‘ಬಿಡುಗಡೆಯ ಹಾಡುಗಳು’ (ಭಾಗ ೨೭) - ಬಿ. ನೀಲಕಂಠಯ್ಯ

ಕಳೆದ ವಾರ ಪ್ರಕಟಿಸಿದ ಬಿ ನೀಲಕಂಠಯ್ಯ ವಿರಚಿತ ‘ಕಾಂಗ್ರೆಸ್ ಲಾವಣಿ’ ಯ ಮುಂದುವರಿದ ಭಾಗ ಇಲ್ಲಿದೆ…
ಕಾಂಗ್ರೆಸ್ ಲಾವಣಿ (ಭಾಗ ೨)
ಉಡನ್
ಮುಂದಾದ ಪರೊಯ ನೀವ್ ಚಂದದಿ ಕೇಳಿರಿಯಲ್ಲಾ ।
ಬಂಧನದಿ ಬಿದ್ದ ನಮ್ ದೇಶ ಮುಖಣ್ಡ್ರಿಗೆಲ್ಲ ।
ಒಂದಾದರು ಸರಿ ಅನುಕೂಲವಿಲ್ಲದೋಯ್ತಲ್ಲ ।
ಎಂದೆಂದಿಗು ಸರಕಾರ್ ನಡತೆ ಇದುವೆ ಸರಿಯಿಲ್ಲಾ ॥
ಗುಲ್ಲುಡನ್
ಕೂಡಿತೂ ಸರ್ಕಾರದ ಕೂಟ । ಮಾಡಿದರು ಯೋಚನೆಯನು ದೀಟ ।
ಹೂಡಿ ನೂರಿಪ್ಪತ್ನಾಲ್ಕರೇಟ । ಕೂಡಲೆ ಕಾಂಗ್ರೆಸ್ ವೀರಮುಖಂಡರ ಹಿಡಿದರು ಅಕಟಕಟಾ ॥
ಶ್ಲೋಕ
ಕೆ.ಟಿ.ಭಾಷ್ಯಂ, ಎನ್ ಸಿ ತಿಮ್ಮಾರೆಡ್ಡಿಯವರುಗಳ್ ನಿಶ್ಚಯ ।
ಕೋರ್ಟಿನೊಳು ಕೇಸ್ ವಾದವಿಲ್ಲದೆ ಹೊಂದಿದರು ಮಹ ಶಿಕ್ಷೆಯ ॥
ಚಾಲ್
ಡಂಗಾದರು ನಮ್ ಬೆಂಗ್ಳೂರ್ ಪ್ರಜೆಗಳು ಹಿಂಗ್ಯಾಕ್ ಮಾಡಿದರೆನುತೊಬ್ಬ ।
ಕಾಂಗ್ರೆಸ್ ಘನ ಸಂಗ್ರಾಮವ ಕೇಳಿದ ಆಂಗ್ಲರಿಗಾಯಿತು ಅಬ್ಬಬ್ಬಾ ।।
ಶ್ರೀನರಿಮನ್ನರು ಭಾಷಣ ಮಾಡಿದ ಬನಪ್ಪಪಾರ್ಕಿನ ವಿವರಗಳು ।
ಏನೇಳಲಿ ನಾ ಮುವತ್ತೊಂಭತ್ತನೆ ಸೆಕ್ಷನ್ ಜಾರಿಯು ಗಲಭೆಗಳು ॥
ಶ್ರೀನರಿಮನ್ನರ ಭಾಷಣ ಕೇಳಲು ಅನೇಕ ಪ್ರಜೆಗಳು ಕೂಡಿರಲು ।
ಆ ನರಿಮನ್ನರ ಆಕ್ಷಣ ಹಿಡಿಯಲು ಅನಂತ ಜನಗಳು ಜೋಡುಗಳು ॥
ಖಾನೂನೆಂಬುವ ಜ್ಞಾನವೆಯಿಲ್ಲದೆ ಮೇಲಿಂದ ಬಿದ್ದವು ಬೂಡ್ಸುಗಳು ।
ದೀನ ಗುಂಡಪ್ಪನ ಪ್ರಾಣವೆ ಹಾರಿತು ಮಾರನೆ ದಿನ ಗುಂಡೇಟಿನೊಳು ॥
ದೊಡ್ಡುಡನ್
ಕೇಳಿರೆಲ್ಲ ಮುವತ್ತೇಳನೆಯ ಇಸವಿಯ ಅಕ್ಟೋಬರಿಪ್ಪತ್ತೈದರೊಳು ।
ಪೇಳಲಿಕಸದಳ ಗಲಭೆಯ ಹಾವಳಿ ಕೆಂಪೇಗೌಡರ ಚೌಕದೊಳು ॥
ತಳಮಳಗೊಳ್ಳುವ ಗೋಲಿ ಏಟುಗಳು ನೋಡಿಮರುಗೆ ವಿದ್ಯಾರ್ಥಿಗಳು ।
ತಾಳದೆ ಪೆಟ್ಟನು ಬಿದ್ದರೆಷ್ಟೋ ಜನ ವಿಕ್ಟೋರಿಯ ಆಸ್ಪತ್ರೆಯೊಳು ॥
ಉಡನ್
ಕ್ಷಣಮಾತ್ರದೊಳೀರಣ ಕ್ಷೇತ್ರ ಗಲಭೆ ಬಯಲಾಗಿ ।
ಘನಪೊಂದಿದ ಲಾಯರ್ ಜನಗಳೆಲ್ಲ ಗುಂಪಾಗಿ ॥
ದಣಿಯುತಲಿ ದ್ವಿಪಕ್ಷುಕು ಬೆಡಿದರತಿ ಬೆಂಡಾಗಿ ।
ಅಣಗಿಸಿದರು ಘನತೆಯ ಗಲಭೆಯನ್ನು ಸಮವಾಗಿ ॥
ಗುಲ್ಲುಡನ್
ಮೇಲಿನಧಿಕಾರಿಗಳನು ಕಂಡು । ತಾಳಿನೀವ್ ಸಹನೆಯನುರಿಗೊಂಡು ।
ಪೇಳಲತಿ ನೀತಿಯ ಶ್ರಮಗೊಂಡೂ । ಕಾಲಿಗೆ ಬುದ್ಧಿಯನೇಳಿದರಾಕ್ಷಣ ಕಳವಳ ಕೈಗೊಂಡೂ ॥
ಶ್ಲೋಕ
ಇಲ್ಲ ಪೋಲೀಸ್ ಡ್ಯೂಟಿ ಇಲ್ಲವು ಇಲ್ಲ ಸರ್ಕಾರಾದಿನ ।
ಎಲ್ಲಿ ನೋಡಿದರಲ್ಲಿ ಗುಲ್ಲು ಎಲ್ಲ ನಿಂತಿತು ಮರುದಿನಾ ॥
(ಇನ್ನೂ ಇದೆ)