‘ಪ್ರೇಮಲೋಕ' ಸಿನೆಮಾ ಪ್ರೇಕ್ಷಕರ ಮನಗೆದ್ದು ದಾಖಲೆ ಸೃಷ್ಟಿಸಿದ್ದು ಹೇಗೆ?

‘ಪ್ರೇಮಲೋಕ' ಸಿನೆಮಾ ಪ್ರೇಕ್ಷಕರ ಮನಗೆದ್ದು ದಾಖಲೆ ಸೃಷ್ಟಿಸಿದ್ದು ಹೇಗೆ?

“ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು...", ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ..." “ಯಾರಿವನು?..." “ಹೇ..ಗ಼ಂಗು... ಬೈಕು ಕಲಿಸಿಕೊಡು ನಂಗೂ..." ಮೊದಲಾದ ಪಡ್ಡೆ ಹುಡುಗರ ನಿದ್ರೆ ಕೆಡಿಸಿದ ಹಾಡುಗಳು “ಪ್ರೇಮ ಲೋಕ" ಚಿತ್ರದ್ದು ಎಂದು ಮತ್ತೆ ಹೇಳಬೇಕಿಲ್ಲ ಅಲ್ಲವೇ? ರವಿಚಂದ್ರನ್, ಜ್ಯೂಲಿ (ಜ್ಯೂಹಿ ಚಾವ್ಲಾ) ನಟಿಸಿದ ಈ ಚಿತ್ರ ೮೦ರ ದಶಕದಲ್ಲಿ ಸಿನೆಮಾ ರಂಗದಲ್ಲಿ ಒಂದು ದಾಖಲೆಯನ್ನೇ ಸೃಷ್ಟಿಸಿತ್ತು. ಆದರೆ ನಿಮಗೆ ಗೊತ್ತೇ ಈ ಚಿತ್ರ ಬಿಡುಗಡೆಯಾಗಿ ನಾಲ್ಕು ವಾರಗಳಾದರೂ ಸಿನೆಮಾ ಮಂದಿರಕ್ಕೆ ಪ್ರೇಕ್ಷಕರೇ ಬಂದಿರಲಿಲ್ಲ. ಸೂಪರ್ ಫ್ಲಾಪ್ ಆಗಲು ಹೊರಟಿದ್ದ ಚಿತ್ರ ನಂತರ ಸೂಪರ್ ಹಿಟ್ ಆದ ರಹಸ್ಯವೇನು? 

‘ಪ್ರೇಮ ಲೋಕ’ ಸಿನೆಮಾ ತೆರೆಕಂಡದ್ದು ೧೯೮೭ರಲ್ಲಿ. ಈ ಸಿನೆಮಾವನ್ನು ರವಿಚಂದ್ರನ್ ಅವರೇ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ್ದು ತಮ್ಮ ೨೬ನೇ ವಯಸ್ಸಿನಲ್ಲಿ. ಆಗಿನ್ನೂ ಅವರು ಪೂರ್ಣ ಪ್ರಮಾಣದ ನಾಯಕನಾಗಿ ಅಷ್ಟೊಂದು ಯಶಸ್ಸನ್ನೂ ಕಂಡಿರಲಿಲ್ಲ. ಖದೀಮ ಕಳ್ಳರು, ಚಕ್ರವ್ಯೂಹ ಮುಂತಾದ ಒಂದೆರಡು ಚಿತ್ರದಲ್ಲಿ ಸಹ ನಟನಾಗಿಯಷ್ಟೇ ಅನುಭವವಿದ್ದ ರವಿಚಂದ್ರನ್ ‘ನಾನು ನನ್ನ ಹೆಂಡ್ತಿ' ಯಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದರು. ಆದರೆ ಅದು ಅಷ್ಟಾಗಿ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಲಿಲ್ಲ. ನಿರ್ಮಾಪಕ, ನಿರ್ದೇಶಕನಾಗಿ ರವಿಚಂದ್ರನ್ ಈ ಚಿತ್ರಕ್ಕಾಗಿ ಮಾಡಿದ ವೆಚ್ಚ ೧.೫ ಕೋಟಿ ರೂಪಾಯಿಗಳು. ಎಂಬತ್ತರ ದಶಕದಲ್ಲಿ ಕೋಟಿ ಖರ್ಚು ಮಾಡಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದವರು ಬಹಳ ಕಡಿಮೆ ಜನ. 

೧೯೮೭ರಲ್ಲಿ ತೆರೆಕಂಡ ಒಟ್ಟು ಚಿತ್ರಗಳು ೬೦. ಇವುಗಳಲ್ಲಿ ಹಿಟ್ ಆದ ಚಿತ್ರಗಳ ಸಂಖ್ಯೆ ೮. ಅದರಲ್ಲಿ ರವಿಚಂದ್ರನ್ ನಟನೆಯ ಚಿತ್ರಗಳು ೨. ಅವರ ಪ್ರೇಮಲೋಕ ಹಾಗೂ ರಣಧೀರ ಎರಡೂ ಚಿತ್ರಗಳು ಇದೇ ವರ್ಷ ತೆರೆಕಂಡವು. ಪ್ರೇಮಲೋಕದ ಯಶಸ್ಸಿನ ಬಳಿಕ ಹೊರಬಂದ ರಣಧೀರವೂ ಬಹುದೊಡ್ಡ ಯಶಸ್ಸನ್ನು ಕಂಡಿತು. ಪ್ರೇಮಲೋಕದ ಚಿತ್ರಕಥೆಯನ್ನು ಬರೆದವರೂ ರವಿಚಂದ್ರನ್ ಅವರೇ ಆಗಿದ್ದರು. ಈ ಚಿತ್ರದ ಯಶಸ್ಸಿನಲ್ಲಿ ಬಹುದೊಡ್ಡ ಪಾತ್ರ ವಹಿಸಿದ ಇನ್ನೊರ್ವ ವ್ಯಕ್ತಿ ಸಂಗೀತಕಾರರಾದ ಹಂಸಲೇಖ. ಈ ಚಿತ್ರದಲ್ಲಿ ಹತ್ತು ಹಾಡುಗಳಿದ್ದವು. ಅವುಗಳೆಲ್ಲವೂ ಸೂಪರ್ ಹಿಟ್ ಆಗಿದ್ದವು. ಕೆಲವು ಕಡೆ ಗದ್ಯವನ್ನೂ ಹಾಡಿನ ರೂಪದಲ್ಲೇ ನಿರೂಪಿಸಿರುವುದು ಬಹಳಷ್ಟು ಜನರಿಗೆ ಮೆಚ್ಚುಗೆಯಾಯಿತು. ಕೆಲವು ಹಾಡುಗಳ ಟ್ಯೂನ್ ಗಳಲ್ಲಿ ಹಾಲಿವುಡ್ ಚಿತ್ರಗಳ ಛಾಯೆ ಕಂಡು ಬಂದರೂ ಹಂಸಲೇಖಾ ಅವರ ಸಂಗೀತ ಮತ್ತು ಹಾಡುಗಳು ಜನರಿಗೆ ಇಷ್ಟವಾದುವು. ಅಲ್ಲಿಯವರೆಗೆ ಕೇವಲ ‘ಗಂಗರಾಜು’ ಆಗಿದ್ದ ವ್ಯಕ್ತಿ ಈ ಚಿತ್ರದ ಬಳಿಕ ಹಂಸಲೇಖಾ ಎಂದು ಗುರುತಿಸಿಕೊಂಡರು. ರವಿಚಂದ್ರನ್-ಹಂಸಲೇಖಾ ಜೋಡಿ ನಂತರದ ದಿನಗಳಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿತು.

ಪ್ರೇಮ ಲೋಕ ಚಿತ್ರ ನಿರ್ಮಾಣಕ್ಕಾಗಿ ಇನ್ನೂ ಸರಿಯಾಗಿ ಮೀಸೆ ಮೂಡದ ರವಿಚಂದ್ರನ್ ಒಂದೂವರೆ ಕೋಟಿ ಹಣವನ್ನು ಸುರಿದದ್ದು ಗಾಂಧೀನಗರದಲ್ಲಿ ಅಂದು ದೊಡ್ಡ ಸುದ್ದಿಯೇ ಆಗಿಹೋಗಿತ್ತು. ಅವರೆಲ್ಲಾ ಇದು ‘ಹುಡುಗು ಬುದ್ದಿಯ ಹುಡುಗಾಟ’ ಎಂದು ಹಾಸ್ಯ ಮಾಡತೊಡಗಿದರು. ಅವರ ಕುಚೇಷ್ಟೆಯು ಚಿತ್ರ ಬಿಡುಗಡೆಯಾದ ಮೊದಲ ಕೆಲ ವಾರಗಳಲ್ಲಿ ಸತ್ಯವಾಗಿಬಿಟ್ಟಿತ್ತು. ಚಿತ್ರ ಬಿಡುಗಡೆಯಾಗಿ ನಾಲ್ಕು ವಾರಗಳು ಕಳೆದರೂ ಚಿತ್ರ ನೋಡಲು ಪ್ರೇಕ್ಷಕ ಮಹಾಪ್ರಭು ಮನಸ್ಸು ಮಾಡಿರಲಿಲ್ಲ. ರವಿಚಂದ್ರನ್ ಜೊತೆ ಆತನ ಅಪ್ಪ ಎನ್. ವೀರಾಸ್ವಾಮಿಯವರೂ ತಲೆಯ ಮೇಲೆ ಕೈ ಇಟ್ಟು ಕುಳಿತುಬಿಟ್ಟಿದ್ದರಂತೆ. ಹಿತಶತ್ರುಗಳಿಗೆ ಇದು ಹಾಲಿಗೆ ಜೇನು ಹಾಕಿ ಕುಡಿದ ಅನುಭವ.

ಆದರೆ ಪ್ರಾಮಾಣಿಕ ಪ್ರಯತ್ನ ಮತ್ತು ಅವಿರತ ಶ್ರಮಕ್ಕೆ ತಕ್ಕ ಬೆಲೆ ಸಿಕ್ಕೇ ಸಿಗುತ್ತದೆ ಎಂಬ ಮಾತಿನಂತೆ ಪ್ರೇಮಲೋಕ ಐದನೇ ವಾರಕ್ಕೆ ಕಾಲಿಟ್ಟಾಗ ಜನ ಚಿತ್ರ ನೋಡಲು ಮುಗಿ ಬೀಳಲು ಪ್ರಾರಂಭಿಸಿದರು. ಪ್ರೇಮಲೋಕ ಚಿತ್ರ ‘ಹೌಸ್ ಫುಲ್’ ಬೋರ್ಡ್ ಕಂಡದ್ದೇ ಐದನೇ ವಾರದಲ್ಲಿ ಎನ್ನುವುದು ಗಮನಾರ್ಹ ಸಂಗತಿ. ಗಾಂಧೀನಗರದಲ್ಲಿ ಯಾರೆಲ್ಲಾ ಕುಹಕವಾಡಿ ನಕ್ಕಿದ್ದರೋ ಅವರೆಲ್ಲಾ ಮೂಗಿನ ಮೇಲೆ ಬೆರಳಿಟ್ಟು ತಲೆಕೆಡಿಸಿಕೊಳ್ಳತೊಡಗಿದರು. ನಂತರ ನೋಡು ನೋಡುತ್ತಲೇ ಜನರು ಸಿನೆಮಾ ಮಂದಿರಕ್ಕೆ ಪ್ರವಾಹದಂತೆ ನುಗ್ಗತೊಡಗಿದರು. ದಿಗ್ವಿಜಯ ಸಾಧಿಸಿದ ಸಂಭ್ರಮದಲ್ಲಿ ರವಿಚಂದ್ರನ್ ಕಡೆಗೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಹಾಗಾದರೆ ಈ ಚಿತ್ರ ಮೊದಲ ನಾಲ್ಕು ವಾರಗಳಲ್ಲಿ ಏಕೆ ಪವಾಡ ಮಾಡಲಿಲ್ಲ? ಇದು ಇನ್ನೂ ಸರಿಯಾಗಿ ಹೇಳಲು ಚಿತ್ರ ಪಂಡಿತರಿಗೂ ಸಾಧ್ಯವಾಗಿಲ್ಲ.

ಬಹಳಷ್ಟು ಮಂದಿಯ ಪ್ರಕಾರ ಈ ಚಿತ್ರದ ನಿರೂಪಣಾ ಶೈಲಿ ಬಹಳ ಹೊಚ್ಚ ಹೊಸದಾಗಿತ್ತು. ಯುವಕ ಯುವತಿಯರಿಗೆ ಹೇಳಿ ಮಾಡಿಸಿದ ಹಾಗೆ ಇತ್ತು. ಚಿತ್ರವಿಡೀ ಇದ್ದ ಕಾವ್ಯಾತ್ಮಕ ನಿರೂಪಣೆ ಚಿತ್ರರಂಗದಲ್ಲಿ ಹೊಸದೊಂದು ಟ್ರೆಂಡ್ ಸೃಷ್ಟಿಸಿತು. ಮ್ಯೂಜಿಕಲ್ ನೈಟ್ ಗಳಲ್ಲಿ, ಬಾರ್-ಪಬ್ ಗಳಲ್ಲಿ, ಮದುವೆ-ಮೆಹಂದಿ ಕಾರ್ಯಕ್ರಮಗಳಲ್ಲಿ, ಸಂಗೀತ ರಸಸಂಜೆಗಳಲ್ಲಿ ಪ್ರೇಮಲೋಕದ ಹಾಡುಗಳು ಅನಿವಾರ್ಯವಾದವು. ಯುವ ಪೀಳಿಗೆಯ ಪಡ್ಡೆ ಹುಡುಗರಿಗಂತೂ ಈ ಚಿತ್ರದ ಹಾಡುಗಳು ಹೊಸ ಬದಲಾವಣೆಯನ್ನೇ ತಂದುಕೊಟ್ಟವು. ಆ ಸಮಯದಲ್ಲಿ ಮೊಬೈಲ್ ಏನಾದರೂ ಇದ್ದಿದ್ದರೆ ಈ ಚಿತ್ರದ ಹಾಡುಗಳೇ ಅವರೆಲ್ಲರ ರಿಂಗ್ ಟೋನ್ ಗಳಾಗುತ್ತಿದ್ದವು ಎನ್ನುವುದು ನೂರು ಶೇಕಡಾ ಸತ್ಯ.

ಹೆತ್ತವರ ಪ್ರೀತಿಯನ್ನೇ ಕಾಣದ ಯುವಕನೊಬ್ಬ ಆ ಪ್ರೀತಿಯನ್ನು ತನ್ನ ಪ್ರಿಯತಮಳಿಂದ ಪಡೆದುಕೊಳ್ಳಲು ಬಯಸುವ ಸಿಂಗಲ್ ಲೈನ್ ಕಥೆ ಪ್ರೇಮಲೋಕದ್ದು. ಈ ಚಿತ್ರದ ಮುಖ್ಯ ಹೈಲೈಟ್ ಎಂದರೆ ಮೊದಲೇ ಹೇಳಿದಂತೆ ಹಾಡುಗಳು ಮತ್ತು ಆ ಹಾಡುಗಳನ್ನು ನಿರೂಪಿಸಿದ ರೀತಿ. ಕಣ್ಣು ಕೋರೈಸುವ ಲೈಟ್ ಗಳು, ಜಗಮಗಿಸುವ ಲೈಟ್ ಗಳು, ವಿಶಿಷ್ಟ ಶೈಲಿಯ ರಾಗ, ದುಬಾರಿ ವಿದೇಶೀ ಬೈಕು ಇವೆಲ್ಲಾ ಚಿತ್ರದ ಹೈಲೈಟ್. ಈ ಚಿತ್ರಕ್ಕಾಗಿ ರವಿಚಂದ್ರನ್ ಮುಂಬೈಯಿಂದ ಇನ್ನೂ ಜನಪ್ರಿಯತೆಯನ್ನು ಗಳಿಸದೇ ಇದ್ದ ಜ್ಯೂಹಿ ಚಾವ್ಲಾಳನ್ನು ಕರೆತಂದಾಗ ತುಂಬಾ ಜನರು ಹಾಸ್ಯ ಮಾಡಿ ನಕ್ಕರು. ಆದರೆ ಅದೇ ಜ್ಯೂಹಿ ಚಾವ್ಲಾ ಕನ್ನಡದಲ್ಲಿ ‘ಜೂಲಿ’ ಆಗಿ ‘ನಿಂಬೆ ಹಣ್ಣಿನಂತ ಹುಡುಗಿ' ಆದಾಗ ಹಾಸ್ಯ ಮಾಡಿದ ಜನ ಬಾಯಿ ಬಾಯಿ ಬಿಟ್ಟರು. ರವಿಚಂದ್ರನ್ ಜ್ಯೂಹಿಗೆ ಕೊಟ್ಟ ಸಂಭಾವನೆ ಇಪ್ಪತ್ತೇಳು ಸಾವಿರ. ಆದರೆ ಚಿತ್ರೀಕರಣಕ್ಕೆ ಬಂದಾಗ ಆಕೆ ಉಳಿದುಕೊಂಡಿದ್ದ ಹೋಟೇಲ್ ನ ಬಿಲ್ ರೂ. ನಾಲ್ಕು ಲಕ್ಷ !

ಈ ಚಿತ್ರದ ಮೂಲಕ ಛಾಯಾಗ್ರಾಹಕ ಮಧುಸೂದನ್, ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್ ಬಹು ಬೇಡಿಕೆಯ ತಂತ್ರಜ್ಞರಾದರು. ಎಸ್ ಪಿ ಬಾಲಸುಬ್ರಮಣ್ಯ, ಜೇಸುದಾಸ್, ಎಸ್ ಜಾನಕಿ, ಚಿತ್ರಾ ಇವರ ಮಧುರ ಕಂಠವೂ ಚಿತ್ರದ ಯಶಸ್ಸಿನಲ್ಲಿ ದೊಡ್ದ ಪಾತ್ರವಹಿಸಿತು. ಆ ಸಮಯದ ಸೂಪರ್ ಸ್ಟಾರ್ ಗಳಾದ ಟೈಗರ್ ಪ್ರಭಾಕರ್, ರೆಬೆಲ್ ಸ್ಟಾರ್ ಅಂಬರೀಶ್, ಸಾಹಸಸಿಂಹ ವಿಷ್ಣುವರ್ಧನ್, ಊರ್ವಶಿ ಇವರೆಲ್ಲಾ ಅತಿಥಿ ಕಲಾವಿದರಾಗಿ ನಟಿಸಿದ್ದು ರವಿಚಂದ್ರನ್ ಅವರ ತಂದೆ ವೀರಾಸ್ವಾಮಿ ಮೇಲಿನ ಗೌರವದಿಂದಲೇ ಎಂದರೆ ತಪ್ಪಾಗದು. ಎನ್ ವೀರಾಸ್ವಾಮಿಯವರ “ಈಶ್ವರಿ ಪಿಕ್ಚರ್ಸ್" ಲಾಂಛನದಲ್ಲಿ ತಯಾರಾದ ಈ ಚಿತ್ರದ ಹಾಡುಗಳನ್ನು ಹೊತ್ತ ಕ್ಯಾಸೆಟ್ ಗಳೂ ದಾಖಲೆ ಸಂಖ್ಯೆಯಲ್ಲಿ ಮಾರಾಟವಾದವು. ನಂತರದ ದಿನಗಳಲ್ಲಿ ರವಿಚಂದ್ರನ್ ತಮ್ಮ ನಟನೆಯಲ್ಲೂ ಬಹಳಷ್ಟು ಮಾಗಿದರು. ಉತ್ತಮ ನಿರ್ದೇಶಕರಾದರು, ತಂತ್ರಜ್ಞರಾದರು. ಹೀಗೆ ಒಬ್ಬ ಜಾಣ ಉದ್ಯಮಿಯೂ ಆಗಿಬಿಟ್ಟರು. ಇದಕ್ಕೆಲ್ಲಾ ನಾಂದಿ ಹಾಡಿದ್ದು ಪ್ರೇಮಲೋಕ ಎಂಬ ಅದ್ಭುತ ಸಂಗೀತಮಯ ಚಿತ್ರ ಎಂದರೆ ತಪ್ಪಾಗಲಾರದು.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ