‘ಬ್ಯಾಂಕ್ ಮೈನಾ’ ಹಕ್ಕಿಯ ಕಂಡೀರಾ?

‘ಬ್ಯಾಂಕ್ ಮೈನಾ’ ಹಕ್ಕಿಯ ಕಂಡೀರಾ?

ಒಂದು ಬಾರಿ ನಾನು ಗಣಿತ ವಿಷಯದ ತರಬೇತಿಯೊಂದರಲ್ಲಿ ಭಾಗವಹಿಸಲು ಗುಜರಾತ್ ರಾಜ್ಯದ ಅಹಮದಾಬಾದ್ ಎಂಬ ಊರಿಗೆ ಹೋಗಿದ್ದೆ. ಅಲ್ಲಿ ವಿಕ್ರಂ ಸಾರಾಭಾಯಿ ಕಮ್ಯೂನಿಟಿ ಸೈನ್ಸ್ ಸೆಂಟರ್ ಎಂಬ ಸಂಸ್ಥೆ ಈ ತರಬೇತಿಯನ್ನು ಆಯೋಜನೆ ಮಾಡಿತ್ತು. ವಿವಿಧ ಮಾದರಿಗಳ ಮೂಲಕ ಹೈಸ್ಕೂಲ್ ತರಗತಿಯ ಗಣಿತ ವಿಷಯವನ್ನು ಬೋಧಿಸುವ ವಿಧಾನವನ್ನು ನಮಗೆ ಹೇಳಿಕೊಟ್ಟರು. ಪ್ರತಿಯೊಬ್ಬರ ಕೈಯಿಂದಲೂ ಗಣಿತದ ಮಾದರಿಗಳನ್ನು ಮಾಡಿಸಿ ಅದನ್ನು ತರಗತಿಯಲ್ಲಿ ಬಳಸುವ ವಿಧಾನವನ್ನು ಹೇಳಿಕೊಟ್ಟರು. ಗಣಿತ ಪ್ರಯೋಗಾಲಯ ಎಂಬ ಪರಿಕಲ್ಪನೆಯೂ ನನಗೆ ಪರಿಚಯವಾದದ್ದು ಅಲ್ಲೇ. ದೇಶದ ಬೇರೆಬೇರೆ ಕಡೆಗಳಿಂದ ಸುಮಾರು ಐವತ್ತು ಶಿಕ್ಷಕರು ಈ ತರಬೇತಿಯಲ್ಲಿ ಭಾಗವಹಿಸಿದ್ದರು. 

ತರಬೇತಿ ಮುಗಿಸಿ ಅಹಮದಾಬಾದ್ ಪಟ್ಟಣದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹೋದೆವು. ಸಾಬರಮತಿ ಎಂಬ ಹೆಸರಿನ ನದಿ ಪಟ್ಟಣದ ಮಧ್ಯೆ ಹರಿಯುತ್ತದೆ. ಪಟ್ಟಣವನ್ನು ಸರಿಯಾಗಿ ಎರಡು ಸೀಳು ಮಾಡಿಕೊಂಡು ಹರಿಯುವ ಈ ನದಿಯ ದಂಡೆಯ ಮೇಲೆ ಸಾಬರಮತೀ ಗಾಂಧೀ ಆಶ್ರಮ ಇದೆ. ಮೋಹನದಾಸ ಕರಮಚಂದ ಗಾಂಧಿ ಮತ್ತು ವಿನೋಭಾ ಭಾವೆ  ಎಂಬ ಚೇತನಗಳು ಇಲ್ಲಿ ಬದುಕಿದ್ದ ನೆನಪುಗಳನ್ನು ಕಣ್ಣುತುಂಬಿಕೊಂಡು ಅಲ್ಲೇ ನದೀ ದಂಡೆಯ ಮೇಲೆ ಕುಳಿತಿದ್ದಾಗ ಅಲ್ಲೊಂದು ಹಕ್ಕಿ ಓಡಾಡುವುದು ಕಾಣಿಸಿತು

ನೋಡಲು ಥೇಟ್ ನಮ್ಮೂರಿನ ಮೈನಾ ಹಕ್ಕಿಯಂತೆಯೇ ಇತ್ತು ಆದರೆ ಮೈ ಎಲ್ಲಾ ಬೂದುಬಣ್ಣ. ತಲೆ, ರೆಕ್ಕೆಯತುದಿ ಮತ್ತು ಬಾಲ ಕಪ್ಪುಬಣ್ಣ. ಕೆಂಪು ಬಣ್ಣದ ಕಣ್ಣಿನ ಸುತ್ತ ಕಡುಕೇಸರಿ ಬಣ್ಣದ ಅಲಂಕಾರ. ಹಾರುವಾಗ ರೆಕ್ಕೆಯ ಕೆಳಗೆ ತಿಳಿಯಾದ ಕೇಸರಿ ಬಣ್ಣ. ಉತ್ತರ ಭಾರತದ ಸಿಂಧೂ ಗಂಗಾ ಬಯಲಿನ ಊರುಗಳಲ್ಲಿ ಈ ಮೈನಾ ಹಕ್ಕಿ ಬಹಳ ಸಾಮಾನ್ಯವಂತೆ. ದಕ್ಷಿಣ ಭಾರತದ ಯಾವ ಊರಿನಲ್ಲೂ ಈ ಮೈನಾ ಕಾಣಸಿಗುವುದಿಲ್ಲ. ನೀವೇನಾದರೂ ಉತ್ತರ ಭಾರತದ ಊರುಗಳಿಗೆ ಪ್ರವಾಸ ಹೋದರೆ ರೈಲು ನಿಲ್ದಾಣಗಳಲ್ಲೂ ಇವುಗಳನ್ನು ಸುಲಭವಾಗಿ ನೋಡಬಹುದು. ನಿಮ್ಮನ್ನು ಲೆಕ್ಕಿಸದೇ ನಿಮ್ಮ ಆಸುಪಾಸಿನಲ್ಲೇ ಓಡಾಡುತ್ತವೆ. ಮೇ ನಿಂದ ಆಗಸ್ಟ್ ತಿಂಗಳ ನಡುವೆ ಇವುಗಳಿಗೆ ಸಂತಾನೋತ್ಪತ್ತಿ ಕಾಲವಂತೆ. ಮರದಪೊಟರೆಗಳಲ್ಲಿ, ಕಟ್ಟಡದ ಸಂದಿಗಳಲ್ಲಿ ಗೂಡುಕಟ್ಟಿ ಮೊಟ್ಟೆ ಇಟ್ಟು ಮರಿಮಾಡುವ ಇವುಗಳು ಮಿಶ್ರಾಹಾರಿಗಳು. ಕಸದಬುಟ್ಟಿಯಲ್ಲಿ ಸಿಗುವ ಆಹಾರದಿಂದ ಹಿಡಿದು ಜನವಸತಿ ಪ್ರದೇಶಗಳಲ್ಲಿ ಸಿಗುವ ಏನನ್ನಾದರೂ ಹುಡುಕಿ ತಿನ್ನುತ್ತವೆಯಂತೆ. 

ಇಂಗ್ಲೀಷ್ ಹೆಸರು: Bank Myna

ವೈಜ್ಞಾನಿಕ ಹೆಸರು: Acridotheres ginginianus

ಕನ್ನಡದಲ್ಲಿ ನೀವೇ ಇದಕ್ಕೊಂದು ಹೆಸರು ಸೂಚಿಸಿ 

ಚಿತ್ರ ಮತ್ತು ಬರಹ : ಅರವಿಂದ ಕುಡ್ಲ, ಬಂಟ್ವಾಳ