‘ಬ್ಲಡೀ ಸಂಡೆ' ಎಂಬ ರಕ್ತಸಿಕ್ತ ಅಧ್ಯಾಯ !

‘ಬ್ಲಡೀ ಸಂಡೆ' ಎಂಬ ರಕ್ತಸಿಕ್ತ ಅಧ್ಯಾಯ !

ನಾವು ಕರಾಳ ಶುಕ್ರವಾರ ಅಥವಾ ‘ಬ್ಲ್ಯಾಕ್ ಫ್ರೈಡೇ’ ಎಂಬ ಹೆಸರನ್ನು ಕೇಳಿದ್ದೇವೆ. ೧೯೯೩ರಲ್ಲಿ ಮುಂಬೈಯಲ್ಲಿ ಒಂದು ಶುಕ್ರವಾರ (ಮಾರ್ಚ್ ೧೨) ರಂದು ನಡೆದ ಸರಣಿ ಬಾಂಬ್ ಸ್ಪೋಟದ ದಿನವನ್ನು ‘ಬ್ಲ್ಯಾಕ್ ಫ್ರೈಡೇ’ ಎಂದು ಕರೆಯುತ್ತಾರೆ. ಆದರೆ ನಿಮಗೆ ಇದೇ ರೀತಿಯ ಒಂದು ರಕ್ತಸಿಕ್ತ ಅಧ್ಯಾಯ ಐರ್ಲ್ಯಾಂಡ್ ನಲ್ಲಿ ನಡೆದ ಬಗ್ಗೆ ಗೊತ್ತೇ? ಇದನ್ನು ‘ಬ್ಲಡೀ ಸಂಡೆ' (Bloody Sunday) ಅಥವಾ ಬಾಗ್ ಸೈಡ್ ಹತ್ಯಾಕಾಂಡ ಎಂದು ಕರೆಯುತ್ತಾರೆ.

೧೯೭೨ನೇ ಇಸವಿ ಜನವರಿ ೩೦ರಂದು ಉತ್ತರ ಐರ್ಲ್ಯಾಂಡ್ ನಲ್ಲಿರುವ ಡೆನ್ರಿ ಎಂಬ ಊರಿನ ಬಾಗ್ ಸೈಡ್ ಎಂಬ ಪ್ರಾಂತ್ಯದಲ್ಲಿ ಈ ದುರ್ಘಟನೆ ನಡೆದ ಕಾರಣ ಇದನ್ನು ‘ಬಾಗ್ ಸೈಡ್ ಹತ್ಯಾಕಾಂಡ' ಎಂದು ಕರೆಯುತ್ತಾರೆ. ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಆಂದೋಲನಕಾರರನ್ನು ಬ್ರಿಟೀಷ್ ಸೈನಿಕರು ಮತ್ತು ಪೋಲೀಸರು ಸುಟ್ಟು ಸಾಯಿಸಿದ ಘಟನೆಯು ನಡೆದದ್ದು ಒಂದು ಕರಾಳ ಭಾನುವಾರದಂದು. ಅಂದು ನಡೆದ ಘಟನೆಯನ್ನು ಇತಿಹಾಸ ‘ಬ್ಲಡೀ ಸಂಡೆ' ಎಂದು ಗುರುತಿಸುತ್ತದೆ.

ಬಾಗ್ ಸೈಡ್ ಪ್ರಾಂತ್ಯದಲ್ಲಿ ನಾ ದರ್ಟಿ ಐರ್ಲ್ಯಾಂಡ್ ಸಿವಿಲ್ ರೈಟ್ಸ್ ನ ನಾಯಕತ್ವದಲ್ಲಿ ಬ್ರಿಟೀಷರ ನಿರ್ಭಂಧದ ವಿರುದ್ಧವಾಗಿ ನಡೆಯುತ್ತಿದ್ದ ಮೆರವಣಿಗೆಯ ಸಂದರ್ಭದಲ್ಲಿ ಈ ಘಟನೆ ನಡೆಯಿತು. ಡೆನ್ರಿ ಊರಿನ ಜನತೆಗೆ ಆ ಭಾನುವಾರ ಎಂದಿನಂತಿರಲಿಲ್ಲ. ಇತಿಹಾಸವೇ ಮರೆಯಲಾರದ ಘಟನೆ ನಡೆದೇ ಹೋಗಿತ್ತು ಆ ಭಾನುವಾರ.

ಆ ಭಾನುವಾರದಂದು ಸಂಜೆ ಪೌರ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಕಾರ್ಯಕರ್ತರು ಒಂದು ಮೆರವಣಿಗೆಯನ್ನು ನಡೆಸುತ್ತಿದ್ದರು. ಮೆರವಣಿಗೆ ಸಾಗುವ ದಾರಿಗೆ ಅಡ್ಡವಾಗಿ ಪೋಲೀಸರು ಬ್ಯಾರಿಕೇಡ್ಸ್ (ರಸ್ತೆ ತಡೆ) ಗಳನ್ನು ಅಳವಡಿಸಿದ್ದರು. ಆ ಕಾರಣದಿಂದ ಮೆರವಣಿಗೆಯ ದಾರಿ ಬದಲಾಯಿಸಿ ಪ್ರತಿಭಟನಾಕಾರರು ‘ಫ್ರೀ ಡೆನ್ರಿ ಕಾರ್ನರ್' ಎಂಬ ಪ್ರದೇಶಕ್ಕೆ ಹೋಗುವುದಾಗಿ ತೀರ್ಮಾನಿಸಿದರು. ಹಲವಾರು ಮಂದಿ ಪ್ರತಿಭಟನಾಕಾರರು ದಾರಿ ಬದಲಾಯಿಸಿದರೂ ಕೆಲವು ಮಂದಿ ಮಾತ್ರ ಬ್ಯಾರಿಕೇಡ್ಸ್ ಬಳಿ ತೆರಳಿ ಅದನ್ನು ತೆರವು ಗೊಳಿಸಲು ಪ್ರಯತ್ನಿಸಿದರು. 

ಅಲ್ಲಿದ್ದ ಪೋಲೀಸರು ಹಾಗೂ ಸೈನಿಕರು ಈ ಪ್ರತಿಭಟನಾಕಾರರನ್ನು ಚದುರಿಸಲು ಗುಂಡು ಹಾರಾಟ ಮಾಡಲು ಪ್ರಾರಂಭಿಸಿದರು. ಕೇವಲ ಐದು ರೌಂಡ್ ಗಳಷ್ಟು ಗುಂಡು ಹಾರಿಸುವುದಕ್ಕೆ ಮೇಲಧಿಕಾರಿಗಳಿಂದ ಅನುಮತಿ ಲಭಿಸಿದ್ದರೂ ಸ್ಥಳದಲ್ಲಿದ್ದ ಪೋಲೀಸರು ಸುಮಾರು ನೂರು ರೌಂಡ್ ಗಳವರೆಗೂ ಗುಂಡುಗಳನ್ನು ಸಿಡಿಸಿದರು. ಈ ಬರ್ಬರ ಘಟನೆಯಲ್ಲಿ ೧೩ ಮಂದಿ ಸ್ಥಳದಲ್ಲೇ ಮೃತರಾದರು, ೧೩ ಮಂದಿ ಗಂಭೀರವಾಗಿ ಗಾಯಗೊಂಡರು. ಆ ಗಾಯಗೊಂಡವರಲ್ಲಿ ಓರ್ವ ನಾಲ್ಕು ತಿಂಗಳ ನಂತರ ಮೃತಪಟ್ಟ. ಹೀಗೆ ೧೪ ಜನರ ಮಾರಣಹೋಮಕ್ಕೆ ಕಾರಣವಾಯಿತು ಆ 'ಬ್ಲಡೀ ಸಂಡೆ'.

ಈ ಘಟನೆ ಬ್ರಿಟನ್ ನಲ್ಲಿ ಸಂಚಲನ ಮೂಡಿಸಿತು. ಪತ್ರಿಕೆಗಳು ಈ ಘಟನೆಯನ್ನು ಖಂಡಿಸಿ ಸರಣಿ ಲೇಖನಗಳನ್ನು ಬರೆದವು. ಇದರಿಂದಾಗಿ ಸರಕಾರವೂ ಎಚ್ಚೆತ್ತು ಎರಡು ರೀತಿಯ ವಿಚಾರಣೆಗಳನ್ನು ಆರಂಭಿಸಿತು. ಘಟನೆ ಜರುಗಿದ ತಕ್ಷಣವೇ ‘ವಿಡ್ಗರಿ (Widgery) ಟ್ರಿಬ್ಯೂನಲ್' ಈ ಘಟನೆಯಲ್ಲಿ ಗುಂಡು ಹಾರಿಸಿದ ಎಲ್ಲಾ ಪೋಲೀಸ್ ಅಧಿಕಾರಿಗಳು ನಿರಪರಾಧಿಗಳು ಎಂದು ಅವಸರದ ತೀರ್ಪು ನೀಡಿತು. ಈ ತೀರ್ಪು ಜನರಲ್ಲಿ ತೀವ್ರವಾದ ಅಸಮಧಾನಕ್ಕೆ ಕಾರಣವಾಯಿತು. ಇದು ಪೋಲೀಸರು ಮಾಡಿದ ತಪ್ಪನ್ನು ಮುಚ್ಚಿಡುವ ಸರಕಾರದ ಪ್ರಯತ್ನ ‘ವೈಟ್ ವಾಷ್' ಎಂದು ವಿಮರ್ಶಿಸಲಾಯಿತು. ಬಹಳಷ್ಟು ಮಂದಿ ನಿರಂತರವಾಗಿ ಈ ತೀರ್ಪನ್ನು ವಿರೋಧಿಸುತ್ತಾ ಬಂದರು. ಅವರಲ್ಲಿ ಮುಖ್ಯವಾದವರು ಮಾಜಿ ಪ್ರಧಾನಿ ಟೊನಿ ಬ್ಲೇರ್ ಅವರ ಮುಖ್ಯ ಅಧಿಕಾರಿಯಾಗಿದ್ದ ಜೋನಾಥನ್ ಪೊವೆಲ್. ಕಡೆಗೂ ಸರಕಾರ ೧೯೯೮ರಲ್ಲಿ ಲಾರ್ಡ್ ಸಾವಿಲ್ಲೇ ಅಧ್ಯಕ್ಷತೆಯಲ್ಲಿ ಈ ಘಟನೆಯ ಬಗ್ಗೆ ಪರಿಶೀಲನೆ ಮಾಡಲು ತಂಡವನ್ನು ರಚಿಸಿತು. ಲಾರ್ಡ್ ಸಾವಿಲ್ಲೇ ಅಧ್ಯಕ್ಷತೆಯಲ್ಲಿ ಈ ಘಟನೆಯ ಬಗ್ಗೆ ನಡೆದ ತನಿಖೆಯು ಸುಮಾರು ೧೨ ವರ್ಷಗಳ ಸುಧೀರ್ಘ ಅವಧಿಯನ್ನು ತೆಗೆದುಕೊಂಡಿತು. ‘ಸಾವಿಲ್ಲೇ ಎಂಕ್ವೈರಿ' ಯು ಕೊನೆಗೂ ೨೦೧೦ರ ಜೂನ್ ೧೫ರಂದು ಸಾರ್ವಜನಿಕಗೊಳಿಸಲಾಯಿತು. ಅಂದು ನಡೆದ ‘ಬ್ಲಡೀ ಸಂಡೆ' ಘಟನೆಯನ್ನು ‘ಅನ್ಯಾಯ’ವೆಂದು ಈ ವರದಿ ಹೇಳಿತ್ತು. ಯಾವುದೇ ಶಸ್ತ್ರಗಳನ್ನು ಹೊಂದಿರದ ಅಮಾಯಕ ಪ್ರತಿಭಟನಾಕಾರರ ಮೇಲೆ ನಡೆದ ಈ ದಾಳಿಯು ಖಂಡನೀಯ ಎಂದು ವರದಿಯಲ್ಲಿ ಉಲ್ಲೇಖಿತವಾಗಿತ್ತು. ಇದಕ್ಕೆ ಸ್ಪಂದಿಸಿ ಅಂದಿನ ಪ್ರಧಾನಿ ಡೇವಿಡ್ ಕ್ಯಾಮರೂನ್ ಇಂಗ್ಲೆಂಡ್ ಸರಕಾರದ ಪರವಾಗಿ ಕ್ಷಮಾಪಣೆಯನ್ನು ಕೋರಿದರು. ಹೀಗೊಂದು ರಕ್ತಸಿಕ್ತ ಅಧ್ಯಾಯಕ್ಕೆ ತೆರೆಬಿತ್ತಾದರೂ, ಬ್ರಿಟನ್ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿಯೇ ಉಳಿಯಿತು.

ಚಿತ್ರ ಕೃಪೆ: ಅಂತರ್ಜಾಲ ತಾಣ