‘ಮಯೂರ’ ಹಾಸ್ಯ - ಭಾಗ ೯೫
ಮಾರ್ ಡಾಲಾ
ನಮ್ಮ ಚಿಕ್ಕಪ್ಪ ಭಾರತೀಯ ರೈಲು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವಾಗ ನಡೆದ ಘಟನೆ. ಅವರು ಕೆಲಸಕ್ಕೆ ಹೋಗುವ ಸ್ವಲ್ಪ ಸಮಯ ಮುಂಚೆ ಅವರನ್ನು ಕರೆಯಲು ಕಾಲ್ ಬಾಯ್ ಬರುತ್ತಿದ್ದ. ಒಂದು ಮುಂಜಾನೆ ಸ್ನಾನದ ಕೋಣೆಯಲ್ಲಿ ಹಾವು ಬಂದಾಗ ಚಿಕ್ಕಮ್ಮ ಹಾವನ್ನು ಕೊಂದು ಹಾಕಿದ್ದರು. ಆನಂತರ ಅವರು ಅಂಗಳದಲ್ಲಿ ತಲೆ ಬಗ್ಗಿಸಿ ರಂಗೋಲಿ ಹಾಕುತ್ತಿದ್ದಾಗ ಕಾಲ್ ಬಾಯ್ ಬಂದ. ‘ಸಾಬ್ ಹೈ ಕ್ಯಾ?’ ಎಂದು ಹಿಂದಿಯಲ್ಲಿ ಕೇಳಿದ. ಚಿಕ್ಕಮ್ಮಗೆ ‘ಸಾಬ್’ ಬದಲು ‘ಸಾಂಪ್’ ಎಂದು ಕೇಳಿಸಿದೆ. ಅವರು ‘ಮಾರ್ ಡಾಲಾ’ ಎಂದು ಉತ್ತರಿಸಿದಾಗ ಕಾಲ್ ಬಾಯ್ ಭಯದಿಂದ ಕಿರುಚಿದ್ದಾನೆ. ಚಿಕ್ಕಪ್ಪ ಹೊರಗೆ ಬಂದ ಮೇಲೆ ಪರಿಸ್ಥಿತಿ ಹಾಸ್ಯ ರೂಪಕ್ಕೆ ತಿರುಗಿತ್ತು.
-ಪ್ರಮೋದ್ ಕೆ ಕುಲಕರ್ಣಿ
***
ಸದ್ದು ಅಡಗುವವರೆಗೆ…
ಹೊಸದಾಗಿ ಮನೆಗೆ ಬಂದ ಸೊಸೆಗೆ ಅತ್ತೆ ಹೇಳಿದಳು. ‘ನೋಡಮ್ಮ, ನಾನು ಸ್ವಲ್ಪ ಆಚೆ ಹೋಗಿ ಬರುವೆ. ಬೆಣ್ಣೆ ಕಾಯಿಸಲು ಇಟ್ಟಿದ್ದಿನಿ. ನೋಡಿ, ಆರಿಸು’ ಎಂದು. ಸೊಸೆ ‘ಎಷ್ಟು ಹೊತ್ತಿನತನಕ ಕಾಯಿಸಬೇಕು ಅತ್ತೆ?’ ಎಂದು ಕೇಳಿದಳು. ‘ಸದ್ದು ಅಡಗುವವರೆಗೆ ಕಾಯಿಸು’ ಎಂದು ಹೇಳಿ ಅತ್ತೆ ಹೊರಗೆ ಹೋದಳು. ಮನೆಯ ಪಕ್ಕದಲ್ಲೇ ಮದುವೆ ಕಾರ್ಯಕ್ರಮವಿತ್ತು. ರಾತ್ರಿಯವರೆಗೆ ಸದ್ದು -ಗದ್ದಲ ನಿಲ್ಲಲೇ ಇಲ್ಲ. ಸೊಸೆ ಬೆಣ್ಣೆ ಕಾಯಿಸಲು ಇಟ್ಟಿದ್ದ ಒಲೆಯನ್ನು ಆರಿಸಲೇ ಇಲ್ಲ. ಅತ್ತೆ ಬಂದು ನೋಡಿದಾಗ ಬೆಣ್ಣೆ ತುಪ್ಪವಾಗಿ, ತುಪ್ಪ ಸೀದು ಹೋಗಿ ಪಾತ್ರೆ ಕರಕಲಾಗಿತ್ತು. ‘ಯಾಕೆ ಒಲೆ ಆರಿಸಲಿಲ್ಲ? ‘ ಎಂದು ಕೇಳಿದರೆ ಸೊಸೆ, ‘ಸದ್ದು ಅಡಗಲೇ ಇಲ್ಲವಲ್ಲ ಅತ್ತೆ’ ಎನ್ನುವುದೇ.
ಬೆಣ್ಣೆ ಕಾಯಿಸುವಾಗ ಗುಡು ಗುಡು ಸದ್ದು ಬರುತ್ತದೆ. ಅದು ತುಪ್ಪವಾಗುತ್ತ ಬಂದಾಗ ಆ ಸದ್ದು ನಿಂತು ಹೋಗುತ್ತದೆ. ಆಗ ಅದು ತುಪ್ಪವಾಗಿದೆ ಎಂದು ಅರ್ಥ. ಈ ಅರ್ಥದಲ್ಲಿ ಅತ್ತೆ ಹೇಳಿದ ಮಾತನ್ನು ಸೊಸೆ ತನ್ನದೇ ರೀತಿಯಲ್ಲಿ ಅರ್ಥೈಸಿಕೊಂಡಿದ್ದಳು. ಕಾರಣ ತುಪ್ಪ ಸಿದ್ದು ಹೋಗಿತ್ತು.
-ಶೋಭಾ ಸಿದ್ದಣ್ಣವರ್
***
ಗೋವು ತಂದ ಪೇಚು
ನೆಂಟರ ಗೃಹ ಪ್ರವೇಶ ಕಾರ್ಯಕ್ರಮದ ಸಂದರ್ಭ ಉಪಸ್ಥಿತರಿದ್ದ ನೆಂಟರಿಗೆ ಒಬ್ಬೊಬ್ಬರಿಗೆ ಒಂದೊಂದು ದೇವರ ಫೊಟೋ, ನೀರು ತುಂಬಿದ ಕಳಶ (ಗಂಗೆ) ಅಕ್ಕಿ, ಬೆಲ್ಲ, ತೆಂಗಿನ ಕಾಯಿ, ಅರಶಿನ ಕುಂಕುಮ, ತೊಟ್ಟಿಲು, ಹಾಸಿಗೆ, ಹಾಲು, ಪಾತ್ರೆಗಳು ಮುಂತಾಗಿ ಕೊಟ್ಟು ಗೃಹ ಪ್ರವೇಶಕ್ಕೆ ಅಣಿಯಾಗಿ ಪುರೋಹಿತರ ಅಣತಿಗೆ ಕಾಯುತ್ತಿದ್ದೆವು. ಪುರೋಹಿತರು ‘ಗೋವು… ಗೋವು’ ಎಂದರು. ತಕ್ಷಣವೇ ಅಲ್ಲಿದ್ದ ನಮ್ಮ ನೆಂಟರ ಪುಟ್ಟ ಬಾಲಕ ಅಲ್ಲಿದ್ದ ಉತ್ತರ ಕನ್ನಡದ ಕುಮಟಾದ ನೆಂಟರೊಬ್ಬರನ್ನು ಕರೆದುಕೊಂಡು ಬಂದು. ‘ಗೋವು… ಗೋವು..’ ಎಂದು ಪುರೋಹಿತರ ಬಳಿ ನಿಲ್ಲಿಸಿದ. ಕೊಂಕಣಿಯಲ್ಲಿ ‘ಗೋವು…’ ಎಂದರೆ ಪತಿ ! ಅವರ ಪತ್ನಿ ಬಂದವರಿಗೆಲ್ಲ ‘ಮೆಗೆಲೆ ಗೋವು ‘ (ಇವರು ನನ್ನ ಪತಿ) ಎಂದು ಪರಿಚಯಿಸಿದ್ದನ್ನು ಆತ ಗಮನಿಸಿದ್ದ.
-ನಗರ ಗುರುದೇವ್ ಭಂಡಾರ್ಕರ್
***
ಮೀನಾಕ್ಷೀ… ಮೀನಾಕ್ಷೀ
ಕಣ್ಣಿನ ಆಸ್ಪತ್ರೆಗೆ ಹೋಗಿದ್ದೆ. ತುರ್ತು ಚಿಕಿತ್ಸೆಗೆ ಒಳಪಡಿಸಿ, ನನ್ನ ಫೈಲ್ ಮೇಲೆ ಎಮರ್ಜೆನ್ಸಿ ಎಂದು ಬರೆದು ಕೊಟ್ಟರು. ಮತ್ತೆ ಮಾರನೇ ದಿನ ಹೋಗಬೇಕಾಯಿತು. ಒಂದು ಶಾಲೆಯ ಮಕ್ಕಳನ್ನು ಕಣ್ಣಿನ ಪರೀಕ್ಷೆಗೆ ಕರೆದುಕೊಂಡು ಬಂದಿದ್ದರು. ನಮ್ಮ ಫೈಲ್ ಡಾಕ್ಟರ್ ಬಳಿ ಹೋದಾಗ ಸಹಾಯಕರು ‘ಮೀನಾಕ್ಷಿ… ಮೀನಾಕ್ಷೀ… ಎಂದು ಕರೆದರು. ನಾನು ನರ್ಸ್ ಅನ್ನು ಹಿಂಬಾಲಿಸಿದೆ. ಆಗ ಕೆಲ ಮಕ್ಕಳು ‘ಮೀನಾಕ್ಷೀ… ಮೀನಾಕ್ಷೀ.. ಎಂತಹ ಮಕ್ಕಳಿಗೆ ಜನ್ಮ ಕೊಟ್ಟಿಯೇ?’ ಎಂದು ಪಿಸುಗುಟ್ಟುತ್ತಿರುವುದು ಕೇಳಿಸಿತು. ಜೀವನ ಚೈತ್ರ ಸಿನೆಮಾ ಪ್ರಸಾರವಾಗುವ ಬಗ್ಗೆ ಒಂದು ಚಾನೆಲ್ ನವರು ಪದೇ ಪದೇ ಆ ಸಮಯದಲ್ಲಿ ಪ್ರೊಮೋ ಕೊಡುತ್ತಿದ್ದರು. ಅದರಲ್ಲಿ ಡಾ. ರಾಜ್ ಹೇಳುವ ಈ ಡೈಲಾಗನ್ನೇ ಮತ್ತೆ ಮತ್ತೆ ಹಾಕುತ್ತಿದ್ದರು. ಬಹುಷಃ ಅದರ ಪ್ರಭಾವಕ್ಕೊಳಗಾದ ಮಕ್ಕಳು ನನ್ನ ಹೆಸರನ್ನು ಕರೆದು ಖುಷಿ ಅನುಭವಿಸಿದರೇನೋ.. ನಾನು ನಕ್ಕು ಸುಮ್ಮನಾದೆ.
-ಬಿ ಕೆ ಮೀನಾಕ್ಷಿ
(ಮಯೂರ ಜುಲೈ ೨೦೨೩ರ ಸಂಚಿಕೆಯಿಂದ ಆಯ್ದದ್ದು)