‘ಬಿಡುಗಡೆಯ ಹಾಡುಗಳು’ (ಭಾಗ ೨೨) - ಸೀತಾತನಯ

ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ಆಯ್ಕೆ ಮಾಡಿಕೊಂಡ ಕವಿ ‘ಸೀತಾತನಯ’ ಎಂಬ ನಾಮಾಂಕಿತ ಶ್ರೀಧರ ಖಾನೋಲ್ಕರ್. ಇವರ ಒಂದೆರಡು ಕವನಗಳನ್ನು ನಾವು ಈಗಾಗಲೇ ‘ಸಂಪದ’ ದಲ್ಲಿ ಮುದ್ರಿಸಿದ್ದೇವೆ. ಇವರ ‘ಸೀತಾತನಯ’ ಕಾವ್ಯ ನಾಮದ ಕುರಿತಾಗಿಯೂ ದ್ವಂದ್ವಗಳಿವೆ. ಕೆಲವೆಡೆ ‘ಸೀತಾತನಯ’ ಎಂಬ ಕಾವ್ಯನಾಮದಲ್ಲಿ ಕವನಗಳನ್ನು ಬರೆಯುತ್ತಿದ್ದವರು ಖ್ಯಾತ ಬರಹಗಾರ, ಸ್ವಾತಂತ್ರ್ಯ ಹೋರಾಟಗಾರರಾದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು. ಆದರೆ ಬಿಡುಗಡೆಯ ಹಾಡುಗಳು ಕೃತಿಯಲ್ಲಿ ‘ಸೀತಾತನಯ’ ಎಂಬ ಕಾವ್ಯನಾಮಾಂಕಿತರು ಶ್ರೀಧರ ಖಾನೋಲ್ಕರ್ ಎಂಬ ಮಾಹಿತಿ ಇದೆ. ಇದರ ಬಗ್ಗೆ ಓದುಗರ ಬಳಿ ಅಧಿಕ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ.
ಶ್ರೀಧರ ಖಾನೋಳ್ಕರ (ಖಾನೋಳಕರ) ಇವರು ೧೮೯೬ರಲ್ಲಿ ಜನಿಸಿದರು. ೧೯೧೯ರಲ್ಲಿ ಬಿ ಎ ಪದವಿಯನ್ನು ಪಡೆದು ಧಾರವಾಡದ ರಾಷ್ಟ್ರೀಯ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ೧೯೪೧ರಲ್ಲಿ ನಿವೃತ್ತರಾದರು. ಇವರ ಮುಖ್ಯ ಕೃತಿಗಳು ನೌಕಾ ಕ್ರೀಡನ, ಸಮರ ಸನ್ಯಾಸ ಮತ್ತು ಹೂಗೆಂಪು. ಶ್ರೀಧರ ಎಂಬ ಹೆಸರಿನಲ್ಲಿ ಕವನಗಳನ್ನು ಬರೆಯುತ್ತಿದ್ದರು. ಇವರು ದ ರಾ ಬೇಂದ್ರೆಯವರ ಸಮಕಾಲೀನರೂ, ಆಪ್ತರೂ ಆಗಿದ್ದರು. ಜಾನಪದ ಸಾಹಿತ್ಯದಲ್ಲಿ ಅಪಾರ ಒಲವುಳ್ಳವರಾಗಿದ್ದರು. ಸೊಗಸಾದ ಕವಾಲಿಗಳನ್ನು ರಚಿಸಿಸುತ್ತಿದ್ದರು. ಖಾನೋಳ್ಕರರ ಬಗ್ಗೆ ಅಧಿಕ ಮಾಹಿತಿ, ಭಾವಚಿತ್ರ ಲಭ್ಯವಿಲ್ಲ.
ಬಿಡುಗಡೆಯ ಹಾಡುಗಳು ಕೃತಿಯಿಂದ ನಾವು ಆಯ್ದ ಕವನ ‘ದೇಶೀಯ ದುಮದುಮ್ಮೆ’. ಈ ಕವನವನ್ನು ಗೋಕರ್ಣ ಸ್ಟಡಿ ಸರ್ಕಲ್ ನಲ್ಲಿದ್ದ ಮುದ್ರಿತ ಪ್ರತಿಯಿಂದ ಶ್ರೀ ಸುರೇಂದ್ರ ದಾನಿಯವರು ಸಂಗ್ರಹಿಸಿ ನೀಡಿರುತ್ತಾರೆ.
ದೇಶೀಯ ದುಮದುಮ್ಮೆ
ಪ್ರಾರ್ಥನೆ
ಪರದಾಸ್ಯ ಪಾಶದ ಬೇಡಿಯ ಕಡಿಯುವ ಬಗೆಯನು ಕೇಳಿರಿ ದೇಶದ ಜನರೇ ।
॥ಮಾತರಂ ವಂದೇ ಮಾತರಂ ॥ಪಲ್ಲವಿ॥
ಅರವಿಂದನಾಭನ ಸುರವಂದ್ಯ ಪಾದವ ಶಿರದೊಳು ವಿನಯದಿ ।
ಧರಿಸುವೆನು । ನಾನು । ಸರಸತಿ ಪಾದಕೆ ನಮಿಸುವೆನು । ಬಲು ।
ಕರುಣದಿ ಮತಿಯನು ಬೇಡುವೆನು । ಪರದಾಸ್ಯ ಬೇಡಿಯ ಕಡಿಯಲು ।
ಬೇಡುವೆ ಸಾಸಿರ ಹೆಸರಿನ ಜಗದೀಶನನ್ನು ॥
ತನುಮನ ಧನಗಳ ಸವಿಯನು ಸುರಿಸುವ ಭರತಮಾತೆಯ ಚರಣ
ಕಮಲವನು ।ವರ। ತನಿಭಕ್ತಿ ರಸದಿಂದಲೆರೆಯುವೆನು । ಬಲು ।
ಕನಿಕರದಿಂದಲಿ ಬೇಡುವೆನು । ಮನದ ಬಯಕೆಯನ್ನು ಕೊನೆಗಾಣಿಸುವ
ನನ್ನ । ಮನದೊಳು ಹುರುಪನ್ನು ನಮಿಸಿ ಕೇಳುವೆನು ॥
ದೇಶಕೋಶವ ಬಿಟ್ಟು ದೇಶಸೇವೆಯ ಮಾಡಿ ತೊಳಲುವ ಮೋಹನದಾಸರನು ।
ಆಹಾ । ಗಾಸಿಯಾಗುರುವಂಥ ದಾಸರನು । ಬಲು
ಸೋಸುವ ಲಜಪತರಾಯರನು । ದೇಶದೇವಿಯ ವರಚರಣಕಮಲವನ್ನು
ಶಿರದೊಳು ಧರಿಸಿದ ತಿಲಕರ ನಮಿಸಿ ॥
***
ಪರದೇಶಿಗಳ ಆಗಮನ
ತಕ್ಕಡಿ ಹಿಡಕೊಂಡು ಬೇಪಾರ ಮಾಡುತ ಬಿಳುಪಾದ ಪರಕೀಯ
ಜನರೆಲ್ಲರೂ । ಬಂದು । ಕಕ್ಕಸಬಡುತಲಿ ಕೂಡಿದರು ।ನಮ್ಮ।
ಉಕ್ಕುವ ನಾಡನು ಕೆಡಿಸಿದರು । ಯುಕ್ತಿಯ ಬಲದಿಂದ ನೆಕ್ಕುತ
ರಾಜ್ಯವ ರಾಜಕಾರಣವನ್ನು ಭರದಿ ಹೂಡಿದರು ॥
ಬಗೆಬಗೆ ಬೆಳೆಯಿಂದ ಸೊಗಸಾಗಿ ಮೆರೆಯುವ ಮಿಗಿಲಾದ ಬಂಗಾಲ
ರಾಷ್ಟ್ರವನು । ಬಲು । ಸೊಗಸಾದ ಕರ್ನಾಟದೇಶವನು ।ವೀರ।
ಮೊಗದ ಪಂಜಾಬದ ಭೂಮಿಯನು । ಮಿಗಿಲಾದ ಮಹಾರಾಷ್ಟ್ರ
ದೇಶವ ಮೋಸದಿ ಭರದಿಂದ ಸಮನಾಗಿ ವಶಪಡಿಸಿಕೊಂಡರು ॥
ವೇದಾಂತದಾಕಾಶದೊಳಗೆ ಮಿನುಗುವಂಥ ಸಾಧುಸಂತರ ಭಾಷೆ
ಯೊಳಗೆ ಮೂಡಿ । ತನ್ನ । ಕದಲದ ಹೊಳಪನು ಜಗಕೆ ನೀಡಿ । ನಮ್ಮ
ಕವಲಾದ ಹಾದಿಯ ತಿರುಗಿ ತೀಡಿ । ಕಾದುತ ಜಗವನು ಮರೆಯಾದ
ನಯ್ಯಯ್ಯೋ ಹಾದಿಯ ತೋರುವ ಸ್ವಾತಂತ್ರ್ಯ ರವಿಯೂ ॥
ವೀರರ ಕರದೊಳು ಮಿನುಗುವ ಕತ್ತಿಗಳೆಲ್ಲೆಲ್ಲಿ ನೋಡಲು ಹೋದ
ವಯ್ಯ । ಚಾಕು । ಚೂರಿ ಕತ್ತರಿ ಕತ್ತಿ ಬಂದವಯ್ಯ । ಮಾರು ।
ಮಾರುದ್ಧ ಚತ್ತರಗಿ ಛತ್ರವಯ್ಯ । ಕಾರುತ್ತ ವಿಷವನು ಪರದಾಸ್ಯ
ರಾಹುವು ನುಂಗಿದನಯ್ಯಯ್ಯೋ ಸ್ವಾತಂತ್ರ್ಯ ಶಶಿಯಾ॥