‘ಬಿ.ಪಿ.ಓ.’, ‘ಕೆ.ಪಿ.ಓ.’ ನಂತರದ ಹೊರಗುತ್ತಿಗೆ ಯಾವುದು?
ಬಿ.ಪಿ.ಓ.’ ಗೊತ್ತಲ್ಲ? ವಿದೇಶಿ ಕಂಪನಿಗಳು ತಮ್ಮ ವಹಿವಾಟಿನ ನಿತ್ಯ ಚಟುವಟಿಕೆಗಳನ್ನು ಮತ್ತೊಂದು ಕಂಪನಿಗೆ ಹೊರಗುತ್ತಿಗೆ ನೀಡುವ ಪ್ರಕ್ರಿಯೆಯಿದು. ತಮ್ಮದೇ ತಾಣದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಿಸುವುದು ತುಟ್ಟಿಯ ಬಾಬ್ತು ಎಂದು ಮನವರಿಕೆಯಾದಾಗ ದೊಡ್ಡ ಕಂಪನಿಗಳು ಅವುಗಳನ್ನು ಅಗ್ಗದ ದರದಲ್ಲಿ ಮಾಡಿಕೊಡಬಲ್ಲ ಪುಟ್ಟ ಕಂಪನಿಗಳ ಮೊರೆಹೋಗುತ್ತವೆ. ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಹಾಗೂ ಯೂರೋಪ್ ದೇಶಗಳಿಂದ ನಮ್ಮ ದೇಶದ ಐ.ಟಿ. ಕಂಪನಿಗಳಿಗೆ ಈ ‘ಬಿ.ಪಿ.ಓ.’ ಪ್ರಕ್ರಿಯೆಯಿಂದ ‘ಬ್ಯುಸಿನೆಸ್’ ಹೆಚ್ಚುತ್ತಿದೆ. ಲಾಭಾಂಶ ಹೆಚ್ಚಿರುವ ಸ್ವದೇಶಿ ಕಂಪನಿಗಳೂ ಸಹಾ ಸಣ್ಣ-ಪುಟ್ಟ ಬ್ಯುಸಿನೆಸ್ ಅನ್ನು ಇದೇ ರೀತಿ ಮತ್ತೊಂದು ಸ್ವದೇಶಿ ಕಂಪನಿಗೆ ವರ್ಗಾಯಿಸುತ್ತವೆ - ವೇತನ ಉಳಿತಾಯ ದೃಷ್ಟಿಯಿಂದ. ಇನ್ನು ಜ್ಞಾನವನ್ನು ವಹಿವಾಟು ಮಾಡುವ ಕೆ.ಪಿ.ಓ. ಕಂಪನಿಗಳು ಅಂದರೆ ಉದಾಹರಣೆಗೆ ವಿದೇಶಗಳಲ್ಲಿನ ವಿದ್ಯಾರ್ಥಿಗಳಿಗೆ ಭಾರತದಲ್ಲಿಯೇ ಇಂಟರ್ನೆಟ್ ಸಂಪರ್ಕವಿರುವ ಕಂಪ್ಯೂಟರ್ ಮುಂದೆ ಕುಳಿತ ಗುರುಗಳು ‘ಟ್ಯೂಶನ್’ (ಮನೆಪಾಠ) ನಡೆಸುವುದು, ನ್ಯಾಯಾಂಗ ಸಲಹೆ - ವೈದ್ಯಕೀಯ ವರದಿಗಳ ತಪಾಸಣೆ - ತಾಂತ್ರಿಕ ವಿಶ್ಲೇಷಣೆ - ತೆರಿಗೆ ಲೆಕ್ಕಾಚಾರ - ತರಬೇತಿ - ತಾಂತ್ರಿಕ ಬರಹ ಇತ್ಯಾದಿಗಳನ್ನು ವಿದೇಶಿ ಗ್ರಾಹಕರಿಗೆ ಮಾಡಿಕೊಡುವುದು ‘ಕೆ.ಪಿ.ಓ.’ ವ್ಯಾಪ್ತಿಗೆ ಬರುತ್ತವೆ. ಬಿ.ಪಿ.ಓ. ‘ಬ್ಯುಸಿನೆಸ್’ ನಂತರ ಮುಂದೇನು? ಎಂದು ಭಾರತದಲ್ಲಿನ ಉದ್ಯೋಗಾವಕಾಶಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಮುನ್ನವೇ ಮುನ್ನುಗ್ಗಿ ಬಂದದ್ದು ಕೆ.ಪಿ.ಓ. ವಹಿವಾಟು. ಆದರೆ ಯಾವುದೇ ‘ಬ್ಯುಸಿನೆಸ್’ ನಿರಂತರವಲ್ಲ. ಹೀಗಾಗಿ ಸದ್ಯದ ಪ್ರಶ್ನೆ - ಕೆ.ಪಿ.ಓ. ನಂತರ ಮುಂದೇನು?