್ಷಣೆ, ಯೋಗ್ಯ ರೀತಿಯ ಉಪಯೋಗ, ಹಿತ-ಮಿತ ಬಳಕೆ, ನವಿಕರಿಸಬಹುದಾದ ಇಂಧನ ಮೂಲಗಳ ವ್ಯಾಪಕ ಬಳಕೆ, ನವಿಕರಿಸಲಾಗದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯಲ್ಲಿ ವ್ಯಾಪಕ ನಿಯಂತ್ರಣ ಮೊದಲಾದ ವಿಷಯಗಳ ಕುರಿತು ಪ್ರಾತ್ಯಕ್ಷಿಕೆಗಳ ಮೂಲಕ ಪಾಲ್ಗೊಂಡವರಿಗೆ ಮನವರಿಕೆ ಮಾಡಿಸಲಾಯಿತು.

ಜೊತೆಗೆ ಈ ಸಂದರ್ಭದಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಆನ್ ಲೈನ್ ಪತ್ರಿಕೋದ್ಯಮ ಹಾಗು ಬ್ಲಾಗ್ ಬರವಣಿಗೆ ಕುರಿತಂತೆ ತಿಳಿಸಿಕೊಡಲಾಯಿತು. ಆನ್ ಲೈನ್ ಬರವಣಿಗೆಗೆ ಅತ್ಯವಶ್ಯವೆನಿಸುವ ತಂತ್ರಾಂಶ, ಮಾಹಿತಿ ಹಾಗು ಬರವಣಿಗೆ ಶೈಲಿ ಅರಿಕೆ ಮಾಡಿಸುವ ಸಿ.ಡಿ. ಯನ್ನು ಉಚಿತವಾಗಿ ನೀಡಲಾಯಿತು. ಖ್ಯಾತ ಪರಿಸರ ತಜ್ನ ಹಾಗು ಅಂಕಣಕಾರ ನಾಗೇಶ ಹೆಗಡೆ ಅವರು ಬರೆದ ೩ ಲೇಖನಗಳನ್ನು ಸಹ ಪೂರಕ ಮಾಹಿತಿಯಾಗಿ ಹಾಗು ಬರಹಗಾರರಿಗೆ ಆಕರಗಳಾಗಿ ನೀಡಲಾಯಿತು.

ಕಾರ್ಯಾಗಾರದ ಕೊನೆಯಲ್ಲಿ ಪಂಜಾಬ್ ರಾಜ್ಯದಲ್ಲಿ ಜೀವನದಿಯಾಗಿರುವ ‘ಕಾಲಿ ಬೆನ್’ ಕಲುಷಿತಗೊಂಡ ಪರಿ, ನದಿ ದಂಡೆಯ ಇಬ್ಬದಿಗಳಲ್ಲಿ (ಸುಮಾರು ೧೮೦ ಕಿ.ಮೀ.) ವಾಸವಾಗಿರುವ ಜನ ಸ್ವತ: ಟೊಂಕ ಕಟ್ಟಿ ನಿಂತು, ಭಗೀರಥನ ಶ್ರಮದ ಪರಿ ನದಿಗೆ ಪುನರುಜ್ಜೀವನ ನೀಡಿದ ಚೇತೋಹಾರಿ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ನೆಲ-ಜಲ ಹಾಗು ಪರಿಸರ ಸೇರಿದಂತೆ ವಿವಿಧ ಮಾಧ್ಯಮಗಳಿಗೆ ಬರೆಯಲು ಬೇಕಿರುವ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಲು ಬೇಕಿರುವ, ಅರಿವು ಮೂಡಿಸುವ ಪುಸ್ತಕಗಳ ಪ್ರದರ್ಶನವನ್ನು ನವ ಕರ್ನಾಟಕ ಪುಸ್ತಕ ಪ್ರಕಾಶನ ಮಳಿಗೆಯವರು ಆಯೋಜಿಸಿದ್ದರು.

ಮಹಾವಿದ್ಯಾಲಯದ ವಿದ್ಯಾಧಿಕಾರಿ ಪ್ರೊ.ಪಿ.ಎನ್.ಖಟಾವಕರ್, ಉಪಕುಲಸಚಿವ ಪ್ರೊ.ಎಂ.ಎ.ಸವಣೂರ್, ಐ.ಎಂ.ಸಿ.ಆರ್. ಪ್ರಾಚಾರ್ಯೆ ಡಾ.ನಯನಾ ಗಂಗಾಧರ್, ಹವ್ಯಾಸಿ ಪತ್ರಕರ್ತ ಅಶೋಕ್ ಜೋಶಿ, ಪ್ರೊ.ಭಾರ್ಗವ್ ರೇವಣಕರ್ ಸೇರಿದಂತೆ ವಿಶೇಷ ಆಹ್ವಾನಿತರು, ಹವ್ಯಾಸಿ ಬರಹಗಾರರು, ಮಹಿಳಾ ವಿದ್ಯಾಪೀಠ, ಕವಿವಿ ಪತ್ರಿಕೋದ್ಯಮ ವಿಭಾಗ ಹಾಗು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪಾಲ್ಗೊಂಡವರ ಒಟ್ಟು ಸಂಖ್ಯೆ ೭೪.

ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ವತಿಯಿಂದ ಸ್ವಯಂ ಸೇವಕರಿಗೆ ಉಚಿತವಾಗಿ ಟಿ-ಶರ್ಟಗಳನ್ನು ನೀಡಲಾಯಿತು.