‘ಪ್ರಾರ್ಥನೆ ಕೀಟ' ವನ್ನು ಗಮನಿಸಿರುವಿರಾ?
ಕಳೆದ ವಾರ ನಾನು ‘ಕೀಟಗಳನ್ನು ವೀಕ್ಷಿಸುವ ಹವ್ಯಾಸ' ಬಗ್ಗೆ ಬರೆದಿದ್ದೆ. ಇದು ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿದೆ. ದಿನ ಬೆಳಗಾದರೆ ಮನೆಯ ಅಂಗಳಕ್ಕೆ ಬರುವ ಹಲವಾರು ಚಿಟ್ಟೆಗಳನ್ನು ನಾವು ನೋಡಿಯೇ ಇರುತ್ತೇವೆ. ಆದರೆ ಅದನ್ನು ಸೂಕ್ಷ್ಮವಾಗಿ ಗಮನಿಸಲು ಹೋಗುವುದೇ ಇಲ್ಲ. ಇದು ಎಲ್ಲರ ಮನದಾಳದ ಮಾತು. ಇದೇ ಲೇಖನದ ಮುಂದುವರಿದ ಭಾಗವಾದ ‘ಪ್ರಾರ್ಥನೆ ಕೀಟ' ದ ಬಗ್ಗೆ ಸ್ವಲ್ಪ ಮಾಹಿತಿ ನೀಡಲಿರುವೆ.
ಪ್ರಾರ್ಥನಾ ಕೀಟ (Praying Mantis) ಎಂಬ ಕೀಟವನ್ನು ನೀವು ಒಂದಲ್ಲಾ ಒಂದು ಸಂದರ್ಭದಲ್ಲಿ ನೋಡಿಯೇ ಇರುತ್ತೀರಾ. ಈ ಕೀಟವನ್ನು ಮೊಂಟೆ, ತಾತಪ್ಪ ಮೊದಲಾದ ಹೆಸರಿನಿಂದ ಕರೆಯುತ್ತಾರೆ. ಈ ಕೀಟಗಳಲ್ಲಿ ಸುಮಾರು ೨ ಸಾವಿರಕ್ಕೂ ಅಧಿಕ ಪ್ರಬೇಧಗಳಿವೆ. ನಮ್ಮ ತೋಟದಲ್ಲಿ, ಮನೆಯ ಅಂಗಳದಲ್ಲಿ ನೋಡಲು ಸಿಗುವ ಮೊಂಟೆಯ ಬಣ್ಣ ಹಸುರಾಗಿದ್ದು, ಗಿಡಗಳ ನಡುವೆ ಇದ್ದರೆ ಅದನ್ನು ಹುಡುಕುವುದೇ ಒಂದು ಸವಾಲು. ಈ ವರ್ಣ ಈ ಮೊಂಟೆಯನ್ನು ಶತ್ರುಗಳಿಂದ ರಕ್ಷಿಸುವುದರಲ್ಲಿ ಸಫಲವಾಗುತ್ತದೆ. ಇದರ ಮುಂದಿನ ಕಾಲುಗಳನ್ನು ಕೊಕ್ಕೆಯಾಕಾರದ ವಿನ್ಯಾಸವನ್ನು ಹೊಂದಿದ್ದು, ಅದು ನಮ್ಮ ಕೈಗಳಂತೆ ಕೆಲಸ ಮಾಡುತ್ತದೆ. ಅವುಗಳು ಜೋಡಿಸಿದಾಗ ‘ನಮಸ್ಕಾರ' ಹಾಕುವಂತೆ ಕಾಣಿಸುತ್ತದೆ. ಈ ಕಾರಣದಿಂದ ಈ ಕೀಟಕ್ಕೆ ‘ಪ್ರಾರ್ಥನೆ ಕೀಟ' ಎಂಬ ಹೆಸರು ಬಂದಿದೆ.
ಆರು ಕಾಲುಗಳಿರುವ ಈ ಕೀಟದ ಹಿಂದಿನ ನಾಲ್ಕು ಕಾಲುಗಳು ಬೇಟೆಯನ್ನು ಹಿಡಿಯಲು ಸಕ್ಷಮವಾಗಿದೆ. ನಮಸ್ಕಾರ ಮಾಡುವ ಭಂಗಿಯನ್ನು ನೋಡಿ ಕೀಟ ಬಹಳ ‘ಪಾಪದ್ದು' ಎಂದು ಎಣಿಸಬೇಡಿ. ಇದು ಸಸ್ಯಾಹಾರಿ ಕೀಟವಲ್ಲ, ನೋಡಲು ಬಡಪಾಯಿ ಕೀಟದಂತೆ ಕಂಡರೂ ಅಪ್ಪಟ ಮಾಂಸಹಾರಿಗಳು ! ಹೂವಿನ ಪರಾಗವನ್ನು ಹೀರಲು ಬರುವ ಚಿಟ್ಟೆ, ಪತಂಗ, ಕಪ್ಪೆ, ಹಲ್ಲಿ ಮೊದಲಾದುವುಗಳನ್ನು ಗಬಕ್ಕನೇ ಹಿಡಿದು ತಿನ್ನುತ್ತವೆ. ದೊಡ್ಡ ಗಾತ್ರದ ಮೊಂಟೆಗಳು ಕೆಲವು ಸಲ ಹಕ್ಕಿಯನ್ನು ಹಿಡಿದು ತಿಂದದ್ದೂ ಇದೆ. ಹೆಚ್ಚಾಗಿ ಈ ಮೊಂಟೆಗಳು ಹೂವಿನ ಗಿಡದಲ್ಲೇ ಇರುತ್ತವೆ. ಮಕರಂದ ಹೀರಲು ಬರುವ ಚಿಟ್ಟೆಯನ್ನು ಹಿಡಿದು ತಿಂದು ಬಿಡುತ್ತವೆ.
ಇಂತಹ ಹಲವಾರು ಅಚ್ಚರಿದಾಯಕ ಕೀಟಗಳು ನಮ್ಮ ಸುತ್ತಮುತ್ತಲಿನಲ್ಲೇ ಇವೆ. ಸೂಕ್ಸ್ಮವಾಗಿ ನೋಡಿದರೆ ಆ ಕೀಟಗಳು ಇನ್ನಷ್ಟು ಆಕರ್ಷಣೀಯವಾಗಿ ಕಾಣಿಸುತ್ತವೆ.
ಚಿತ್ರ ಕೃಪೆ: ಅಂತರ್ಜಾಲ ತಾಣ