‘ಬದುಕು' ಮುಗಿಸಿದ ಸಾಹಿತಿ ಗೀತಾ ನಾಗಭೂಷಣ

‘ಬದುಕು' ಮುಗಿಸಿದ ಸಾಹಿತಿ ಗೀತಾ ನಾಗಭೂಷಣ

‘ವಚನಕಾರರು, ತತ್ವಪದಕಾರರು, ಜನಪದರು ಅಂದು ತಮ್ಮ ಸಾಹಿತ್ಯದಿಂದ ನಿರಂತರ ಸಾವಿರಾರು ವರ್ಷಗಳ ಕಾಲ ಪಾಲಿಸಿಕೊಂಡು ಬಂದ ಜನ ಜಾಗೃತಿ, ಶಾಂತಿ ಸೌಹಾರ್ದತೆ, ಪ್ರೀತಿ ವಾತ್ಸಲ್ಯ, ಕ್ರಾಂತಿಕಾರಿ ಚಳುವಳಿಗಳ ಮೂಲಕ ಸುಧಾರಣೆ ಮತ್ತು ಜನಹಿತ ಕಾರ್ಯವನ್ನು ಇಂದಿನ ಸಾಹಿತಿಗಳು ಸಾಧಿಸಿತೋರಿಸಬೇಕಾಗಿದೆ. ಬರೀ ಶಬ್ದಗಳ ಆಡಂಬರದ ರಂಜನೀಯ ಸಾಹಿತ್ಯ ನಮಗೆ ಬೇಡ. ಸಾಹಿತ್ಯ ಒಂದು ಮಾನಸಿಕ ಸುಧಾರಣೆಯ ಸಾಧನ. ಅದು ಸಮಾಜದಲ್ಲಿಯ ಅಭ್ಯುದಯಕ್ಕಾಗಿ ದುಡಿಯಬೇಕು. ವಿಜ್ಞಾನಿಯ ತಲೆ, ಸಂತನ ಹೃದಯ ಈ ದೇಶಕ್ಕೆ ಅಗತ್ಯ ಬೇಕಾಗಿದೆ. ಬುದ್ಧನ ಕರುಣೆ, ಬಸವಣ್ಣನ ಛಲ, ಬಾಬಾ ಸಾಹೇಬರ ಸ್ವಾಭಿಮಾನ ಮತ್ತು ಗಾಂಧೀಜಿಯ ಅಹಿಂಸೆಯ ತುಡಿತ ಈ ಎಲ್ಲವನ್ನೂ ಹುರಿಗೊಳಿಸಿ ಹೊಸೆದ ಹಗ್ಗದಿಂದಲೇ ನಾವು ಸರ್ವರ ಅಭ್ಯುದಯ ಸಾಧಿಸಬಲ್ಲ ವ್ಯವಸ್ಥೆಗೆ ಏಣಿ ಕಟ್ಟ ಬೇಕಾಗಿದೆ' ಎಂಬ ಉದಾತ್ತ ಚಿಂತನೆಯ ಮಾತುಗಳನ್ನು ಆಡಿದವರು ಖ್ಯಾತ ಲೇಖಕಿ, ಕಾದಂಬರಿಗಾರ್ತಿಯಾದ ಡಾ। ಗೀತಾ ನಾಗಭೂಷಣ ಇವರು. ೨೦೧೦ರಲ್ಲಿ ಗದಗದಲ್ಲಿ ನಡೆದ ೭೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಅವರು ಮಾಡಿದ ಭಾಷಣದ ತುಣುಕು ಇದು. ಇವರ ಚಿಂತನೆಗಳೇ ಹಾಗೆ. ಎಲ್ಲರಿಗೂ ಸಮಾನವಾದ ಹಕ್ಕು ದೊರೆಯಬೇಕೆಂಬುದು ಇವರ ಕನಸಾಗಿತ್ತು. ಅದಕ್ಕೆ ಕಾರಣ ಅವರು ಬಾಲ್ಯದಲ್ಲಿ ಅನುಭವಿಸಿದ ಬಡತನದ ಸಂಕಷ್ಟಗಳು.

ಅಂದಿನ ಗುಲ್ಬರ್ಗಾ (ಇಂದಿನ ಕಲ್ಬುರ್ಗಿ) ಜಿಲ್ಲೆಯ ಅತ್ಯಂತ ಹಿಂದುಳಿದ ಸಾವಳಗಿ ಎಂಬ ಪುಟ್ಟ ಊರಿನಲ್ಲಿ ೨೫ ಮಾರ್ಚ್, ೧೯೪೨ರಲ್ಲಿ ಶಾಂತಪ್ಪ ಹಾಗೂ ಶರಣಮ್ಮ ದಂಪತಿಗಳ ಪ್ರೀತಿಯ ಪುತ್ರಿಯಾಗಿ ಜನಿಸುತ್ತಾರೆ. ಮನೆಯಲ್ಲಿ ಕಡು ಬಡತನ. ಆದರೂ ಗೀತಾ ಅವರಿಗೆ ಸರಸ್ವತಿ ಒಲಿದಿದ್ದಳು. ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದ ಹುಡುಗಿ ಮೆಟ್ರಿಕ್ ಮುಗಿಸಿದ ಕೂಡಲೇ ಗುಲ್ಬರ್ಗಾದ ಕಲೆಕ್ಟರ್ ಕಚೇರಿಯಲ್ಲಿ ಗುಮಾಸ್ತೆಯಾಗಿ ಕೆಲಸಕ್ಕೆ ಸೇರಿದರು. ಆದರೆ ದುಡಿತದ ಜೊತೆಗೆ ಇವರಿಗೆ ಇನ್ನೂ ಕಲಿಯುವ ಹಂಬಲವಿತ್ತು. ಅವರು ದುಡಿಯುತ್ತಲೇ ಶರಣಬಸವೇಶ್ವರ ಕಲಾ ಶಾಲೆಯಲ್ಲಿ ಬಿ.ಎ.ಪದವಿ ಗಳಿಸಿದರು. ಪದವಿ ದೊರೆತ ನಂತರ ತಮ್ಮ ಗುಮಾಸ್ತೆಯ ಕೆಲಸಕ್ಕೆ ರಾಜೀನಾಮೆ ನೀಡಿ, ಶರಣಬಸಪ್ಪ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಉದ್ಯೋಗ ಪಡೆದುಕೊಂಡರು. ಅದೇ ಸಮಯಕ್ಕೆ ಬಿ.ಎಡ್. ಮುಗಿಸಿದರು. ನಂತರ ಸೊಲ್ಲಾಪುರದ ಕಾಲೇಜಿನಿಂದ ಎಂ.ಎ. ಸ್ನಾತಕೋತ್ತರ ಪದವಿಯನ್ನು ಗಳಿಸಿದರು. ಗುಲ್ಬರ್ಗಾದ ನಾಗೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ , ಅಲ್ಲಿಯೇ ಪ್ರಾಂಶುಪಾಲರಾಗಿಯೂ ಸುಮಾರು ೩೦ ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾದರು. ಇವರು ಗುಲ್ಬರ್ಗಾ ವಿ.ವಿ.ಯಿಂದ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.

ಗೀತಾ ನಾಗಭೂಷಣ ಇವರಿಗೆ ಬಾಲ್ಯದಿಂದಲೂ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಇತ್ತು. ೧೯೬೮ರಲ್ಲಿ ಅವರ ಮೊದಲ ಕಾದಂಬರಿ ‘ತಾವರೆಯ ಹೂವು’ ಪ್ರಕಟವಾಗಿ ಜನಮನ್ನಣೆ ಗಳಿಸಿತು. ಉತ್ತಮ ಕಾದಂಬರಿಗಾರ್ತಿ ಎಂಬ ಹೆಸರೂ ಪಡೆದರು. ಇವರು ಬರೆದ ‘ಬದುಕು' ಕಾದಂಬರಿಗೆ ೨೦೦೪ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ. ಇವರ ‘ಹಸಿಮಾಂಸ ಮತ್ತು ಹದ್ದುಗಳು' ಎಂಬ ಕಾದಂಬರಿ ‘ಹೆಣ್ಣಿನ ಕೂಗು’ ಎಂಬ ಹೆಸರಿನಲ್ಲಿ ಕನ್ನಡ ಚಲನಚಿತ್ರವಾಗಿಯೂ ಖ್ಯಾತಿ ಪಡೆದಿದೆ. ಇವರು ೨೭ ಕಾದಂಬರಿಗಳು, ೫೦ಕ್ಕೂ ಅಧಿಕ ಸಣ್ಣ ಕಥೆಗಳೂ, ಹತ್ತಕ್ಕೂ ಅಧಿಕ ನಾಟಕಗಳು, ಸಂಕಲನಗಳು, ಸಂಶೋಧನಾ ಕೃತಿ ಹಾಗೂ ಸಂಪಾದನಾ ಕೃತಿಯನ್ನು ಬರೆದು ಹೊರ ತಂದಿದ್ದಾರೆ. 'ನಾಡೋಜ ಪ್ರಶಸ್ತಿ ಪುರಸ್ಕೃತ ಮೊದಲ ಮಹಿಳಾ ಸಾಹಿತಿ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ. ಇವುಗಳಲ್ಲದೇ ಅತ್ತಿಮಬ್ಬೆ ಪ್ರಶಸ್ತಿ, ಸರ್ ಎಂ.ವಿ. ಪ್ರಶಸ್ತಿ, ಇವರ ಸಮಗ್ರ ಸಾಹಿತ್ಯ ಕೃಷಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ. ಆಳ್ವಾಸ್ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳು ಇವರ ಸಾಹಿತ್ಯ ಸೇವೆಗೆ ಸಂದಿವೆ. 

ಗೀತಾ ನಾಗಭೂಷಣ್ ಇವರು ತಮ್ಮ ೭೮ನೇ ವಯಸ್ಸಿನಲ್ಲಿ ೨೮ ಜೂನ್ ೨೦೨೦ರಂದು ಕಲ್ಬುರ್ಗಿಯಲ್ಲಿ ನಿಧನರಾದದ್ದು ದುಃಖದ ಸಂಗತಿ, ಆದರೆ ಅವರು ಬರೆದ ಅಸಂಖ್ಯಾತ ಬರವಣಿಗೆಗಳು ಅವರನ್ನು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸುವಂತೆ ಮಾಡಿದೆ. ಅವರು ಬಾಲ್ಯದಲ್ಲಿ ಅನುಭವಿಸಿದ ಕಿತ್ತು ತಿನ್ನುವ ಬಡತನ, ಹೆಣ್ಣು ಮಕ್ಕಳಿಗೆ ಸಹಕಾರ ನೀಡದ ಪರಿಸರ, ಹೆಣ್ಣು ಮಕ್ಕಳಿಗೆ ಶಾಲೆ ಹೋಗಲು ಬಿಡದ ಸಮಾಜ ಇವೆಲ್ಲವನ್ನೂ ತಮ್ಮ ದೃಢ ನಿರ್ಧಾರ ಹಾಗೂ ಹೋರಾಟದ ಮನೋಭಾವದಿಂದ ಎದುರಿಸಿ ಶಾಲೆ ಕಲಿತು, ಪ್ರಾಂಶುಪಾಲರಾಗುವ ತನಕ ಬೆಳೆದ ಇವರ ‘ಬದುಕು' ಈಗಿನ ಎಲ್ಲಾ ಹೆಣ್ಣು ಮಕ್ಕಳಿಗೆ ಒಂದು ದಾರಿದೀಪ. ಮೊದಲಿನಂತೆ ಕಷ್ಟಕರವಾದ ಪರಿಸ್ಥಿತಿ ಈಗ ಇಲ್ಲದೇ ಇರಬಹುದು. ಆದರೆ ಹೆಣ್ಣು ಮಕ್ಕಳು ಈಗಲೂ ಸಮಾಜದಲ್ಲಿ ಎದುರಿಸುವ ಅನೇಕ ಸಮಸ್ಯೆಗಳಿಗೆ ಉತ್ತರವಾಗಿ ಗೀತಾ ನಾಗಭೂಷಣ್ ಅವರು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ.    

ಚಿತ್ರ ಕೃಪೆ: ಅಂತರ್ಜಾಲ