‘ಪೋಲಿ ಕಿಟ್ಟಿ’ ಯಾದ ಸರಳೆ ಸಿಳ್ಳಾರ

‘ಪೋಲಿ ಕಿಟ್ಟಿ’ ಯಾದ ಸರಳೆ ಸಿಳ್ಳಾರ

ಸುಮಾರು ಹತ್ತು ವರ್ಷದ ಹಿಂದೆ ನಾನು ಕುದುರೆಮುಖದ ಹತ್ತಿರದ ಸಂಸೆ ಶಾಲೆಯಲ್ಲಿ ಶಿಕ್ಷಕನಾಗಿದ್ದ ಸಂದರ್ಭದಲ್ಲಿ ವನ್ಯಜೀವಿ ಸಪ್ತಾಹದ ಕಾರಣಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಚಿತರಾಗಿದ್ದರು. ಹಾಗೆ ಪರಿಚಿತರಾದ ಫಾರೆಸ್ಟ್‌ ಗಾರ್ಡ್‌ ರಾಮಚಂದ್ರ ಹುಲಿ ಗಣತಿ ನಡೀಲಿಕ್ಕಿದೆ, ನೀವು ಸ್ವಯಂಸೇವಕರಾಗಿ ಸೇರಲು ಅವಕಾಶ ಇದೆ ಎಂದರು. ತಕ್ಷಣ ನನ್ನ ಹೆಸರನ್ನು ನೋಂದಾಯಿಸಿಕೊಂಡು ಸೇರಿಬಿಟ್ಟೆ. ಹುಲಿ ಗಣತಿಗೆ ಬೆಳ್ಳಂಬೆಳಗ್ಗೆ ಆರು ಗಂಟೆಗೆ ಕಾಡಿನ ಕೊರೆಯುವ ಚಳಿಯಲ್ಲಿ ಕೋಟು ಹಾಕಿಕೊಂಡು ಹೊರಟಿದ್ದವು. ಭದ್ರಾ ನದಿಗೆ ಸೇರುವ ಪುಟ್ಟ ಹಳ್ಳವೊಂದು ಅಲ್ಲಿ ಹರಿಯುತ್ತಿತು. ನಾವು ನಡೆದುಕೊಂಡು ಹೋಗುವಾಗ ಹಳ್ಳದ ಬಂಡೆಗಳ ನಡುವಿನಿಂದ ಯಾರೋ ಜೋರಾಗಿ ಸಿಳ್ಳೆ ಹೊಡೆಯುವುದು ಕೇಳುತ್ತಿತ್ತು. ಅರೆ ಇದ್ಯಾರು ಎಂದು ನಿಂತು ಹುಡುಕಿದರೆ ಅಲ್ಲಿ ಯಾವ ವ್ಯಕ್ತಿಯೂ ಇಲ್ಲ. ಮರುದಿನವೂ ಅದೇ ಹೊತ್ತಿಗೆ ನಡೆದು ಹೋಗುವಾಗಲೂ ಅದೇ ಜಾಗದಲ್ಲಿ ಅದೇ ಸಮಯಕ್ಕೆ ಸಿಳ್ಳೆ ಹೊಡೆಯುವ ಶಬ್ದ. ಖಾಲಿದಾರಿಯಲ್ಲಿ ಪೋಲಿ ಹುಡುಗನ್ನೊಬ್ಬ ಬಹಳ ಸಂತೋಷವಾಗಿ ನಿರಂತರವಾಗಿ ಸಿಳ್ಳೆ ಹೊಡೆದಂತೆ ಆ ಧ್ವನಿ. ನಾವು ನಮ್ಮ ಬಳಿ ಇದ್ದ ಆಗಿನ ಪುಟಾಣಿ ಮೊಬೈಲ್‌ ಫೋನಿನಲ್ಲಿ ಅದರ ಶಬ್ದವನ್ನು ರೆಕಾರ್ಡ್‌ ಮಾಡಿಕೊಂಡೆವು. 

ಹಿಂದೆ ಬಂದ ನಂತರ ಇತರರಿಗೆ ಇದನ್ನು ಕೇಳಿಸಿದಾಗ ಅವರಲ್ಲೊಬ್ಬರು ಇದರ ಬಗ್ಗೆ ಹಲವು ವಿವರಗಳನ್ನು ಹೇಳಿದರು. ಇದೊಂದು ಹಕ್ಕಿ, ನೀರು ಹರಿಯುವ ಜಾಗಗಳಲ್ಲಿ ಇದು ವಾಸ ಮಾಡುತ್ತದೆ. ಬಂಡೆಗಳ ನಡುವೆ ನಾರು, ಬೇರು, ಮಣ್ಣು ಎಲ್ಲ ಬಳಸಿ ಗೂಡು ಮಾಡುತ್ತದೆ. ಮಾರ್ಚ್‌ ತಿಂಗಳಿನಿಂದ ಆಗಸ್ಟ್‌ ವರೆಗೆ ಇದರ ಸಂತಾನಾಭಿವೃದ್ಧಿ ಕಾಲ. ಆ ಕಾಲದಲ್ಲಿ ಬೆಳಗಿನ ಜಾವ ಸೂರ್ಯೋದಯದ ಹೊತ್ತಿಗೆ ರಾಗವಾಗಿ ಏರಿಳಿತಗಳೊಂದಿಗೆ ಸಿಳ್ಳೆ ಹೊಡೆಯುತ್ತದೆ. ಹಾಗಾಗಿ ಈ ಹಕ್ಕಿಗೆ ಸಿಳ್ಳಾರ ಎಂಬ ಹೆಸರು ಇದೆ ಎಂದರು. ತನ್ನ ವಿಸಿಲ್‌ ಹೊಡೆಯುವ ಅಭ್ಯಾಸದ ಕಾರಣಕ್ಕಾಗಿ ಇದಕ್ಕೆ ಪೋಲಿಕಿಟ್ಟಿ ಎಂಬ ಅಡ್ಡ ಹೆಸರೂ ಇದೆ. ತನ್ನ ಸುಂದರವಾದ ಸಿಳ್ಳೆಯ ಕಾರಣಕ್ಕಾಗಿಯೇ ಜಗತ್ತಿನ ಅತ್ಯುತ್ತಮ ಹಾಡುವ ಹಕ್ಕಿಗಳಲ್ಲಿ ಈ ಸಿಳ್ಳೇಕ್ಯಾತನೂ ಒಂದು. ಬಂಡೆಗಳ ನಡುವೆ ಸಿಗುವ ಪುಟ್ಟ ಏಡಿ ಮತ್ತು ಮೃದ್ವಂಗಿಗಳೇ ಇದರ ಮುಖ್ಯ ಆಹಾರ. ಏಡಿ, ಕಪ್ಪೆಚಿಪ್ಪುಗಳ ಗಟ್ಟಿಯಾದ ಹೊರಕವಚವನ್ನು ಬಂಡೆಗೆ ಬಡಿದು ಒಡೆದು ತಿನ್ನುತ್ತದೆಯಂತೆ. 

ಇಷ್ಟೆಲ್ಲಾ ವಿಶೇಷತೆಗಳು ಇರುವ ಈ ಹಕ್ಕಿ ಮುಖ್ಯವಾಗಿ ನೋಡಲು ಸಿಗುವುದು ಭಾರತ ದೇಶದ ಪಶ್ಚಿಮ ಘಟ್ಟಗಳಲ್ಲಿ ಮಾತ್ರ. ಮೊನ್ನೆ ಬೇಸಿಗೆ ರಜೆಯಲ್ಲಿ ಕುದುರೇಮುಖದ ತಪ್ಪಲಿನ ಮಾಳ ಎಂಬ ಹಳ್ಳಿಯಲ್ಲಿರುವ ಸ್ನೇಹಿತ ಪುರುಷೋತ್ತಮರ ಮನೆಗೆ ಹೋಗಿದ್ದೆ. ಅವರ ಮನೆಯ ಸನಿಹದಲ್ಲಿರುವ ನೀರ ಝರಿಯಿಂದ ಬೆಳ್ಳಂಬೆಳಗ್ಗೆ ಇದೇ ಪೋಲಿಕಿಟ್ಟಿ ಕೂಗುವುದು ಕೇಳಿಸಿತು. ಇಂಪಾದ ಕೊಳನಿನ ಧ್ವನಿಯಂತೆ ಒಮ್ಮೆ ಕೇಳಿದರೆ ನೀವೆಂದೂ ಮರೆಯಲು ಸಾಧ್ಯವಾಗದ ಧ್ವನಿ ಈ ಹಕ್ಕಿಯದ್ದು. ಸದಾ ನೀರಹರಿವಿನ ನೆರಳಿನಲ್ಲೇ ಇರುವ ಹಕ್ಕಿಯ ಬಣ್ಣವೂ ನೆರಳಿನಂತೆಯೇ ಕಪ್ಪು. ಸ್ವಲ್ಪ ಬಿಸಿಲು ಬಿದ್ದರೆ ತಲೆ ಮತ್ತು ಬೆನ್ನಮೇಲಿನ ಕಡುನೀಲಿಬಣ್ಣ ಹೊಳೆಯುವುದು ಕಾಣುತ್ತದೆ. 

ಪಶ್ಚಿಮ ಘಟ್ಟ ಮತ್ತು ಕರಾವಳಿ ಭಾಗದಲ್ಲಿ ಹಲವಾರು ಜನ ಪಕ್ಷಿವೀಕ್ಷಕ ಮಿತ್ರರು ಈ ಹಕ್ಕಿಯನ್ನು ಗಮನಿಸಿ ದಾಖಲಿಸಿದ್ದಾರೆ. ಯಾವತ್ತಾದರೂ ಜಲಪಾತಗಳನ್ನು ನೋಡಲು ಹೋದರೆ ಈ ಹಕ್ಕಿ ಅಲ್ಲಿ ನಿಮಗೂ ಕಾಣಲು ಸಿಗಬಹುದು.

ಕನ್ನಡದ ಹೆಸರು: ಸರಳೆ ಸಿಳ್ಳಾರ

ಇಂಗ್ಲೀಷ್‌ ಹೆಸರು: Malabar Whistling-Thrush

ವೈಜ್ಞಾನಿಕ ಹೆಸರು: Myophonus horsfieldii

-ಅರವಿಂದ ಕುಡ್ಲ, ಬಂಟ್ವಾಳ