‘ಭಾವ’ದಲ್ಲಿ ಲೀನವಾದ ಲಕ್ಷ್ಮೀನಾರಾಯಣ ಭಟ್ಟರು

‘ಭಾವ’ದಲ್ಲಿ ಲೀನವಾದ ಲಕ್ಷ್ಮೀನಾರಾಯಣ ಭಟ್ಟರು

‘ಕವಿಯಾದವನು ಮಾತ್ರ ಹಾಡು ಬರೆಯಬಲ್ಲ' ಎಂದು ಅಚಲವಾಗಿ ನಂಬಿದ್ದ ಮತ್ತು ನಂಬಿದ್ದನ್ನು ಸಾಧಿಸಿ ತೋರಿಸಿದ ಖ್ಯಾತ ಕವಿ ಡಾ॥ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಇವರು ಮಾರ್ಚ್ ೬, ೨೦೨೧ರಂದು ಕನ್ನಡ ಸಾರಸ್ವತ ಲೋಕವನ್ನು ಅಗಲಿದ್ದಾರೆ. ಆದರೆ ಅವರ ರಚಿತ ಕವನಗಳು, ಬರಹಗಳು ಮುಂದೆ ಸದಾ ಕಾಲ ನಮ್ಮ ಜೊತೆಯಾಗಿ ಇದ್ದೇ ಇರುತ್ತದೆ. ಲಕ್ಷ್ಮೀನಾರಾಯಣ ಭಟ್ಟರ ಬದುಕು ಬಗ್ಗೆ ಒಂದಿಷ್ಟನ್ನು ತಿಳಿದುಕೊಳ್ಳಲೇ ಬೇಕು.

ನೈಲಾಡಿ ಶಿವರಾಮ ಭಟ್ಟ ಹಾಗೂ ಮೂಕಾಂಬಿಕಮ್ಮ ಇವರ ಸುಪುತ್ರರಾಗಿ ಶಿವಮೊಗ್ಗದಲ್ಲಿ ೧೯೩೬ ಅಕ್ಟೋಬರ್ ೨೯ರಂದು ಲಕ್ಷ್ಮೀನಾರಾಯಣ ಭಟ್ಟರು ಜನಿಸಿದರು. ಕನ್ನಡದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಬೆಂಗಳೂರಿನ ಆಚಾರ್ಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸುತ್ತಾರೆ. ನಂತರ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿ, ೧೯೭೫ರಲ್ಲಿ ರೀಡರ್ ಆಗಿ, ೧೯೮೫ರಲ್ಲಿ ಪ್ರೊಫೆಸರ್ ಆಗಿ ಪದೋನ್ನತಿಯನ್ನು ಹೊಂದುತ್ತಾರೆ. ೧೯೮೬ರಲ್ಲಿ ಕನ್ನದ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ. ಲಕ್ಷ್ಮೀನಾರಾಯಣ ಭಟ್ಟರು ಶ್ರೇಷ್ಟ ಉಪನ್ಯಾಸಕರು ಹಾಗೂ ಬರಹಗಾರರು ಎಂಬುದಾಗಿ ಅವರ ಸಮಕಾಲೀನರು ಅಭಿಪ್ರಾಯ ಪಡುತ್ತಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಇವರು ಹಲವಾರು ಕೊಡುಗೆಗಳು ನೀಡಿದ್ದಾರೆ. ಶೇಕ್ಸ್ ಪಿಯರ್ ಅವರ ಸಾನೆಟ್ ಗಳನ್ನು ಸಾಮಾನ್ಯರೂ ಅರ್ಥೈಸಿಕೊಳ್ಳುವ ರೀತಿಯಲ್ಲಿ ಕನ್ನಡಕ್ಕೆ ಅನುವಾದ ಮಾಡಿದರು. ಕವಿ ಎಲಿಯಟ್ ನ ಪದ್ಯಗಳನ್ನೂ ಕನ್ನಡಕ್ಕೆ ತಂದರು. ಇದೇ ಸಮಯದಲ್ಲಿ ಅಧ್ಯಾಪನ ವೃತ್ತಿಯಲ್ಲೂ ಸೈ ಅನಿಸಿಕೊಂಡರು. 

ಬೆಂಗಳೂರು ವಿವಿಯಲ್ಲಿ ಇವರ ಉಪನ್ಯಾಸ ನಡೆಯುತ್ತಿದ್ದ ಸಮಯದಲ್ಲಿ ಯಾರೊಬ್ಬ ವಿದ್ಯಾರ್ಥಿಯೂ ಗೈರಾಗುತ್ತಿರಲಿಲ್ಲವಂತೆ. ಕೆಲವೊಮ್ಮೆ ಸಮಯದ ನಿರ್ಭಂಧವಿಲ್ಲದೇ ಒಂದು ಗಂಟೆಯ ತರಗತಿಗಳು ಬರೋಬರಿ ಎರಡು ಗಂಟೆಗಳು ನಡೆದದ್ದೂ ಇವೆಯಂತೆ. ಬೇರೆ ತರಗತಿಯ ವಿದ್ಯಾರ್ಥಿಗಳೂ ಇವರ ತರಗತಿಗೆ ಬಂದು ಪಾಠ ಆಲಿಸಿದ ಉದಾಹರಣೆಗಳೂ ಇವೆ. ಉತ್ತಮ ಭಾಷಣಕಾರರೂ ಆಗಿದ್ದ ಭಟ್ಟರ ಪಾಠಗಳನ್ನು ಆಲಿಸುವುದೇ ಒಂದು ಸೌಭಾಗ್ಯ ಎನ್ನುತ್ತಾರೆ ಇವರ ಹಳೆಯ ವಿದ್ಯಾರ್ಥಿಗಳು. ಅವರಂತೆ ನಮಗೂ ಪಾಠ ಮಾಡುವಾಸೆ ಆದರೆ ಆ ಶೈಲಿ ನಮಗೆ ಒಲಿಯಲೇ ಇಲ್ಲ ಎನ್ನುತ್ತಾರೆ ಈಗ ಉಪನ್ಯಾಸಕರಾಗಿರುವ ಹಲವಾರು ಹಳೆಯ ವಿದ್ಯಾರ್ಥಿಗಳು. 

ಲಕ್ಷ್ಮೀನಾರಾಯಣ ಭಟ್ಟರನ್ನು ‘ಶರೀಫ ಭಟ್ಟರು' ಎಂದೂ ಕರೆಯುತ್ತಿದ್ದರು. ಏಕೆಂದರೆ ಖ್ಯಾತ ಸಂತ ಶಿಶುನಾಳ ಶರೀಫರ ಹಲವಾರು ಗೀತೆಗಳನ್ನು ಪರಿಷ್ಕರಿಸಿ ಅವನ್ನು ಪ್ರಕಟಿಸಿದ್ದು ಇವರ ಹೆಗ್ಗಳಿಕೆ. ಶಿಶುನಾಳ ಶರೀಫರ ಗೀತೆಗಳನ್ನು ಪರಿಷ್ಕರಿಸಿದ್ದು ಮಾತ್ರವಲ್ಲ, ಭಟ್ಟರು ಅವುಗಳನ್ನು ಪ್ರಕಟಿಸಲೆಂದೇ ನಮ್ಮದೇ ಆದ ಪ್ರಕಾಶನವನ್ನೂ ಹುಟ್ಟುಹಾಕಿದರು. ಇದರಿಂದ ಕೆಲವರಿಗಷ್ಟೇ ಪರಿಚಿತವಾಗಿದ್ದ ಶರೀಫರ ಹಲವಾರು ತತ್ತ್ವ ಪದಗಳು ಬಹಳಷ್ಟು ಜನರಿಗೆ ತಿಳಿಯುವಂತಾಯಿತು. ಈ ತತ್ತ್ವ ಪದಗಳನ್ನು ಖ್ಯಾತ ಗಾಯಕರಾದ ಸಿ.ಅಶ್ವಥ್ ಅವರಿಂದಲೂ ಹಾಡಿಸಿದರು. ಹಾಡು ಬಹುಬೇಗನೇ ಜನರಿಗೆ ತಲುಪುತ್ತದೆ ಎಂಬುವುದು ಭಟ್ಟರ ನಿಲುವಾಗಿತ್ತು. ಯಾವ ಗೀತೆಯನ್ನು ಯಾವ ಧಾಟಿಯಲ್ಲಿ ಹಾಡಿದರೆ ಚೆನ್ನ ಎಂದೂ ಭಟ್ಟರು ಅಶ್ವಥ್ ಅವರಿಗೆ ತಿಳಿಸುತ್ತಿದ್ದರು. ಈ ಎಲ್ಲಾ ಕಾರಣಗಳಿಂದಲೇ ಇವರಿಗೆ ‘ಶರೀಫ ಭಟ್ಟರು' ಎಂಬ ಹೆಸರು ಬಂತು. 

ಲಕ್ಷ್ಮೀನಾರಾಯಣ ಭಟ್ಟರು ಸುಮ್ಮನೇ ಸುಮ್ಮನೇ ಹಾಡುಗಳನ್ನು ಬರೆಯಲಿಲ್ಲ. ಅವುಗಳನ್ನು ಅನುಭವಿಸಿ ಬರೆದರು. ಮಕ್ಕಳಿಗಾಗಿಯೇ ಇವರು ಗೇರ್ ಗೇರ್ ಮಂಗಣ್ಣ..., ಭಾಳಾ ಒಳ್ಳೆಯವರು ನಮ್ಮ ಮಿಸ್ಸು..., ಮೊದಲಾದ ಸೊಗಸಾದ ಪ್ರಾಸಬದ್ಧ ಗೀತೆಗಳನ್ನು ಬರೆದರು. ಇವುಗಳು ಈಗಲೂ ಅಂಗನವಾಡಿ ಶಾಲೆಯ ಹಾಗೂ ಮಕ್ಕಳ ಕಾರ್ಯಕ್ರಮಗಳಲ್ಲಿ ಹಾಡಲಾಗುತ್ತದೆ. ಮಕ್ಕಳು ಸೊಗಸಾಗಿ ನರ್ತನವನ್ನೂ ಮಾಡುತ್ತಾರೆ. ಸುಮಾರು ೪೫೦ಕ್ಕೂ ಅಧಿಕ ಭಾವಗೀತೆಗಳನ್ನು ಬರೆದದ್ದು ಭಟ್ಟರ ಹೆಗ್ಗಳಿಕೆಯೇ ಸರಿ. ಇವರು ಬರೆದ ಭಾವಗೀತೆಗಳು ಹಲವರ ಮೆಚ್ಚುಗೆಗೆ ಪಾತ್ರವಾದರೂ, ಹೀಗೆ ಗೀತೆಗಳನ್ನು ಬರೆಯುವವರು ‘ಕ್ಯಾಸೆಟ್ ಕವಿಗಳು' ಎಂದು ಟೀಕೆಗಳೂ ಬಂದವು. ಈ ಟೀಕೆಗಳಿಗೆ ಯಾವತ್ತೂ ಭಟ್ಟರು ಕುಗ್ಗಲಿಲ್ಲ. ನನ್ನ ಗೀತೆಗಳು ಅಧಿಕ ಜನರಿಗೆ ತಲುಪುವ ಒಂದು ಮಾಧ್ಯಮ. ಉತ್ತಮ ಕವಿ ಮಾತ್ರ ಉತ್ತಮ ಹಾಡುಗಳನ್ನು ಬರೆಯಬಲ್ಲ ಎಂಬುವುದು ಇವರ ಅಚಲ ನಿರ್ಧಾರವಾಗಿತ್ತು. 

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ.., ಎಂಥ ಮರುಳಯ್ಯಾ ಇದು ಎಂಥಾ ಮರುಳು..., ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ ಕರೆಯುವ ಕೈಬೀಸಿ..., ಮೊದಲಾದ ಸೊಗಸಾದ ಹಾಡುಗಳು ಇವರ ಲೇಖನಿಯಿಂದ ಮೂಡಿಬಂದಿದೆ. ಇವರು ಸಾಹಿತ್ಯದ ಬಹುತೇಕ ಎಲ್ಲಾ ಪ್ರಕಾರಗಳಲ್ಲಿ ಕೈಯಾಡಿಸಿದರು. ಕಾವ್ಯ (ವೃತ್ತ, ಸುಳಿ, ಚಿತ್ರಕೂಟ, ಹೊಳೆಸಾಲಿನ ಮರ, ದೆವ್ವದ ಜೊತೆ ಮಾತುಕತೆ, ಅರುಣ ಗೀತ...), ಭಾವಗೀತೆಗಳು (ಭಾವ ಸಂಗಮ, ದೀಪಿಕಾ, ಬಂದೇ ಬರುತಾವ ಕಾಲ, ರಮಣ ವಾಣಿ...), ಅನುವಾದ ( ಷೇಕ್ಸ್ ಪಿಯರ್ ನ ಸಾನೆಟ್ ಚಕ್ರ, ಯೇಟ್ಸ್ ಕವಿಯ ೫೦ ಕವನಗಳಾದ ‘ಚಿನ್ನದ ಹಕ್ಕಿ', ಏಲಿಯಟ್ ಕವನ ಸಂಕಲನ...) ವಿಮರ್ಶೆ ( ಸುಗಮ ಸಂಗೀತ - ಒಂದು ಲೇಖನ ಮಾಲೆ, ಕಾವ್ಯ ಶೋಧನ, ಹೊರಳು ದಾರಿಯಲ್ಲಿ ಕಾವ್ಯ, ವಿಮರ್ಶೆಯ ಉಡುಗೊರೆ...), ಮಕ್ಕಳ ಸಾಹಿತ್ಯ (ನಂದನ, ಕಿಶೋರಿ, ಮುದ್ರಾ ಮಂಜೂಷಾ, ಪೂರ್ವ ದಿಕ್ಕಿನಲ್ಲಿ ಕಾಮನಬಿಲ್ಲು, ಕುಂತಿ, ಕರ್ಣ, ಗೋವಿಂದ ಪೈ…), ಜೀವನ ಚರಿತ್ರೆ ( ಮಾಣಿಕ್ಯ ವಂದ್ಯೋಪಾಧ್ಯಾಯ), ನಾಟಕ ( ಊರ್ವಶಿ, ಮೃಚ್ಚ ಕಟಿಕಾ, ಇಸ್ಪೀಟ್ ರಾಜ್ಯ...) ಸಂಪಾದನೆ ( ಶಿಶುನಾಳ ಶರೀಫರ ಗೀತೆಗಳು, ಕಲ್ಲುಸಕ್ಕರೆ ಕೊಳ್ಳಿರೋ, ಕವಿತೆಗಳು ೧೯೭೯...) ಸುಗಮ ಸಂಗೀತ ( ಸುಗಮ ಸಂಗೀತ - ಒಂದು ಲೇಖನ ಮಾಲೆ), ಸಾಹಿತ್ಯ ರತ್ನ ಸಂಪುಟ ಎಂಬ ವ್ಯಕ್ತಿ ಚಿತ್ರ, ‘ನಿಲುವುಗನ್ನಡಿಯ ಮುಂದೆ’ ಎಂಬ ಆತ್ಮ ಚರಿತ್ರೆ ರಚಿಸಿದ್ದಾರೆ. ಇವರು ಬರೆದಿರುವ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಈಗ ಅಚ್ಚಿನಲ್ಲಿದೆ. 

ಭಟ್ಟರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಅವುಗಳಲ್ಲಿ ಪ್ರಮುಖವಾದವುಗಳು ಮೂಡಬಿದರೆಯ ಶಿವರಾಮ ಕಾರಂತ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಬಾಲ ಸಾಹಿತ್ಯ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇತ್ಯಾದಿ. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಗಳನ್ನು ನೀಡಿದ ಲಕ್ಷ್ಮೀನಾರಾಯಣ ಭಟ್ಟರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿ ಒಲಿಯದೇ ಇರುವುದು ವಿಪರ್ಯಾಸ. ಅವರ ಸಾಧನೆ, ಸಾಮರ್ಥ್ಯವನ್ನು ಗುರುತಿಸಲು ನಾವು ಅಸಮರ್ಥರಾದೆವು ಎಂದು ಅನಿಸುತ್ತೆ. ಅವರಿಗೂ ಈ ಕೊರಗು ಇತ್ತು ಎಂದು ಅವರ ಆಪ್ತರ ಅಭಿಪ್ರಾಯ. ಆದರೆ ಭಟ್ಟರು ಯಾವತ್ತೂ ಸಾರ್ವಜನಿಕವಾಗಿ ತಮ್ಮ ದುಃಖ ದುಮ್ಮಾನಗಳನ್ನು ಹೇಳಿಕೊಳ್ಳಲಿಲ್ಲ. ಅವರು ತಮ್ಮ ಭಾವಗೀತೆ, ಕವನ, ಸಾಹಿತ್ಯ ಚಟುವಟಿಕೆಗಳ ಕುರಿತಾಗಿ ಮಾತ್ರ ಮಾತನಾಡಿದರು. ವಯೋಸಹಜ ಕಾರಣಗಳಿಂದ ಅವರಿಂದು ನಮ್ಮನ್ನು ಅಗಲಿದ್ದಾರೆ. ಆದರೆ ಸಾಹಿತ್ಯಕ್ಕಾಗಿ ಅವರು ನೀಡಿದ ಕೊಡುಗೆಗಳು ಅಮರವಾಗಿ ಉಳಿಯಲಿವೆ. 

ಚಿತ್ರ ಕೃಪೆ: ಅಂತರ್ಜಾಲ ತಾಣ