‘ಮಯೂರ’ ಹಾಸ್ಯ - ಭಾಗ ೭೯

‘ಮಯೂರ’ ಹಾಸ್ಯ - ಭಾಗ ೭೯

ಸಾಯಿಸಿಬಿಡ್ತಾರೆ

ಗೆಳತಿ ಚಿತ್ರಾ ತನ್ನ ಪುಟ್ಟ ಮಗಳು ‘ಸಂಸ್ಕೃತಿ' ಜೊತೆಗೆ ಔಷಧಿ ತರಲು ಹೋದಾಗ ನಡೆದ ಘಟನೆ ಇದು. ಅಂಗಡಿ ಮೆಟ್ಟಿಲು ಹತ್ತಲು ಬಿಡದಂತೆ ಮಗಳು ಕೈ ಹಿಡಿದು ಜಗ್ಗುತ್ತಲೇ ಇದ್ದಳು. ಅವಳು ಆ ಔಷಧಿ ಅಂಗಡಿಯ ಮೇಲೆ ಬರೆದ ಬೋರ್ಡಿನ ಕಡೆಯೇ ನೋಡುತ್ತಿದ್ದಳು. ‘ಅಮ್ಮಾ, ಬೇಡಮ್ಮಾ, ಸಾಯಿಸಿಬಿಡ್ತಾರೆ... ಬೇಡಮ್ಮ ಅಲ್ಲಿ ಹೋಗೋದು' ಅಂತ ಅಳು ಮುಖ ಮಾಡಿದಳು. ಮಗಳ ಮಾತು ಕೇಳಿದ ಚಿತ್ರಾ ಗಾಬರಿ ಹಾಗೂ ಸಿಟ್ಟಿನಿಂದ ಅವಳು ತೋರಿಸುತ್ತಿದ್ದ ಔಷಧ ಅಂಗಡಿಯ ಮೇಲೆ ಬರೆದ ಬೋರ್ಡ್ ನೋಡಿದಳು. ‘ ಸಾಯಿಸಿರಿ ಮೆಡಿಕಲ್ ಶಾಪ್' ಎಂದು ಬರೆದಿದ್ದು ಓದಿ ನಕ್ಕು ಬಿಟ್ಟಳು. 

-ಇಂದಿರಾ ಮೋಟೆಬೆನ್ನೂರ

***

ನೀವೆಲ್ಲಿ ಇರ್ತೀರಾ?

ತಂಗಿಯ ಮಗಳು ಮನಸ್ವಿಗೆ ಊಟ ಮಾಡಿಸುವಾಗ ಏನಾದರೂ ಮಾತು ಹೇಳುತ್ತಲೇ ಇರಬೇಕು. ಮಾತುಗಳು ನಿಂತರೆ ಊಟ ನಿಲ್ಲಿಸಿ ಬಿಡುತ್ತಾಳೆ. ಅದಕ್ಕೆ ಅವರಮ್ಮ ಊಟ ಮುಗಿಯುವವರೆಗೂ ಏನಾದರೂ ಬುರುಡೆ  ಬಿಡುತ್ತಲೇ ಇರುತ್ತಾಳೆ. ಆವತ್ತು ಕಿಟಕಿಯ ಬಳಿ ಕೂರಿಸಿ ಊಟ ಮಾಡಿಸುತ್ತಿದ್ದಳು. ಪಕ್ಕದ ಖಾಲಿ ಜಾಗದಲ್ಲಿ ಗುಡಿಸಲು ಹಾಕಿಕೊಂಡಿದ್ದ ಕುಟುಂಬದ ಬಗ್ಗೆ ಮಾತು ನಡೆದಿತ್ತು. ‘ಅಮ್ಮ ಅವರ ಮನೆ ಯಾಕೆ ವಿಚಿತ್ರವಾಗಿದೆ?’ ಎಂದಳು ಮನಸ್ವಿ. ‘ಅವರು ಬಡವರು, ಅವರಿಗೆ ಇಷ್ಟು ದೊಡ್ಡ ಮನೆ ಇಲ್ಲ.’ ಎಂದೆಲ್ಲಾ ವಿವರಿಸಿದಳು. ಮನಸ್ವಿ, ‘ಮತ್ತೆ, ನನ್ನ ಮನೆ ಎಲ್ಲಿದೆ?’ ಎಂದಳು. ‘ಇದೇ ನಿನ್ನ ಮನೆ ಪುಟ್ಟು. ಎಷ್ಟು ದೊಡ್ಡದಿದೆ ಅಲ್ವಾ ನಿನ್ನ ಮನೆ? ಈ ಮನೆಗೆ ನಿನ್ನದೇ ಹೆಸರಿದೆ ತಾನೇ?’ ಎಂದಾಗ. ‘ಇದು ನನ್ನ ಮನೆನಾ? ಹಾಗಿದ್ರೆ ನೀನು, ಪಪ್ಪಾ ಎಲ್ಲಿರ್ತೀರಾ?’ ಅಂತ ಕೇಳೋದೆ!

-ಸುವರ್ಣಾ ಮಠ

***

ಗಂಡ ಎಷ್ಟಾಯ್ತು?

ನಮ್ಮ ಪಕ್ಕದ ಮನೆಯ ಯುವಕ ಹೊಸದಾಗಿ ಮದುವೆಯಾಗಿ ಹೆಂಡತಿಯನ್ನು ಕರೆತಂದಿದ್ದ. ಮಧ್ಯಾಹ್ನ ಅವರ ಮನೆಗೆ ಬಂದ ಮಲೆಯಾಳಿ ರಬ್ಬರ್ ಟ್ಯಾಪರ್ ಅವಳಿಗೆ ‘ಗಂಡ ಎಷ್ಟಾಯಿತಮ್ಮ?’ಎಂದು ಕೇಳಿದ. ಅವಳು ಕೋಪದಿಂದ ‘ಈಗಷ್ಟೇ ಮದುವೆಯಾಗಿದೆ. ಗಂಡ ಎಷ್ಟಾಯ್ತು ಎಂದು ಕೇಳ್ತಿಯಲ್ಲ, ನಾಚಿಕೆ ಆಗೋಲ್ಲವೇ ನಿನಗೆ, ರಾಸ್ಕಲ್' ಎಂದು ಕೋಪದಿಂದ ವಾಚಾಮಗೋಚರವಾಗಿ ಬೈದು ಬಿಟ್ಟಳು. ಅಷ್ಟರಲ್ಲಿ ಒಳಗಿನಿಂದ ಅವಳ ಅತ್ತೆ ಬಂದು ‘ಗಲಾಟೆ ಮಾಡಬೇಡಮ್ಮ. ಅವನು ಕನ್ನಡ ಮಾತನಾಡುವುದು ಹಾಗೆಯೇ. ಗಂಟೆ ಎಷ್ಟಾಯ್ತು ಅಂತ ಕೇಳ್ತಿದ್ದಾನೆ' ಎಂದು ವಿವರಿಸಿ ಪ್ರಕರಣವನ್ನು ತಿಳಿಗೊಳಿಸಿದರು.

-ಕೃಷ್ಣ ಪಿ ಎಸ್.

***

ಹೆಸ್ರಯೋಳಕಾಗ್ದ ನಾಯ್ಕ

ನಮ್ಮ ಪಕ್ಕದ ಮನೆಯಲ್ಲಿ ರಾಯಚೂರಿನ ಕಾರ್ಮಿಕರ ಕುಟುಂಬವೊಂದು ವಾಸವಾಗಿತ್ತು. ಅವರ ಮನೆಗೆ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸಲು ಗ್ರಾಮ ಪಂಚಾಯಿತಿಯ ಗುಮಾಸ್ತೆ ಬಂದಿದ್ದರು. ಮನೆಯಲ್ಲಿ ಮಹಿಳೆ ಮಾತ್ರ ಇದ್ದಳು. ವಿವರಗಳನ್ನು ಅವಳೇ ನೀಡಿದಳು. ಕೆಲವು ದಿನಗಳ ಬಳಿಕ ಮಹಿಳೆ ಮತ್ತು ಅವಳ ಗಂಡನ ಗುರುತುಚೀಟಿ ಕೈಸೇರಿತು. ಅದರಲ್ಲಿ ಮಹಿಳೆಯ ಗಂಡನ ಹೆಸರು ತಪ್ಪಾಗಿತ್ತು. ನರಸಿಂಹ ನಾಯ್ಕ ಎನ್ನುವ ಹೆಸರಿಗೆ ಬದಲಾಗಿ ‘ಹೆಸ್ರಯೋಳಕಾಗ್ದ ನಾಯ್ಕ' ಎಂದು ದಾಖಲಾಗಿತ್ತು. ಹಳೆಯ ಕಾಲದವಳಾದ ಅವನ ಹೆಂಡತಿ ಗಂಡನ ಹೆಸರು ಏನೆಂದು ಕೇಳಿದಾಗ ಹೆಸರು ಹೇಳಲಿಕ್ಕಾಗದೆ ‘ಹೆಸ್ರಯೋಳಕಾಗ್ದ ನಾಯ್ಕ' ಎಂದು ಹೇಳಿದ್ದಳು. ಗುಮಾಸ್ತೆ ಅದೇ ಹೆಸರೆಂದು ತಿಳಿದು ಸೇರಿಸಿಬಿಟ್ಟಿದ್ದಳು.

-ಪ. ರಾಮಕೃಷ್ಣ ಶಾಸ್ತ್ರಿ

***

(‘ಮಯೂರ' ಡಿಸೆಂಬರ್ ೨೦೨೨ರ ಸಂಚಿಕೆಯಿಂದ ಆಯ್ದದ್ದು)