‘ಮಯೂರ’ ಹಾಸ್ಯ - ಭಾಗ ೪೭

‘ಮಯೂರ’ ಹಾಸ್ಯ - ಭಾಗ ೪೭

ಮೊದಲ ಪಾಠ

ಪ್ರಥಮ ವರ್ಷದ ವೈದ್ಯಕೀಯ ತರಗತಿಯ ವಿದ್ಯಾರ್ಥಿಗಳು ತಮ್ಮ ಜೀವ ರಸಾಯನ ಶಾಸ್ತ್ರದ ಮೊದಲ ತರಗತಿಗೆ ಹಾಜರಾಗಿದ್ದರು. ಮೂತ್ರದ ಸ್ಯಾಂಪಲ್ ನೊಂದಿಗೆ ಪ್ರಯೋಗಾಲಯದ ಮೇಜಿನ ಸುತ್ತ ನೆರೆದಿದ್ದರು. ಪ್ರೊಫೆಸರ್ ಸಾಹೇಬರು ತಮ್ಮ ಬೆರಳನ್ನು ಆ ಮೂತ್ರದಲ್ಲಿ ಅದ್ದಿ, ನಂತರ ಬೆರಳನ್ನು ತಮ್ಮ ಬಾಯಿಯೊಳಗಿಟ್ಟರು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೂ ಅದನ್ನನುಸರಿಸಲು ಆಜ್ಞಾಪಿಸಿದರು. ವಿದ್ಯಾರ್ಥಿಗಳು ಅನ್ಯ ವಿಧಿಯಿಲ್ಲದೆ ಮುಖ ಸಿಂಡರಿಸುತ್ತಾ ಹಾಗೇ ಮಾಡಿ ಮೂತ್ರದ ರುಚಿ ನೋಡಿದರು! ಎಲ್ಲಾ ವಿದ್ಯಾರ್ಥಿಗಳೂ ಈ ಕಾರ್ಯವನ್ನು ಪೂರೈಸಿದ ಬಳಿಕ ಪ್ರೊಫೆಸರ್ ಸಾಹೇಬರು ಹೇಳಿದರು ‘ವಿದ್ಯಾರ್ಥಿಗಳಿಗಿರಬೇಕಾದ ಪ್ರಮುಖ ಗುಣಲಕ್ಷಣಗಳಲ್ಲಿ ಗಮನವಿಟ್ಟು ಪಾಲಿಸಬೇಕಾದುದು ಒಂದು. ನಾನು ನನ್ನ ನಡು ಬೆರಳನ್ನು ಮೂತ್ರದಲ್ಲಿ ಅದ್ದಿ, ತೋರು ಬೆರಳನ್ನು ಬಾಯಿಯೊಳಗಿಟ್ಟೆ! ಇವತ್ತು ನೀವೆಲ್ಲರೂ ಗಮನವಿಟ್ಟು ಪಾಲಿಸುವುದು ಹೇಗೆ ಎಂಬುದನ್ನು ಕಲಿತಿರಿ' ಎಂದಾಗ ವಿದ್ಯಾರ್ಥಿಗಳೆಲ್ಲರೂ ಪರಸ್ಪರ ನೋಡುತ್ತಾ ಬಾಯಿ ಹುಳ್ಳಗೆ ಮಾಡಿಕೊಂಡರು.

-ರಮಣ್ ಶೆಟ್ಟಿ ರೆಂಜಾಳ್

***

ಮೀಸಲು ಸ್ಥಳ

ರಮೇಶ ಹಾಗೂ ರಾಜೇಶ ಆತ್ಮೀಯ ಸ್ನೇಹಿತರು. ಇಬ್ಬರೂ ಒಂದೇ ಊರಿನವರು. ಪ್ರತಿದಿನ ಬೆಳಿಗ್ಗೆ ಇಬ್ಬರೂ ಜೊತೆಯಾಗಿಯೇ ಸರ್ಕಾರಿ ಬಸ್ಸಿನಲ್ಲಿ ತಾವು ಮಾಡುವ ಕೆಲಸದ ಸ್ಥಳಕ್ಕೆ ಪ್ರಯಾಣ ಬೆಳೆಸುತ್ತಾರೆ. 

ಒಂದು ದಿನ ರಮೇಶ, ‘ಸರ್ಕಾರಿ ಬಸ್ಸುಗಳಲ್ಲಿ ಈಗ ತುಂಬಾ ಸವಲತ್ತುಗಳಿವೆ ಕಣೋ. ಸರ್ಕಾರಿ ಬಸ್ಸುಗಳಲ್ಲಿ ‘ಸ್ವಾತಂತ್ರ್ಯ ಹೋರಾಟಗಾರರಿಗೆ' ಅಂತ ರಿಜರ್ವ್ ಸೀಟ್ ಇಟ್ಟಿದ್ದಾರೆ' ಎಂದ. ಆಗ ರಾಜೇಶ್ ಹೇಳಿದ. ‘ಹೌದು ಕಣೋ, ಆದ್ರೆ ಆ ಸೀಟುಗಳಲ್ಲಿ ಕುಳಿತುಕೊಳ್ಳುವವರೆಲ್ಲಾ ಮದುವೆ ಆದ ಗಂಡಸರೆ'

-ನರಸಿಂಹ ಪೈ

***

ಪ್ಯಾಂಟ್ ಚಡ್ಡಿ ಆಯ್ತು !

ಗುಂಡನಿಗೆ ಹುಟ್ಟುಹಬ್ಬಕ್ಕೆ ಅವರಪ್ಪ ಹೊಸಾ ಪ್ಯಾಂಟ್ ಶರ್ಟ್ ಕೊಡಿಸಿದ್ದರು. ಆದರೆ ಪ್ಯಾಂಟ್ ಬಹಳ ಉದ್ದ ಇತ್ತು. ಅಜ್ಜಿಯ ಹತ್ತಿರ ಹೋಗಿ ‘ಅಜ್ಜಿ ಪ್ಯಾಂಟ್ ಉದ್ದ ಇದೆ. ಎರಡು ಇಂಚಿನಷ್ಟು ಕತ್ತರಿಸಿ ಹೊಲಿದುಕೊಡು'ಎಂದು ಕೇಳಿದ. ‘ಅಯ್ಯೋ ನನ್ನ ಸೀರೆನೇ ಹೊಲ್ಕಳಕ್ಕಾಗಿಲ್ಲ. ಇನ್ನು ನಿನ್ನ ಪ್ಯಾಂಟ್ ಎಲ್ಲಿ ಹೊಲೀಲಿ? ಆಗಲ್ಲ ನಡಿ' ಅಂದಿತು ಅಜ್ಜಿ. ಅಮ್ಮನ ಬಳಿ ಬಂದ ಗುಂಡ. ‘ಈ ಪ್ಯಾಂಟ್ ಉದ್ದ ಇದೆ. ಸ್ವಲ್ಪ ಕಟ್ ಮಾಡಿ ಹೊಲಿದು ಕೊಡಮ್ಮ' ಎಂದ. ‘ಈಗ ಆಗಲ್ಲ, ನಿನ್ನ ಅಕ್ಕನ ಕೇಳು ಅಂದಳು ಅಮ್ಮ. ‘ಅಕ್ಕಾ, ಈ ಪ್ಯಾಂಟ್ ಸ್ವಲ್ಪ ಕಟ್ ಮಾಡಿ ಹೊಲ್ಕೊಡೇ’ ಅಂತ ಕೇಳಿದ. ‘ನಂಗೆ ಓದ್ಕಳಕ್ಕೇ ಟೈಮಿಲ್ಲ. ಪ್ಯಾಂಟ್ ಹೊಲ್ಕೊಡ್ಬೇಕಂತೆ’ ಎಂದು ರೇಗಿದಳು. ಬೇಜಾರು ಮಾಡ್ಕೊಂಡ ಗುಂಡ, ಹಳೆಯ ಪ್ಯಾಂಟ್ ಗೆ ಹೊಸಾ ಅಂಗಿ ಹಾಕ್ಕೊಂಡು ಶಾಲೆಗೆ ಹೋದ. ಸಂಜೆ ಬಂದವನೇ ತಾನೇ ಪ್ಯಾಂಟ್ ಕಟ್ ಮಾಡಿ ಹೊಲಿಗೆ ಹಾಕಿದ. ಬೀದಿಯ ಹುಡುಗರಿಗೆ ತೋರಿಸಲು ಪ್ಯಾಂಟ್ ಹಾಕಿಕೊಂಡ. ಅದು ಮಂಡಿಯವರೆಗೆ ಮಾತ್ರ ಇತ್ತು! ಕಾರಣ ಇಷ್ಟೇ. ಪಾಪ ಹುಟ್ಟಿದ ಹಬ್ಬದ ದಿನ ಬೇಜಾರು ಮಾಡ್ಕೊಂಡು ಸ್ಕೂಲಿಗೆ ಹೋಯ್ತಲ್ಲಾ ಹುಡುಗ ಅಂದ್ಕೊಂಡು ಅಜ್ಜಿ, ಅಮ್ಮ, ಅಕ್ಕ ಎಲ್ಲರೂ ಎರಡೆರಡು ಇಂಚು ಕತ್ತರಿಸಿ ಹೊಲಿದುಬಿಟ್ಟಿದ್ದರು. !

-ಬಿ.ಎಸ್. ರಾಜಲಕ್ಷ್ಮಿ

***

ಹೆಸರು ಬದಲಿಸುತ್ತೇನೆ

ರವಿ ಆಗ ತಾನೇ ಪಿಯುಸಿ ಪರೀಕ್ಷೆ ಪಾಸಾಗಿದ್ದ. ಮುಂದೇನು ಓದಬೇಕು ಎಂಬುದರ ಬಗ್ಗೆ ರವಿಯ ಮನೆಯಲ್ಲಿ ಭಾರೀ ಚರ್ಚೆ ಆರಂಭವಾಗಿತ್ತು. ಆತನ ತಾತ ಕನ್ನಡಕ ಸರಿಪಡಿಸುತ್ತಾ ಹೇಳಿದರು -’ನೋಡಪ್ಪಾ, ನಾನು ರಂಗನಾಥ...ಎಂಜಿನಿಯರಿಂಗ್ ನಲ್ಲಿ ಯೂನಿವರ್ಸಿಟಿಗೇ ಚಿನ್ನದ ಪದಕ ಪಡೆದು ಪಾಸಾಗಿದ್ದೆ. ಇನ್ನು ನಿನ್ನ ತಂದೆ ರಾಮನಾಥ ...ಎಂಬಿಬಿಎಸ್ ನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದವ. ಈಗ ನೀನು ಹೇಳು ರವೀಂದ್ರನಾಥ...ನಿನ್ನ ಮುಂದಿನ ಗುರಿ ಏನು?’

‘ಏನಿಲ್ಲ.. ಆತ ತೊದಲುತ್ತಾ ಹೇಳಿದ ‘ಮೊದಲು ನನ್ನ ಹೆಸರು ಬದಲಿಸಬೇಕೂಂತ ಇದ್ದೀನಿ!’

-ಕೃಷ್ಣಮೂರ್ತಿ ಭಟ್, ಬೆಳ್ಮಣ್ಣು

***

(‘ಮಯೂರ' ಮಾರ್ಚ್ ೨೦೧೮ರ ಸಂಚಿಕೆಯಿಂದ ಸಂಗ್ರಹಿತ)