‘ಮಯೂರ’ ಹಾಸ್ಯ - ಭಾಗ ೯೮
ಎಮ್ಮೆಯೆಂದರೆ ಹೆಣ್ಣು
ಬೇಸಿಗೆ ರಜೆಯಲ್ಲಿ ಊರಿನಿಂದ ಚಿಕ್ಕಮ್ಮನ ಮಗಳು ವೈಶಾಲಿ ಬಂದಿದ್ದಳು. ಪೇಟೆಯಿಂದ ಹಳ್ಳಿಗೆ ಬಂದಿದ್ದ ಅವಳಿಗೆ ಎಲ್ಲವೂ ಕುತೂಹಲದ ಸಂಗತಿಗಳೇ. ಕೊಟ್ಟಿಗೆಯಲ್ಲಿದ್ದ ಕೋಣ ಮತ್ತು ಎಮ್ಮೆಗಳನ್ನು ಕಂಡು ಕೋಣ ಎಂದರೆ ಗಂಡು, ಎಮ್ಮೆ ಎಂದರೆ ಹೆಣ್ಣು ಎಂದು ಮನನ ಮಾಡಿಕೊಂಡು ನಂತರ ತನ್ನಷ್ಟಕ್ಕೇ… ಹಾ… ಹ್ಞಾ … ಈಗ ಗೊತ್ತಾಯಿತು ಎಂದು ಖುಷಿಗೊಂಡಳು. ನಮ್ಮಲ್ಲಿ ಜಾನುವಾರುಗಳನ್ನು ಹೊರಗೆ ಮೇಯಲು ಬಿಡುತ್ತೇವೆ. ಬೆಳಿಗ್ಗೆ ಹೊರಬಿಟ್ಟ ಎಮ್ಮೆ ಸಂಜೆ ಹೊತ್ತಿಗೆ ವಾಪಾಸಾದಾಗ, ವೈಶಾಲಿ ಒಮ್ಮೆಗೆ ‘ದೊಡ್ಡಮ್ಮ, ದೊಡ್ಡಮ್ಮ.. ಹೆಣ್ಣೆಮ್ಮೆ ಬಂತು ಬೇಗ ಬನ್ನಿ’ ಎಂದು ಕರೆದಾಗ ನಗುವ ಸರದಿ ನಮ್ಮದು.
-ಹ ನಾ ಸುಬ್ರಹ್ಮಣ್ಯ
***
ಸಾಂಬ್ರಾಣಿ ಹೊಗೆ
ನನ್ನ ಮಗಳು ಮತ್ತು ಅಳಿಯ ವಿದೇಶದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಮಗಳ ಹೆರಿಗೆಯ ಸಮಯದಲ್ಲಿ ನಾನು ಅಲ್ಲಿಗೆ ಹೋಗಬೇಕಾದ ಪ್ರಸಂಗ ಬಂದಿತು. ಅಲ್ಲಿಗೆ ಹೋಗುವಾಗ ಬಾಣಂತಿಗೆ ಬೇಕಾಗುವ ಸ್ವಲ್ಪ ಸಾಮಾನುಗಳನ್ನು ತೆಗೆದುಕೊಂಡು ಹೋಗಿದ್ದೆ. ಅದರಲ್ಲಿ ಸಾಂಬ್ರಾಣಿ ಹುಡಿಯು ಒಂದು. ಮಗಳ ಹೆರಿಗೆಯ ನಂತರ ಒಂದು ದಿನ ಇದ್ದಿಲು ಹೊತ್ತಿಸಿ ಚಿಕ್ಕ ಕಡಾಯಿಯಲ್ಲಿ ಅದರ ಮೇಲೆ ಸಾಂಬ್ರಾಣಿ ಹೊಗೆ ಹಾಕಿದೆ. ಅದನ್ನು ಬಾಣಂತಿ ಕೋಣೆಗೆ ಒಯ್ಯುವಾಗ ಒಮ್ಮೆಲೆ ಜೋರಾದ ಶಬ್ಧದ ಗಂಟೆ ಬಾರಿಸತೊಡಗಿತು. ಭಯದಿಂದ ಕೈಕಾಲೆಲ್ಲ ನಿಂತು ಹೋದಂತೆ ಭಾಸವಾಯಿತು. ಕ್ಷಣದಲ್ಲಿಯೇ ಏನಾಯಿತು ಎನ್ನುವ ಅಷ್ಟರಲ್ಲಿ ಕೋಣೆಯಿಂದ ನನ್ನ ಮಗಳು ಓದಿ ಬಂದು ವಿದ್ಯುತ್ ಬಟನ್ ಆಫ್ ಮಾಡಿದಳು. ಆಗ ಶಬ್ಧ ಬರುವುದು ನಿಂತು ಹೋಯಿತು. ನನ್ನ ಮಗಳು ಹೇಳಿದ ನಂತರ ತಿಳಿಯಿತು ಮನೆಯಲ್ಲಿ ಅಕಸ್ಮಾತ್ ಆಗಿ ಬೆಂಕಿ ಹೊಗೆ ಕಾಣಿಸಿಕೊಂಡರೆ ಮುಂಜಾಗ್ರತೆಯಿಂದ ಫೈರ್ ಅಲಾರ್ಮ್ ಆಗುವ ವ್ಯವಸ್ಥೆ ಇಟ್ಟಿರುತ್ತಾರಂತೆ. ಅಬ್ಬಾ! ಎಷ್ಟೊಂದು ಭಯವಾಗಿತ್ತು ಸಾಕಪ್ಪ ಸಾಕು. ಈ ಸಾಂಬ್ರಾಣಿ ಸಹವಾಸ ಎಂದು ಕೈಮುಗಿದೆ.
-ಶೋಭಾ ಸಿದ್ದಣ್ಣವರ್
***
ಕುಂಟಿ ಕಥೆ
ಆವತ್ತು ಶಾಲೆಯಿಂದ ಬಂದವಳೇ ನನ್ನತ್ತ ಓಡಿ ಬಂದು ‘ಅಜ್ಜಾ ನಿನಗೆ ಕುಂಟಿ ಕಥೆ ಗೊತ್ತಾ?’ ಎಂದ ಮೊಮ್ಮಗಳ ಪ್ರಶ್ನೆಗೆ ತಬ್ಬಿಬ್ಬಾದೆ. ‘ಯಾವ ಕುಂಟಿಯಪ್ಪಾ ಇದು? ಗೊತ್ತಿಲ್ಲವಲ್ಲ…’ ಎಂದೆ. ‘ಅದೇ ಅಜ್ಜಾ, ಕರ್ನನನ್ನು ಹುಟ್ಟಿದ ಕೂಡಲೇ ಬುಟ್ಟಿಯಲ್ಲಿಟ್ಟು ನೀರಿಗೆ ಬಿಡ್ತಾಳಲ್ಲ ಅವಳು..’ ಎಂದಳು. ಓ, ಬಗೆಹರಿಯಿತು, ಇದು ಮಹಾಭಾರತದ ಕುಂತಿಯ ಕಥೆ !’ ‘ಅಯ್ಯೋ ಅದು ಕುಂಟಿ ಅಲ್ಲಮ್ಮ, ಕುಂತಿ’ ಎಂದೆ. ‘ಅಯ್ಯೋ ದಡ್ಡ ಅಜ್ಜಾ, ಇಲ್ನೋಡು KUNTI-ಕುಂಟಿ, KARNA- ಕರ್ನ…’ ಎಂದು ತನ್ನ ಇಂಗ್ಲಿಷ್ ಪುಸ್ತಕವನ್ನು ಮುಖಕ್ಕೆ ಹಿಡಿದಳು. ಅಯ್ಯೋ ಇವರ ಭಾಷಾ ಜ್ಞಾನವೇ ಎಂದು ಹಳಿದು ಸುಮ್ಮನಾದೆ.
-ಕೆ. ಶ್ರೀನಿವಾಸರಾವ್
***
ಲೆಗ್ ಬ್ರೇಕ್
ಶಾಲೆಗೆ ರಜೆ ಇದ್ದರೆ ಮುಗಿಯಿತು. ನಮ್ಮ ಮನೆಯವರು ಮತ್ತು ಎಂಟರ ಮೊಮ್ಮಗನ ನಡುವೆ ರಿಮೋಟ್ ಕದನ ಇದ್ದಿದ್ದೇ. ಮೊಮ್ಮಗನಿಗೆ ಮೊಬೈಲ್ ಸಿಗುವುದಿಲ್ಲವೆಂದು ಖಾತ್ರಿಯಾಗುತ್ತಿದ್ದಂತೆ ಟೀವಿ ರಿಮೋಟ್ ಗಾಗಿ ಇನ್ನಿಲ್ಲದ ಕಿತಾಪತಿ ನಡೆಸುತ್ತಾನೆ. ಆದರೆ ಕ್ರಿಕೆಟ್ ಮ್ಯಾಚ್ ಇದ್ದಾಗ ಅಜ್ಜನಿಗೂ - ಮೊಮ್ಮಗನಿಗೂ ಪೈಪೋಟಿ ಏರ್ಪಡುತ್ತದೆ. ಇತ್ತೀಚೆಗೆ ಇವರು ಟಿವಿಯಲ್ಲಿ ಭಾರತ ವೆಸ್ಟ್ ಇಂಡೀಸ್ ಏಕದಿನ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದರು. ಮೊಮ್ಮಗ ಅವಕಾಶಕ್ಕಾಗಿ ಹೊಂಚುಹಾಕುತ್ತಿದ್ದ.
ಹಾಗೆ ಬೌಲರ್ ನ ‘ಲೆಗ್ ಬ್ರೇಕ್’ ಬೌಲಿಂಗ್ ಬಗ್ಗೆ ವೀಕ್ಷಕ ವಿವರಣೆ ನೀಡುತ್ತಿದ್ದರು. ಕ್ರಿಕೆಟ್ ಪರಿಭಾಷೆಯ ಅರಿವಿಲ್ಲದ ಇವನು ‘ಬೌಲರಿನ ಲೆಗ್ ಬ್ರೇಕ್ ಆಯ್ತಲ್ಲ, ಕೇಳಿಸುತ್ತಿಲ್ಲವೇ? ಇನ್ನೆಲ್ಲಿಯ ಮ್ಯಾಚು? ರಿಮೋಟ್ ತಾ..;’ ಎನ್ನುತ್ತಾ ಚಕಚಕನೆ ರಿಮೋಟ್ ಕಿತ್ತುಕೊಂಡು ತನ್ನ ನೆಚ್ಚಿನ ಚಿಂಟು ವಾಹಿನಿಯತ್ತ ತಿರುಗಿಸಿಯೇ ಬಿಟ್ಟ.
‘ಹೊಸೂರು ರತ್ನಾಕರ ಶೆಟ್ಟಿ
***
(‘ಮಯೂರ’ ಅಕ್ಟೋಬರ್ ೨೦೨೩ರ ಸಂಚಿಕೆಯಿಂದ ಆಯ್ದದ್ದು.)