‘ಮಂಗಳ' ಪತ್ರಿಕೆಯ ಮರೆಯಲಾಗದ ನೆನಪುಗಳು

ಅಕ್ಟೋಬರ್ ೨೦೨೩ರ ಮೊದಲ ವಾರದಲ್ಲಿ ‘ಮಂಗಳ' ಪತ್ರಿಕೆ ನಿಂತು ಹೋಯಿತು ಎಂಬ ಸುದ್ದಿಯನ್ನು ಪತ್ರಿಕಾ ಏಜೆಂಟರೊಬ್ಬರಿಂದ ಕೇಳಿದೆ. ಪತ್ರಿಕೆಯ ಮೊದಲ ಹಾಗೂ ಕೊನೆಯ ಸಂಚಿಕೆಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದ ನಾನು ಅವರ ಬಳಿ ಆ ಕೊನೆಯ ಸಂಚಿಕೆ ನನಗೆ ಬೇಕು ಎಂದೆ. ಆದರೆ ಅದಾಗಲೇ ಪ್ರತಿಗಳು ಮುಗಿದುಹೋಗಿದ್ದವು. ಈ ಹಿಂದೆ ನಾನೊಂದು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮಂಗಳೂರಿನ ಎಲ್ಲಾ ಪತ್ರಿಕಾ ಏಜೆಂಟರ ಪರಿಚಯ ಮತ್ತು ಒಡನಾಟವಿತ್ತು. ಹಾಗಾಗಿ ನನ್ನ ಪರಿಚಯದ ಕೆಲವು ಏಜೆಂಟರಿಗೆ ಫೋನಾಯಿಸಿ ‘ಮಂಗಳ’ ಕೊನೆಯ ಪ್ರತಿ ಬಗ್ಗೆ ಕೇಳಿದೆ. ಆದರೆಲ್ಲೂ ಸಿಗಲಿಲ್ಲ. ಕೊನೆಗೆ ಮಂಗಳೂರು ಸರಕಾರಿ ಬಸ್ ನಿಲ್ದಾಣದ ಶ್ರೀ ರಾಮ ಬುಕ್ ಸ್ಟಾಲ್ ನ ಶ್ರೀ ವಾದಿರಾಜ್ ಇವರು ನನಗೊಂದು ಪ್ರತಿ ದೊರಕುವಂತೆ ಮಾಡಿದರು. ಅವರಿಗೆ ನಾನು ನಿಜಕ್ಕೂ ಕೃತಜ್ಞ.
ಮಂಗಳದ ಕೊನೆಯ ಸಂಚಿಕೆ ಕೈಯಲ್ಲಿ ಹಿಡಿದು ಪುಟಗಳನ್ನು ತಿರುವಿದಾಗ ನನ್ನ ಮನಸ್ಸು ಸುಮಾರು ಮೂರು ದಶಕಗಳ ಹಿಂದಕ್ಕೆ ಚಲಿಸಲಾರಂಬಿಸಿತು. ಅದು ೧೯೮೫-೮೬ರ ವರ್ಷ ಇರಬಹುದು. ನನಗೆ ಆಗ ಹತ್ತು ವರ್ಷ. ಆಗ ನನಗೆ ಹೊರಗೆ ಹೋಗಿ ಆಡುವ ಆಟಕ್ಕಿಂತ ಮಕ್ಕಳ ಕಥೆ ಪುಸ್ತಕ, ಕಾಮಿಕ್ಸ್ ಓದುವ ಹುಚ್ಚು. ನನ್ನ ಅಪ್ಪ ಮನೆಗೆ ‘ಮಂಗಳ' ಪತ್ರಿಕೆ ತೆಗೆದುಕೊಂಡು ಬರುತ್ತಿದ್ದರು. ಆಗ ಟಿವಿ, ಮೊಬೈಲ್ ನ ರಗಳೆ ಇಲ್ಲದೇ ಇದ್ದುದರಿಂದ ಮನೆಯವರೆಲ್ಲಾ ಮಾತನಾಡಲು ಸಿಗುತ್ತಿದ್ದರು, ಪತ್ರಿಕೆ, ಪುಸ್ತಕಗಳನ್ನು ಓದುತ್ತಿದ್ದರು. ಹಪ್ಪಳ, ಸಂಡಿಗೆ, ಕುರು ಕುರು ತಿಂಡಿ, ಸಿಹಿ ತಿನಸುಗಳನ್ನು ತಯಾರಿಸುತ್ತಿದ್ದರು. ಈಗ ಟಿವಿ, ಮೊಬೈಲ್ ಗಳ ಹಾವಳಿಯಿಂದಾಗಿ ಹಿಂದಿನ ದಿನಗಳ ಎಲ್ಲಾ ಚಟುವಟಿಕೆಗಳು ನೇಪಥ್ಯಕ್ಕೆ ಸರಿದಿವೆ. ಮನೆಯ ಸದಸ್ಯರೆಲ್ಲಾ ಒಟ್ಟಿಗೆ ಕೂತು ಊಟ ಮಾಡಿ ಯಾವ ಕಾಲವಾಯಿತೋ? ದಿನ ಪತ್ರಿಕೆಗಳನ್ನು ಮನೆಯಲ್ಲಿ ಓದುವವರೇ ಇಲ್ಲ. ಎಲ್ಲಾದರೂ ಇದ್ದರೆ ಹಳೆಯ ತಲೆಗಳು ಮಾತ್ರ. ಹೊಸಬರಿಗೆ ದೈನಂದಿನ ವಿದ್ಯಮಾನಗಳು ಮೊಬೈಲ್ ನಲ್ಲೇ ಸಿಗುವುದರಿಂದ ಅವರಿಗೆ ಪತ್ರಿಕೆಯನ್ನು ತಿರುವುದು ಅಗತ್ಯವಿಲ್ಲ. ಮನೆಯಲ್ಲಿನ ಮಹಿಳೆಯರು ಹೊಸ ಹೊಸ ತಿಂಡಿ ತಿನಸು, ಹಪ್ಪಳ, ಸಂಡಿಗೆ ಮಾಡುವುದನ್ನು ಮರೆತೇ ಬಿಟ್ಟಿದ್ದಾರೆ. ಅವರು ಟಿ ವಿಯ ಧಾರವಾಹಿಯಲ್ಲಿ ಮುಳುಗಿ ಹೋಗಿದ್ದಾರೆ. ಇದು ಒಂದೆರಡು ಮನೆಯ ಕಥೆಯಲ್ಲ. ಬಹುತೇಕ ಎಲ್ಲಾ ಮನೆಯಲ್ಲೂ ಇದೇ ಕಥೆ.
ಇರಲಿ, ಅಂದು ನನಗೆ ಅಪ್ಪ ತಂದು ಕೊಡುತ್ತಿದ್ದ ಮಂಗಳದಲ್ಲಿ ಕಥೆ ಮತ್ತು ಧಾರವಾಹಿಗಳು ಇರುತ್ತಿದ್ದವು. ಇವು ನನ್ನ ಆಸಕ್ತಿಯ ವಿಷಯಗಳಲ್ಲ. ಆದರೆ ಆ ಮಂಗಳದ ಒಂದು ಪುಟದಲ್ಲಿ ಮಕ್ಕಳಿಗಾಗಿ ಪುಟ್ಟ ಕಾಮಿಕ್ಸ್ ಬರುತ್ತಿತ್ತು. ಅದು ಡಿಂಗ ಎನ್ನುವ ನಿಗೂಢ ಜೀವಿದ್ದು. ಆತ ಕಷ್ಟದಲ್ಲಿರುವವರಿಗೆ ಸದಾ ಉಪಕಾರಿ. ದುಷ್ಟರನ್ನು ಶಿಕ್ಷಿಸುವ ಕಠಿಣ ಜೀವಿ. ಅದನ್ನು ಓದುವಾಗ ಇಡೀ ಪುಸ್ತಕದಲ್ಲಿ ಅದೇ ಕಾಮಿಕ್ಸ್ ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಅಂದುಕೊಳ್ಳುತ್ತಿದ್ದೆ. ನನ್ನ ಮನಸ್ಸು ಮಂಗಳದ ಪ್ರಕಾಶಕರಿಗೆ ಅರ್ಥವಾಯಿತು ಎಂದು ಕಾಣಿಸುತ್ತದೆ. ಆ ಸಮಯದಲ್ಲೇ ‘ಬಾಲಮಂಗಳ’ ಎನ್ನುವ ಮಕ್ಕಳ ಪಾಕ್ಷಿಕ ಪತ್ರಿಕೆ ಪ್ರಾರಂಭವಾಯಿತು. ನನಗೆ ಅದೊಂದು ಹಬ್ಬದ ಸಂಗತಿ. ಆ ಸಮಯದಲ್ಲಿ ಬಾಲಮಿತ್ರ, ಬೊಂಬೆಮನೆ, ಚಂದಮಾಮ ಮೊದಲಾದ ಪತ್ರಿಕೆಗಳು ದೂರದ ಮದ್ರಾಸ್ (ಈಗಿನ ಚೆನ್ನೈ) ನಿಂದ ಪ್ರಕಟವಾಗಿ ಬರುತ್ತಿದ್ದವು. ಅದರಲ್ಲಿ ಕಾಮಿಕ್ಸ್ ಇರುತ್ತಿರಲಿಲ್ಲ. ಆದರೆ ಬಾಲಮಂಗಳದಲ್ಲಿ ಬರುತ್ತಿದ್ದ ಡಿಂಗ, ಶಕ್ತಿಮದ್ದು ಮೊದಲಾದ ಕಾರ್ಟೂನ್ ಚಿತ್ರಗಳನ್ನು ನೋಡಿ, ಓದಿ ಖುಷಿ ಆಗುತ್ತಿತ್ತು. ನಾನು ಬೆಳೆದು ದೊಡ್ಡವನಾಗಿ ಕೆಲಸಕ್ಕೆ ಹೋಗಲು ಶುರು ಮಾಡಿದ ನಂತರವೂ ಬಾಲಮಂಗಳದ ನಂಟು ಬಿಡಲಿಲ್ಲ. ಅದನ್ನು ಓದಿದಾಗ ಏನೋ ಹಿಂದಿನ ನೆನಪುಗಳು ಕಾಡುತ್ತಿದ್ದವು. ಕೊರೋನಾ ಸಮಯದಲ್ಲಿ ಬಹಳಷ್ಟು ಪತ್ರಿಕೆಗಳು ಅಂತಿಮ ಉಸಿರೆಳೆದಾಗ ಬಾಲಮಂಗಳವೂ ಸ್ಥಗಿತಗೊಂಡಿತು. ಈಗಂತೂ ಮಕ್ಕಳಿಗಾಗಿ ಪತ್ರಿಕೆಗಳೇ ಇಲ್ಲದ ಪರಿಸ್ಥಿತಿ ಉಂಟಾಗಿದೆ.
ಮಂಗಳ ಪತ್ರಿಕೆಯನ್ನು ಹೆಣ್ಣು ಮಕ್ಕಳೇ ಅಧಿಕ ಸಂಖ್ಯೆಯಲ್ಲಿ ಓದುತ್ತಿದ್ದರು. ಅದಕ್ಕೆ ಕಾರಣ ಅದರಲ್ಲಿ ಪ್ರಕಟವಾಗುತ್ತಿದ್ದ ಆರೇಳು ಧಾರವಾಹಿಗಳು. ಅದರ ಜೊತೆಗೆ ಒಂದೆರಡು ಕಥೆಗಳು. ಕೆಲವು ಸ್ವಾರಸ್ಯಕರ ಲೇಖನಗಳು, ಕ್ರೀಡಾ ಲೇಖನಗಳು, ಸಿನೆಮಾ ಬರಹಗಳು ಮಂಗಳದಲ್ಲಿರುತ್ತಿದ್ದವು. ಪ್ರತೀ ವಾರ ಮಂಗಳ ಬರುವುದನ್ನು ಕಾದುಕುಳಿತಿರುತ್ತಿದ್ದವರೂ ಇದ್ದರು. ಕ್ರಮೇಣ ಜನರಿಗೆ ಪುಸ್ತಕಗಳನ್ನು ಓದುವ ಅಭ್ಯಾಸ ಕಡಿಮೆಯಾಯಿತು. ಸಾವಿರ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದ ಮಂಗಳ ಕೊನೆಕೊನೆಗೆ ಬೆರಳೆಣಿಕೆಯಷ್ಟು ಪ್ರತಿಗಳು ಮಾತ್ರ ಮಾರಾಟವಾಗಲಾರಂಬಿಸಿತು ಎನ್ನುತ್ತಾರೆ ಪತ್ರಿಕಾ ಏಜೆಂಟರು. ಪತ್ರಿಕೆಯನ್ನು ಮುದ್ರಣ ಮಾಡುವುದೇ ದುಸ್ತರ ಎನ್ನುವ ಪರಿಸ್ಥಿತಿ ಬಂದಾಗ ಮಂಗಳ ಪ್ರಕಟಣೆಯನ್ನು ಸ್ಥಗಿತಗೊಳಿಸಿದರು.
ಮಂಗಳದ ಆಡಳಿತ ಮಂಡಳಿಯವರದ್ದು ಇದು ಅನಿರೀಕ್ಷಿತ ನಡೆ. ಏಕೆಂದರೆ ಮಂಗಳದಲ್ಲಿ ಪ್ರಕಟವಾಗುತ್ತಿದ್ದ ಸುಮಾರು ೬ ಧಾರವಾಹಿಗಳು ಮುಗಿದಿರಲಿಲ್ಲ. ಈ ಧಾರವಾಹಿಗಳು ಮುಂದೆ ಎಂದೂ ಅದರ ಓದುಗರಿಗೆ ದೊರೆಯುವ ಸಾಧ್ಯತೆಗಳೂ ಇಲ್ಲ. ಅಕ್ಟೋಬರ್ ೧೧ ರ ಸಂಚಿಕೆ ಬಹಳಷ್ಟು ಮಂದಿಯನ್ನು ಬೇಸರ ಮಿಶ್ರಿತ ಅಚ್ಚರಿಗೆ ದೂಡಿರುವುದರಲ್ಲಿ ಸಂದೇಹವಿಲ್ಲ. ಕಳೆದ ನಲವತ್ತು ವರ್ಷಗಳಿಂದ ರಾಜ್ಯದ ಬಹಳಷ್ಟು ಮನೆಯ ಅವಿಭಾಜ್ಯ ಅಂಗವೇ ಆಗಿ ಹೋಗಿದ್ದ ಮಂಗಳ ಇನ್ನು ಬರುವುದಿಲ್ಲ ಎಂದಾಗ ನನಗೂ ತುಂಬಾನೇ ಬೇಸರವಾಯಿತು. ಈಗ ಪ್ರಕಟವಾಗುತ್ತಿರುವ ಮುದ್ರಿತ ಪತ್ರಿಕೆಗಳ ಭವಿಷ್ಯ ಏನು ಎನ್ನುವ ಗಾಬರಿಯೂ ಮನದಲ್ಲಿ ಮೂಡಿತು.
ಚಿತ್ರದಲ್ಲಿ; ಮಂಗಳ ಪತ್ರಿಕೆಯ ಕೊನೆಯ ಸಂಚಿಕೆ