‘ಬಾಲ ಬಳಗ’ - ಇದು ಶಾಲೆಯಲ್ಲ! ಬಾಲ-ಬಾಲೆಯರ ಕನಸು ಅರಳುವ ಮನೆ!

‘ಬಾಲ ಬಳಗ’ - ಇದು ಶಾಲೆಯಲ್ಲ! ಬಾಲ-ಬಾಲೆಯರ ಕನಸು ಅರಳುವ ಮನೆ!

ಬರಹ

ಕಣ್ಣುಗಳ ತುಂಬ ನೀರು.. ಒಲ್ಲದ ಮನಸ್ಸು..ಹೊರಲಾಗದ ಆ ಮಣಭಾರದ ಪಾಟಿಚೀಲ..
ಇದಕ್ಕೆ ಕಿರಿಟಪ್ರಾಯವಾಗಿ ಆ ಜೈಲರ್ ನಿಲುವಿನ ಕೆಂಪು ಕಣ್ಣುಗಳ ಕೈಯಲ್ಲಿ ಛಡಿ ಹಿಡಿದ ‘ಬಾಲ ವೈರಿ ಮಾಸ್ತರು’! ಎಲ್ಲವನ್ನು ಕಡ್ಡಾಯವಾಗಿ ತಲೆತುಂಬಿ, ತುಂಬಿದ್ದು ಹೆಚ್ಚಾಗಿ ತುಳುಕಿ, ಸಂಬಂಧ ಪಟ್ಟ ಹಾಗು ಪಡದ ಎರಡೂ ವಿಷಯಗಳ ಬಗ್ಗೆ ಈ ಸೂಕ್ಷ್ಮ ಮತಿಗೆ ಹೇಸಿಗೆ ಹುಟ್ಟಿ.. ಎ,ಬಿ,ಸಿ,ಡಿ..ಗಳು ಮಾತ್ರ ಜೀವನ..ಸರ್ವಸ್ವ ಎಂದೆನಿಸಿ..ಹೋಂವರ್ಕ್ ಮಾಡುವುದೇ ದೊಡ್ಡ ಸಾಧನೆ ಅನ್ನಿಸಿಬಿಡುವಮಟ್ಟಿಗೆ ಈ ಕಾಂಪೀಟಿಷನ್ ಜಗತ್ತಿನಲ್ಲಿ ‘ಶಾಲೆ’ ಎಂದು ಕರೆಯಿಸಿಕೊಳ್ಳುವ ‘ಜೈಲ್’ ಗಳು ಇಂದು ಬೆಳೆದು ಬಿಟ್ಟಿವೆ.

ಇನ್ನು ಮಕ್ಕಳನ್ನು ಶಾಲೆಗೆ ಸೇರಿಸುವಾಗ, ಗೌರವ ವಂತಿಗೆ, ಕಟ್ಟಡ ನಿಧಿ, ಪಾಲಕರ ಸಂದರ್ಶನ, ಮಕ್ಕಳ ಪ್ರವೇಷ ಪರೀಕ್ಷೆ ಇತ್ಯಾದಿ, ಜೊತೆಗೆ ಶಾಲೆಯಲ್ಲಿ ಸರಿಯಾಗಿ ಕಲಿಸದ ಮಾಸ್ತರ್ ಮನೆಗೆ ಕಡ್ಡಾಯದ ಟ್ಯೂಷನ್! ಇವು ಇಂದಿನ ಅಭಿವೃದ್ಧಿ ಹೊಂದಿದ ಶಾಲೆಯ ಕುರುಹುಗಳು.

ಕಾಲಕಾಲಕ್ಕೆ ಈ ಸಮಾಜದಲ್ಲಿ ಎಲ್ಲರಂತೆ ಯೋಚಿಸದೇ ಕೊಂಚ ಭಿನ್ನವಾಗಿ ಯೋಚಿಸಿ, ಸಮಯೋಚಿತ ನಿರ್ಧಾರ ಕೈಗೊಂಡು, ಈ ಸಮಾಜಕ್ಕೆ ಹಲವಾರು ಕ್ಷೇತ್ರಗಳಲ್ಲಿ ಉಪಕರಿಸಿದ ಮಹನೀಯರು ನಮ್ಮ ಮುಂದಿದ್ದಾರೆ. ಎಲ್ಲರನ್ನು ಬುಡಸಮೇತ ಅಲ್ಲಾಡಿಸುತ್ತಿರುವ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಯೂ ತಮ್ಮ್ಮದೇ ಆದ ಧ್ಯೇಯ, ಉದ್ದೇಶ ಹಾಗು ನಿಶ್ಚಿತಗುರಿಯೊಂದಿಗೆ ‘ಬಾಲ ಸ್ನೇಹಿ’ ಶಾಲೆ ಸ್ಥಾಪಿಸುವಲ್ಲಿ ಶ್ರಮಿಸಿದವರು ಡಾ.ಸಂಜೀವ ಕುಲಕರ್ಣಿ ಹಾಗು ಶ್ರೀಮತಿ ರಜನಿ ಪ್ರಕಾಶ ಗರುಡ.

ಧಾರವಾಡದ ಮಾಳಮಡ್ಡಿ ಅಗ್ರಹಾರ. ಆ ಹೃದಯ ಭಾಗದಲ್ಲಿರುವ ಮಹಿಷಿ ರಸ್ತೆ ಹಾಗು ಕಬ್ಬೂರು ರಸ್ತೆಗಳ ಮಧ್ಯದಲ್ಲಿರುವ ಹಿರಿಯ ಗಾಂಧಿವಾದಿ, ಖಾದಿ ಪ್ರಿಯ, ಅಂತಾರಾಷ್ಟ್ರೀಯ ಖ್ಯಾತಿಯ ಗ್ರಂಥಪಾಲಕ ಪ್ರೊ.ಕೆ.ಎಸ್.ದೇಶಪಾಂಡೆ ಅವರ ಮನೆಯ ಆವರಣದಲ್ಲಿ ಸದ್ಯ ಈ ಶಾಲೆ ಇದೆ. ಡಾ.ಸಂಜೀವಣ್ಣ ಅವರ ಮನೆಯ ಆವರಣವೂ ಇದೆ. ‘ಬಾಲ ಬಳಗ’ ಪರಿಸರದ ಸ್ವಚ್ಛಂದ ವಾತಾವರಣದಲ್ಲಿ ಕಂಗೊಳಿಸುವ ಶಾಲೆ ಸದ್ದಿಲ್ಲದೇ ಮಕ್ಕಳ ಕಲರವದಲ್ಲಿ ಲೀನವಾಗಿ ನಡೆಯುತ್ತಿದೆ. ಆಗಸ್ಟ್ ಎರಡನೇ ವಾರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಹಿಂಬದಿಯ ನಿಸರ್ಗ ಲೇ ಔಟ್ ನಲ್ಲಿ ಸುಮಾರು ೩.೫ ಎಕರೆ ಪ್ರದೇಶದಲ್ಲಿ ಈ ಶಾಲೆ ಪುನರುತ್ಥಾನಗೊಳ್ಳಲ್ಲಿದೆ.

೧೯೯೬ರಲ್ಲಿ ಕೇವಲ ೩ ಮಕ್ಕಳಿಂದ ಬಾಲ ಬಳಗ ಕಾರ್ಯಾರಂಭ ಮಾಡಿತ್ತು. ಖ್ಯಾತ ಪ್ರಸೂತಿ ತಜ್ನ ಡಾ.ಸಂಜೀವ ಕುಲಕರ್ಣಿ ಅವರ ಮನೆಯ ಪಡಸಾಲೆಯಲ್ಲಿ ಪ್ರಯೋಗಾರ್ಥವಾಗಿ ಈ ಶಾಲೆ ಶುರುವಾಗಿತ್ತು. ಮಗ ಚೈತನ್ಯ ಷರೀಫ್- ‘ಮಿಂಚು’ ಆ ಶಾಲೆಯ ಪ್ರಥಮ ಕೂಸು. ಅರ್ಧ ವರ್ಷದ ಕೊನೆಗೆ ೧೩ ಮಕ್ಕಳ ಸೈನ್ಯ ಜಮಾವಣೆಯಾಗಿ ಪ್ರಯೋಗಕ್ಕೊಂದು ದಿಕ್ಕು ಸಿಕ್ಕಿತು.

ಧಾರವಾಡದ ಬಾಲಬಳಗಕ್ಕೆ ಜಪಾನಿ ಶಿಕ್ಷಣ ಪದ್ಧತಿ ಪ್ರೇರೇಪಿಸಿದ ಬಾಲಕಿ ‘ತೊತ್ತೋ ಚಾನ್’ ಸ್ಫೂರ್ತಿ. ಪ್ರಸಿದ್ಧ ಜಪಾನಿ ಶಿಕ್ಷಣ ತಜ್ನ ಹಾಗು ಲೇಖಕ ತೆತ್ಸುಕೋ ಕೊರೋಯಾನಾಗಿ ಈ ‘ತೊತ್ತೋ ಚಾನ್’ ಪುಸ್ತಕದ ಲೇಖಕ. ಇದೇ ಮಾದರಿಯ, ಪ್ರಖ್ಯಾತ ಗುಜರಾತಿ ಲೇಖಕಿ ಗಿಜುಬಾಯಿ ಬಧಿಕಾ ಬರೆದ ‘ದಿವಾ ಸ್ವಪ್ನ’ ಇದೇ ಪ್ರಕಾರದ ಶಿಕ್ಷಣ ಪದ್ಧತಿಯನ್ನು ಪ್ರತಿಪಾದಿಸುತ್ತದೆ. ಈ ಪುಸ್ತಕ ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿಯಿಂದ ಕನ್ನಡದಲ್ಲಿ ‘ಹಗಲು ಕನಸು’ ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಲ್ಪಟ್ಟಿದೆ. ನ್ಯೂಜಿಲ್ಯಾಂಡ್ ನಲ್ಲಿಯ ‘ಟೀಚರ್’ ಪ್ರಯೋಗ ಹಾಗು ಇಟಲಿಯ ‘ಲೆಟರ್ ಟು ಎ ಟೀಚರ್’ ಪ್ರಯೋಗ, ಬಾಲಬಳಗದಂತಹ ಶಾಲೆಗಳನ್ನು ಸ್ಥಾಪಿಸಿ ಪ್ರಯೋಗಿಸುವ ನಿಟ್ಟಿನಲ್ಲಿ ನೈಜ ಸಂಗತಿಗಳನ್ನು ಉತ್ಪ್ರೇಕ್ಷೆ ಇಲ್ಲದೇ ಸಾರುವ ಪುಸ್ತಕಗಳು. ಅಮೇರಿಕೆಯ ಶ್ರೇಷ್ಠ ಶಿಕ್ಷಣ ತಜ್ನ ಜಾನ ಹೋವಾಲ್ಟ್ ರಚಿಸಿದ ‘ವಾಯ್ ಚಿಲ್ಡ್ರನ್ ಫೇಲ್?’ ಎಂಬ ಪುಸ್ತಕ, ಮುಂತಾದವು ‘ಬಾಲ ಬಳಗ’ ಮಾದರಿ ಶಾಲೆಯನ್ನು ಉತ್ಕೃಷ್ಠ ಶಾಲೆ ಎಂದೇ ಪರಿಗಣಿಸಿವೆ. ಈ ಎಲ್ಲ ಪುಸ್ತಕಗಳ ತೌಲನಿಕ ಅಧ್ಯಯನವೇ ಟ್ರಸ್ಟ್ ಅಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅವರಿಗೆ ಸ್ಫೂರ್ತಿ ಹಾಗು ಮಾರ್ಗದರ್ಶನ ‘ಬಾಲ ಬಳಗ’ ಸ್ಥಾಪಿಸುವಲ್ಲಿ ಗಣನೀಯವಾಗಿ ಮಾಡಿವೆ.

ಬೆಳೆಯುವ ಸಿರಿಗಳು ಮುಕ್ತವಾದ ವಾತಾವರಣದಲ್ಲಿ ಬೆಳೆಯಬೇಕು. ಆ ಸಿರಿಗಳಿಗೆ ತಮ್ಮದೇ ಆದ ಕನಸುಗಳನ್ನು ಸಾಕಾರಗೊಳಿಸಲು ಅವಕಾಶಗಳಿರಬೇಕು. ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯವಿರಬೇಕು. ಶಿಕ್ಷಣ ಮತ್ತು ಶಿಕ್ಷಕರಲ್ಲಿ ಭಯವಿರಬಾರದು. ಒತ್ತಾಯದಿಂದ ಹೇರಿದ ಶಿಸ್ತು, ಶಿಸ್ತಲ್ಲ. ಅದು ಅಂತರಾತ್ಮಕವಾಗಿ ಚಿಮ್ಮಬೇಕು ಎಂಬ ಧ್ಯೇಯೋದ್ದೇಶಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಶಾಲೆಯನ್ನು ಹುಟ್ಟು ಹಾಕಲಾಯಿತು. ಬಾಲ ಬಳಗದಲ್ಲಿ ಮಕ್ಕಳು ಶಿಕ್ಷಕಿಯರನ್ನು ‘ಮಾವಶಿ’ ಅರ್ಥಾತ್ ಚಿಕ್ಕಮ್ಮ ಎಂದು ಸಂಬೋಧಿಸುತ್ತವೆ. ಈ ಪ್ರಯೋಗಕ್ಕೆ ನಿದರ್ಶನವಿದು. ಮೊದಲು ೧ನೇ ತರಗತಿಯಿಂದ ೪ನೇ ತರಗತಿಯ ವರೆಗೆ ಮಾತ್ರ ಕ್ಲಾಸುಗಳಿದ್ದವು ಕ್ರಮೇಣ ಪಾಲಕರ ಒತ್ತಾಯದ ಮೇಲೆ ೫,೬,೭,೮, ಹೀಗೆಯೇ ಪಟ್ಟಿ ಬೆಳೆದು ಈಗ ೧೦ನೇಯ ತರಗತಿಯ ವರೆಗೆ ಇಲ್ಲಿ ಕಲಿಯಲು ಅವಕಾಶವಿದೆ.

ಇಂಗ್ಲೀಷಿನ ಕುರುಡು ದುರಭಿಮಾನವಿಲ್ಲ. ಕನ್ನಡ ಮಾಧ್ಯಮದ ಮುಕ್ತ ಶಿಕ್ಷಣ ಕ್ರಮದ ಶಾಲೆ. ಆದರೆ ಇಲ್ಲಿಯ ಮಕ್ಕಳು ಇಂಗ್ಲೀಷಿನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ೧೦೦ ಜನ ಮಕ್ಕಳು, ೧೦ ಜನ ಚಿಕ್ಕಮ್ಮಂದಿರು, ಚಿಕ್ಕಪ್ಪಗಳು ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಶಾಲೆ ಬಾಲ ಬಳಗ. ೧ನೇ ವರ್ಗದಿಂದಲೇ ಆಂಗ್ಲ ಭಾಷೆ, ಗಾಯನ ಸಂಗೀತ, ವಾದ್ಯ ಸಂಗೀತ ಹಾಗು ನೃತ್ಯದ ವರ್ಗಗಳು ಪ್ರಾರಂಭ. ಹೊರಾಂಗಣ ಮತ್ತು ಪಠ್ಯೇತರ ಚಟುವಟಿಕೆಗಳೇ ಹೆಚ್ಚಿರುವ ಈ ಶಾಲೆಯಲ್ಲಿ ಮಕ್ಕಳಿಗೆ ೫ ವರ್ಷಗಳು ತುಂಬುವವರೆಗೆ ಕಡ್ಡಾಯ ಅಕ್ಷಾರಾಭ್ಯಾಸವಿಲ್ಲ.

ಮಕ್ಕಳಲ್ಲಿ ಶಬ್ದ ಭಾಂಡಾರ, ಅಭಿವ್ಯಕ್ತಿ ಕಲೆಯು ಬೆಳೆಯಬೇಕು ಎಂಬ ಸದುದ್ದೇಶದಿಂದ ವಾರಕ್ಕೊಮ್ಮೆ ಗ್ರಂಥಾಲಯ ಅವಧಿ. ಈ ಅವಧಿಯಲ್ಲಿ ಮಗು ರಾಶಿ ಹಾಕಲಾದ ಪುಸ್ತಕಗಳ ಗುಡ್ಡೆಯಿಂದ ತನಗೆ ಬೇಕಾದ ಕಥೆ ಪುಸ್ತಕವನ್ನು ಮಗು ಆರಿಸಿಕೊಂಡು, ಓದಿ ಆ ಕಥೆಯನ್ನು ಆಂಗಿಕ ಅಥವಾ ಭಾವಾಭಿನಯದ ಮೂಲಕ ಎಲ್ಲರ ಮುಂದೆ ಆ ಕಥೆಯನ್ನು ಹೇಳಬೇಕು. ಹಾಡು, ಕಥೆ, ನೃತ್ಯ, ನಾಟಕ, ಒಗಟು ಇತ್ಯಾದಿ ‘ನಲಿಕೆಯೊಂದಿಗೆ-ಕಲಿಕೆ’ ಸಿದ್ಧಾಂತದಿಂದ ಬೆಳೆಸಲಾಗುತ್ತಿದೆ. ಮಕ್ಕಳ ಕಲಿಕಾ ವೇಗಕ್ಕೆ ತಕ್ಕಂತೆ ವಯುಕ್ತಿಕ ಕಾಳಜಿ ಶ್ಲಾಘನೀಯ.

ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ದೊರಕಬೇಕು? ಬೋಧನಾ ವಿಧಾನ ಹೇಗಿರಬೇಕು? ಕಾಲಕಾಲಕ್ಕೆ ಇಲ್ಲಿ ಶಿಕ್ಷಕರಿಗೂ ತರಬೇತಿ ಶಿಬಿರಗಳು ನಡೆಯುತ್ತವೆ. ಬಾಲ ಬಳಗದ ಮಾವಶಿ ಹಾಗು ಕಾಕಾಗಳು ಬೇರೆ ಬೇರೆ ರೀತಿಯಲ್ಲಿ ವಿನೂತನವಾಗಿ ನಡೆಸಲ್ಪಡುವ ಶಾಲೆಗಳಿಗೆ ಭೇಟಿ ನೀಡಿ ತರಬೇತಿ ಪಡೆದ ಉದಾಹರಣೆಗಳು ಸಾಕಷ್ಟು. ಜಿಡ್ಡು ಕೃಷ್ಣಮೂರ್ತಿ ಅವರ ‘ದ ವ್ಯಾಲಿ ಸ್ಕೂಲ್’, ಬೆಂಗಳೂರಿನ ‘ಪೂರ್ಣ ಲರ್ನಿಂಗ್ ಸೆಂಟರ್’, ‘ವಿಕಸನ’ ಮತ್ತು ‘ಸೀತಾ ಸ್ಕೂಲ್’ನಲ್ಲಿ ಮೌಲ್ಯಯುತ ತರಬೇತಿ ಇಲ್ಲಿನ ಶಿಕ್ಷಕರು ಪಡೆದಿದ್ದಾರೆ. ಜೊತೆಗೆ ಗರಿಷ್ಠ ಮಟ್ಟದಲ್ಲಿ ಅನುಷ್ಠಾನಗೊಳಿಸುವಲ್ಲಿ, ಕಾರ್ಯರೂಪಕ್ಕೆ ತರುವಲ್ಲಿ ಬಹುವಾಗಿ ಶ್ರಮಿಸುತ್ತಿದ್ದಾರೆ. ಸರಕಾರದಿಂದ ಯಾವುದೇ ಧನಸಹಾಯ, ಅನುದಾನ ಪಡೆಯದ ಈ ಶಾಲೆ, ವಂತಿಗೆ ಸಹ ಸ್ವೀಕರಿಸದೇ ಹಿತೈಷಿಗಳ, ಬಂಧುಗಳ ಹಾಗು ಪಾಲಕರ, ಸಹೃದಯರ ಸಹಕಾರ, ತನು-ಮನ-ಧನದ ಸೇವೆಯಿಂದ ನಡೆಯುತ್ತಿದೆ.

ಸ್ವಯಂ ಪ್ರೇರಣೆಯಿಂದ ಕೆಲ ಮಾವಶಿಗಳು ಅತ್ಯಂತ ಕಡಿಮೆ ಪಗಾರದಲ್ಲಿ ಸೇವಾ ಮನೋಭಾವದಿಂದ ಶಿಕ್ಷಕ ವೃತ್ತಿ ಆಯ್ದುಕೊಂಡಿದ್ದರೆ, ಕೆಲ ಮಾವಶಿಗಳು ಪಗಾರ ಇಲ್ಲದೆಯೂ ದುಡಿಯುತ್ತಿದ್ದಾರೆ. ಆಶ್ಚರ್ಯವಲ್ಲವೇ? ಸೇವೆಯೇ ದೇವರು ಎಂದು ನಂಬಿರುವ ಹನ್ನೊಂದು ಜನ ‘ಮದರ್ ಥೆರೆಸಾ’ ಪ್ರತಿರೂಪದ ಮಾವಶಿಗಳು ಇಲ್ಲಿದ್ದಾರೆ.

ಬಾಲ ಬಳಗದ ಪ್ರಾಂಶುಪಾಲರಾದ ಶ್ರೀಮತಿ ಪ್ರತಿಭಾ ಮಾವಶಿ ಹೇಳುವಂತೆ- "ಮಕ್ಕಳು ಯಾಕೆ ಕಲಿಯಬೇಕು? ಹೇಗೆ ಕಲಿಯಬೇಕು? ಮತ್ತು ಏನನ್ನು ಕಲಿಯಬೇಕು? ಏನೆಲ್ಲ ಕಲಿಯಬೇಕು? ಎಂದು ನಿರ್ಧರಿಸುವುದು ನಮಗೂ ಸವಾಲೇ. ಪಾಲಕರೊಂದಿಗೆ, ಪ್ರಯೋಗಶೀಲ ಶಿಕ್ಷಣ ತಜ್ನರೊಂದಿಗೆ, ಮಾನಸಿಕ ತಜ್ನರೊಂದಿಗೆ ಸಮಾಲೋಚನೆ ನಡೆಸಿ, ಸಂವಾದಗಳನ್ನು ಏರ್ಪಡಿಸಿ ಶಿಕ್ಷಕರು ಸಮ್ಮಿಳಿತ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಮುಕ್ತ ಪರಿಸರದಲ್ಲಿ ಶ್ರಮಿಸುತ್ತಿರುವ ಶಾಲೆ ಬಾಲ ಬಳಗ. ಇದು ನಿಜವಾಗಿಯೂ ಮಕ್ಕಳ ಶಾಲೆ, ಪಾಲಕರ ಶಾಲೆ.

ಇನ್ನೊಂದು ಸ್ವಾರಸ್ಯಕರ ವಿಷಯವೆಂದರೆ ಈ ಮಕ್ಕಳನ್ನು ಈಗಿನಿಂದಲೇ ಪತ್ರಕರ್ತರನ್ನಾಗಿಸುವ ಹೆಬ್ಬಯಕೆ ನಮಗಿದೆ. ಅನಿಯತಕಾಲಿಕವಾಗಿ ಮಕ್ಕಳೇ ಮುತುವರ್ಜಿವಹಿಸಿ ಕೈಬರಹದ ಶಾಲಾ ಭಿತ್ತಿಪತ್ರಿಕೆ ಹೊರಡಿಸುವ ತಯಾರಿಯಲ್ಲಿದ್ದಾರೆ. ‘ಕರುಡು ಪ್ರತಿ’ ಸಿದ್ಧಗೊಂಡಿದೆ. ಹಿರಿಯ ವಿದ್ಯಾರ್ಥಿಗಳು ಈಗ ಸಾರಥ್ಯವಹಿಸಿ ಬಿಡುಗಡೆಗೊಳಿಸಲಿದ್ದಾರೆ. ಪತ್ರಿಕೆಯಲ್ಲಿ ಲೇಖನ, ಹಾಡು, ಕಥೆ, ಕವನ, ವ್ಯಂಗ್ಯ ಚಿತ್ರ, ಪುಟಾಣಿ ಮರಿ ಚಿತ್ರ ಬರಿ ಎಲ್ಲದಕ್ಕೊ ಮುಕ್ತ ಅವಕಾಶ. ಇಲ್ಲಿ ಮಕ್ಕಳು ಹೇಳಬೇಕು. ಮಕ್ಕಳ ಆಸೆ, ಆಕಾಂಕ್ಷೆ ಹಾಗು ಬಯಕೆಗಳು ವ್ಯಕ್ತವಾಗಬೇಕು’ ಎಂದು ಹೆಮ್ಮೆಯಿಂದ ಹೇಳಿದರು.

ನಮ್ಮ ನಾಡಿನ ಹಿರಿಯ ಸಾಹಿತಿಗಳಾದ ನಾಡೋಜ ಚೆನ್ನವೀರ ಕಣವಿ, ಖ್ಯಾತ ವಿಮರ್ಶಕ ಪ್ರೊ.ಕೀರ್ತಿನಾಥ ಕುರ್ತಕೋಟಿ, ಇಂದಿರಾ ಜಯಸಿಂಹ, ಪ್ರಖ್ಯಾತ ಕಲಾವಿದ ಸುರೇಶ ಕುಲಕರ್ಣಿ, ರಾಮಚಂದ್ರ ಕುಲಕರ್ಣಿ, ಪ್ರೊ.ಕೆ.ಎಸ್.ದೇಶಪಾಂಡೆ, ವಾಯೋಲಿನ್ ವಿದ್ವನ್ ಮಣಿಗಳಾದ ಪಂ.ಬಿ.ಎಸ್.ಮಠ, ಶ್ರೀಮತಿ ಅಕ್ಕ್ಕಮಹಾದೇವಿ ಮಠ ಮೊದಲಾದವರು ಬಾಲ ಬಳಗಕ್ಕೆ ಭೇಟಿ ನೀಡಿ ತಮ್ಮ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಪ್ರಸಿದ್ಧ ರಂಗಕರ್ಮಿ ಡಾ.ಪ್ರಕಾಶ ಗರೂಡ್ ಅವರ ಕರ್ಮಭೂಮಿ ಬಾಲ ಬಳಗ ‘ಪಪೆಟ್ ಹೌಸ್’ ಇರುವುದು ಸಹ ಈ ಶಾಲೆಯ ಆವರಣದಲ್ಲಿ!

ಬಿಜಾಪುರ, ಬೆಳಗಾವಿ, ಗದಗ ಹಾಗು ಶಿರಸಿಯಿಂದ ಸಮಾಜ ಸೇವಕರು ಬಂದು ಈ ಶಾಲೆಗೆ ಭೇಟಿ ನೀಡಿಇಂತಹದೇ ಶಾಲೆಯನ್ನು ತಮ್ಮ ಊರುಗಳಲ್ಲಿ ತೆರೆದು..ಸುಲಲಿತವಾಗಿ ನಡೆಸಿಕೊಂಡು ಹೋಗುವ ಆಸೆ ವ್ಯಕ್ತಪಡಿಸಿದ್ದಾರೆ. ಶಿರಸಿಯಲ್ಲಿ ಈಗಾಗಲೇ ಬಾಲ ಬಳಗ ಪ್ರಯೋಗಕ್ಕೆ ಚಾಲನೆ ನೀಡಲಾಗಿದೆ.

ಸಂಗೀತ, ಯೋಗ, ವ್ಯಾಯಾಮ, ಕಲೆ, ಹಾಡು, ನೃತ್ಯ, ನಾಟಕ, ಜಾನಪದ ಇತ್ಯಾದಿ ಹತ್ತು, ಹಲವಾರು ಕ್ಸೇತ್ರಗಳಲ್ಲಿ ಮಕ್ಕಳನ್ನು ಪಳಗಿಸಿ, ಅವರ ಆಸಕ್ತಿಗೆ ತಕ್ಕಂತೆ ನೀರೆರೆದು ಪೋಷಿಸುವಲ್ಲಿ ಶಿಕ್ಷಕರದ್ದು ಮತ್ತು ಪಾಲಕರದ್ದು ಮಹತ್ವದ ಪಾತ್ರ. ಅಂಕ ಗಳಿಕೆಗೆ ಇಲ್ಲಿ ಕನಿಷ್ಠತಮ ಪ್ರಾಧಾನ್ಯ. ಆದರೆ ಇಲ್ಲಿ ಕಲಿತು ಬೇರೆ ಶಾಲೆಗೆ ಪ್ರವೇಷ ಪಡೆದಿರುವ ಮಕ್ಕಳು ಉಳಿದ ಮಕ್ಕಳಿಗಿಂತ ಅಭ್ಯಾಸದಲ್ಲೂ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿಯೂ ಸದಾ ಮುಂದಿದ್ದು ಈ ಪ್ರಯೋಗಕ್ಕೆ ಸ್ಫೂರ್ತಿ ನೀಡಿದ್ದಾರೆ.

ಬಾಲ ಬಳಗ ಸೃಜನಶೀಲ ಶಿಕ್ಷಣ ಟ್ರಸ್ಟ ಪ್ರತಿಷ್ಠಾನದ ವತಿಯಿಂದ ನಡೆಸಲಾಗುವ ಈ ಶಾಲೆಗೆ ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷರು. ಮಾಂವಶಿ ಪ್ರತಿಭಾ ಕುಲಕರ್ಣಿ ಪ್ರಾಂಶುಪಾಲರು. ‘ಓದು ಒಕ್ಕಾಲು..ಬುದ್ಧಿ ಮುಕ್ಕಾಲು’ ಬನ್ನಿ ಒಮ್ಮೆ ಈ ಶಾಲೆಗೆ ಭೇಟಿ ನೀಡಿ. ಮಕ್ಕಳ ಮೊಗದ ಆ ಮಂದಹಾಸ, ಕಣ್ಣಿನ ಆ ಮಿಂಚು, ಸ್ವಚ್ಛಂದ ಓಡಾಟ, ಆ ಹನ್ನೊಂದು ಮಾವಶಿಗಳ ಕಾಳಜಿ ಶಬ್ದ ನಿರೂಪಣಾ ಸಾಹಸಕ್ಕೆ ಮಿಕ್ಕಿದ್ದು, ನೋಡಿಯೇ ಆನಂದಿಸಬೇಕು. ಇನ್ನು ಹೊಸ ಶಾಲೆ, ಆ ಆವರಣ ಅಬ್ಬಾ! ನಾನು ಮತ್ತೊಮ್ಮೆ ೧ನೇಯ ಈಯತ್ತೆಗೆ ಹೆಸರು ಹಚ್ಚುವ ತವಕದಲ್ಲಿದ್ದೇನೆ.