‘ಬನ್’ ಅಣಬೆ - ಪೋರ್ಟೋಬೆಲ್ಲೋ

‘ಬನ್’ ಅಣಬೆ - ಪೋರ್ಟೋಬೆಲ್ಲೋ

ಕಳೆದ ವಾರ ನನ್ನ ಗೆಳೆಯನೊಬ್ಬ ಸಿಕ್ಕಿದ್ದ . ಅವನು ಒಂದು ಅಣಬೆ ಬೆಳೆದು ಮಾರಾಟ ಮಾಡುವ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾನೆ. ನನಗೆ ಜಾಸ್ತಿ ಪ್ರಮಾಣದಲ್ಲಿ ಅಣಬೆ ಬೇಕಾದಾಗ ಅವನನ್ನು ಸಂಪರ್ಕಿಸುವುದುಂಟು. ಮೊನ್ನೆ ಸಿಕ್ಕಾಗ ಒಂದು ಆಸಕ್ತಿದಾಯಕವಾದ ವಿಷಯ ಹೇಳಿದ. ಅವರು ಹೆಚ್ಚಾಗಿ ಬೆಳೆಸುವುದು ‘ಬಟನ್ ಮಶ್ರೂಮ್' ಎಂಬ ತಳಿಯನ್ನು. ಕೃತಕವಾಗಿ ಬೆಳೆಯುವ ಈ ತಳಿ ಮಾರುಕಟ್ಟೆಯಲ್ಲಿ ತುಂಬಾ ಪ್ರಚಲಿತ. ಉಳಿದಂತೆ ಕೆಲವೆಡೆ  ‘ಆಯಿಸ್ಟರ್ ಅಣಬೆ' (Oyster Mushroom) ಅನ್ನೂ ಬೆಳೆದು ಮಾರುಕಟ್ಟೆಗೆ ಕಳುಹಿಸುತ್ತಾರೆ. ಮಳೆಗಾಲದಲ್ಲಿ ಸಹಜವಾಗಿಯೇ ಗುಡ್ದಗಾಡು, ಹುಲ್ಲುಗಾವಲು ಪ್ರದೇಶಗಳಲ್ಲಿ ಪುಟ್ಟ ಪುಟ್ಟ ಗುಡುಗು ಅಣಬೆ, ಮರದ ಅಣಬೆ, ಹುಲ್ಲು ಅಣಬೆಗಳು ಬೆಳೆಯುತ್ತವೆ. ಕೆಲವು ವಿಷಕಾರಿ ಅಣಬೆಗಳೂ ಇರುತ್ತವೆ. ಈ ರೀತಿಯ ಅಣಬೆಗಳನ್ನು ತಿನ್ನುವಾಗ ಬಹಳ ಜಾಗರೂಕರಾಗಿರುವುದು ಅಗತ್ಯ.

ನನ್ನ ಗೆಳೆಯ ಹೇಳಿದ ವಿಷಯ ಏನೆಂದರೆ ಅವರು ತರಿಸಿದ್ದ ‘ಬಟನ್ ಮಶ್ರೂಮ್' ಬೀಜಗಳ ಜೊತೆ ಇನ್ನೊಂದು ವಿಧದ ಅಣಬೆಯ ಬೀಜವೂ ಸೇರಿಕೊಂಡಿತ್ತಂತೆ. ಅದನ್ನೂ ಬೆಳೆಸಿದಾಗ ಅದರಲ್ಲಿ ಮೂಡಿ ಬಂದ ಅಣಬೆ ಬಹಳ ಅಚ್ಚರಿದಾಯಕವಾಗಿತ್ತು. ಅದು ನಾವು ‘ಬರ್ಗರ್ ಬನ್' ಅನ್ನುತ್ತೇವಲ್ಲಾ ಆ ರೀತಿಯ ಆಕಾರದಲ್ಲಿತ್ತು. ಸ್ಥಳೀಯವಾಗಿ ಬಹುತೇಕರಿಗೆ ಮಾಹಿತಿ ಇರದಿದ್ದ ಅಣಬೆಯ ವಿಧ ಇದಾಗಿತ್ತು. ಕಡೆಗೆ ಆತ ಅಂತರ್ಜಾಲದಲ್ಲೆಲ್ಲಾ ಹುಡುಕಾಡಿ ಆ ಅಣಬೆಯ ಹೆಸರು ಹುಡುಕಿದ. ಅದರ ಹೆಸರು ಪೋರ್ಟೋಬೆಲ್ಲೊ (Portobello Mushroom) ಅಣಬೆ. ಇದು ಒಂದು ರೀತಿಯಲ್ಲಿ ಗಾತ್ರದಲ್ಲಿ ನಮ್ಮ ಬಟನ್ ಅಣಬೆಯ ಅಣ್ಣನಂತೆ. ಗಾತ್ರದಲ್ಲಿ ದೊಡ್ಡದಾಗಿದ್ದು ಬನ್ ಆಕಾರದಲ್ಲಿರುವುದರಿಂದ ‘ಬನ್ ಮಶ್ರೂಮ್’ ಎಂದು ಕರೆಯುತ್ತಾರೆ.  ಆದರೆ ಬಣ್ಣ ಮಾತ್ರ ಕಂದು ಹಾಗೂ ಕೆಲವೊಮ್ಮೆ ಬಿಳಿಬಣ್ಣದಲ್ಲೂ ಮೂಡುತ್ತವೆ. 

ಇದರ ವೈಜ್ಞಾನಿಕ ಹೆಸರು ಅಗಾರಿಕಸ್ ಬಿಸ್ಪೊರೆಸ್ (Agaricus bisporus). ಇವುಗಳನ್ನು ಆಹಾರಕ್ಕೆ ಬಳಸುವಾಗ ಅದರ ಮೇಲಿನ ಸಿಪ್ಪೆಯನ್ನು ತೆಗೆಯಬೇಕು. ಸುಲಭವಾಗಿ ತೆಗೆಯಲೂ ಬರುತ್ತದೆ. ಆಗ ಬಿಳಿ ವರ್ಣದ ಭಾಗ ಸಿಗುತ್ತದೆ. ಈ ಅಣಬೆಯ ರುಚಿ ಬಹುತೇಕ ಬಟನ್ ಅಣಬೆಯನ್ನು ಹೋಲುತ್ತದೆ. ಇದನ್ನು ತಿನ್ನುವಾಗ ಮಾಂಸಹಾರಿಗಳಿಗೆ ಮಾಂಸದ ನೆನಪಾಗಬಹುದು. ಏಕೆಂದರೆ ಇದು ಮಾಂಸಕ್ಕೆ ಪರ್ಯಾಯ ಆಹಾರವೆಂದೇ ಖ್ಯಾತಿ ಪಡೆದಿದೆ. ಉತ್ತಮ ಪೌಷ್ಟಿಕಾಂಶಗಳನ್ನು ಹೊಂದಿರುವ ಈ ಅಣಬೆಯನ್ನು ಬಹುತಾರಾ ಹೋಟೇಲ್ ಗಳು ತಮ್ಮ ಅಡುಗೆಗಳಲ್ಲಿ ಬಳಸಿಕೊಳ್ಳುತ್ತಾರೆ. 

ಪೋರ್ಟೋಬೆಲ್ಲೊ ಅಣಬೆಯ ಗಾತ್ರ ಮೊದಲೇ ತಿಳಿಸಿದಂತೆ ‘ಬರ್ಗರ್ ಬನ್’ ಆಕಾರದಲ್ಲಿರುವುದರಿಂದ ಇದನ್ನು ಬರ್ಗರ್ ನಂತೆ ಕೆಲವು ಹೋಟೇಲ್ ಗಳಲ್ಲಿ ಬಳಸುತ್ತಾರೆ. ನನ್ನ ಗೆಳೆಯ ತಿಳಿಸಿದಂತೆ ಈ ಅಣಬೆಗೆ ಮಂಗಳೂರಿನಲ್ಲಿ ಸ್ಥಳೀಯವಾಗಿ ಮಾರುಕಟ್ಟೆ ಇನ್ನೂ ಸರಿಯಾಗಿ ಬೆಳವಣಿಗೆಯಾಗಿಲ್ಲ. ಆದರೆ ಈಗೀಗ ಮಂಗಳೂರಿನ ಕೆಲವು ಹೋಟೇಲ್ ಗಳು ಇವುಗಳನ್ನು ಬಳಸಿಕೊಂಡು ಬರ್ಗರ್ ರೀತಿಯಲ್ಲಿ ಖಾದ್ಯವನ್ನು ತಯಾರಿಸಿ ಗ್ರಾಹಕರಿಗೆ ತಿನ್ನಲು ಕೊಡುತ್ತಾರೆ. ಕೆಲವು ಸೂಪರ್ ಮಾರ್ಕೆಟ್ ಗಳಲ್ಲಿ ಆರ್ಡರ್ ಇದ್ದರೆ ತರಿಸಿಕೊಳ್ಳುತ್ತಾರಂತೆ. ಆದುದರಿಂದ ಸ್ವಲ್ಪ ಪ್ರಮಾಣದಲ್ಲಿ ಇವರೂ ಈ ಅಣಬೆಯ ಉತ್ಪಾದನೆಯನ್ನು ಮಾಡುತ್ತಿದ್ದಾರಂತೆ. ನನಗೂ ನಾಲ್ಕು ಅಣಬೆಯನ್ನು ಕೊಟ್ಟ. ನಾನೂ ಮನೆಯಲ್ಲಿ ಇದರ ಖಾದ್ಯವನ್ನು (ಅಣಬೆ ಪುಳಿಮುಂಚಿ) ವನ್ನು ತಯಾರಿಸಲು ಅಮ್ಮನಿಗೆ ತಿಳಿಸಿದೆ. ತಯಾರಿಸಿದ ಖಾದ್ಯ ತಿನ್ನಲೂ ರುಚಿಕರವಾಗಿದೆ. ಸಸ್ಯಹಾರಿಗಳು ಈ ಅಣಬೆಯನ್ನು ತಮ್ಮ ಆಹಾರದಲ್ಲಿ ಬಳಸಿಕೊಳ್ಳಬಹುದು. ಆರೋಗ್ಯದಾಯಕವೂ ಹೌದು. ಮೊದಲ ನೋಟಕ್ಕೆ ಇದರ ಬಣ್ಣದಿಂದ ನಿಮಗೆ ಅಷ್ಟೊಂದು ಆಕರ್ಷಕವಾಗಿ ಕಾಣದೇ ಹೋದರೂ ರುಚಿಯಲ್ಲಿ ಮಾತ್ರ ‘ಬೊಂಬಾಟ್' ಆಗಿದೆ. ನಿಮಗೆ ಎಲ್ಲಾದರೂ ಸಿಕ್ಕರೆ ಖಂಡಿತಾ ಟ್ರೈ ಮಾಡಿ ನೋಡಿ.

ಚಿತ್ರ ೧: ಅಣಬೆಯ ಮೇಲ್ಮೈ ನೋಟ

ಚಿತ್ರ ೨: ಅಣಬೆಯ ಕೆಳ (ಒಳ) ಭಾಗ