‘ಮಯೂರ’ ಹಾಸ್ಯ - ಭಾಗ ೧೦೦

‘ಮಯೂರ’ ಹಾಸ್ಯ - ಭಾಗ ೧೦೦

ಸೆಂಡೆತ್ತು

ಈಗೊಂದು ಹದಿನೈದು ವರ್ಷಗಳ ಹಿಂದಿನ ಮಾತು. ನಮಗೆ ಗೊತ್ತಿರುವ ಚಿತ್ರದುರ್ಗದ ಹುಡುಗ, ಶಿಕಾರಿಪುರದ ಹುಡುಗಿಯನ್ನು ಮದುವೆ ಮಾಡಿಕೊಂಡಿದ್ದ. ಎರಡೂ ಕಡೆಯ ಭಾಷೆ, ಮಾತನಾಡುವ ಶೈಲಿ ಬೇರೆಯೇ. ಹೊಸದಾಗಿ ಮದುವೆಯಾದಾಗ ಹೆಂಡತಿಯ ತವರು ಮನೆಯಲ್ಲಿ ಏನೋ ಓದುತ್ತಾ ಕುಳಿತಿದ್ದ. ಹೊರಗಿನಿಂದ ಹಿರಿಯಜ್ಜಿಯೊಬ್ಬರು ಹತ್ತಿರ ಬಂದು ‘ಸೆಂಡೆತ್ತೋ ತಮ್ಮಾ, ನೋಡೂಣೂ’ ಎನ್ನುತ್ತಿದ್ದಂತೆ, ಗಾಬರಿಯಾದ ಹುಡುಗ ಪಕ್ಕದಲ್ಲಿ ಮಕ್ಕಳು ಆಡಿ ಬಿಟ್ಟುಹೋಗಿದ್ದ ಚೆಂಡನ್ನು ಎತ್ತಿ ಅಜ್ಜಿಯ ಕೈಗೆ ಕೊಟ್ಟಿದ್ದ. ಅವನ ಹೆಂಡತಿ ಜೋರಾಗಿ ನಗುತ್ತಾ, ‘ಸೆಂಡು’ ಎಂದರೆ ಇಲ್ಲಿ ‘ತಲೆ’ ಎಂದಾಗ ಅರ್ಥವಾಗಿ ಅವನೂ ನಗತೊಡಗಿದ.

-ನಳಿನಿ ಟಿ.ಭೀಮಪ್ಪ

***

ರಕ್ತ ಅಲ್ಲ

ಟೀವಿಯಲ್ಲಿ RRR ಸಿನೆಮಾದ ಫೈಟ್ ಸೀನ್ ನೋಡೋಣ ಅಂತ ವಜ್ರಾಂಶು ದುಂಬಾಲು ಬಿದ್ದಿದ್ದ. ನನ್ನ ಪತ್ನಿಗೆ ಅದರಲ್ಲಿ ಬರುವ ಹೊಡೆದಾಟ-ಬಡಿದಾಟ, ರಕ್ತ ರಂಜನೀಯ ಸೀನುಗಳನ್ನು ನೋಡುವುದು ಕಷ್ಟ. ಅವಳು ‘ಬೇಡ ಕಣೋ, ಆ ಸೀನುಗಳನ್ನು ನೋಡಲು ಆಗುವುದಿಲ್ಲ. ಆ ರಕ್ತಾನೆಲ್ಲಾ ಯಾರಪ್ಪಾ ಕಣ್ಣಿಂದ ನೋಡ್ತಾರೆ’ ಎಂದು ಹೇಳುತ್ತಿದ್ದಳು. ಅವನು ‘ಇಲ್ಲ ಆಂಟಿ, ಅದು ನಿಜವಾದ ರಕ್ತ ಅಲ್ಲ, ಕೆಂಫು ಪೈಂಟ್ ಬಳಸ್ತಾರೆ ಅಷ್ಟೆ.’ ಎಂದು ಸಮಜಾಯಿಷಿ ಕೊಟ್ಟ. 

-ತಲಕಾಡು ಶ್ರೀನಿಧಿ

***

ಸನ್ಯಾಸಿ ಹೊಲ

ವೃತ್ತಿ ನಿಮಿತ್ತ ಭೂಮಾಪನ (ಹೊಲ ಅಳೆಯಲು) ಮಾಡಲು ಒಂದೂರಿಗೆ ಹೋಗಿದ್ದೆವು. ನಾವು ದಾರಿಯಲ್ಲಿ ಹೋಗುವಾಗ, ‘ಯಾವ ಹೊಲ ಅಳೆಯಲು ಬಂದಾರ?’ ಅಂತ ಮಂದಿ ಕೇಳುತ್ತಿದ್ದರು. ಅರ್ಜಿ ತುಂಬಿದ ರೈತ, ‘ಸನ್ಯಾಸಿ ಹೊಲ’ ಅಂತ ಉತ್ತರಿಸುತ್ತಿದ್ದ. ನಾನು ಕುತೂಹಲದಿಂದ ‘ಸನ್ಯಾಸಿ ಹೊಲ’ ಅಂದ್ರ? ಸನ್ಯಾಸಿ ಕಡೆಯಿಂದ ಹೊಲ ಖರೀದಿ ಮಾಡಿರಿ? ಅಂತ ಕೇಳಿದೆ. ರೈತ ನಕ್ಕು, ‘ಇಲ್ಲ ಸರ್, ಈಗ ಅಳೆಯಲು ಹೋಗುವ ಹೊಲ ಮಳೆ ಜಾಸ್ತಿ ಬಂದರೂ, ಕಡಿಮೆ ಬಂದರೂ ಏನೂ ಫಸಲು ನೀಡುವುದಿಲ್ಲ. ಹಾಗಾಗಿ ಸನ್ಯಾಸಿ ಥರ ಎಲ್ಲದರ ಮೇಲೆ ಆಸೆ ಬಿಟ್ಟು, ಫಲ ಅಪೇಕ್ಷಿಸಲು ಯೋಗ್ಯವಲ್ಲದ ಹೊಲ ಅಂತ ಇದನ್ನು ಸನ್ಯಾಸಿ ಹೊಲ ಅಂತೀವಿ’ ಅಂದ. ಹೊಲ ಅಳೆಯಲು ಇಳಿದಾಗ ಒಂದು ಅಡಿಯ ತನಕ ಕೆಸರಿತ್ತು. ಬೆಳೆಯ ಅವಶೇಷಗಳೂ ಕಾಣಲಿಲ್ಲ. ಹೌದು ಆ ರೈತ ಹೇಳಿದ್ದು ಖರೆ ಅನಿಸಿತು. 

-ನರಸಿಂಹಾರೆಡ್ಡಿ ಯಂಕಾಮೋಳ

***

ಜಿಪುಣೇಂದ್ರನ ಮಗಳ ಮದುವೆ

ಜಿಪುಣ ಗಂಡ, ತನ್ನ ಮಗಳ ಮದುವೆಗೆ ಆದಷ್ಟು ಕಡಿಮೆ ಮಂದಿಯನ್ನು ಆಹ್ವಾನಿಸಬೇಕೆಂದು ನಿರ್ಧರಿಸಿದ. ಇದಕ್ಕಾಗಿ ಸ್ವಾಮೀಜಿಯೊಬ್ಬರ ಬಳಿ ಸಲಹೆಯನ್ನೂ ಕೇಳಿದ. ‘ನಾನು ಎಲ್ಲರನ್ನೂ ಕರೆಯಬೇಕು. ಆದರೆ ಮದುವೆಗೆ ಕಡಿಮೆ ಜನ ಬರಬೇಕು. ಹಾಗೆ ಒಂದು ಉಪಾಯ ಹೇಳಿ’ ಎಂದು. ಅದಕ್ಕೆ ಅವರು, ‘ನೋಡಿ, ಗುಂಡಣ್ಣನವರೇ ನಿಮ್ಮ ಮಗಳ ಲಗ್ನ ಪತ್ರಿಕೆಯಲ್ಲಿ, ವಿಶೇಷ ಸೂಚನೆಯೆಂಬಂತೆ ಮದುವೆಯಾಗಿ ಈವರೆಗೆ ಜಗಳ ಆಡದೇ ಸುಖ ಸಂತೋಷದಿಂದ ಇರುವವರು ಮಾತ್ರ ಬಂದು ಆಶೀರ್ವದಿಸಬೇಕಾಗಿ ವಿನಂತಿ ಎಂದು ಮುದ್ರಿಸಿ ಹಂಚಿ ಬಿಡಿ ಸಾಕು’ ಎಂದರು. ಮದುವೆಯ ದಿನ ಮನೆಮಂದಿಯನ್ನು ಬಿಟ್ಟರೆ ಬೇರಾರೂ ಹಾಜರಾಗಿರಲಿಲ್ಲ. 

-ಶಂಕರೇಗೌಡ ತುಂಬಕೆರೆ

(ಡಿಸೆಂಬರ್ ೨೦೨೩ರ ಮಯೂರ ಪತ್ರಿಕೆಯಿಂದ ಆಯ್ದದ್ದು)