‘ಮಯೂರ’ ಹಾಸ್ಯ - (ಭಾಗ ೩೦)

‘ಮಯೂರ’ ಹಾಸ್ಯ - (ಭಾಗ ೩೦)

ಅದಕ್ಕೇ ತಾತಾ…

ಕೆಲದಿನಗಳ ಹಿಂದೆ ಊರಿಗೆ ಹೋಗಿದ್ದಾಗ ಸಂಜೆಯ ವೇಳೆ ಮನೆಯ ಎಲ್ಲ ಸದಸ್ಯರೂ ಮಂಡಕ್ಕಿ , ಬೋಂಡಾ ಸವಿಯುತ್ತಾ ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು. ಆಗ ಬೆಲೆ ಏರಿಕೆ ಕಡೆಗೆ ಮಾತು ಹೊರಳಿತು. ನಮ್ಮ ಅಪ್ಪಾಜಿ ‘ಈಗಿನ ಕಾಲದಲ್ಲಿ ಪೇಟೆಗೆ ಐನೂರು ರೂಪಾಯಿ ತೆಗೆದುಕೊಂಡು ಹೋದರೆ ಯಾತಕ್ಕೂ ಸಾಲುವುದಿಲ್ಲ. ನಮ್ಮ ಕಾಲದಲ್ಲಿ ಹೀಗಿರಲಿಲ್ಲ ನೋಡಿ' ಎಂದರು. ಅಲ್ಲೇ ಬೋಂಡಾ ಮೆಲ್ಲುತ್ತಿದ್ದ ನಮ್ಮ ಪುಟ್ಟ ಅಶೂ ತಟ್ಟನೆ ಹೇಳಿದಳು ‘ಅದಕ್ಕೇ ತಾತಾ ಈಗ ಟೂ ಥೌಸಂಡ್ ನೋಟು ಬಿಟ್ಟಿರೋದು. ಪೇಟೆಗೆ ಹೋಗುವಾಗ ಅದನ್ನೇ ತಗೊಂಡು ಹೋಗು. ಎಲ್ಲಾ ತರಬಹುದು'

-ನಳಿನಿ ಟಿ.ಭೀಮಪ್ಪ

***

ನಾನಂತೂ ಬರೆದಿಲ್ಲ

ನನ್ನ ಐದು ವರ್ಷದ ಮೊಮ್ಮಗಳು ಸಂಜನಾ ಮಾತಿನಲ್ಲಿ ಬಲು ಚೂಟಿ. ಅವಳೆಂದರೆ ಮನೆಯಲ್ಲಿ ಎಲ್ಲರಿಗೂ ಮುದ್ದು. ದಿನಾ ರಾತ್ರಿ ಊಟದ ವೇಳೆಗೆ ಡೈನಿಂಗ್ ಟೇಬಲ್ ಮುಂದೆ. ಅವಳ ಅಣ್ಣನಿಂದ ಸಾಮಾನ್ಯ ಜ್ಞಾನದ ಪ್ರಶ್ನಾವಳಿ ಕಾರ್ಯಕ್ರಮವಿರುತ್ತಿತ್ತು. ಕೇಳುವ ಪ್ರಶ್ನೆಗಳಿಗೆ ಅವಳು ಪಟಕ್ಕನೆ ಉತ್ತರಿಸುತ್ತಿದ್ದಳು. ಅಂದು ಕೂಡ ಅಣ್ಣ ಕೇಳಿದ ಮೂರ್ನಾಲ್ಕು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಂತೆ, ‘ಪುಟ್ಟಿ, ಜನಗಣಮನ ಯಾರು ಬರೆದಿದ್ದಾರೆ ಹೇಳು?’ ಎಂದು ಪ್ರಶ್ನಿಸಿದ. ನಾವೆಲ್ಲಾ ಅವಳ ಉತ್ತರವೇನಿರಬಹುದೆಂದು ಕುತೂಹಲದಿಂದ ನೋಡುತ್ತಿದ್ದೆವು. ಅವಳು ಒಂದು ಕ್ಷಣವೂ ತಡಮಾಡದೆ ಗಂಭೀರವಾಗಿ, ‘ನಾನಂತೂ ಬರೆದಿಲ್ಲಪ್ಪಾ’ ಎಂದು ಉತ್ತರಿಸಿದಳು.!

-ಸ್ಮಿತಾ ಜೋಶಿ

***

ಗನ್ನೆ ಕೆ ದೂಧ್

ನಾವಾಗ ಮಹಾರಾಷ್ಟ್ರದ ಜಲಗಾಂವ್ ನಲ್ಲಿದ್ದೆವು. ಅಲ್ಲಿನ ಭಾಷೆ ಮರಾಠಿ. ವ್ಯವಹಾರಕ್ಕೆ ಹಿಂದಿ ಭಾಷೆಯೂ ನಡೆಯುತ್ತಿತ್ತು. ನಾನು ಹಿಂದಿಯಲ್ಲೇ ಮಾತನಾಡುತ್ತಿದ್ದೆ. ಮನೆಯ ಹತ್ತಿರ ಒಂದು ಚಿಕ್ಕ ಕಬ್ಬಿನ ಗಾಣವಿತ್ತು. ಒಂದು ಸಂಜೆ ಕಬ್ಬಿನ ಹಾಲು ಮನೆಗೆ ತಂದು ಕುಡಿಯಲೆಂದು ಬಾಟಲ್ ತೆಗೆದುಕೊಂಡು ಹೊರಟೆ. ಅಂಗಡಿಯಲ್ಲಿ ವ್ಯಾಪಾರ ಜೋರಾಗಿತ್ತು. ‘ಏಕ್ ಲೀಟರ್ ಗನ್ನೆ ಕೆ ದೂಧ್ ದೀಜಿಯೆ' ಎಂದು ಹೇಳಿದ ಮಾತು ಕೇಳಿಯೇ ಇಲ್ಲವೆನ್ನುವಂತೆ ಕೈ ಮಾಡಿದ ಅಂಗಡಿಯಾತ. ನನ್ನ ಕೈಯಲ್ಲಿದ್ದ ಬಾಟಲ್ ತೋರಿಸಿ ಪುನರುಚ್ಛರಿಸಿದೆ. ‘ಇಲ್ಲಿ ಸಿಗುವುದಿಲ್ಲ. ಹಿಂದುಗಡೆ ಅಂಗಡಿಯಲ್ಲಿ ಕೇಳಿ' ಹಿಂದಿ ಮಿಶ್ರಿತ ಮರಾಠಿಯಲ್ಲಿ ಅವನು ಹೇಳಿದ. ಹಿಂದೆ ಹೋಗಿ ನೋಡಿದರೆ ಅಲ್ಲಿರುವುದು ಹಾಲಿನ ಡೈರಿ ! ನನಗೆ ಸಿಟ್ಟುಕ್ಕಿ ಬಂತು. ಮತ್ತೆ ಅವನೆದುರಿಗೇ ನಿಂತೆ ! ‘ನಾನು ಕೇಳಿದ್ದು ಈ ಕಬ್ಬಿನ ಹಾಲು, ಹಾಲಿನ ಡೈರಿಗೆ ಕಳಿಸಿ ತಮಾಷೆ ನೋಡ್ತಿದೀರಾ? ‘ ಸ್ವಲ್ಪ ಜೋರಾಗೆ ಇತ್ತು. ನನ್ನ ದನಿ. ಗ್ಲಾಸ್ ಗಳಿಗೆ ಕಬ್ಬಿನಹಾಲು ಸುರುವುತ್ತಿದ್ದವ ನನ್ನೆಡೆಗೆ ನೋಡಿ ‘ಯೆ ಗನ್ನೆ ಕೆ ರಸ್ ಹೈ, ದೂಧ್ ನಹಿ' ಎಂದು ನಗಲಾರಂಭಿಸಿದಾಗ ನಾನು ಪೆಚ್ಚಾದೆ. 

-ಮೇಧಾ ಭಟ್

***

ಬಹುಮಾನ !

ಯಲ್ಲಾಪುರ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಯಕ್ಷಗಾನ ಪ್ರಸಂಗವೊಂದು ಪ್ರದರ್ಶನಗೊಳ್ಳುತ್ತಿತ್ತು. ಆ ಹಳ್ಳಿಯ ಬಹುತೇಕ ಎಲ್ಲರೂ ಯಕ್ಷಗಾನ ಪ್ರೇಮಿಗಳು. ಹಾಗಾಗಿ ಅಲ್ಲಿ ವರ್ಷಕ್ಕೆ ಮೂರ್ನಾಲ್ಕು ಬಾರಿ ಯಕ್ಷಗಾನ ಪ್ರಸಂಗಗಳು ನಡೆಯುತ್ತವೆ. ಯಕ್ಷಗಾನದ ಪಾತ್ರಧಾರಿಗಳಿಗೆ ಆಗಾಗ ಬಹುಮಾನದ ಸುರಿಮಳೆ. ಒಮ್ಮೆ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಿದವನೇ ತನ್ನ ಸ್ನೇಹಿತನಿಗೆ ತನ್ನ ಪಾತ್ರಕ್ಕೆ ಬಹುಮಾನ ಕೊಡುವಂತೆ ಹೇಳಿ ೧೦೦ ರೂಪಾಯಿ ಕೊಟ್ಟಿದ್ದ. ಹಣ ತೆಗೆದುಕೊಂಡ ಅವನ ಸ್ನೇಹಿತ ಎಲ್ಲಾ ಕಡೆ ಸುತ್ತಾಡಿ ಬರುವಾಗ ಅರ್ಧ ಯಕ್ಷಗಾನ ಮುಗಿದಿತ್ತು. ಆತ ತನ್ನ ಸ್ನೇಹಿತನ ಪಾತ್ರ ಮುಗಿದೇ ಹೋಯಿತು ಎಂಬ ಗಡಿಬಿಡಿಯಲ್ಲಿ ವೇದಿಕೆಯ ಮೇಲೆ ಬಂದು , ‘ಬಲರಾಮನ ಪಾತ್ರ ಮಾಡಿದ ಶ್ರೀ... ಅವರ ಮನಸೂರೆಗೊಳ್ಳುವ ಅಭಿನಯಕ್ಕೆ ೧೦೦ ರೂಪಾಯಿ ಬಹುಮಾನ ನೀಡುತ್ತಿದ್ದೇನೆ' ಎಂದು ಘೋಷಿಸಿಯೇ ಬಿಟ್ಟ ! ಈ ಘೋಷಣೆ ಕೇಳಿದ ಬಲರಾಮ ಪಾತ್ರಧಾರಿ ಬೆವೆತು ನಿಂತ ! ಏಕೆಂದರೆ, ಅದುವರೆಗೂ ಬಲರಾಮನ ಪ್ರವೇಶ ರಂಗಸ್ಥಳದಲ್ಲಿ ಆಗಿರಲೇ ಇಲ್ಲ !

-ಬೀರಣ್ಣ ನಾಯಕ ಮೊಗಟಾ

***

('ಮಯೂರ' ಡಿಸೆಂಬರ್ ೨೦೧೭ರ ಸಂಚಿಕೆಯಿಂದ ಸಂಗ್ರಹಿತ)