‘ಬಿಡುಗಡೆಯ ಹಾಡುಗಳು' (ಭಾಗ ೩) - ಬೆಟಗೇರಿ ಕೃಷ್ಣಶರ್ಮ
ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ೧೯೦೦ರ ಏಪ್ರಿಲ್ ೧೬ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ..
ಕೃಷ್ಣಶರ್ಮರು ೧೨ನೇ ವರ್ಷದವನಿರುವಾಗ ತಂದೆ, ೧೫ನೇ ವರ್ಷಕ್ಕೆ ಅಣ್ಣ ಹಣಮಂತರಾಯ, ೧೮ನೇ ವರ್ಷಕ್ಕೆ ತಾಯಿ ತೀರಿಕೊಂಡರು. ಸ್ವತಃ ಕೃಷ್ಣಶರ್ಮರೇ ತಮ್ಮ ೧೪ನೇ ವಯಸ್ಸಿನಲ್ಲಿ ವಿಷಮಶೀತ ಜ್ವರ ಹಾಗೂ ೧೫ನೇ ವಯಸ್ಸಿಗೆ ಪ್ಲೇಗ್ ನಿಂದ ಬಳಲಿ ಜೀವನುದ್ದಕ್ಕೂ ದುರ್ಬಲ ಕೈ-ಕಾಲುಗಳನ್ನು ಹೊಂದಬೇಕಾಯಿತು. ೧೯೨೮ರಲ್ಲಿ ತುಳಸೀಬಾಯಿಯೊಂದಿಗೆ ಮದುವೆ. ಕೃಷ್ಣಶರ್ಮರು ೫೬ ವಯಸ್ಸಿನವರಿದ್ದಾಗ ಮಗಳು ಹಾಗೂ ಮರು ವರ್ಷವೇ ಪತ್ನಿ ತೀರಿ ಹೋದರು.
೫ನೇ ತರಗತಿವರೆಗೆ ಬೆಟಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ನಂತರ, ಕಂಪಿಸುವ ಕೈ-ಕಾಲುಗಳೊಂದಿಗೆ ೫ ಕಿ.ಮೀ. ದೂರದ ಮುಮದಾಪುರಕ್ಕೆ ದಿನಾಲು ತೆರಳಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದರು. ಮುಂದೆ ಬೆಳಗಾವಿಯಲ್ಲಿ ಮುಲ್ಕಿ ಪರೀಕ್ಷೆ ತೇರ್ಗಡೆಯಾದರು. ೧೯೧೮ರಲ್ಲಿ ಬೆಳಗಾವಿಯ ನಗರಪಾಲಿಕೆಯಲ್ಲಿಕೆಲಸ ಸಿಕ್ಕಿತು. ಅದು-ಮನೆಮನೆಗಳಿಗೆ ಹೋಗಿ ಇಲಿ ಹಿಡಿಯುವುದು. ನಂತರ ಈ ಕೆಲಸ ತೊರೆದು ಕಿತ್ತೂರಿನಲ್ಲಿ ಸಂಸ್ಕೃತ ಅಧ್ಯಯನ ಮಾಡಿ ಶಿಕ್ಷಕರಾದರು. ಮತ್ತೆ ಕೆಲಸ ತೊರೆದು ಧಾರವಾಡ ನಂತರ ಬೆಂಗಳೂರಿನಲ್ಲಿ ಕೆಲಸ ಮಾಡಿ, ಮತ್ತೆ ಧಾರವಾಡಕ್ಕೆ ಮರಳಿ ಜಯಂತಿ ಪತ್ರಿಕೆಯ ಸಂಪಾದಕರಾದರು.
ಭಾವಗೀತ, ನಲ್ವಾಡುಗಳು ಸೇರಿದಂತೆ ಒಟ್ಟು ೧೪ ಕವನ ಸಂಕಲನಗಳು, ಸಂಸಾರದ ಚಿತ್ರ ಹಾಗೂ ಬಡತನದ ಬಾಳು ಸೇರಿದಂತೆ ಒಟ್ಟು ೮ ಕಥಾ ಸಂಕಲನಗಳು, ಸುದರ್ಶನ, ರಾಜಯೋಗಿ ಸೇರಿದಂತೆ ಒಟ್ಟು ೫ ಕಾದಂಬರಿಗಳು, ಬೆಳವಡಿ ಮಲ್ಲಮ್ಮ, ಬೆಂದ ಹೃದಯ, ಮುಂಡರಗಿಯ ಗಂಡುಗಲಿ, ಪಂಚಗಂಗಾ (ಆಕಾಶವಾಣಿ ತರಂಗ ರೂಪಕಗಳು) ಕನ್ನಡ ರಾಜ್ಯ ರಮಾರಮಣ-ಚರಿತ್ರೆ, ಕನ್ನಡ ಜನಪದ ಸಾಹಿತ್ಯ ಹಾಗೂ ಬೀಸುಕಲ್ಲಿನ ಪದಗಳು -ಕೃತಿಗಳು, ಪೂಜಾತತ್ವ, ಲೋಕನೀತಿ ಸೇರಿದಂತೆ ಒಟ್ಟು ೧೧ ಸಂಪಾದಿತ ಕೃತಿಗಳು, ನನ್ನ ನೆನಪುಗಳು-ಆತ್ಮಚರಿತ್ರೆ, ಮಕ್ಕಳ ಸಾಹಿತ್ಯ, ವಿಮರ್ಶೆ-ಸಂಶೋಧನೆ ವಲಯದಲ್ಲೂ ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯವು ಕೃಷ್ಣಶರ್ಮರಿಗೆ ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ಸಮ್ಮೇಳನದ ಅಧ್ಯಕ್ಷತೆ, ವೈದ್ಯಕೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಗೌರವಗಳು ಸಂದಿವೆ. ಧಾರವಾಡದ ತಮ್ಮ ಮನೆಯಲ್ಲಿ ೧೯೮೨ರ ಅಕ್ಟೋಬರ್ ೩೦ ರಂದು ನಿಧನರಾದರು.
ಬೆಟಗೇರಿ ಕೃಷ್ಣಶರ್ಮ ಇವರ ಒಂದು ಕವನ ‘ಮಾತೃಭೂಮಿ ಜನನಿ' ಯು ‘ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಸಮರ' ಎಂಬ ಪುಸ್ತಕದಿಂದ ಆಯ್ದು ಬಿಡುಗಡೆಯ ಹಾಡುಗಳು ಕೃತಿಯಲ್ಲಿ ಬಳಸಿಕೊಳ್ಳಲಾಗಿದೆ. ಅದನ್ನು ಇಲ್ಲಿ ಪ್ರಕಟ ಮಾಡಲಾಗಿದೆ…
ಮಾತೃಭೂಮಿಯ ಜನನಿ
ಮಾತೃಭೂಮಿಯ ಜನನಿ ನಿನ್ನ ಚರಣ ಸೇವೆ ಮಾಡುವಾ !
ಪರಮ ಹರುಷದಿಂಡ ನಿನ್ನ ಸುಖಕೆ ಪ್ರಾಣವೀಯುವಾ ॥ಪಲ್ಲವಿ॥
ತನುಮನಧನದಿಂದ ನಿನ್ನ ಘನತೆಯನ್ನು ಬೆಳೆಸುವಾ ।
ದಣಿಯದೆ ಅನುದಿನವು ದುಡಿದು ಗುಣಿಗಳೆನಿಸಿಕೊಳ್ಳುವಾ ॥೧॥
ಬಂದುನಿಂದ ತೊಂದರೆಗಳ ಸಂದಣಿಯನು ಸರಿಸುವಾ ।
ಮುಂದೆ ಅಡಿಯನಿಡುತ ಒಂದುಗೂಡಿ ಜಯವ ಪೊಂದುವಾ ॥೨॥
ಹಿಂದುಮಾತೆ ಬಂಧುಭಾವದಿಂದ ನಿನ್ನ ಕಂದರು।
ಒಂದುಗೂಡಿ ಪಾರತಂತ್ಯ ಬಂಧವ ಹರಿದೊಗೆವೆವು ॥೩॥
ಕೆಟ್ಟ ಕಣ್ಣಿನಿಂದ ನೋಳ್ಬ ದುಷ್ಟಜನರಿಗಂಜದೆ ।
ದಿಟ್ಟತನದೊಳೆಲ್ಲರೊಟ್ಟುಗೂಡುತಿಹೆವು ಕಷ್ಟಕೆ ॥೪॥
(‘ಬಿಡುಗಡೆಯ ಹಾಡುಗಳು' ಕೃತಿಯಿಂದ ಆಯ್ದ ಕವನ)