‘ಮಯೂರ’ ಹಾಸ್ಯ - ಭಾಗ ೯೭
ರಕ್ತದಾನ - ಜೀವದಾನ
ಗೆಳತಿಗೆ ಡೆಂಗ್ಯೂ ಆಗಿ ಆಸ್ಪತ್ರೆಯಲ್ಲಿದ್ದಳು. ಕ್ಷೇಮ ಸಮಾಚಾರ ಕೇಳಿಕೊಂಡು ಬರೋಣವೆಂದು ಆಸ್ಪತ್ರೆಗೆ ಹೋಗಿದ್ದೆ. ನರ್ಸ್ ಬಂದು ಮತ್ತೊಮ್ಮೆ ಬ್ಲಡ್ ಕಲೆಕ್ಟ್ ಮಾಡಿಕೊಂಡರು. ‘ನೋಡಮ್ಮ, ಈ ಸಲ ಬಿಳಿ ರಕ್ತ ಕಣಗಳ ಸಂಖ್ಯೆ ಸುಧಾರಿಸಿದ್ದರೆ ಸರಿ, ಇಲ್ಲ ಅಂದ್ರೆ ರಕ್ತದ ವ್ಯವಸ್ಥೆ ಮಾಡಿಕೊಳ್ಳಬೇಕು. ನಿಮ್ಮ ಮನೆಯವರು ಬಂದ ಮೇಲೆ ಹೇಳಿ’ ಅಂದರು. ನಾನು ‘ರಕ್ತದ ಅವಶ್ಯಕತೆ ಏನಾದ್ರೂ ಇದ್ರೆ ತಿಳಿಸು, ಬಂದು ಕೊಟ್ಟು ಹೋಗ್ತೇನೆ’ ಅಂದೆ. ಅವಳು ಮಲಗಿದಲ್ಲಿಂದಲೇ ಕೈಮುಗಿದು, ‘ಅಲ್ಲ ಕಣೇ, ನಿನ್ನ ಮೈಯಲ್ಲಿ ಇರೋದೇ ಪಾವು ಸೇರು ರಕ್ತ… ಅದನ್ನೂ ನಾ ತಗೊಂಡು ಏನ್ಮಾಡ್ಲಿ? ಆಮೇಲೆ ನಿನಗೆ ಜೀವದಾನ ಮಾಡುವವರು ಯಾರು? ಅಂದಳು. ನರ್ಸ್ ಗೆ ನಗು ತಡೆಯಲಾಗದೇ ಹೊರಗೆ ಹೋದಳು.
-ಸುವರ್ಣ ಮಠ
***
ಸೆರೆಮನೆ
ಅಕ್ಕ ಹೇಳಿದ ಘಟನೆ. ಶಿಕ್ಷಕಿಯಾದ ಅಕ್ಕ ಮಕ್ಕಳಿಗೆ ಪಾಠ ಮಾಡುವಾಗ ‘ಅರಮನೆ ಅಂದ್ರೆ ಅರಸನು ವಾಸ ಮಾಡುವ ಸ್ಥಳ’ ಎಂದು ಹೇಳಿಕೊಡುತ್ತಿದ್ದರಂತೆ. ಒಬ್ಬ ವಿದ್ಯಾರ್ಥಿ ಎದ್ದು ನಿಂತು, ‘ಹಾಗಾದ್ರೆ ಪೋಲೀಸರು ವಾಸ ಮಾಡುವ ಸ್ಥಳ ಸೆರೆಮನೆ… ಅಲ್ವಾ ಮೇಡಂ?’ ಎಂದು ಕೇಳಿದನಂತೆ. ಅಕ್ಕ ನಕ್ಕು ‘ಸೆರೆಮನೆ ಅಂದ್ರೆ ಖೈದಿಗಳು ವಾಸಿಸುವ ಸ್ಥಳ. ಪೋಲೀಸರು ಕರ್ತವ್ಯ ನಿರ್ವಹಿಸುವ ಸ್ಥಳ ಪೋಲೀಸ್ ಠಾಣೆ’ ಎಂದು ವಿವರಿಸಿದರಂತೆ. ಮಕ್ಕಳ ವಿವೇಚನಾಶೀಲತೆಯನ್ನು ಗಮನಿಸಿ ನಗುತ್ತ ಹೇಳಿದಳು.
-ನರಸಿಂಹಾರೆಡ್ಡಿ ಯಂಕಾಮೋಳ
***
ಹೆಸರು
ಮೂರುವರೆ ವರ್ಷದ ನನ್ನ ತಂಗಿಯ ಮೊಮ್ಮಗ ಸ್ವಲ್ಪ ತಡವಾಗಿ ಮಾತನಾಡುವುದಕ್ಕೆ ಶುರು ಮಾಡಿದ. ಈಗಂತೂ ಮಾತಿನ ಮಲ್ಲನೇ ಆಗಿದ್ದಾನೆ. ಇತ್ತೀಚೆಗೆ ಮನೆ ಹತ್ತಿರದ ಖಾಸಗಿ ಶಾಲೆಯೊಂದರಲ್ಲಿ ನರ್ಸರಿಗೆ ಸೇರಿಸಲಾಗಿದೆ. ಒಂದು ವಾರದ ಮೇಲೆ ಶಾಲೆಗೆ ಹೋಗಿ ಬರುವುದು ಅಭ್ಯಾಸವಾಯಿತು. ಅಂದು ಮನೆಯಲ್ಲಿ ಎಲ್ಲರೂ ಕುಳಿತಿರುವಾಗ ‘ನಿಮ್ಮ ಮ್ಯಾಮ್ ಹೆಸರೇನು?’ ಅಂತ ಕೇಳಿದೆವು. ಆತ ತುಸು ಯೋಚಿಸಿ, ‘ಪ್ರೆಸೆಂಟ್’ ಎಂದು ಹೇಳಿದ. ‘ಪ್ರೆಸೆಂಟ್’ ಅಂತ ಹೆಸರಿರುತ್ತೇನೋ?’ ಎಂದು ಕೇಳಿದಾಗ ಆತನಿಂದ, ಹು, ದಿನಾ ಎಲ್ಲರೂ, ಅವರಿಗೆ ಪ್ರೆಸೆಂಟ್ ಮ್ಯಾಮ್… ಪ್ರೆಸೆಂಟ್ ಮ್ಯಾಮ್… ಅಂತಲೇ ಕರಿಯೋದು’ ಎನ್ನುವ ಉತ್ತರ ಬಂತು. ಮಕ್ಕಳ ಹಾಜರಾತಿ ತೆಗೆದುಕೊಳ್ಳುವಾಗ ಎಲ್ಲರೂ ಪ್ರೆಸೆಂಟ್ ಮ್ಯಾಮ್ ಎಂದು ಹೇಳುವುದನ್ನೇ ಅವನು ಹೆಸರು ಎಂದು ಅರ್ಥ ಮಾಡಿಕೊಂಡಿದ್ದು ತಿಳಿದು ನಕ್ಕೆವು.
-ಟಿ ಎಸ್ ಪ್ರತಿಭಾ
***
ಕತ್ತಲಾದ ಮೇಲೆ ಹೋಗ್ಬಾರ್ದು
ಕೆಲವೊಮ್ಮೆ ಮಕ್ಕಳಿಗೆ ಹೇಳಿದ ಬುದ್ಧಿಮಾತು ಹಿರಿಯರಿಗೇ ತಿರುವುಮಂತ್ರ ಆಗುವುದಿದೆ. ಒಮ್ಮೆ ನಮ್ಮ ಮೂರು ವರ್ಷದ ಪುಟಾಣಿ ಮೊಮ್ಮಗಳು ಮುಸ್ಸಂಜೆ ವೇಳೆ ಎಲ್ಲಿಗಾದ್ರೂ ಹೊರಗೆ ಕರೆದುಕೊಂಡು ಹೋಗು ಎಂದು ಹಟ ಹಿಡಿದಳು. ‘ಈಗ ಕತ್ತಲಾಯ್ತಲ್ಲಾ, ಹೊರಗೆ ಹೋಗ್ಬಾರ್ದು… ಗುಮ್ಮ ಬರುತ್ತೆ.’ ಎಂದು ಏನೋ ಒಂದು ನೆಪ ಹೇಳಿ ಸಮಾಧಾನ ಹೇಳಿದೆ. ವಾರವೊಂದರಲ್ಲಿ ಅಣ್ಣ-ಅತ್ತಿಗೆ ಮನೆಗೆ ಬಂದರು. ಊಟ ಉಪಚಾರವೆಲ್ಲಾ ಮುಗಿದು ಸಂಜೆ ಕಾಫಿಯ ನಂತರ ಅವರು ಹಿಂತಿರುಗುವಾಗ ಮುಸ್ಸಂಜೆಯಾಗಿತ್ತು. ವಾಡಿಕೆಯಂತೆ ಎಲ್ಲರಿಗೂ ಬಾಯ್ ಹೇಳಿ ಪುಟ್ಟಿಗೂ ಟಾಟಾ ಮಾಡುವುದೇ ತಡ, ‘ಈಗ ಕತ್ತಲಾಯ್ತಲ್ಲ ಯಾರೂ ಹೊರಗೆ ಹೋಗುವಂತೆಯೇ ಇಲ್ಲ. ಗುಮ್ಮ ಇರುತ್ತೆ..’ ಎಂದು ಶಾಸನ ವಿಧಿಸಿದಳು.
-ಸುಶೀಲಾ ಆರ್ ರಾವ್
(ಸೆಪ್ಟೆಂಬರ್ ೨೦೨೪ರ ಸಂಚಿಕೆಯಿಂದ ಆಯ್ದದ್ದು)