‘ಮಯೂರ’ ಹಾಸ್ಯ (ಭಾಗ - ೧೩)

‘ಮಯೂರ’ ಹಾಸ್ಯ (ಭಾಗ - ೧೩)

‘ರೌಂಡ್ ಮಾಡ್ಲಿಕ್ಕೆ'

ಇತ್ತೀಚೆಗೆ ಮಂಗಳೂರಿಗೆ ನನ್ನ ಸ್ವಂತ ಕೆಲಸಕ್ಕಾಗಿ ಹೋಗಿದ್ದೆ. ಕೆಲಸ ಮುಗಿಸಿ, ಟೀ ಕುಡಿಯಲೆಂದು, ಸಮೀಪದಲ್ಲಿದ್ದ ಅಂಗಡಿಗೆ ಹೋದೆ. ಅಲ್ಲಿನ ಬೋಂಡ, ಬಜ್ಜಿಯ ಸುವಾಸನೆ ನನ್ನನ್ನು ಸ್ವಾಗತಿಸಿತು.

ಒಂದು ಸಿಂಗಲ್ ಉದ್ದಿನ ಬೋಂಡ ಹಾಗೂ ಟೀ ಕೊಡಿ ಎಂದು ಭಟ್ಟರಿಗೆ ಹೇಳಿದೆ. ಒಂದು ಬೋಂಡ ಜೊತೆಗೆ, ಸಣ್ಣ ತುಂಡು ಪಕೋಡವನ್ನು ಸೇರಿಸಿ ಪೇಪರ್ ನಲ್ಲಿಟ್ಟು ಕೊಟ್ಟರು.

ಇದೇನು ಭಟ್ಟರೇ, ಈ ಸಣ್ಣ ಪಕೋಡಾ ಎಂದು ಪ್ರಶ್ನಿಸಲು, “ಅದು ರೌಂಡ್ ಮಾಡ್ಲಿಕ್ಕೆ ಮಾರಾಯ್ರೇ” ಎಂದು ತಡಮಾಡದೆ ಉತ್ತರಿಸಿದರು.

“ರೌಂಡ್ ಮಾಡುವುದು ಎಂದರೇನು?” ನನಗೆ ತಿಳಿಯಲಿಲ್ಲ. ಭಟ್ಟರೇ ವಿವರಿಸಿದರು. ‘ಸ್ವಾಮಿ, ಒಂದು ಉದ್ದಿನ ಬೋಂಡ ಎಂಟು ರೂಪಾಯಿ. ನೀವು ಹತ್ತು ರೂಪಾಯಿಯ ನೋಟು ಕೊಟ್ಟರೆ, ಚಿಲ್ಲರೆ ಇಲ್ಲ. ಅದನ್ನು ಹತ್ತು ರೂಪಾಯಿ ಮೊತ್ತಕ್ಕೆ ಸರಿದೂಗಿಸಲು, ಒಂದು ಪಕೋಡದ ತುಂಡನ್ನು ಸೇರಿಸಿ, ‘ರೌಂಡ್' ಮಾಡಿರುವೆ’ ಎಂದು ವಿವರಿಸಿದರು.

ಈ ‘ರೌಂಡ್ ಮಾಡ್ಲಿಕ್ಕೆ' ಘಟನೆಯನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಸಾಕಷ್ಟು ಖುಷಿ ಪಟ್ಟೆ.

-ಡಾ. ವಿ.ಕೆ. ವೆಂಕಟೇಶ್, ಮೈಸೂರು

***

ಅಪ್ಪನ ಹೆಸರು!

ನಮ್ಮ ಕಿರಿಯ ಸಹೋದ್ಯೋಗಿ ಶಿಲ್ಪಾಳ ಮಗ ದೈವಿಕ್ ಗೆ ಇನ್ನೂ ಎರಡೇ ವರ್ಷ. ವಿಪರೀತ ಚಟುವಟಿಕೆಯ ಅವನು ಚತುರ ಮಾತುಗಾರನೂ ಹೌದು!

ಒಮ್ಮೆ ಅವನು ಅಮ್ಮನನ್ನು ಬ್ಯಾಂಕಿಗೆ ಬಿಡಲು ಅಪ್ಪನ ಜತೆ ಬಂದಿದ್ದ. ಅವನನ್ನು ಮಾತನಾಡಿಸುತ್ತಾ ‘ನಿಮ್ಮ ಅಪ್ಪನ ಹೆಸರೇನು?’ ಎಂದು ಕೇಳಿದೆ. ‘ಪಬೀಬ್' ಅಂದ. ‘ನಿಮ್ಮಪ್ಪನ ಹೆಸರು ಪ್ರದೀಪ್ ಅಲ್ವೇನೋ?’ ಎಂದು ಮತ್ತೆ ಕೇಳಿದೆ.

"ನಂಗೆ ‘ಪಬೀಬ್' ಅನ್ನಕ್ಕೆ ಬರಲ್ಲ ಅದಕ್ಕೆ ‘ಪಬೀಬ್' ಅಂತೀನಿ" ಅಂದ!

ಅವನ ಉತ್ತರ ಕೇಳಿ ಎಲ್ಲರಿಗೂ ನಗು ಹಾಗೂ ಬೆರಗು.

-ಕೆ.ಪಿ.ಸತ್ಯನಾರಾಯಣ, ಹಾಸನ

***

'ಹಳೆಮೆಟ್ ಕೊಡಿ ಸರ್'

ಅದು ನನ್ನ ಪರಿಚಯದ ಹಣ್ಣಿನ ಅಂಗಡಿ. ನಾನು ಆಗಾಗ ಅಲ್ಲಿಗೆ ಹೋಗುತ್ತಿರುತ್ತೇನೆ. ಒಂದು ದಿನ ನಾನು ಅಲ್ಲಿಗೆ ಹೋದಾಗ ಅಂಗಡಿ ಮಾಲೀಕರು ಹೊರಗೆ ಎಲ್ಲೋ ಹೋಗಲು ತಯಾರಾಗಿ ನಿಂತಿದ್ದರು. ನಾನು ಅವರ ಅಂಗಡಿ ಎದುರು ನಿಂತ ಕೂಡಲೇ ಅವರು ನನ್ನ ಉದ್ದೇಶಿಸಿ 'ಹಳೆಮೆಟ್ ಕೊಡಿ ಸರ್' ಎಂದರು. ದುರಾದೃಷ್ಟವಶಾತ್ ನಾನು ಆ ದಿನ ಅವಸರದಲ್ಲಿ ಹಳೆಯ ಮೆಟ್ಟು (ಚಪ್ಪಲಿ) ಹಾಕ್ಕೊಂಡು ಹೋಗಿದ್ದೆ. ಇವರು ನನ್ನ ಹಳೆಯ ಮೆಟ್ಟು ಯಾಕೆ ಕೇಳುತ್ತಿದ್ದಾರೆ ಅಂತ ತಿಳಿಯಲಿಲ್ಲ. ಮೌನವಾಗಿ ನಾನವರ ಮುಖ ನೋಡುತ್ತಾ ನಿಂತೆ. ‘ಹಳೆಮೆಟ್ ಕೊಡಿ ಸರ್' ಎಂತ ಅವರು ಪುನಃ ಸಹಜವಾಗಿ ಎಂಬಂತೆ ಕೇಳಿದರು. ನಾನವರ ಮುಖ ನೋಡಿದೆ. ನನ್ನ ಪೀಕಲಾಟ ನೋಡಲಾಗದೆ ಅವರು ಅವರು “ ಅಲ್ಲಿದೆಯಲ್ಲ ಸರ್, ಆ ನನ್ನ ಹಳೆಮೆಟ್ ಕೊಡಿ ಸರ್, ಬೈಕ್ ನಲ್ಲಿ ಬೇಗನೇ ಹೊರಗೆ ಹೋಗಿ ಬರ್ತೇನೆ'ಎಂದರು. ನಾನು ನನ್ನ ಕಾಲಬುಡಕ್ಕೆ ನೋಡಿದಾಗ ಅಲ್ಲಿ ಅವರ ಹೆಲ್ಮೆಟ್ ಇತ್ತು ! ನನಗಾಗ ಅವರ ‘ಹಳೆಮೆಟ್' ಎಂದರೆ ಏನೆಂದು ತಿಳಿದು, ಗೊಳ್ಳನೆ ನಕ್ಕೆ. ಅವರಿಗೆ ಹಳೆಮೆಟ್ಟು ಅಂದರೆ ಏನು ಅಂತ ವಿವರಿಸಿ ಹೇಳಿದಾಗ, ನಗುವ ಸರದಿ ಅವರದ್ದಾಗಿತ್ತು. !

-ನಾರಾಯಣ ಯಾಜಿ, ಶಿರಾಲಿ

***

ತೆಂಗಿನಕಾಯಿ ಒಂದು

ರಾಮಕೃಷ್ಣ ಎನ್ನುವ ನಮ್ಮ ದೂರದ ಸಂಬಂಧಿ ಯಾವಾಗಲೂ ಗಡಿಬಿಡಿಯಲ್ಲಿರುತ್ತಾರೆ. ಹೀಗಾಗಿ ಅವರನ್ನು ಎಲ್ಲರೂ ಗಡಿಬಿಡಿ ರಾಮಕೃಷ್ಣ ಎಂದೇ ಕರೆಯುತ್ತಾರೆ.

ನಮ್ಮ ಮನೆಯಲ್ಲಿ ಯಾವುದೋ ಕಾರ್ಯಕ್ರಮ ಏರ್ಪಾಡಾಗಿತ್ತು. ಕಾರ್ಯಕ್ರಮಕ್ಕೆ ತಂದಿದ್ದ ಪದಾರ್ಥಗಳನ್ನು ನೋಡಿಕೊಳ್ಳುವಾಗ ತೆಂಗಿನಕಾಯಿ ತಂದಿರದಿರುವುದು ಗೊತ್ತಾಯಿತು.

ತೆಂಗಿನಕಾಯಿ ಒಂದು ತಂದರೆ ಆಯಿತು ಎಂಬುವುದಾಗಿ ನಮ್ಮಷ್ಟಕ್ಕೆ ನಾವು ಮಾತನಾಡಿಕೊಳ್ಳುತ್ತಿದ್ದೆವು. ಈ ಮಾತನ್ನು ಕೇಳಿಸಿಕೊಂಡ ಗಡಿಬಿಡಿ ರಾಮಕೃಷ್ಣ ತೆಂಗಿನ ಕಾಯಿ ತರುತ್ತೇನೆ ಎಂದು ಗಡಿಬಿಡಿಯಲ್ಲಿ ಹೊರಟೇಬಿಟ್ಟರು. ಒಂದು ತೆಂಗಿನ ಕಾಯಿ ತಂದೇ ಬಿಟ್ಟರು.

ಇದೇನಿದು, ಒಂದೇ ಒಂದು ತೆಂಗಿನಕಾಯಿ ಎಂದಾಗ ‘ತೆಂಗಿನಕಾಯಿ ಒಂದು ತರಬೇಕು' ಎಂಬುವುದಾಗಿ ನೀವು ಮಾತನಾಡಿಕೊಳ್ಳುತ್ತಿದ್ದಿರಲ್ಲ ಎನ್ನಬೇಕೇ? 

-ಎಸ್ ಎನ್ ಕೆ, ಕಡೂರು

***

(‘ಮಯೂರ’ ಆಗಸ್ಟ್ ೨೦೧೫ರ ಸಂಚಿಕೆಯಿಂದ ಸಂಗ್ರಹಿತ)