‘ಬಂಧನ' ಚಲನಚಿತ್ರ ಹಿಟ್ ಆಗದೇ ಇದ್ದಿದ್ದರೆ…

‘ಬಂಧನ' ಚಲನಚಿತ್ರ ಹಿಟ್ ಆಗದೇ ಇದ್ದಿದ್ದರೆ…

ಖಂಡಿತಕ್ಕೂ ವಿಷ್ಣುವರ್ಧನ್ ಮದ್ರಾಸ್ (ಈಗಿನ ಚೆನ್ನೈ) ಪಾಲಾಗುತ್ತಿದ್ದರು. ಏಕೆ ಅಂತೀರಾ, ಇಲ್ಲಿದೆ ಅದರ ಹಿಂದಿನ ಕಥೆ. ‘ಬಂಧನ’ ಚಿತ್ರ ಬಿಡುಗಡೆಗೂ ಮುನ್ನ ವಿಕೃತ ಮನಸ್ಸಿನ ಕೆಲವು ಮಂದಿ ವಿಷ್ಣುವರ್ಧನ್ ಅವರಿಗೆ ನಾನಾ ಬಗೆಯ ಕಿರುಕುಳ ನೀಡುತ್ತಿದ್ದರು. ಕಾರಿಗೆ ದೊಣ್ಣೆ ಬಿಸಾಕಿ ಅದರ ಗ್ಲಾಸ್ ಒಡೆದುಹಾಕುವುದು, ಮನೆಗೆ ಕಲ್ಲು ಬಿಸಾಕುವುದು, ಸಿನೆಮಾ ಪೋಸ್ಟರ್ ಗಳಿಗೆ ಸೆಗಣಿ ಮೆತ್ತುವುದು, ಅವಾಚ್ಯ ಪದಗಳಿಂದ ನಿಂದಿಸುವುದು ಇವೆಲ್ಲಾ ಸತತವಾಗಿ ನಡೆಯುತ್ತಲೇ ಇತ್ತು. ಯಾರು, ಯಾವ ಕಾರಣಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ ಎನ್ನುವ ವಿಚಾರ ಸ್ವತಃ ವಿಷ್ಣುವರ್ಧನ್ ಅವರಿಗೂ ತಿಳಿದಿರಲಿಲ್ಲ. ಈ ರೀತಿಯ ನಿರಂತರ ಹಿಂಸೆಯನ್ನು ತಡೆಯಲಾರದೇ ಅವರು ಬೆಂಗಳೂರು ಬಿಟ್ಟು ಮದ್ರಾಸಿಗೆ ಹೋಗುವ ಆಲೋಚನೆ ಮಾಡಿದ್ದರು. ಅದೇ ವಿಷಯ ಹೇಳಲು ಪತ್ರಿಕಾ ಗೋಷ್ಟಿಯನ್ನೂ ಕರೆದಿದ್ದರು. ಆದರೆ ಅದೇ ಸಮಯ ಅವರು ನಟಿಸಿದ ‘ಬಂಧನ' ಚಿತ್ರ ಯಶಸ್ಸು ಕಾಣುತ್ತಿರುವ ಸುದ್ದಿ ಕೇಳಿಬರತೊಡಗಿತು. ಚಿತ್ರದ ಯಶಸ್ಸಿನಿಂದ ಸಂತೋಷಗೊಂಡ ವಿಷ್ಣುವರ್ಧನ್ ತಮಗೆ ಕಿರುಕುಳ ನೀಡುವವರಿಗಿಂತ ಪ್ರೀತಿಸುವವರ ಸಂಖ್ಯೆ ಜಾಸ್ತಿ ಇದೆ ಎಂದು ತಿಳಿದುಕೊಂಡು ಶಾಶ್ವತವಾಗಿ ಕರ್ನಾಟಕದಲ್ಲೇ ನೆಲೆಸುವ ನಿರ್ಧಾರ ಕೈಗೊಂಡರು. ಹೀಗೆ ಒಂದು ಚಿತ್ರದ ಯಶಸ್ಸು ಕನ್ನಡ ಚಿತ್ರರಂಗದ ಅನರ್ಘ್ಯ ರತ್ನವನ್ನು ಕಾಪಾಡಿತು.

ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದ ‘ಬಂಧನ’ ಚಿತ್ರ ಬಿಡುಗಡೆಯಾದಾಗ ಬೆಂಗಳೂರಿನ ಖ್ಯಾತ ಚಿತ್ರಮಂದಿರಗಳಲ್ಲಿ ‘ಶರಾಬಿ', ‘ಸಾಗರ ಸಂಗಂ’, ‘ಹೀರೋ’ ಮೊದಲಾದ ಖ್ಯಾತನಾಮರ ಪರಭಾಷಾ ಚಿತ್ರಗಳು ರಜತಮಹೋತ್ಸವ ಆಚರಿಸಿಕೊಂಡು ಸ್ವರ್ಣ ಮಹೋತ್ಸವದತ್ತ ಮುನ್ನುಗ್ಗುತ್ತಿದ್ದವು. ಆದರೆ ಅಪ್ಪಟ ಕನ್ನಡ ಚಿತ್ರ ‘ಬಂಧನ' ಈ ಎಲ್ಲಾ ಚಿತ್ರಗಳ ಸುನಾಮಿಯ ಮುಂದೆ ದೃಢವಾಗಿ ನಿಂತು ಜಯ ಸಾಧಿಸಿತು. “ಕನ್ನಡ ಚಿತ್ರರಂಗದ ಇತಿಹಾಸ" ಎಂಬ ಫಿಲಂ ಚೇಂಬರ್ ಪ್ರಕಟಿಸಿದ ಗ್ರಂಥದಲ್ಲಿ ಬಂಧನ ಸಿನೆಮಾ ಬಗ್ಗೆ ಬರೆದ ಮಾತುಗಳು ಉಲ್ಲೇಖನೀಯ. 

ಅದರಲ್ಲಿ “ಸಾಮಾನ್ಯವಾದ ಕಥೆಯೊಂದನ್ನು ತಮ್ಮ ಅಸಾಮಾನ್ಯ ನಿರೂಪಣೆಯೊಂದಿಗೆ ಚಿತ್ರವನ್ನು ಒಂದು ಅಪೂರ್ವ ಅನುಭವವನ್ನಾಗಿ ಮಾಡಿದ್ದು ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರ ಜಾಣ್ಮೆಯ ನಿರ್ದೇಶನ. ಡಾ. ಹರೀಶ್ ಪಾತ್ರದಲ್ಲಿ ವಿಷ್ಣುವರ್ಧನ್ ಮತ್ತು ನಂದಿನಿ ಪಾತ್ರದಲ್ಲಿ ಸುಹಾಸಿನಿ ಪಾತ್ರವೇ ತಾವಾಗಿ ನಟಿಸಿದ್ದಾರೆ. ನಡುವೆ ಇವರ ನಿರ್ವಾಜ್ಯ ಸ್ನೇಹಕ್ಕೆ ಹುಳಿ ಹಿಂಡುವ ಪಾತ್ರದಲ್ಲಿ ಜೈಜಗದೀಶ್ ಪ್ರೇಕ್ಷಕರ ದೃಷ್ಟಿಯನ್ನು ವಿಲನ್ ಆಗಿಯೇ ಉಳಿದು ಬಿಡುತ್ತಾರೆ ! ಇದು ಅವರ ಅಭಿನಯ ಸಾಮರ್ಥ್ಯಕ್ಕೆ ಸಂದ ಗೌರವವೆಂದೇ ಹೇಳಬೇಕು ! ಈ ಸಿನೆಮಾದಲ್ಲಿ ಬರುವ ಕೆಲವು ದೃಶ್ಯಗಳು ಮನುಷ್ಯನ ಶಕ್ತಿಗೆ ಅತೀತವಾದದ್ದು ಮತ್ತು ಮೂಢ ನಂಬಿಕೆಗಳನ್ನು ಪ್ರೋತ್ಸಾಹಿಸುವಂಥದ್ದು ಎಂಬರ್ಥದ ಕೆಲವು ಟೀಕೆ ಟಿಪ್ಪಣಿಗಳು ಕೇಳಿ ಬಂದದ್ದು ನಿಜ. ಆದರೆ ಈ ದೃಶ್ಯದಲ್ಲಿ ನಮ್ಮ ಪುರಾಣ ಪರಂಪರೆಯಲ್ಲು ಕಾಣುವ ‘ಮಹಾತ್ಯಾಗ'ದ ಅಂಶವೇ ಪ್ರಧಾನವಾಗಿದ್ದದ್ದು ಮತ್ತು ಈ ಅಂಶವೇ ಚಿತ್ರದ ಯಶಸ್ಸಿಗೆ ಪೂರಕವಾದದ್ದು ನಿರ್ವಿವಾದ !” ಎಂದು ಉಲ್ಲೇಖಿಸಲಾಗಿದೆ.

ನಿಜವಾಗಿ ನೋಡ ಹೋದರೆ ಬಂಧನ ಚಿತ್ರವು ಖ್ಯಾತ ಕಾದಂಬರಿಗಾರ್ತಿ ಉಷಾ ನವರತ್ನರಾಂ ಅವರ ಕಾದಂಬರಿಯನ್ನು ಆಧರಿಸಿದ ಚಿತ್ರ. ಈ ಕಥೆಯಲ್ಲಿ ಅಷ್ಟೊಂದು ವಿಶೇಷವಾದದ್ದೇನೂ ಇರಲಿಲ್ಲ. ಆದರೆ ಚಲನಚಿತ್ರಕ್ಕೆ ಅಳವಡಿಸುವಾಗ ನಿರ್ದೇಶಕರಾದ ರಾಜೇಂದ್ರಸಿಂಗ್ ಬಾಬು ಅವರು ತೆಗೆದುಕೊಂಡ ವಿಶೇಷ ಶ್ರಮದಿಂದಾಗಿ ‘ಬಂಧನ' ಸೂಪರ್ ಹಿಟ್ ಆಯಿತು. ಅಂದಿನ ತನಕ ಬರೇ ಸಾಹಸ ಚಿತ್ರಗಳನ್ನೇ ನಿರ್ದೇಶಿಸುತ್ತಿದ್ದ ಬಾಬು ಅವರು ಭಾವ ಪ್ರಧಾನ ಸಾಮಾಜಿಕ ಚಿತ್ರಗಳ ನಿರ್ದೇಶನದಲ್ಲೂ ಸೈ ಎನಿಸಿಕೊಂಡರು. ಈ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ದೊರಕಿತು. ವಿಷ್ಣುವರ್ಧನ್ ಅವರಿಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯೂ ದೊರೆಯಿತು. ಸಂಗೀತ ನಿರ್ದೇಶಕರಾದ ಎಂ ರಂಗಾರಾವ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಲಭಿಸಿತು. ಈಗಲೂ ಬಂಧನ ಚಿತ್ರದ ಹಾಡುಗಳು ಮತ್ತು ಸಂಭಾಷಣೆಗಳು ಚಿರನೂತನವಾಗಿ ಚಿತ್ರಾಭಿಮಾನಿಗಳ ಮನಗಳಲ್ಲಿ ಉಳಿದಿದೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ