‘ಪಾರಸ್' ನ ಗಗನಾದ್ಯಂತ ಪ್ರಜ್ವಲಿಸುತ್ತಿದ್ದ ದೇದೀಪ್ಯಮಾನ ಧ್ರುವತಾರೆಗಳು!

‘ಪಾರಸ್' ನ ಗಗನಾದ್ಯಂತ ಪ್ರಜ್ವಲಿಸುತ್ತಿದ್ದ ದೇದೀಪ್ಯಮಾನ ಧ್ರುವತಾರೆಗಳು!

टूटे थे जो सितारे फारस के आसमां से

फिर ताब देके जिसने, चमकाए कहकशां से

-ಅಲ್ಲಮಾ ಇಕ್ಬಾಲ್, ಕವಿ ಮತ್ತು ವಿದ್ವಾಂಸರು.

'ಪಾರಸಿ ಖಗೋಳಶಾಸ್ತ್ರ'ವು ಪ್ರಾಚೀನ ಪರ್ಷಿಯನ್ ಪೌರೋಹಿತ್ಯ ಖಗೋಳಶಾಸ್ತ್ರವನ್ನು ಉಲ್ಲೇಖಿಸುವುದರೊಂದಿಗೆ ಇಸ್ಲಾಮಿನ ಆಗಮನದೊಂದಿಗೆ ಆಧುನಿಕತೆಗೆ ಒಳಗೊಂಡ ಪಾರಸಿಗರ ಖಗೋಳ ಜ್ಞಾನವನ್ನು ಉದ್ಧರಿಸುತ್ತದೆ. ಪ್ರಾಚೀನ ಪರ್ಷಿಯನ್ನರು ಖಗೋಳದ ಅರಿವಿನಲ್ಲಿ ತಜ್ಞತೆಯನ್ನು ಹೊಂದಿದ್ದು, ವಿವಿಧ ಹಬ್ಬಗಳನ್ನು ನಕ್ಷತ್ರಗಳನ್ನು ಅಡಸಿ ನೋಡುವ ಮೂಲಕ ಆಚರಿಸುತ್ತಿದ್ದರು. ಆದ್ಯ ಇಸ್ಲಾಮಿನ ಆಗಮನದ ಹಿಂದಿನಿಂದಲೇ ಪಾರಸಿಗರು ಖಗೋಳಶಾಸ್ತ್ರದಲ್ಲಿ ಪ್ರವೀಣತೆಯನ್ನು ಹೊಂದಿದ್ದರು ಮತ್ತು ಪಾರಸಿಗರ ಉಲ್ಲೇಖನೀಯ ಹಲವು ಹಬ್ಬಗಳು ಇಂದೂ ಜಗದ್ಪ್ರಸಿದ್ಧಿ ಹೊಂದಿದೆ. ಉದಾಹರಣೆಗೆ, ತಿರ್ ತಿಂಗಳಿನ 13ರಂದು ಆಚರಿಸುವ 'ತಿರ್ಗನ್' ಹಬ್ಬ ಜಗತ್ತಿನಾದ್ಯಂತ ಪ್ರಸಿದ್ಧಿ ಹೊಂದಿದ್ದು, ಇಂದೂ ಕೆನಡಾ, ಅಮೇರಿಕಾ, ಆಸ್ಟ್ರೇಲಿಯಾ ಇತ್ಯಾದಿ ದೇಶಗಳಲ್ಲಿ ಸಂಭ್ರಮಿಸಲಾಗುತ್ತಿದೆ. ದುರ್ಭರವಾಗಿ, ಇಸ್ಲಾಮಿನ ಆಗಮಿಸುವ ಪೂರ್ವ ಪಾರಸಿಗರು ವೈಜ್ಞಾನಿಕ ವಿಷಯವಾದ ಖಗೋಳಶಾಸ್ತ್ರವನ್ನು ಜ್ಯೋತಿಷ್ಯಕ್ಕೆ ಸ್ವಾಧೀನಪಡಿಸಿಕೊಂಡು ಮೌಢ್ಯತೆಗೆ ಒಳಪಡಿಸಿದ್ದರು. ಹಾಗಾಗಿ, ಪ್ರಾಚೀನ ಪಾರಸಿ ಖಗೋಳಶಾಸ್ತ್ರವನ್ನು ಆಧುನಿಕ ವೈಜ್ಞಾನಿಕ ಕ್ಷೇತ್ರವು ಮೆಚ್ಚುವುದಿಲ್ಲ.       

ಆದರೆ, ಇಸ್ಲಾಮಿನ ಆಗಮನದೊಂದಿಗೆ ಪಾರಸಿಗರು ಜ್ಯೋತಿಷಶಾಸ್ತ್ರವನ್ನು ಕಡೆಗಣಿಸಲಾರಂಭಿಸಿದರು. ಅಲ್ಲದೇ, ಸಂಶೋಧನೆಗಾಗಿ ಬಾಗ್ದಾದಿನಿಂದ ಆಗಮಿಸುತ್ತಿದ್ದ ತಜ್ಞರು ಪರ್ಶಿಯನ್ನರನ್ನು ಜ್ಯೋತಿಷ್ಯ ರಹಿತ ಶುದ್ಧ ಖಗೋಳಶಾಸ್ತ್ರವನ್ನು ಕಲಿಸಿಕೊಟ್ಟರು. ಖಗೋಳಶಾಸ್ತ್ರದಲ್ಲಿ ರಸಿಕತೆ ಹೊಂದಿದ್ದ ಪಾರಸಿ ವಿಜ್ಞಾನಿಗಳು, ಆಗಾಗ ಬಾಗ್ದಾದಿಗೆ ಭೇಟಿ ನೀಡಿ, ಬ್ಯಾಬಿಲೋನಿನ [ಆಧುನಿಕ ಇರಾಕ್, ಸಿರಿಯಾ ಮತ್ತು ತುರ್ಕಿ ದೇಶ ಒಟ್ಟಿನಲ್ಲಿ] ವಿಜ್ಞಾನಿಗಳೊಂದಿಗೆ ಜಂಟಿ ಅಧ್ಯಯನ-ಸಂಶೋಧನೆ ನಡೆಸಲು ಪ್ರಾರಂಭಿಸಿದರು. ಇದರೊಂದಿಗೆ, ಪಾರಸಿ ಖಗೋಳಶಾಸ್ತ್ರವು ತ್ವರಿತವಾಗಿ ಮುಂದುವರಿಸಲಾರಂಭಿಸಿ ಪರ್ಷಿಯಾ ದೇಶದಲ್ಲೂ 'ಇಸ್ಲಾಮಿನ ಸುವರ್ಣ ಯುಗಕ್ಕೆ' ಸ್ವಾಗತಿಸಿತು . 

ಪಾರಸಿ ಖಗೋಳಜ್ಞಾನಿಗಳು ಸಂಸ್ಕೃತ, ಮಧ್ಯ ಪರ್ಷಿಯನ್ ಪಹ್ಲವಿ, ಮತ್ತು ಗ್ರೀಕ್ ಭಾಷೆಗಳಲ್ಲಿರುವ ಅಧ್ಯಯನಗಳನ್ನು ಅರೇಬಿಕ್‌ ಭಾಷೆಗೆ ಭಾಷಾಂತರಿಸಿದರು; ಪರಿಣಾಮವಾಗಿ, ಅವರಿಗೆ ಆಕಾಶಕಾಯಗಳ ಸ್ಥಾನವನ್ನು ಲೆಕ್ಕಾಚಾರ ಮಾಡಲು ಮತ್ತು ಸೂರ್ಯನ, ಚಂದ್ರನ ಹಾಗೂ ಅಂದು ತಿಳಿದಿರುವ ಐದು ಗ್ರಹಗಳ ಚಲನೆಯನ್ನು ದಾಖಲಿಸುವ ಕೋಷ್ಟಕಗಳನ್ನು ರಚಿಸಲು ಸುಲಭವಾಯಿತು. 

830 A.Dಯಲ್ಲಿ ಪರ್ಷಿಯನ್ ಗಣಿತಶಾಸ್ತ್ರಜ್ಞ ಮುಹಮ್ಮದ್ ಇಬ್ನ್ ಮೂಸಾ ಅಲ್-ಖ್ವಾರಿಜ್ಮಿ ಅವರು ರಚಿಸಿದ ಖಗೋಳಶಾಸ್ತ್ರದ ಮೊತ್ತಮೊದಲ ಪ್ರಮುಖ ಖಗೋಳಗ್ರಂಥ 'Zij al-Sindhind' ಆಗಿದೆ. ನುಡಿದ ಕೃತಿಯು ಇಂದಿಗೂ ಆಕ್ಸ್ಫರ್ಡ್, ಕ್ಯಾಂಬ್ರಿಡ್ಜ್, ಪೆನ್ನಿಸಿಲ್ವಿಯಾ ಇತ್ಯಾದಿ ವಿಶ್ವವಿದ್ಯಾಲಯದ ಖಗೋಳಶಾಸ್ತ್ರ ಅಧ್ಯಯನ ಕೇಂದ್ರಗಳಲ್ಲಿ ಮಹತ್ವ ಸ್ಥಾನಮಾನ ಪಡೆದಿದೆ. ಅಲ್-ಖ್ವಾರಿಜ್ಮಿ (780 - 850), ಅವರು ಖ್ವಾರಾಜ್ಮ್‌'ನ ಪರ್ಷಿಯನ್ ಬಹುಮುಖ ಪ್ರತೀಭೆ ಆಗಿದ್ದು; ಅವರು ಗಣಿತ, ಖಭೌತ, ಖಗೋಳಶಾಸ್ತ್ರ ಮತ್ತು ಭೌಗೋಳಿಕತೆಯಲ್ಲಿ ಹಲವಾರು ಪ್ರಭಾವಶಾಲಿ ಬೃಹದ್ಕೃತಿಗಳನ್ನು ರಚಿಸಿದರು. ಸರಿಸುಮಾರು 820 A.Dಯಲ್ಲಿ ಅವರು ಬಾಗ್ದಾದ್‌`ನಲ್ಲಿರುವ "ಹೌಸ್ ಆಫ್ ವಿಸ್ಡಮ್‌"ನ (ಬೈತುಲ್ ಹಿಕ್ಮಹ್) ಮುಖ್ಯ ಖಗೋಳಶಾಸ್ತ್ರಜ್ಞರಾಗಿ ಮತ್ತು  ಗ್ರಂಥಾಲಯದ ಮುಖ್ಯಸ್ಥರಾಗಿ ನೇಮಕಗೊಂಡರು. ಅಲ್-ಖ್ವಾರಿಜ್ಮಿ ಅವರ ಅಪ್ರತೀಮ ಕೊಡುಗೆಗಳ ಪ್ರತಿಫಲವಾಗಿ ಚಂದ್ರದ ಮೇಲ್ಮೈಯಲ್ಲಿರುವ 56 ಕಿಲೋಮೀಟರಿನ ಬೃಹತ್ ಬಾಂಬುಕುಳಿಯೊಂದನ್ನು Lunar Impact Crater of Al- Khwarizmi ಎಂದು ಹೆಸರಿಸಲಾಯಿತು.ಈ ಕೃತಿಯು ಆ ಸಮಯದಲ್ಲಿ ತಿಳಿದಿರುವ ಸೂರ್ಯ, ಚಂದ್ರ ಮತ್ತು ಐದು ಗ್ರಹಗಳ ಚಲನೆಯನ್ನು ವಿಶ್ಲೇಷಿಸುವ ಕೋಷ್ಟಕಗಳನ್ನು ಒಳಗೊಂಡಿದೆ ಮತ್ತು ಇದು ಇಸ್ಲಾಮಿಕ್ ವಿಜ್ಞಾನಗಳಲ್ಲಿ ಟಾಲೆಮಿಕ್ ಪರಿಕಲ್ಪನೆ (Ptolemaic Concept) ಗಳನ್ನು ಪರಿಚಯಿಸಿದ್ದರಿಂದ ಇದು ಗಮನಾರ್ಹವಾಗಿದೆ. ಈ ಕೃತಿಯು ಇಸ್ಲಾಮಿಕ್ ಖಗೋಳಶಾಸ್ತ್ರದ ಮಹತ್ವದ ತಿರುವನ್ನು ಸಹ ಸೂಚಿಸುತ್ತದೆ. ಅಲ್-ಖ್ವಾರಿಜ್ಮಿ ಅವರ ಅಧ್ಯಯನ ಮತ್ತು ಸಂಶೋಧನೆಗಳು, ಗ್ರಹಗಳ ಚಲನೆ ಮತ್ತು ಖಭೌತಿಕ ಲೆಕ್ಕಾಚಾರಗಳ ಅಸಾಂಪ್ರದಾಯಿಕ ವಿಧಾನಗಳಿಗೆ ನಾಂದಿ ಹಾಡಿದೆ.

ಮುಹಮ್ಮದ್ ಶಮ್ಸ್ ಅಲ್-ದೀನ್ ಬಿನ್ ಅಹ್ಮದ್ ಅಲ್ ಖಾಫ್ರಿ ಅವರೊಬ್ಬರು ಸುಪ್ರಸಿದ್ಧ ಮುಸ್ಲಿಂ ಖಗೋಳತಜ್ಞರು, ನ್ಯಾಯಾಧೀಶರು ಮತ್ತು ಸಫಾವಿದ್ ರಾಜವಂಶದ ಪ್ರಾರಂಭಿಕ ಘಟ್ಟದ ಪರ್ಷಿಯಾದ  ಧಾರ್ಮಿಕ ವಿದ್ವಾಂಸರಾಗಿದ್ದರು. ಅವರು ತತ್ವಶಾಸ್ತ್ರ ಮತ್ತು ಖಗೋಳಶಾಸ್ತ್ರದ ಕುರಿತು ಗಾಢ ಸಂಶೋಧನೆ ನಡೆಸಿ ಅನೇಕ ಗ್ರಂಥಗಳನ್ನು ರಚಿಸಿದರು; ಅದರೊಂದಿಗೆ, ಅಲ್-ತುಸಿ ಮತ್ತು ಅಲ್-ಶಿರಾಜಿಯಾ ವಿಮರ್ಶಾತ್ಮಕ ಪ್ರೌಢಪ್ರಬಂಧಗಳ ಕುರಿತು ಭಾಷ್ಯ ವೀಕ್ಷಕವಿವರಣೆಯನ್ನು ಬರೆದಿದ್ದರು. ಅಲ್-ಖಾಫ್ರಿ ಅವರು ದೇವತಾಶಾಸ್ತ್ರ ಮತ್ತು ಖಗೋಳಶಾಸ್ತ್ರದ ನಡುವೆ ಇರುವ ಸಾದೃಶ್ಯ ತೋರಿಸುತ್ತ ಅನೇಕ ಪ್ರೌಢಪ್ರಬಂಧ ಬರೆದು, ತಮ್ಮ ಕಾಲದ ಇಸ್ಲಾಮಿಕ್ ವಿದ್ವಾಂಸರಲ್ಲಿ ಇಸ್ಲಾಂ ಮತ್ತು ವಿಜ್ಞಾನದ ನಡುವೆ ಯಾವುದೇ ವಿರೋಧಾಭಾಸಗಳಿಲ್ಲ ಎಂದು ಎತ್ತಿ ತೋರಿಸಿಕೊಟ್ಟರು. 

ಖಾಫ್ರಿ ಅವರು ಸೈದ್ಧಾಂತಿಕ ಖಗೋಳಶಾಸ್ತ್ರಜ್ಞರಾಗಿದ್ದರು; ಅವರು ಇಸ್ಲಾಮಿಕ್ ವಿಜ್ಞಾನದ ಅವನತಿಯ ಅವಧಿಯನ್ನು ಮೀರಿದ ಅವಧಿಯಲ್ಲಿ ಹೊಸ ಗ್ರಹಗಳ ಸಿದ್ಧಾಂತ (Planetary Theories) ಗಳನ್ನು ಅಭಿವೃದ್ಧಿಸಿದರು. "The Complement to the Explanation of the Memento" ಅಲ್-ಖಾಫ್ರಿಯವರ ಈ ಪ್ರೌಢ ಪ್ರಬಂಧವು ಜುರ್ಜಾನಿ ಅಲ್-ಷರೀಫ್ ಅವರ 'ಟಾಲೆಮಿಕ್ ಖಗೋಳಶಾಸ್ತ್ರ'ದ ವಿಮರ್ಶೆಯ ಮೇಲೆ ಬರೆದ ಸಂದಿಗ್ಧ ವಿಮರ್ಶಾತ್ಮಕ ಪ್ರಬಂಧವಾಗಿದೆ. 'George Saliba' ಅವರು ಈ ಪರ್ಷಿಯನ್ ಪ್ರೌಢಪ್ರಬಂಧವನ್ನು ಆಂಗ್ಲ ಭಾಷೆಗೆ ಭಾಷಾಂತರಿಸಿದರು.              

ಮಸಿಉಲ್ಲಾಹ್ ಇಬ್ನ್ ಅಥಾರಿ (740-815 A.D) ಎಂಟನೇ ಶತಮಾನದ ಹೆಸರಾಂತ ಪರ್ಷಿಯನ್ ಖಗೋಳಶಾಸ್ತ್ರಜ್ಞ ಮತ್ತು ಗಣಿತಶಾಸ್ತ್ರಜ್ಞರು. ಮೂಲತಃ ಖೊರಾಸನ್‌'ನವರು, ಅವರು ಅಲ್-ಮನ್ಶೂರ್ ಮತ್ತು ಅಲ್-ಮಾಮೂನ್ ಆಳ್ವಿಕೆಯಲ್ಲಿ ಬಸ್ರಾದಲ್ಲಿ ತಮ್ಮ ಸಂಶೋಧನೆಯನ್ನು ನೆರವೇರಿಸಿದರು; 8ನೇ ಶತಮಾನದ ಕೊನೆಯಲ್ಲಿ ಹಾಗು 9ನೇ ಶತಮಾನದ ಆರಂಭದಲ್ಲಿ ಬಾಗ್ದಾದ್‌'ಗೆ ಆಧುನಿಕ ಗಣಿತಶಾಸ್ತ್ರ ಮತ್ತು ಖಗೋಳಶಾಸ್ತ್ರವನ್ನು ಪರಿಚಯಿಸಿದವರಲ್ಲಿ ಒಬ್ಬರು. ಮಸಿಉಲ್ಲಾಹ್ ಅವರ 'Treatise De Mercibus' ಕೃತಿಯು ಅರೇಬಿಕ್ ಭಾಷೆಯಲ್ಲಿರುವ ಅತ್ಯಂತ ಪ್ರಾಚೀನ ವೈಜ್ಞಾನಿಕ ಕೃತಿಯಾಗಿದೆ ಮತ್ತು ಅರೇಬಿಕ್ ಭಾಷೆಯಲ್ಲಿ ಇಂದಿಗೂ ಅಸ್ತಿತ್ವದಲ್ಲಿರುವ ಏಕೈಕ ಕೃತಿಯಾಗಿದೆ. ನುಡಿದ ಕೃತಿಯು ಅಂದಿನ ಪ್ರಾಂತಭಾಷೆಗಳಾದ ಮಧ್ಯಕಾಲೀನ ಲ್ಯಾಟಿನ್, ಬೈಜಾಂಟೈನ್, ಗ್ರೀಕ್ ಮತ್ತು ಹೀಬ್ರೂಗೆ ಭಾಷಾಂತರಿಸಲಾಗಿತ್ತು. ಮಸಿಉಲ್ಲಾಹ್ ಅವರ ಕೊಡುಗೆಗಳು ಖಗೋಳಶಾಸ್ತ್ರದ ಕ್ಷೇತ್ರಕ್ಕೆ ಅಪರಿಮಿತವಾದುದರಿಂದ ಚಂದ್ರನ ಮೇಲ್ಮೈಯಲ್ಲಿರುವ ಬಾಂಬುಕುಳಿಯೊಂದನ್ನು ಶ್ರೀಯುತರ ಶುಭನಾಮದಿಂದ ನಾಮಕರಿಸಲಾಗಿದೆ. (The Lunar Impact Crater of Messala) 

ನೌಬಖ್ತ್ ಅಹ್ವಾಝ್ಯಿ ಮತ್ತು ಅವರ ಪುತ್ರರು ಅಹ್ವಾಝ್ (ಇಂದಿನ ಖುಜೆಸ್ತಾನ್ ಪ್ರಾಂತ್ಯ, ಇರಾನ್‌) 8ನೇ ಮತ್ತು 9ನೇ ಶತಮಾನದಲ್ಲಿ ವಾಸಿಸುತ್ತಿದ್ದ ಸುಪ್ರಸಿದ್ಧ ಖಗೋಳಶಾಸ್ತ್ರಜ್ಞರು. ಬಾಗ್ದಾದ್ ಸ್ಥಾಪನೆಗಾಗಿ ನೀಲಿ ನಕ್ಷೆ ಚಿತ್ರಿಸಿದ ಶಿಲ್ಪಿಗಳ ತಂಡವನ್ನು ಮುನ್ನಡೆಸಿದ್ದಕ್ಕಾಗಿ ನೌಬಖ್ತ್ ಅವರು ವಿಶೇಷವಾಗಿ ಪ್ರಸಿದ್ಧರಾದರು. ಅವರ ಕುಟುಂಬವು ನಗರವನ್ನು ವಿನ್ಯಾಸಗೊಳಿಸಲು ಅಪ್ರತಿಮ ಕೊಡುಗೆಗಳನ್ನು ಕರುಣಿಸಿದರು. ಮೂಲತಃ ಝೋರೊಸ್ಟ್ರಿಯನ್ನರು, ನೌಬಖ್ತ್ ಮತ್ತು ಅವರ ಪುತ್ರರು ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಅಬ್ಬಾಸಿದ್ ನ್ಯಾಯಾಲಯದ ಪಹ್ಲವಿ ಭಾಷಾಂತರಕಾರರಾಗಿ ಮತ್ತು ಖಗೋಳತಜ್ಞರಾಗಿ ದುಡಿದರು. ಖಲೀಫಾ ಅಲ್-ಮನ್ಸೂರ್ ಅವರು ನೌಬಖ್ತ್ ಅವರನ್ನು ಬಾಗ್ದಾದಿನ ದಕ್ಷಿಣಕ್ಕೆ 2,000 ಜೆರಿಬ್‌ ಭೂಮಿಯನ್ನು ಇಕ್ತ ಪ್ರಧಾನಿಸಿದರು. (ಇಕ್ತ ಅಂದರೆ ಆ ಕಾಲದಲ್ಲಿ ನಿರ್ದಿಷ್ಟ ಕ್ಷೇತ್ರದಲ್ಲಿ ದುಡಿದು ಗಮನಾರ್ಹ ಕೊಡುಗೆಗಳನ್ನು ಕರುಣಿಸುವವರಿಗೆ ಖಲೀಫರು ಭೂಮಿಯನ್ನು ಗೌರವಾರ್ಥಕವಾಗಿ ಪ್ರಧಾನಿಸುತ್ತಿದ್ದರು)

ಪರ್ಷಿಯನ್ನರು ನಕ್ಷತ್ರಗಳನ್ನು ಅಡಸಿ ನೋಡುವುದರಲ್ಲಿ ಪ್ರವೀಣತೆಯನ್ನು ಸಾಧಿಸಿದ್ದರು. ಖಗೋಳಶಾಸ್ತ್ರದಲ್ಲಿ ಕೆಲವು ಹಳೆಯ ಪರ್ಷಿಯನ್ ಹೆಸರುಗಳು ಇಂದೂ ಉಳಿದುಕೊಂಡಿವೆ; ಪರ್ಷಿಯನ್ನರು ಪಂಚಾಂಗಗಳಿಗೆ ಬಳಸುತ್ತಿದ್ದ ನಾಲ್ಕು ರಾಯಲ್ ನಕ್ಷತ್ರಗಳ ಹೆಸರುಗಳು ಅಲ್ಡೆಬೆರಾನ್ (Aldebaran), ರೆಗ್ಯುಲಸ್ (Regulus), ಆಂಟಾರೆಸ್ (Antares) ಮತ್ತು ಫೋಮಲ್'ಹಾಟ್ (Fomalhaut); ಮತ್ತು ಅಲ್ಮಾನಾಕ್‌ಗಳಿಗೆ ಅಲ್ಸಿಯೋನ್, ರೆಗ್ಯುಲಸ್, ಅಲ್ಬಿರಿಯೊ ಮತ್ತು ಬುಂಗುಲಾ (ಆಲ್ಫಾ ಸೆಂಟೌರಿ)ನ ಆಧುನಿಕ-ದಿನದ ನಕ್ಷತ್ರ ಚಿತ್ರಪಟಗಳಿಗೆ ಸಮನಾಗಿರುತ್ತದೆ ಎಂದು ಆಧುನಿಕ ಖಗೋಲತಜ್ಞರು ಅಭಿಪ್ರಾಯಪಡುತ್ತಾರೆ. ಅಲೆನುಶ್ ತೆರಿಯನ್ (1921 – ಮಾರ್ಚ್ 4, 2011), ಒಬ್ಬರು ಇರಾನಿನ ಖಗೋಳಶಾಸ್ತ್ರಜ್ಞೆ  ಮತ್ತು ಖಭೌತಶಾಸ್ತ್ರಜ್ಞೆಯಾಗಿದ್ದರು. ಅವರನ್ನು 'Mother of Modern Iranian Astronomy' ಎಂದು ಕರೆಯಲಾಗುತ್ತದೆ. 

'Azophi Arabus' ಎಂಬ ಆಂಗ್ಲ ಹೆಸರಿನಿಂದ ಖ್ಯಾತಿಗಳಿಸಿದೆ ಅಬ್ದ್ ಅಲ್ ರೆಹ್ಮಾನ್ ಅಲ್ ಸೂಫಿ ಅವರೊಬ್ಬರು ಸುಪ್ರಸಿದ್ಧ ಪರ್ಷಿಯನ್ ಖಗೋಳಶಾಸ್ತ್ರಜ್ಞರಾಗಿದ್ದರು. ಗ್ರೀಕ್ ಖಗೋಳಶಾಸ್ತ್ರದ ಕೃತಿಗಳನ್ನು ಭಾಷಾಂತರಿಸಲು ಮತ್ತು ವಿಮರ್ಶಿಸಲು ಶ್ರಮಿಸಿದರು. ವಿಶೇಷತಃ 'ಟಾಲೆಮಿಯ ಅಲ್ಮಾಜೆಸ್ಟ್' ಅನ್ನು (Almagest of Ptolemy) ಯಲ್ಲಿ ಕಂಡುಬರುವ ತಪ್ಪುಗಳನ್ನು ತಿದ್ದುಪಡಿಸಿದರು. ಖಗೋಳಶಾಸ್ತ್ರದಲ್ಲಿ ಅಲ್-ಸೂಫಿಯವರ ಶ್ಲಾಘ್ಯ ಕೊಡುಗೆಯೆಂದರೆ ದೂರದರ್ಶಕಗಳು ಶೋಧಿಸುವ ಹಲವಾರು ವರ್ಷಗಳ ಹಿಂದೆಯೇ ಸರಿಸುಮಾರು 960ರಲ್ಲಿ ಸೂಫಿಯವರು ನಮ್ಮ ನೆರೆಯ ನಕ್ಷತ್ರಪುಂಜವಾದ Large Magellanic Cloudಅನ್ನು ಪ್ರಪ್ರಥಮವಾಗಿ ಬರಿಗಣ್ಣಿನಿಂದ ಕಂಡುಹಿಡಿದದ್ದು ಖಗೋಳಶಾಸ್ತ್ರ ಅಧ್ಯಯನದ ಮೈಲಿಗಲ್ಲುಗಳಲ್ಲಿ ಒಂದಾಗಿದೆ! ದೂರದರ್ಶಕವಿಲ್ಲದೆ ಅವರು ಆಕಾಶಗಂಗೆಯಲ್ಲಿದ್ದ Great Nebulaವನ್ನು ಕಂಡು ಅದನ್ನು ದಟ್ಟ ಮೋಡ ಅಥವಾ ಗದಾಂಬರವೆಂದು ಗ್ರಹಿಸಿ, ತಮ್ಮ ಮೇರುಕೃತಿ 'The Book of Fixed Stars'ನಲ್ಲಿ ತಾವು ಕಂಡಿದ್ದು ಬೃಹತ್ ಮೋಡವೆಂದು ಪ್ರಕಟಿಸಿದರು. 

ಅದೇ ರೀತಿ, ಸೂಫಿಯವರು ನಮ್ಮ ನೆರೆಯ ಇನ್ನೊಂದು ಬೃಹತ್ ಆಕಾಶಗಂಗೆಯಾದ 'Andromeda Galaxy'ಯನ್ನು ಕಂಡು ಹಿಡಿದದ್ದು ನಿಖರವಾದ ಸಾಕ್ಷ್ಯಾಧಾರಗಳೊಂದಿಗೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. Small Magellanic Cloud ಎಂಬ ನಮ್ಮ ನೆರೆಯ ಇನ್ನೊಂದು ಬೃಹತ್ ಆಕಾಶಗಂಗೆಯನ್ನು ಕಂಡುಹಿಡಿದಿದ್ದ ಮನ್ನಣೆಯೂ ಅಲ್-ಸೂಫಿ ಅವರಿಗೆ ಸಲ್ಲುತ್ತದೆ. ಬೃಹತ್ ನಕ್ಷತ್ರಪುಂಜಗಳೊಂದಿಗೆ, ಅಲ್-ಸೂಫಿಯವರು ಹಲವಾರು South of Canopusನ ಮುಖ್ಯ ನಕ್ಷತ್ರಗಳನ್ನೂ ಕಂಡುಹಿಡಿದದ್ದು ಖಗೋಳಶಾಸ್ತ್ರ ಕ್ಷೇತ್ರಕ್ಕೆ ಪ್ರಧಾನಿಸಿದ ಶ್ಲಾಘ್ಯ ಕೊಡುಗೆಯಾಗಿದೆ. ಪ್ರತಿಫಲವಾಗಿ, ಚಂದ್ರನ ಮೇಲ್ಮೈಯಲ್ಲಿರುವ 47 ಕಿಲೋಮೀಟರು ಉದ್ದದ ಬಾಂಬುಕುಳಿಯೊಂದನ್ನು The Lunar Impact Crater of AlSufi ಎಂದು ಗುರುತಿಸಲಾಗುತ್ತಿದೆ. ಅಂತರೀಕ್ಷದಲ್ಲಿ ಗತಿಸುತ್ತಿರುವ Asteroid Beltನಲ್ಲಿರುವ ಕ್ಷುದ್ರಗ್ರಹವಾದ '12621 AlSufi'ಯನ್ನು ಶ್ರೀಯುತರ ಶುಭನಾಮದಿಂದ ಹೆಸರಿಸಲಾಗಿದೆ.   

ಖಗೋಳಶಾಸ್ತ್ರಕ್ಕೆ ಅಗತ್ಯವಾಗಿದ್ದ ಬೀಜಗಣಿತಕ್ಕೆ (Algebra) ಪರ್ಷಿಯಾದ ತಜ್ಞರು ಅನಂತ ಕೊಡುಗೆಗಳನ್ನು ಪ್ರಧಾನಿಸಿದ್ದಾರೆ. ಅವರು ಗೋಳಾಕಾರದ ತ್ರಿಕೋನಮಿತಿ ಮತ್ತು ಅಂಕಶಾಸ್ತ್ರವನ್ನು ಅಭಿವೃದ್ಧಿಸಿದರು; ನಕ್ಷತ್ರಗಳ ನಿಖರವಾದ ಲೆಕ್ಕಾಚಾರಗಳಿಗೆ ಗಣಿತದ ಮೂಲರೂಪಗಳನ್ನು ವೃದ್ಧಿಸಿದರು. ಪರ್ಷಿಯಾದ ಖಗೋಳತಜ್ಞರ ಕೊಡುಗೆಗಳು ಪ್ರಸಿದ್ಧ ಆಧುನಿಕ ತಜ್ಞರಿಗೆ ಬಹಳ ಉಪಯುಕ್ತವಾಯಿತು ಎಂದು ಇಂದೂ ಪಶ್ಚಿಮ ಜಗತ್ತು ಒಪ್ಪಿಗೆಯಿಲ್ಲದಿದ್ದರೂ ಒಪ್ಪಿಕೊಳ್ಳುತ್ತಾರೆ. 'ಪಾರಸ್'ನ ಗಗನಾದ್ಯಂತ ಪ್ರಜ್ವಲಿಸುತ್ತಿದ್ದ ದೇದೀಪ್ಯಮಾನ ಧ್ರುವತಾರೆಗಳನ್ನು ಕಂಡು ಜಗದ್ಪ್ರಸಿದ್ಧ ಕವಿ ಅಲ್ಲಮಾ ಇಕ್ಬಾಲ್ ಅವರು, "ಟೂಟೆ ಥೇ ಜೋ ಸಿತಾರೆ, ಫಾರಸ್ ಕೆ ಆಸ್ಮಾನ್ ಸೆ, ಫಿರ್ ತಾಬ್ ದೇಕೆ ಜಿಸ್ನೆ, ಚಮ್ಕಾಯೆ ಕೇಹ್ಕಶಾನ್ ಸೆ!"_ ಎಂದು ಹಾಡಿ ಹೊಗಳಿದರು.  

ಚಿತ್ರದಲ್ಲಿ: ಸ್ವರ್ಗಿಯ ನಿಕಾಯಗಳ ಚಲನೆಗಳ ಕುರಿತು ಅಲ್ ತುಸಿ ಅವರು ರಚಿಸಿದ ರೇಖಾಚಿತ್ರಗಳು

-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ