‘ಪರಾಕ್ರಮ ದಿನ'ದಂದು ನೇತಾಜಿಯ ನೆನೆಯೋಣ
ಸೈನಿಕ ಶಕ್ತಿಯ ಹುಟ್ಟು ಹಾಕಿದವರು, ಸಂಘಟಕ ಶಕ್ತಿಯ ದಂಡ ನಾಯಕರಿವರು, ಗುರಿಯೇ ಸಾಧನೆ ಹೋರಾಡಿ ಎಂದವರು, ದೇಶ ಸೇವೆಯೇ ಈಶ ಸೇವೆ ಎಂದರಿವರು.. ಹೀಗೆ ಹೇಳಿದವರು, ನೋವನುಂಡವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತ ರಾಷ್ಟ್ರನಾಯಕರೇ ಅಮರ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್, ಎಲ್ಲರ ನೆಚ್ಚಿನ ‘ನೇತಾಜಿ’ಯವರು.
ಜನವರಿ ೨೩,೧೮೯೭ರಲ್ಲಿ ಜಾನಕಿನಾಥ ಬೋಸ್, ಪ್ರಭಾವತಿ ಬೋಸ್ ದಂಪತಿಗಳಿಗೆ ಜನಿಸಿದರು. ನೇತಾಜಿ ಎಂಬ ಹೆಸರೇ ದೇಶಪ್ರೇಮವನ್ನು ಮೂಡಿಸುತ್ತದೆ. ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಹುಟ್ಟುಹಾಕಿದ ಹೋರಾಟಗಾರರು. ತೋಟದ ಕೆಲಸಗಾರರನ್ನು, ಹೋದೆಡೆಯಲ್ಲಿ ಇದ್ದ ಯುದ್ಧ ಖೈದಿಗಳನ್ನು ಒಟ್ಟಾಗಿಸಿ ಹುರಿದುಂಬಿಸಿದರು. ವಿಶ್ವದ ಅನೇಕ ರಾಷ್ಟ್ರಗಳನ್ನು ಸಂದರ್ಶಿಸಿದರು. ಭಾರತದಲ್ಲಿ ಸ್ವತಂತ್ರ್ಯದ ಕಿಚ್ಚಿನ ಮಹತ್ವವನ್ನು ತಿಳಿಸಿದ ಮುತ್ಸದ್ಧಿಯಿವರು. ಸ್ವಾರ್ಥವನ್ನು ಬದಿಗೊತ್ತಿದ ಶ್ರೀಮಂತ ಹೃದಯವಂತರು. ಗಾಂಧೀಜಿಯವರ ಕೆಲವು ಧೋರಣೆಗಳು ನೇತಾಜಿಯವರಿಗೆ ಇಷ್ಟವಾಗುತ್ತಿರಲಿಲ್ಲ.
ಸ್ವಾತಂತ್ರ್ಯವನ್ನು ಯಾರೂ ಕೊಡಲಾರರು, ನಾವೇ ಪಡೆದುಕೊಳ್ಳಬೇಕೆಂದು ಕರೆಯಿತ್ತರು. ಆದರೆ ಸತತ ಪರಿಶ್ರಮ, ಹೋರಾಟ ,ದೃಢ ನಿಲುವು, ಅಚಲ ವಿಶ್ವಾಸ, ನಂಬಿಕೆ ಬೇಕೆಂದರು. ಕ್ರಾಂತಿಯಿಲ್ಲದಿದ್ದರೆ ಏನೂ ದೊರೆಯದೆಂದರು. ಶಾಂತಿ ಬೇಕು, ಹಾಗೆಂದು ಎಲ್ಲಾ ಕಡೆ ಅದು ಕೆಲಸಕ್ಕೆ ಬಾರದು. ಇವರ ಹೋರಾಟಕ್ಕೆ ಬ್ರಿಟಿಷ್ ನಾಯಕರು ಬೆರಗಾಗಿದ್ದರಂತೆ. ಶ್ರೀ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಮಹರ್ಷಿ ಅರವಿಂದರ ತತ್ವಗಳಡಿ ದುಡಿದವರು. ಇವರೆಲ್ಲಾ ನೇತಾಜಿಯವರ ಮೇಲೆ ಅತ್ಯಂತ ಪ್ರಭಾವ ಬೀರಿದ ಮಹನೀಯರುಗಳು. ಸ್ವಾತಂತ್ರ್ಯವೀರ ಸಾವರ್ಕರ್ ಭೇಟಿ ನೇತಾಜಿಯವರ ಜೀವನದ ಗತಿ ಮತ್ತು ಹೋರಾಟದ ಹಾದಿಯನ್ನೇ ಬದಲಾಯಿಸಿತಂತೆ. ‘ಆಜಾದ್ ಹಿಂದ್’ ಮೂಲಕ ‘ಜೈಹಿಂದ್’ ಘೋಷಣೆ ಒಕ್ಕೊರಲಿನಿಂದ ಹೊಮ್ಮುವಂತೆ ಮಾಡಿದರು.
ಓರ್ವ ನಿಷ್ಠಾವಂತ ರಾಜಕಾರಿಣಿಯಾದ ಅಪ್ರತಿಮ ದೇಶಭಕ್ತರಿವರು. ೧೯೪೫ರ ಆ.೧೮ರಂದು ವಿಮಾನ ಅಪಘಾತದಲ್ಲಿ ನಿಧನರಾದರೆಂದು ಹೇಳಲಾಗುತ್ತಿದೆ. ಇವರ ಸಾವಿನಲ್ಲೂ ನಿಗೂಢತೆಯಿದೆ. ಧೀಮಂತ ನಾಯಕನ ಸಾವಿಗೆ ಕಾರಣವನ್ನು ಅಂದಿನ ಸರಕಾರವೇ ಕಂಡುಹಿಡಿಯಬೇಕಿತ್ತೆಂದು ಅನ್ನಿಸುವುದಿದೆ. ಏನೇ ಇರಲಿ ನೇತಾಜಿಯವರ ಪ್ರಾಮಾಣಿಕ ಸೇವೆ, ಸ್ವಾತಂತ್ರ್ಯದ ಕಿಡಿಗಳು ಯಾವ ಭಾರತೀಯನಿಗೂ ಮರೆಯಲಸದಳ. ತಾಯಿ ಭಾರತಾಂಬೆ ಖಂಡಿತಾ ಕಣ್ಣೀರ ಅಭಿಷೇಕ ಮಾಡಿರಬಹುದು. ನೇತಾಜಿಯವರ ಜನ್ಮ ದಿನವನ್ನು ನಾವಿಂದು ‘ಪರಾಕ್ರಮ ದಿನ' ಎಂದು ಆಚರಿಸುತ್ತೇವೆ. ಇಂದಾದರೂ ಅವರನ್ನು ಮರೆಯದೆ ನೆನೆಯೋಣ, ನಮಿಸೋಣ.
-ರತ್ನಾ ಕೆ ಭಟ್, ತಲಂಜೇರಿ
(ಸಂಗ್ರಹ: ಸ್ವಾತಂತ್ರ್ಯ ವೀರರು)
ಚಿತ್ರ ಕೃಪೆ: ಇಂಟರ್ನೆಟ್ ತಾಣ