‘ಬಸ್ತಿ ಮಾಮ್' - ಒಡನಾಟದ ನೆನಪುಗಳು

ಬಸ್ತಿ ವಾಮನ್ ಶೆಣೈ, ಎಲ್ಲರ ಪ್ರೀತಿಯ ‘ಬಸ್ತಿ ಮಾಮ್' ಇವರ ನಿಧನದ ಸುದ್ದಿ ತಿಳಿಯುತ್ತಲೇ ಮನಸ್ಸಿನಲ್ಲಿ ಮೂಡಿದ್ದು ಹಿಂದೆ ಅವರೊಂದಿಗಿನ ನನ್ನ ಪುಟ್ಟ ಪುಟ್ಟ ಭೇಟಿಯ ನೆನಪುಗಳು. ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಘಟನೆಗಾಗಿ ಬದುಕಿನುದ್ದಕ್ಕೂ ಶ್ರಮಿಸಿದ ವಿಶ್ವ ಕೊಂಕಣಿ ಕೇಂದ್ರದ ರೂವಾರಿ ಬಸ್ತಿ ವಾಮನ ಶೆಣೈ. ಕೇವಲ ಕೊಂಕಣಿ ಭಾಷಿಕರಿಗಷ್ಟೇ ಅಲ್ಲ, ಉಳಿದ ಭಾಷೆಗಳ ಜನರಿಗೂ ಅವರು ಆತ್ಮೀಯರಾಗಿದ್ದರು. ಕೊಂಕಣಿ ಭಾಷೆಯ ಕುರಿತಾದ ಯಾವುದೇ ಕಾರ್ಯಕ್ರಮವಿರಲಿ (ಅದು ಎಷ್ಟೇ ಚಿಕ್ಕ ಕಾರ್ಯಕ್ರಮವಾಗಿದ್ದರೂ) ತಮ್ಮ ವಯಸ್ಸನ್ನು ಮರೆಸುವ ರೀತಿಯ ಲವಲವಿಕೆಯಿಂದ ಪಾಲ್ಗೊಳ್ಳುತ್ತಿದ್ದರು. ಅವರ ಬಗ್ಗೆ ಪತ್ರಿಕೆಗಳನ್ನು ಓದುವ ನಿಮಗೆಲ್ಲಾ ತಿಳಿದೇ ಇರುವುದರಿಂದ ನಾನು ಅವರ ಜೊತೆಗಿನ ನನ್ನ ಒಡನಾಟದ ನೆನಪುಗಳನ್ನು ಮಾತ್ರ ಇಲ್ಲಿ ಹಂಚಿಕೊಳ್ಳುತ್ತಿರುವೆ.
ಸುಮಾರು ಹತ್ತು ವರ್ಷದ ಹಿಂದೆ ಇರಬಹುದು. ನಾನು ನನ್ನ ಮನೆಯವರೆಲ್ಲರ ಜೊತೆ ನಮ್ಮ ಸಂಬಂಧಿಕರೊಬ್ಬರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ. ಆ ಸಮಯ ಅಲ್ಲಿಗೆ ಬಸ್ತಿ ವಾಮನ ಶೆಣೈ ಅವರೂ ಅಲ್ಲಿಗೆ ಆಗಮಿಸಿದ್ದರು. ನನಗೆ ಆಗ ಅವರು ಕೊಂಕಣಿ ಕೇಂದ್ರದ ಸ್ಥಾಪಕರು ಎನ್ನುವ ವಿಷಯ ಮಾತ್ರ ತಿಳಿದಿತ್ತು. ಅವರನ್ನು ನೋಡಿ ನನ್ನ ಅಮ್ಮ ‘ಅವರು ನಮ್ಮ ಸಂಬಂಧಿ' ಎಂದರು. ನನಗೆ ಅಷ್ಟರವರೆಗೆ ಈ ವಿಷಯ ತಿಳಿದೇ ಇರಲಿಲ್ಲ. ನನ್ನ ಅಮ್ಮನ ಅಜ್ಜನ ಕಡೆಯಿಂದ ಅವರಿಗೆ ಸಂಬಂಧವಿದೆ ಎನ್ನುವ ವಿಚಾರ ನನಗೆ ತಿಳಿದದ್ದು ಆಗಲೇ. ಅವರನ್ನು ಅಂದು ಮಾತನಾಡಿಸಿದಾಗ ಬಹಳ ಆನಂದದಿಂದ ಮಾತನಾಡಿದರು. ನನ್ನ ಅಮ್ಮನ ಬಗ್ಗೆ ತಿಳಿಸಿದಾಗ, ‘ಹೌದಾ, ಅವರ ಮೊಮ್ಮಗಳಾ, ಎಲ್ಲಿದ್ದಾಳೆ ಕರೆದು ಕೊಂಡು ಬಾ, ನನಗೆ ನೋಡಬೇಕು ಎಂದರು. ನಾನು ಅಮ್ಮನನ್ನು ಕರೆದು ಅವರನ್ನು ಭೇಟಿ ಮಾಡಿಸಿದಾಗ ನನಗೆ ತಿಳಿಯದ ಹಲವಾರು ಜನರ ಬಗ್ಗೆ ಕೇಳಿ, ಅವರೆಲ್ಲಿ, ಇವರೆಲ್ಲಿ ಎಂದು ಆಸಕ್ತಿಯಿಂದ ಕೇಳಿದರು.
ನಾನು ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದಾಗ, ಕೊಂಕಣಿಯಲ್ಲೂ ಬರೆ ಎಂದು ಹುರಿದುಂಬಿಸಿದರು. ನನಗೆ ಕೊಂಕಣಿಯಲ್ಲಿ ಹಿಡಿತವಿಲ್ಲದ ಕಾರಣ ಬರೆಯಲು ಪ್ರಯತ್ನಿಸಲೇ ಇಲ್ಲ. ‘ಕೊಂಕಣಿ ಕೇಂದ್ರಕ್ಕೆ ಆಗಾಗ ಬರುತ್ತಿರು' ಎಂದರು. ನಾನು ಅವರಿಗಿಂತ ತುಂಬಾ ಸಣ್ಣವ ಆದರೆ ಅವರು ಅದನ್ನು ಎಲ್ಲೂ ತೋರ್ಪಡಿಸಲಿಲ್ಲ. ಆತ್ಮೀಯತೆಯಿಂದ ಮಾತನಾಡಿ ಮತ್ತೆ ಸಿಗುವ ಎಂದು ಹೇಳಿ ಹೋದರು. ಇದು ನನ್ನ ಅವರ ಮೊದಲ ಭೇಟಿ.
ನಂತರ ಹಿರಿಯ ಕೊಂಕಣಿ ಲೇಖಕರಾದ ದಿ.ಪೌಲ್ ಮೋರಸ್ ಅವರ ಪುಸ್ತಕ ಬಿಡುಗಡೆ ಸಮಯದಲ್ಲಿ ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಸಭಾಂಗಣದಲ್ಲಿ ಅವರನ್ನು ಭೇಟಿಯಾಗಿದ್ದೆ. ಈಗ ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ಶ್ರೀ ಗುರುದತ್ ಬಾಳಿಗಾ ಅವರು ಅಂದು ನನ್ನನ್ನು ಬಸ್ತಿಯವರಿಗೆ ಪರಿಚಯಿಸಿದಾಗ, 'ನಿನ್ನನ್ನು ಎಲ್ಲೋ ನೋಡಿದ ನೆನಪಿದೆ’ ಎಂದರು. ನಾನು ಅವರಿಗೆ ನಮ್ಮ ಹಿಂದಿನ ಭೇಟಿಯನ್ನು ನೆನಪಿಸಿದೆ. ಅಂದಿನ ಕಾರ್ಯಕ್ರಮದ ಬಗ್ಗೆ ನಾವೊಂದಿಷ್ಟು ಮಾತುಕತೆ ನಡೆಸಿದ್ದೆವು.
ನಂತರ ಒಮ್ಮೆ ಒಂದು ಶುಭ ಸಮಾರಂಭದಲ್ಲಿ ಸಿಕ್ಕಿದರೂ ಅವರೊಂದಿಗೆ ಮಾತನಾಡಲು ಆಗಿರಲಿಲ್ಲ. ಅವರು ಕೊನೆಯ ಬಾರಿಗೆ ಸಿಕ್ಕಿದ್ದು ಇದೇ ದಿ. ಪೌಲ್ ಮೋರಸ್ ಅವರ ಇನ್ನೊಂದು ಪುಸ್ತಕದ ಬಿಡುಗಡೆಯ ಸಮಾರಂಭದಲ್ಲಿ. ಕಾರ್ಯಕ್ರಮ ನಡೆದದ್ದು ಸೈಂಟ್ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ. ಅಂದು ‘ಬಸ್ತಿ ಮಾಮ್’ ಅವರನ್ನು ಹೂವು ನೀಡಿ ಸ್ವಾಗತಿಸುವ ಅವಕಾಶ ನನಗೆ ದೊರೆತದ್ದು ನನ್ನ ಸುದೈವವೇ ಸರಿ. ಅಂದು ಕಾರ್ಯಕ್ರಮ ಮುಗಿಸಿ ಹೊರಟಾಗ ಅವರನ್ನು ಕಾರಿನ ತನಕ ತಲುಪಿಸಲು ಹೋದಾಗ ‘ಅಮ್ಮನನ್ನು ಕರೆದುಕೊಂಡು ಮನೆಗೆ ಬಾ’ ಎಂದು ಆಹ್ವಾನಿಸಿದ ನೆನಪು ನನಗೆ ಈಗಲೂ ಇದೆ. ಕಾರಣಾಂತರಗಳಿಂದ ನಮಗೆ ಅವರ ಮನೆಗೆ ಹೋಗಲು ಆಗಲೇ ಇಲ್ಲ. ಈಗ ಅವರೂ ಆ ಮನೆಯಿಂದ ಹಿಂದಿರುಗಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ನಾನು ಅವರನ್ನು ಕೊನೆಯ ಬಾರಿ ಕಂಡಾಗ ೮೪-೮೫ ವರ್ಷ ಪ್ರಾಯವಾಗಿದ್ದಿರಬಹುದು. ಆದರೆ ಕಾರ್ಯಕ್ರಮದಲ್ಲಿ ಬಹಳ ಲವಲವಿಕೆಯಿಂದ ಪಾಲ್ಗೊಂಡಿದ್ದರು. ಅವರ ಜೀವನೋತ್ಸಾಹ ನನಗೆ ನಿಜಕ್ಕೂ ಅಚ್ಚರಿಯಾಗಿ ಕಂಡಿತ್ತು. ಅವರ ಜೊತೆ ಮಾತನಾಡಿದ ಕೆಲವೇ ಕೆಲವು ನಿಮಿಷಗಳು ನನ್ನ ಬಾಳಿನ ಉತ್ತಮ ಸಮಯವೆಂದು ಹೇಳಬಹುದು. ಜನವರಿ ೨, ೨೦೨೨ರಂದು ಬಸ್ತಿ ಮಾಮ್ ನಿಧನ ಹೊಂದಿದ ಸುದ್ದಿ ಕೇಳಿದ ನನಗೆ ಇದೆಲ್ಲಾ ನೆನಪಾಯಿತು.
***
ಸಂಕ್ಷಿಪ್ತ ಪರಿಚಯ: ೧೯೩೪ರ ನವೆಂಬರ್ ೬ರಂದು ಬಂಟ್ವಾಳದಲ್ಲಿ ಮಾಧವ ಶೆಣೈ ಹಾಗೂ ಗೌರಿಬಾಯಿಯವರ ಸುಪುತ್ರರಾಗಿ ಜನನ. ಸಿಂಡಿಕೇಟ್ ಬ್ಯಾಂಕ್ ನಲ್ಲಿ ವೃತ್ತಿ ಜೀವನ ಆರಂಭಿಸಿ ವ್ಯವಸ್ಥಾಪಕರಾಗಿ ನಿವೃತ್ತಿ. ನಿವೃತ್ತಿ ಬಳಿಕ ಕೊಂಕಣಿ ಭಾಷೆಯನ್ನು ಉಳಿಸಿ-ಬೆಳೆಸಲು ನಿರಂತರ ಹೋರಾಟ. ೧೯೯೧-೯೨ರಲ್ಲಿ ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ಮತ್ತು ಕೊಂಕಣಿ ಅಕಾಡೆಮಿ ಸ್ಥಾಪನೆಯಾಗಬೇಕೆಂಬ ಬೇಡಿಕೆಗಳ ಕುರಿತಾಗಿ ಹೋರಾಟ ಕೈಗೊಳ್ಳುವ ಸಂದರ್ಭದಲ್ಲಿ ಇವರನ್ನೇ ಸಂಚಾಲಕರಾಗಿ ನೇಮಿಸಲಾಗಿತ್ತು. ರಾಜ್ಯಾದ್ಯಂತ ಕೊಂಕಣಿ ಜಾಥಾ ನಡೆದ ಪರಿಣಾಮ ೧೯೯೨ರಲ್ಲಿ ಕೊಂಕಣಿ ಭಾಷೆ ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಸೇರ್ಪಡೆಯಾಯಿತು. ೧೯೯೪ರಲ್ಲಿ ಕೊಂಕಣಿ ಅಕಾಡೆಮಿ ಸ್ಥಾಪನೆಗೊಂಡಿತು.
೧೯೯೬ರಲ್ಲಿ ಸ್ಥಾಪಿತವಾದ ಕೊಂಕಣಿ ಬಾಸ್ ಆನಿ ಸಂಸ್ಕೃತಿ ಪ್ರತಿಷ್ಟಾನ್ ಇದರ ಅಧ್ಯಕ್ಷರಾಗಿದ್ದು, ೨೦೨೧ರ ತನಕ ಅಧ್ಯಕ್ಷರಾಗಿದ್ದರು. ನಂತರ ಸಹ ಅಧ್ಯಕ್ಷರಾಗಿ ಮುಂದುವರೆದಿದ್ದರು. ಬಸ್ತಿ ಮಾಮ್ ಮಂಗಳೂರಿನ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದ ರೂವಾರಿಯೂ ಹೌದು. ೨೦೦೯ರಲ್ಲಿ ಸ್ಥಾಪನೆಗೊಂಡ ಈ ಕೇಂದ್ರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರಿಗೆ ವಿಶ್ವ ಕೊಂಕಣಿ ಸರದಾರ, ವಿಶ್ವ ಸಾರಸ್ವತ ಸರದಾರ ಬಿರುದುಗಳು ದೊರೆತಿವೆ. ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗೋವಾ ಕೊಂಕಣಿ ಅಕಾಡೆಮಿಯ ಜೀವಮಾನದ ಸಾಧನಾ ಪ್ರಶಸ್ತಿಗಳು ದೊರೆತಿವೆ.
ಚಿತ್ರ ಕೃಪೆ: ದಾಯ್ಜಿ ವರ್ಲ್ಡ್ ಅಂತರ್ಜಾಲ ತಾಣ