‘ಮಯೂರ’ ಹಾಸ್ಯ - ಭಾಗ ೯೬
ನಿಮಗಲ್ಲ…
ಶೀಲಾಗೂ ಪ್ರದೀಪನಿಗೂ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಒಂದು ದಿನ ಮುಂಚೆ ಶೀಲಾಳಿಂದ ಪ್ರದೀಪನಿಗೆ ಒಂದು ಸಂದೇಶ ಬಂತು. ‘ನಾನು ನಿಮ್ಮನ್ನು ಮದುವೆ ಆಗಲು ಆಗುವುದಿಲ್ಲ. ನನ್ನ ಮದುವೆ ಬೇರೆ ಕಡೆ ನಿಶ್ಚಯವಾಗಿದೆ. ದಯವಿಟ್ಟು ಆಗಿದ್ದನ್ನೆಲ್ಲಾ ಮರೆತು ಹಾಯಾಗಿರಿ. ನನ್ನನ್ನು ಕ್ಷಮಿಸಿಬಿಡಿ’ ಪ್ರದೀಪನಿಗೆ ತುಂಬಾ ಚಿಂತೆಯಾಯಿತು. ಏನು ಮಾಡುವುದು ಎಂದು ಆಲೋಚಿಸುತ್ತಿರುವಾಗಲೇ ಶೀಲಾಳಿಂದ ಮತ್ತೊಂದು ಮೆಸೇಜ್ ಬಂತು. ‘ಸಾರಿ… ಆ ಮೆಸೇಜ್ ನಿಮಗಲ್ಲ. ತಪ್ಪಾಗಿ ನಿಮಗೆ ಕಳಿಸಿಬಿಟ್ಟೆ.’ ಪ್ರದೀಪನಿಗೆ ಚಿಂತೆ ಜಾಸ್ತಿ ಆಯ್ತು. !
-ಮಂಡ್ಯ ಮ.ನಾ. ಉಡುಪ
***
ಡಾಕ್ಟರ್ ಸರ್ಟಿಫಿಕೇಟ್
ಕಲ್ಲೇಶಿ ಆರೋಗ್ಯ ಸರಿಯಿಲ್ಲ ಎಂದು ಹತ್ತು ದಿನ ರಜೆ ಹಾಕಿದ್ದ. ಹತ್ತನೇ ತರಗತಿಯ ಕೊನೆಯ ದಿನಗಳಾಗಿದ್ದರಿಂದ ಶಾಲೆಯಲ್ಲಿ ಕಟ್ಟುನಿಟ್ಟಿನ ತರಬೇತಿ ನಡೆದಿತ್ತು. ಸಕಾರಣವಿಲ್ಲದೆ ಯಾರೂ ರಜೆ ಹಾಕುವಂತಿರಲಿಲ್ಲ. ಹೀಗಾಗಿ, ಅಷ್ಟು ದಿನ ರಜೆ ಹಾಕಿದ್ದಕ್ಕೆ ಡಾಕ್ಟರ್ ಸರ್ಟಿಫಿಕೇಟ್ ತರಲೇಬೇಕೆಂದು ಟೀಚರ್ ಹೇಳಿದರು. ಮಾರನೇ ದಿನ ಕಲ್ಲೇಶಿ ಖಾಲಿ ಕೈಯಿಂದ ಬಂದ. ‘ಬರುವಾಗ ಡಾಕ್ಟರ್ ಸರ್ಟಿಫಿಕೇಟ್ ತರಬೇಕು ಅಂತ ಹೇಳಿದ್ದೆ ಅಲ್ವಾ?’ ಎಂದರು ಟೀಚರ್. ಕಲ್ಲೇಶಿ, ‘ನಾನು ಎಷ್ಟು ಕೇಳಿದರೂ ಅವರು ಕೊಡ್ಲಿಲ್ಲ ಮೇಡಂ. ಅದು ಅವ್ರು ಕಷ್ಟಪಟ್ಟು ಓದಿ ತೆರೆದುಕೊಂಡಿರುವುದಂತೆ, ಕೊಡೊಲ್ಲ ಹೋಗೋ ಅಂದ್ರು!’ ಎಂದ.
-ಅನುಪಮಾ ವಸ್ತ್ರದ್
***
ಐದು ಕೆಜಿ ಉಡುಗೊರೆ
ದೀಪು ತನ್ನ ಅಜ್ಜಿಗೆ ಹೇಳಿದ, ‘ನೋಡಜ್ಜಿ ಅಪ್ಪ, ಅಕ್ಕನಿಗೆ ೫ ಜಿ ಮೊಬೈಲ್ ಗಿಫ್ಟ್ ಕೊಟ್ಟಿದ್ದಾರೆ. ಮೊನ್ನೆ ಹುಟ್ಟುಹಬ್ಬಕ್ಕೆ…’ ಮುಂದಿನ ತಿಂಗಳು ನಿನಗೂ ಎಪ್ಪತ್ತನೇ ವರ್ಷದ ಹುಟ್ಟು ಹಬ್ಬ ಬರುತ್ತೆ. ನಿನಗೂ ೫ ಜಿ ಮೊಬೈಲ್ ಉಡುಗೊರೆಯಾಗಿ ತರ್ತಾರೇನೋ?’ ಎಂದ. ಅಜ್ಜಿ ‘ಅಯ್ಯೋ, ಬೇಡ ಮಗ… ನನಗೆ ಯಾಕಪ್ಪಾ ಐದು ಕೆಜಿ ಪೋನ್? ಅಷ್ಟೊಂದು ಭಾರ ಎತ್ತುವ ಶಕ್ತಿ ಈಗ ನನಗೂ ಇಲ್ಲ. ಅದೆಲ್ಲಾ ಬೇಡಾ ಅಂತ ನೀನೇ ಹೇಳು ಮರೀ ಅಪ್ಪಂಗೆ…’ ಅಂದರು. ದೀಪು ತಲೆ ಮೇಲೆ ಕೈಹೊತ್ತು ಕುಳಿತ.
-ಸುಮನಾ
***
ಬುದ್ಧಿವಂತ ಮಾಲೀಕ
ಸುಮಾರು ನೂರು ಜನ ಸಿಬ್ಬಂದಿ ಇರುವ ಕಂಪೆನಿಯ ಗುಜರಾತಿ ಮಾಲೀಕನನ್ನು ಪತ್ರಕರ್ತನೊಬ್ಬ ಸಂದರ್ಶನ ಮಾಡಲು ಬಂದ. ‘ಸರ್, ನಿಮ್ಮ ಸಿಬ್ಬಂದಿ ಕರಾರುವಕ್ಕಾಗಿ ಕೆಲಸದ ವೇಳೆ ಹಾಜರಾಗುತ್ತಾರೆಂದು ತಿಳಿದು ಬಂತು. ಈ ಕ್ರಮಕ್ಕೆ ಪ್ರೇರಣೆ ಏನು ಸರ್?’ ಎಂದು ಪ್ರಶ್ನಿಸಿದ. ಮಾಲೀಕ, ‘ವೆರಿ ಸಿಂಪಲ್,,, ನಮ್ಮ ಕಂಪೆನಿಯಲ್ಲಿ ನೂರು ಜನ ಕೆಲಸ ಮಾಡುತ್ತಾರೆ. ನಾನು ಕೇವಲ ಇಪ್ಪತ್ತು ಜನರಿಗೆ ಆಗುವಷ್ಟು ಫ್ರೀ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದೇನೆ. ಯಾವು ಮೊದಲು ಬರುತ್ತಾರೋ ಅವರಿಗೆ ಫ್ರೀ ಪಾರ್ಕಿಂಗ್. ನಂತರ ಬಂದವರು ದಿನಕ್ಕೆ ನೂರಾ ಐವತ್ತು ರೂಪಾಯಿ ಕೊಡಬೇಕೆಂದು ಸೂಚಿಸಿದ್ದೇನೆ’ ಎಂದು ಉತ್ತರಿಸಿದ.
-ಅರವಿಂದ ಜಿ. ಜೋಶಿ
***
ಸರ್ವರ್ ಇಲ್ಲ
ರಮೇಶ್ ಹತ್ತು ಸಾವಿರ ಹಣ ಪಡೆಯಲು ಖಾಸಗಿ ಬ್ಯಾಂಕ್ ಒಂದಕ್ಕೆ ಹೋಗಿದ್ದ. ಹಣ ಪಡೆಯುವ ಸ್ಲಿಪ್ ಅನ್ನು ಭರ್ತಿ ಮಾಡಿ ಕ್ಯಾಷ್ ಕೌಂಟರ್ ಗೆ ಕೊಟ್ಟ. ಕ್ಯಾಶಿಯರ್, ಕರೀತೀನಿ ಕೂತಿರಿ’ ಎಂದರು. ಸುಮಾರು ಹೊತ್ತಾದರೂ ಕರಿಯಲೇ ಇಲ್ಲ. ಹತ್ತಾರು ನಿಮಿಷಗಳ ಕಾಲ ಕಾದು ಸುಸ್ತಾದ ರಮೇಶ್ ಕೌಂಟರ್ ಬಳಿ ಬಂದು ‘ ಸಾರ್ ಕರೀತೀನಿ ಅಂದ್ರಿ, ಕರಿಯಲೇ ಇಲ್ಲ?’ ಅಂತ ಕೇಳಿದ. ಕ್ಯಾಷಿಯರ್, ‘ಬೆಳಿಗ್ಗೆಯಿಂದಲೂ ಸರ್ವರ್ ಇಲ್ಲ. ಸರ್ವರ್ ಬಂದ ಕೂಡಲೇ ಕರೀತೀನಿ’ ಎಂದರು. ಆಗ ರಮೇಶ್, ‘ನಮ್ ಹೋಟೇಲಲ್ಲಿಆರು ಜನ ಸರ್ವರ್ ಅವ್ರೆ, … ಒಬ್ಬರನ್ನು ಕರೆಸ್ಲಾ ಸರ್?’ ಎಂದು ಕೇಳಿದ. ಮೊದಲೇ ಸರ್ವರ್ ಸಮಸ್ಯೆಯಿಂದ ತಲೆಕೆಟ್ಟ ಬ್ಯಾಂಕ್ ಕ್ಯಾಶಿಯರ್ ಸರ್ವರ್ ಬಗ್ಗೆ ಬಿಡಿಸಿ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ.
-ಮಲ್ಲಿಕಾರ್ಜುನ ಸುರಧೇನುಪುರ
***
(‘ಮಯೂರ’ ಸೆಪ್ಟೆಂಬರ್ ೨೦೨೩ರ ಸಂಚಿಕೆಯಿಂದ ಆಯ್ದದ್ದು)